ಬೊಜ್ಜು ಹೆಚ್ಚಾದರೆ ಮದುವೆ ಫೋಟೊ ಚೆನ್ನಾಗಿ ಬರಲ್ಲ; ಮದುವೆಗೆ ಮೊದಲು ನಿಮ್ಮ ಡಯೆಟ್ ಪ್ಲಾನ್ ಹೀಗಿರಲಿ
Nov 13, 2024 08:30 PM IST
ಬೊಜ್ಜು ಹೆಚ್ಚಾದರೆ ಮದುವೆ ಫೋಟೊ ಚೆನ್ನಾಗಿ ಬರಲ್ಲ; ಮದುವೆಗೆ ಮೊದಲು ಡಯೆಟ್ ಪ್ಲಾನ್ ಹೀಗಿರಲಿ
- ಮದುವೆ ದಿನ ಫಿಟ್ ಮತ್ತು ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬ ಹುಡುಗಿ ಕೂಡಾ ಬಯಸುತ್ತಾಳೆ. ಇದಕ್ಕಾಗಿ ಸೂಕ್ತ ಆಹಾರ ಸೇವನೆ ಮಾಡುವುದು ಮುಖ್ಯ. ದೈಹಿಕ ಆರೋಗ್ಯ ಮತ್ತು ತೂಕದಲ್ಲಿ ಸಮತೋಲನ ಸಾಧಿಸಲು ಈ ಆಹಾರ ಕ್ರಮ ಅನುಸರಿಸಿ. ಮದುವೆಗಿಂತ 6 ತಿಂಗಳು ಮುಂಚಿತವಾಗಿ ಡಯೆಟ್ ಆರಂಭಿಸಿ.
ಮದುವೆಯ ದಿನ ಪ್ರತಿಯೊಬ್ಬರಿಗೂ ತುಂಬಾ ಪ್ರಮುಖ ದಿನ. ಅದರಲ್ಲೂ ಹುಡುಗಿಯರಿಗೆ ಆ ದಿನ ಅತ್ಯಂತ ವಿಶೇಷ. ವಿವಾಹ ದಿನ ಅದ್ಧೂರಿ ಸಮಾರಂಭದ ಕೇಂದ್ರಬಿಂದು ವಧು-ವರರು. ಹೀಗಾಗಿ ಪ್ರತಿ ವಧು ಕೂಡಾ ಮದುವೆಯ ದಿನದಂದು ಸುಂದರವಾಗಿ ಕಾಣಬೇಕೆಂದು ಬಯಸುತ್ತಾಳೆ. ಆದರೆ ಮದುವೆಯ ಸಿದ್ಧತೆಗಳ ಗಡಿಬಿಡಿ, ನಿರಂತರ ಕೆಲಸಗಳ ಆಯಾಸದಿಂದಾಗಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುವ ಉತ್ಸಾಹದ ನಡುವೆ ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಮದುವೆಗೂ ಮುನ್ನ ಉತ್ತಮ ಆಹಾರ ಯೋಜನೆ ತುಂಬಾ ಮುಖ್ಯ. ಸಮತೋಲಿತ ಜೀವನಶೈಲಿಯೊಂದಿಗೆ ಜೀವನದ ಪ್ರಮುಖ ದಿನಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡರೆ ಮದುವೆ ದಿನ ನೋಡಲು ಆಕರ್ಷಕವಾಗಿ ಕಾಣುವಿರಿ.
ಸುಂದರವಾಗಿ ಮತ್ತು ಸದೃಢವಾಗಿ ಕಾಣಲು, ಮದುವೆಗಿಂತ ಆರು ತಿಂಗಳ ಮೊದಲು ಆಹಾರ ಯೋಜನೆ ಆರಂಭಿಸಿ. ವಿವಾಹಕ್ಕೂ ಮುನ್ನ ನೀವು ಎಷ್ಟು ಬೇಗ ಆಹಾರಕ್ರಮ ಆರಂಭಿಸುತ್ತೀರೋ, ಅಷ್ಟು ಒಳ್ಳೆಯದು. ಆರೋಗ್ಯವಾಗಿರಲು, ನಮ್ಮ ಜೀರ್ಣಾಂಗ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಕೆಲಸ ಮಾಡುವುದು ಅವಶ್ಯಕ. ನೀವು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುವುದಲ್ಲದೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕೂಡಾ ಉತ್ತಮವಾಗಿರುತ್ತದೆ. ಇದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಆಹಾರಕ್ರಮದ ಕುರಿತು ಅರಿವಿರಲಿ.
ದೇಹದಲ್ಲಿ ನೀರಿನ ಕೊರತೆಯಾಗಲು ಬಿಡಬೇಡಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ತ್ವಚೆ, ಕೂದಲು ಹಾಗೂ ದೇಹ ಆರೋಗ್ಯಕರವಾಗಿರುತ್ತದೆ. ದ್ರವಾಹಾರ ಸೇವನೆಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 3ಕ್ಕಿಂತ ಹೆಚ್ಚು ಲೀಟರ್ ನೀರು ಕುಡಿಯಿರಿ.
ಕ್ರ್ಯಾಶ್ ಡಯಟ್ ಬೇಡ
ಹೆಚ್ಚಿನ ಹುಡುಗಿಯರು ಮದುವೆಯ ದಿನದಂದು ಸ್ಲಿಮ್ ಮತ್ತು ಫಿಟ್ ಆಗಿ ಕಾಣಬೇಕೆಂದು ಕ್ರ್ಯಾಶ್ ಡಯಟ್ ಆರಂಭಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಊಟದ ತಟ್ಟೆಯಿಂದ ಕಾರ್ಬೋಹೈಡ್ರೇಟ್‌ಗಳು ಕಣ್ಮರೆಯಾಗುವಂತೆ ಮಾಡಬೇಡಿ. ಧಾನ್ಯಗಳು ಮತ್ತು ಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳು ಸೇರಿದಂತೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ತುಂಬಿರುವ ಸಮೃದ್ಧ ಆಹಾರ ಸೇವಿಸಿ. ಬೇಳೆಕಾಳು, ತರಕಾರಿ, ಹಣ್ಣುಗಳು, ಡ್ರೈಫ್ರುಟ್ಸ್ ಮತ್ತು ಬೀಜಗಳನ್ನು ಸಹ ಸೇವಿಸಿ. ಊಟದ ನಡುವೆ ಹೆಚ್ಚು ಅಂತರ ಬೇಡ. ಪ್ರತಿ ಮೂರು ಗಂಟೆಗಳಿಗೊಮ್ಮೆ ಏನನ್ನಾದರೂ ತಿನ್ನಿ. ಸಂಜೆ ವೇಳೆ ಆದಷ್ಟು 7.30ರ ಮೊದಲು ರಾತ್ರಿ ಊಟ ಮುಗಿಸಿ.
ಈ ಡಯಟ್ ಚಾರ್ಟ್ ಪ್ರಯತ್ನಿಸಿ
ಬೆಳಗ್ಗೆ: ಬೆಳಗ್ಗೆ ಎದ್ದ ತಕ್ಷಣ ಬ್ರಷ್ ಮಾಡಿದ ನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ.
ಉಪಾಹಾರಕ್ಕೆ ಮೊದಲು: 4-5 ನೆನೆಸಿದ ಬಾದಾಮಿ / ಬಾಳೆಹಣ್ಣು / ನಿಂಬೆ ನೀರಿಗೆ ಕೆಲವು ಶುಂಠಿ ರಸ / ಜೀರಿಗೆ ನೀರು / ಹಸಿರು ಚಹಾ ಕುಡಿಯಿರಿ.
ಬೆಳಗ್ಗಿನ ಉಪಾಹಾರ: ಇಡ್ಲಿ-ಸಾಂಬಾರ್ / ತರಕಾರಿ / ತರಕಾರಿಗಳೊಂದಿಗೆ ಓಟ್ಸ್ / ಮೊಟ್ಟೆಯ ಬಿಳಿಭಾಗದಿಂದ ಮಾಡಿದ ಆಮ್ಲೆಟ್/ ಉಪ್ಮಾ / ಓಟ್ಸ್ ಚಿಲ್ಲಾ / ಪಪ್ಪಾಯಿ, ಬಾಳೆಹಣ್ಣು ಅಥವಾ ಪಾಲಕ್ ಸ್ಮೂಥಿ / ಬೇಯಿಸಿದ ಮೊಟ್ಟೆ ತಿನ್ನಿ.
ತಿಂಡಿ ಅಥವಾ ಸ್ನ್ಯಾಕ್ಸ್: ಕಡಲೆಕಾಯಿ ಅಥವಾ ಮೊಳಕೆಕಾಳುಗಳಿಂದ ಮಾಡಿದ ಸಲಾಡ್ ಸೇವಿಸಿ. ಇದಕ್ಕೆ ಟೊಮೆಟೊ, ಈರುಳ್ಳಿ ಮತ್ತು ಸೌತೆಕಾಯಿ ಕೂಡ ಸೇರಿಸಬಹುದು. ಜೊತೆಗೆ ನಿಂಬೆ ರಸ, ಉಪ್ಪು ಅಥವಾ ಚಾಟ್ ಮಸಾಲಾ ಬಳಸಿ. ಇದಲ್ಲದೆ, ಹಣ್ಣು, ಸಲಾಡ್ ಅಥವಾ ಬೇಯಿಸಿದ ಮೊಟ್ಟೆಯನ್ನು ತಿಂಡಿಯಾಗಿ ತಿನ್ನಬಹುದು.
ಮಧ್ಯಾಹ್ನದ ಊಟ: ರೊಟ್ಟಿ ಅಥವಾ ಅನ್ನ, ಹಸಿರು ತರಕಾರಿಗಳು, ಬೇಳೆಕಾಳುಗಳು, ತರಕಾರಿಗಳು, ಮೊಸರು.
ತಿಂಡಿ: ಹಣ್ಣಿನ ಸಲಾಡ್ / ಬೆರಳೆಣಿಕೆಯಷ್ಟು ಒಣ ಹಣ್ಣುಗಳು ಅಥವಾ ಬೀಜಗಳು / ಹುರಿದ ಮಖಾನಾ / ಒಂದು ಲೋಟ ಮಜ್ಜಿಗೆ
ರಾತ್ರಿ ಊಟ : ಹುರಿದ ಅಥವಾ ಗ್ರಿಲ್ ಮಾಡಿದ ಚಿಕನ್ / ಮೆಂತ್ಯ ರೊಟ್ಟಿ ಜೊತೆಗೆ ಸಲಾಡ್ ಮತ್ತು ದಾಲ್.
ಈ ಟಿಪ್ಸ್ ನಿಮಗಾಗಿ
- ಕೂದಲು ಮತ್ತು ಚರ್ಮದ ಆರೋಗ್ಯ ಕೂಡಾ ಮುಖ್ಯ. ಹೀಗಾಗಿ ಕೂದಲು ಮತ್ತು ಚರ್ಮದ ಆರೋಗ್ಯಕ್ಕಾಗಿ, ಬಾದಾಮಿ, ಟೊಮೆಟೊ, ಸ್ಟ್ರಾಬೆರಿ, ಬೀಟ್ರೂಟ್, ದಾಳಿಂಬೆ, ವಾಲ್ನಟ್, ಸೂರ್ಯಕಾಂತಿ ಬೀಜಗಳು ಮತ್ತು ಕೆಂಪು ಅಥವಾ ಹಳದಿ ಕ್ಯಾಪ್ಸಿಕಂ ಅನ್ನು ಆಹಾರದ ಜೊತೆಗೆ ಹೊಟ್ಟೆಗಿಳಿಸಿ.
- ವ್ಯಾಯಾಮ ಮಾಡಲು ಸಮಯ ತೆಗೆದುಕೊಳ್ಳಿ: ನಿತ್ಯ ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ವ್ಯಾಯಾಮ ಮಾಡಲು ಮರೆಯಬೇಡಿ. ಕನಿಷ್ಠ 30 ನಿಮಿಷಗಳ ವಾಕಿಂಗ್ ಸೇರಿದಂತೆ ಪ್ರತಿದಿನ 45 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಿ.
- ಮಾದಕವಸ್ತುಗಳಿಂದ ದೂರವಿರಿ: ಮದ್ಯಪಾನ ಮತ್ತು ಧೂಮಪಾನವನ್ನು ತಪ್ಪಿಸಿ. ಅವು ಚರ್ಮ ಮತ್ತು ತೂಕದ ಮೇಲೆ ಪರಿಣಾಮ ಬೀರುತ್ತವೆ.
- ಇವುಗಳನ್ನು ಸೇವಿಸಬೇಡಿ: ಸಿಹಿತಿಂಡಿಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ. ಕೇಕ್, ಪೇಸ್ಟ್ರಿ, ಬಿಸ್ಕತ್ತು, ಕ್ಯಾನ್ಡ್ ಜ್ಯೂಸ್ ಮತ್ತು ಇತರ ಜಂಕ್ ಫುಡ್ ಗಳಿಂದ ದೂರವಿರಿ.
ಇದನ್ನೂ ಓದಿ | ದಿನವೂ ಸೀರೆ ಉಡುವವರಿಗೆ ಬರುತ್ತಂತೆ ಸೀರೆ ಕ್ಯಾನ್ಸರ್: ಏನಿದು ಅಪರೂಪದ ಕಾಯಿಲೆ, ಹೆಂಗಳೆಯರೆ ಇರಲಿ ಕಾಳಜಿ