ನಮ್ಮ ವಯಸ್ಸಿಗೆ ತಕ್ಕಂತೆ ದಿನಕ್ಕೆ ಎಷ್ಟು ಪ್ರಮಾಣದ ಸಕ್ಕರೆ ಸೇವಿಸಬಹುದು; ಸಿಹಿ ತಿನ್ನುವ ವಿಚಾರದಲ್ಲಿ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶವಿದು
ಇತ್ತೀಚಿನ ದಿನಗಳಲ್ಲಿ ಸಿಹಿ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಧುಮೇಹಿಗಳು ಮಾತ್ರವಲ್ಲ ಪ್ರತಿಯೊಬ್ಬರು ಸಿಹಿ ತಿನ್ನುವುದನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ಅಪಾಯ. ತಜ್ಞರ ಪ್ರಕಾರ ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ಸಕ್ಕರೆ ಅಥವಾ ಸಿಹಿ ತಿನ್ನಬಹುದು ನೋಡಿ. ಹಾಗೆ ಸಿಹಿ ಸೇವನೆ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್.
ಯಾವುದೇ ಶುಭಕಾರ್ಯಕ್ಕೂ ಮುನ್ನ ಸಿಹಿ ತಿನ್ನುವುದು ವಾಡಿಕೆ. ಸಿಹಿ ತಿಂದಾಗ ಮನಸ್ಸಿಗೆ ಏನೋ ಖುಷಿ ಸಿಗುವುದು ಖಂಡಿತ. ಆದರೆ ಇತ್ತೀಚೆಗೆ ಸಿಹಿ ತಿನ್ನುವುದೇ ಕಹಿಯಾಗಿದೆ. ಹಾಗಂತ ಮಧುಮೇಹಿಗಳು ಮಾತ್ರ ಸಿಹಿ ತಿನ್ನುವುದು ಕಡಿಮೆ ಮಾಡಬೇಕು ಎಂದರ್ಥವಲ್ಲ ಪ್ರತಿಯೊಬ್ಬರು ಸಿಹಿ ಸೇವನೆಯನ್ನ ಕಡಿಮೆ ಮಾಡಬೇಕು. ಚಾಕೊಲೇಟ್, ಕೇಕ್, ಡೋನಟ್, ಜಾಮೂನ್ ಹೀಗೆ ಸಿಹಿ ಅಂಶ ಹೆಚ್ಚಿರುವ ಈ ಪದಾರ್ಥಗಳ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತೆ. ಆದರೆ ಆರೋಗ್ಯದ ದೃಷ್ಟಿಯಿಂದ ನಾವು ದಿನದಲ್ಲಿ ನಮ್ಮ ವಯಸ್ಸಿಗೆ ತಕ್ಕಂತೆ ಇಂತಿಷ್ಟೇ ಅಂಶದಲ್ಲಿ ಸಕ್ಕರೆ ಸೇವಿಸಬೇಕು.
ತಜ್ಞರ ಪ್ರಕಾರ ಚಿಕ್ಕ ವಯಸ್ಸಿನಿಂದಲೂ ನಾವು ಸಿಹಿ ಸೇವಿಸುವುದು ಇನ್ನಿಲ್ಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. 2022ರಲ್ಲಿ ನಡೆದ ಅಧ್ಯಯನದ ಪ್ರಕಾರ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಅಥವಾ ಸಿಹಿ ಸೇವಿಸುವ ರಾಷ್ಟ್ರವಾಗಿದೆ. ಭಾರತೀಯರು ಒಟ್ಟಾರೆಯಾಗಿ 29.5 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆಯನ್ನು ಸೇವಿಸಿದ್ದಾರೆ. ಜಾಗತಿಕ ಸಕ್ಕರೆ ಬಳಕೆಯಲ್ಲಿ ಶೇ 15 ಮತ್ತು ವಿಶ್ವದ ಒಟ್ಟು ಸಕ್ಕರೆ ಉತ್ಪಾದನೆಯ ಶೇ 20 ರಷ್ಟು ನಮ್ಮ ದೇಶ ಕೊಡುಗೆ ನೀಡುತ್ತದೆ. ಸಕ್ಕರೆ ಸೇವನೆಯ ವಿಚಾರದಲ್ಲಿ ಹಲವು ಸತ್ಯ–ಮಿಥ್ಯಗಳಿವೆ. ನೈಸರ್ಗಿಕ ಸಕ್ಕರೆ, ಸೇರಿಸಿದ ಸಕ್ಕರೆ ಅಂಶ ಹೀಗೆ ಹಲವು ವಿಚಾರಗಳಿವೆ. ಇವುಗಳ ವ್ಯತ್ಯಾಸವನ್ನು ತಿಳಿಯುವುದು ಮುಖ್ಯವಾಗುತ್ತದೆ.
ನೈಸರ್ಗಿಕ ಸಕ್ಕರೆಗೂ, ಆ್ಯಡೆಡ್ ಶುಗರ್‌ಗೂ ವ್ಯತ್ಯಾಸವೇನು?
ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಡೈರಿ ಸೇರಿದಂತೆ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳಲ್ಲಿ ಸಕ್ಕರೆ ನೈಸರ್ಗಿಕವಾಗಿ ಕಂಡುಬರುತ್ತದೆ.
ಪ್ರೊಟೀನ್ ಹಾಗೂ ಇತರ ಪೋಷಕಾಂಶಗಳು ಸಮೃದ್ಧವಾಗಿರುವ ಇಂತಹ ಸಂಪೂರ್ಣ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಯವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ದೇಹವು ಸಾಮಾನ್ಯವಾಗಿ ಈ ಆಹಾರವನ್ನು ನಿಧಾನವಾಗಿ ಜೀರ್ಣಿಸಿಕೊಳ್ಳುವುದರಿಂದ, ಅವುಗಳಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ಕ್ರಮೇಣ ನಮ್ಮ ಜೀವಕೋಶಗಳಿಗೆ ಸ್ಥಿರವಾಗಿ ಶಕ್ತಿಯನ್ನು ಪೂರೈಸುತ್ತವೆ. ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳ ಗಣನೀಯ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಕಳಪೆ ಹಲ್ಲಿನ ಆರೋಗ್ಯದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಮೇಲೆ ತಿಳಿಸಿದ್ದು ನೈಸರ್ಗಿಕ ಸಕ್ಕರೆ ಸೇವನೆಯಾದರೆ ಇದು ಆ್ಯಡೆಡ್ ಶುಗರ್ ಅಥವಾ ಸಕ್ಕರೆಯಂಶ ಸೇರಿಸಿರುವುದು. ಈ ರೀತಿಯ ಆಹಾರಗಳನ್ನು ಸೇವಿಸುವುದು ತಿಳಿದೋ ತಿಳಿಯದೆಯೋ ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲು ಶುರುವಾಗುತ್ತದೆ. ಇದು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅರಿವಿಲ್ಲದೆ ಹೆಚ್ಚುವರಿ ಸಕ್ಕರೆಯನ್ನು ಸೇವಿಸುತ್ತಾರೆ. ಹಣ್ಣಿನ ಜ್ಯೂಸ್, ಎನರ್ಜಿ ಡ್ರಿಂಕ್‌ಗಳು, ಕುಕ್ಕಿಸ್, ಕೇಕ್‌ಗಳು, ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿ ತಂಪು ಪಾನೀಯಗಳು, ಫ್ಲೇವರ್ಡ್ ಮೊಸರು ಇಂತಹ ಪದಾರ್ಥಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ. ಇದು ಖಂಡಿತ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದೀರ್ಘವಧಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಎಷ್ಟು ಸಕ್ಕರೆ ಸೇವಿಸಬಹುದು ಎಂಬ ವಿವರ ಇಲ್ಲಿದೆ.
ವಯಸ್ಸಿಗೆ ಅನುಗುಣವಾಗಿ ನಾವು ಎಷ್ಟು ಸಕ್ಕರೆ ಸೇವಿಸಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ನಮ್ಮ ವಯಸ್ಸಿಗೆ ಅನುಗುಣವಾಗಿ ದಿನದಲ್ಲಿ ನಾವು ಎಷ್ಟು ಸಕ್ಕರೆ ಸೇವಿಸಬಹುದು ಎಂಬ ವಿವರ ಇಲ್ಲಿದೆ.
* ವಯಸ್ಕರು (ಸರಾಸರಿ 2000 ಕ್ಯಾಲೋರಿ ಆಹಾರ) – 50 ಗ್ರಾಂ (ಒಂದು ದಿನದಲ್ಲಿ ನಾವು ಸೇವಿಸುವ ಆಹಾರದ ಶೇ 10 ರಷ್ಟು ಭಾಗ)
* ಹದಿಹರೆಯದವರು (11-18 ವರ್ಷಗಳು) - 25 ಗ್ರಾಂ
* ಮಕ್ಕಳು (7-10 ವರ್ಷಗಳು) - 20 ಗ್ರಾಂ
* ಮಕ್ಕಳು (4-6 ವರ್ಷಗಳು) -15 ಗ್ರಾಂ
* ಅಂಬೆಗಾಲಿಡುವ ಕಂದಮ್ಮಗಳು (1-3 ವರ್ಷಗಳು) -12.5 ಗ್ರಾಂ
ಈ ಸಾಮಾನ್ಯ ಅಂಕಿ–ಅಂಶಗಳಾಗಿದ್ದು, ಇದು ವ್ಯಕ್ತಿಯ ದೇಹದ ಅವಶ್ಯಕತೆಗಳೊಂದಿಗೆ ಭಿನ್ನವಾಗಿರಬಹುದು.
ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಸಕ್ಕರೆ ಸೇವನೆಯ ಪರಿಣಾಮ?
ಹೆಚ್ಚಿನ ಸಕ್ಕರೆ ಸೇವನೆಯು ಮನಸ್ಥಿತಿಯ ಬದಲಾವಣೆಗಳಿಗೂ ಕಾರಣವಾಗುತ್ತದೆ. ಅತಿಯಾಗಿ ಸಕ್ಕರೆ ಸೇವಿಸುವುದರಿಂದ ಮೂಡ್‌ಸ್ಪಿಂಗ್, ಕಿರಿಕಿರಿಗೂ ಕಾರಣವಾಗಬಹುದು. ದೀರ್ಘಕಾಲದ ಅಧಿಕ ಸಕ್ಕರೆ ಸೇವನೆಯು ಕಾಲಾನಂತರದಲ್ಲಿ ಮೆಮೊರಿ ಮತ್ತು ಕಲಿಕೆಯ ಸಾಮರ್ಥ್ಯಗಳನ್ನು ದುರ್ಬಲಗೊಳಿಸಬಹುದು ಎಂದು ಅಧ್ಯಯನಗಳು ಹೇಳುತ್ತವೆ.
ಸಕ್ಕರೆ ಸೇವನೆ ನಿಯಂತ್ರಿಸಲು ಟಿಪ್ಸ್
* ಹೊರಗಡೆಯಿಂದ ಖರೀದಿಸುವ ಯಾವುದೇ ಆಹಾರ ಪದಾರ್ಥಗಳ ಮೇಲಿರುವ ಲೇಬಲ್ ಅನ್ನು ಓದಿಕೊಳ್ಳಿ. ಇದರಿಂದ ಅದರಲ್ಲಿ ಎಷ್ಟು ಸಕ್ಕರೆ ಅಂಶ ಇದೆ ಎನ್ನುವುದು ನಿಮಗೆ ತಿಳಿಯುತ್ತದೆ. ಆ ಮೂಲಕ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬಹುದು.
* ಸುಕ್ರೋಸ್, ಫ್ರಕ್ಟೋಸ್ ಮತ್ತು ಕಾರ್ನ್ ಸಿರಪ್‌ನಂತಹ ಆ್ಯಡೆಡ್ ಶುಗರ್ ಅಂಶ ಇದೆಯೇ ಎಂಬುದನ್ನು ಗಮನಿಸಿಕೊಳ್ಳಿ. ಇದು ಬಹಳ ಮುಖ್ಯ
* ಸಕ್ಕರೆಯಂಶವಿರುವ ಆಹಾರಗಳನ್ನು ಆರೋಗ್ಯಕರ ಪರ್ಯಾಯಗಳೊಂದಿಗೆ ಬದಲಿಸುವುದು ಉತ್ತಮ. ಸಕ್ಕರೆ ಅಂಶ ಇರುವ ಪದಾರ್ಥಗಳ ಸೇವನೆಯ ಬದಲು ಹಣ್ಣು, ತರಕಾರಿ ಸೇವನೆಗೆ ಗಮನ ನೀಡಿ. ನೀರು, ಸಕ್ಕರೆ ರಹಿತ ಟೀ ಇಂತಹ ಪದಾರ್ಥಗಳ ಸೇವನೆಗೆ ಒತ್ತು ನೀಡಿ. ನೀವು ನಿತ್ಯ ಕುಡಿಯುವ ಕಾಫಿ ಅಥವಾ ಟೀಯಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ. ಹಣ್ಣುಗಳಲ್ಲಿರುವ ಸಿಹಿ ಅಂಶದ ಮೂಲಕ ದೇಹದಲ್ಲಿ ಸಕ್ಕರೆಯಂಶವನ್ನು ಸಮತೋಲನಗೊಳಿಸುವುದು ಮುಖ್ಯವಾಗುತ್ತದೆ.
* ಇಡಿಯಾಗಿ ಹಣ್ಣನ್ನು ತಿನ್ನುವುದು ಬಹಳ ಉತ್ತಮ. ಇವು ಪೋಷಕಾಂಶಗಳ ಜೊತೆಗೆ ದೇಹಕ್ಕೆ ನೈಸರ್ಗಿಕ ಸಕ್ಕರೆಯನ್ನೂ ಒದಗಿಸುತ್ತವೆ.
* ಸಂಸ್ಕರಿಸಿದ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳನ್ನು ಸಂಸ್ಕರಿಸದ ಆಹಾರ ಪದಾರ್ಥಗಳೊಂದಿಗೆ ಬದಲಿಸುವುದು ಬಹಳ ಮುಖ್ಯ. ಇದು ಆಹಾರದ ಕಡುಬಯಕೆಯನ್ನು ನಿಯಂತ್ರಿಸುತ್ತದೆ. ಬೆಲ್ಲ, ಖರ್ಜೂರ, ಜೇನುತುಪ್ಪ ಆ್ಯಡೆಡ್ ಶುಗರ್‌ಗೆ ಬದಲಿಯಾಗಿ ನೀವು ಸೇವಿಸಬಹುದಾದ ನೈಸರ್ಗಿಕ ಸಕ್ಕರೆ ಅಂಶಗಳು.
ನಮ್ಮ ಆರೋಗ್ಯದ ಮೇಲೆ ಸಕ್ಕರೆಯ ಪ್ರಭಾವವನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವ ಮೂಲಕ, ವ್ಯಕ್ತಿಗಳು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹಿಡಿತ ಸಾಧಿಸಬಹುದು. ನೈಸರ್ಗಿಕ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳನ್ನು ಮಿತವಾಗಿಯೇ ಸೇವಿಸಬೇಕು, ಇದನ್ನೂ ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ವಿಭಾಗ