ಸಿಹಿ ತಿಂಡಿ ತಿನ್ಬೇಕು ಅಂತ ಬಯಕೆ ಆಗಿದ್ರೆ ರಸ್ಕ್ ಹಲ್ವಾ ಮಾಡಿ, ಕಡಿಮೆ ಸಾಮಗ್ರಿ ಬಳಸಿ, 20 ನಿಮಿಷಗಳಲ್ಲಿ ತಯಾರಿಸಬಹುದಾದ ರೆಸಿಪಿ ಇದು
Nov 06, 2024 05:03 PM IST
ರಸ್ಕ್ ಹಲ್ವಾ
- ನಿಮ್ಮನೇಲಿ ಎಲ್ಲರೂ ರಸ್ಕ್ ತಿನ್ನುವುದಿಲ್ವಾ, ರಸ್ಕ್ ತಂದಿದ್ದು ಹಾಗೆ ಮಿಕ್ತಾ ಇದ್ಯಾ? ಚಿಂತೆ ಮಾಡ್ಬೇಡಿ, ರಸ್ಕ್‌ನಿಂದ ಸಖತ್ ಟೇಸ್ಟಿ ಆಗಿರೋ ಹಲ್ವಾ ಮಾಡಬಹುದು. ಈ ಹಲ್ವಾ ತಿಂದ್ರೆ ರಸ್ಕ್ ತಿನ್ನದವರು ಮತ್ತೆ ಮತ್ತೆ ಬೇಕು ಅಂತ ಕೇಳಿ ತಿಂತಾರೆ. ಕೇವಲ 20 ನಿಮಿಷಗಳಲ್ಲಿ ಕಡಿಮೆ ಸಾಮಗ್ರಿ ಬಳಸಿ ಮಾಡಬಹುದಾದ ಸೂಪರ್ ಟೇಸ್ಟಿ ರೆಸಿಪಿ ಇದು.
ಬ್ರೆಡ್ ಹಲ್ವಾ ಬಗ್ಗೆ ನೀವು ಕೇಳಿರಬಹುದು. ಇದರ ರುಚಿಯನ್ನೂ ನೀವು ಸವಿದಿರಬಹುದು. ಕೇವಲ ಬ್ರೆಡ್ ಮಾತ್ರ ಅಲ್ಲ ರಸ್ಕ್‌ನಿಂದಲೂ ಸೂಪರ್ ಟೇಸ್ಟಿ ಹಲ್ವಾ ಮಾಡಬಹುದು. ರಸ್ಕ್ ಹಲ್ವಾ ಬ್ರೆಡ್ ಹಲ್ವಾಕ್ಕಿಂತ ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಕಡಿಮೆ ಸಮಯದಲ್ಲಿ ಸಖತ್ ಸಿಂಪಲ್ ಆಗಿರೋ ಸಿಹಿತಿಂಡಿ ಮಾಡ್ಬೇಕು ಅಂತಿದ್ರೆ ಈ ರೆಸಿಪಿ ಟ್ರೈ ಮಾಡಬಹುದು.
ಇಪ್ಪತ್ತು ನಿಮಿಷದಲ್ಲಿ ಈ ಹಲ್ವಾ ಸಿದ್ಧವಾಗುತ್ತದೆ. ಇದರ ಪರಿಮಳವೂ ಸೂಪರ್ ಆಗಿರುತ್ತೆ. ಅದರಲ್ಲಿ ಕೆಲವು ಡ್ರೈ ಫ್ರೂಟ್ಸ್ ಕೂಡ ಸೇರಿಸುತ್ತೇವೆ. ಹಾಗಾಗಿ ಈ ಹಲ್ವಾ ತಿಂದರೆ ಹಸಿವಾಗುವುದಿಲ್ಲ. ಇದು ಮಕ್ಕಳಿಗೂ ಇಷ್ಟವಾಗುವ ರೆಸಿಪಿ. ರಸ್ಕ್ ಹಲ್ವಾ ರೆಸಿಪಿ ಮಾಡೋದು ಹೇಗೆ ನೋಡಿ.
ರಸ್ಕ್ ಹಲ್ವಾ ರೆಸಿಪಿ
ಬೇಕಾಗುವ ಸಾಮಗ್ರಿಗಳು: ರಸ್ಕ್ – 1 ಕಪ್, ಸಕ್ಕರೆ – ಅರ್ಧ ಕಪ್, ನೀರು – ಅಗತ್ಯ ಇರುವಷ್ಟು, ತುಪ್ಪ – ನಾಲ್ಕು ಚಮಚ, ಗೋಡಂಬಿ – 1 ಮುಷ್ಟಿ, ಒಣದ್ರಾಕ್ಷಿ – 1 ಮುಷ್ಟಿ, ಏಲಕ್ಕಿ ಪುಡಿ – ಚಿಟಿಕೆ, ಕೇಸರಿ ದಳ – 4
ರಸ್ಕ್ ಹಲ್ವಾ ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ರಸ್ಕ್‌ಗಳನ್ನು ಪುಡಿ ಮಾಡಿ. ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಪಕ್ಕಕ್ಕೆ ಇಡಿ. ಉಳಿದ ತುಪ್ಪಕ್ಕೆ ರಸ್ಕ್ ಪುಡಿಯನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಆದರೆ ಹೆಚ್ಚು ಹೊತ್ತು ಒಲೆಯ ಮೇಲೆ ಇಡಬೇಡಿ. ಬೇಗ ಅದನ್ನು ಸ್ಟೌ ಮೇಲಿಂದ ಕೆಳಗಿಳಿಸಿ, ಬೇರೊಂದು ಪಾತ್ರೆ ಅಥವಾ ಪ್ಲೇಟ್‌ಗೆ ವರ್ಗಾಯಿಸಿ. ಈಗ ಅದೇ ಬಾಣಲೆಯಲ್ಲಿ ನೀರು ಮತ್ತು ಸಕ್ಕರೆ ಸೇರಿಸಿ ಪಾಕ ಬರುವ ತನಕ ಕುದಿಸಿ.
ಸಕ್ಕರೆ ಪಾಕ ಕುದಿಯುತ್ತಿರುವ ಏಲಕ್ಕಿ ಪುಡಿ ಮತ್ತು ಕೇಸರಿ ಉದುರಿಸಿ. ಪಾಕ ಎಳೆ ಎಳೆಯಾಗಿ ಬರಲು ಆರಂಭಿಸಿದಾಗ ತುಪ್ಪದಲ್ಲಿ ಹುರಿದಿಟ್ಟುಕೊಂಡ ರಸ್ಕ್ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಹಲ್ವಾ ರೂಪಕ್ಕೆ ಬರುವವರೆಗೂ ತಳ ಹಿಡಿಯದಂತೆ ಮಗುಚುತ್ತಿರಿ. ನಂತರ ಸ್ಟೌ ಆಫ್ ಮಾಡಿ. ಈ ನಿಮ್ಮ ಮುಂದೆ ರುಚಿಯಾದ ರಸ್ಕ್ ಹಲ್ವಾ ರೆಡಿ. ಇದನ್ನು ಮಾಡೋದು ಬಹಳ ಸುಲಭ, ಇದಕ್ಕೆ ಬೇಕಾಗುವ ಸಾಮಗ್ರಿಗಳು ಕೂಡ ಕೆಲವು ಮಾತ್ರ.
ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಅತಿಥಿಗಳನ್ನು ಮನೆಗೆ ಆಹ್ವಾನಿಸಿದಾಗ ರಸ್ಕ್ ಹಲ್ವಾವನ್ನು ಬಡಿಸಲು ಪ್ರಯತ್ನಿಸಿ. ನಿಮ್ಮ ಸಂಬಂಧಿಕರು ಖಂಡಿತವಾಗಿಯೂ ಅದನ್ನು ಇಷ್ಟಪಡುತ್ತಾರೆ. ಮಕ್ಕಳಿಗೂ ಇದು ಇಷ್ಟವಾಗುತ್ತದೆ. ರಸ್ಕ್ ಬೇಡ, ರಸ್ಕ್ ತಿನ್ನೊಲ್ಲ ಅನ್ನೋರಿಗೂ ಈ ರಸ್ಕ್ ಹಲ್ವಾ ಕೊಟ್ಟರೆ ಮತ್ತೆ ಮತ್ತೆ ಕೇಳಿ ತಿನ್ನುತ್ತಾರೆ.