ದಿನವೂ ಸೀರೆ ಉಡುವವರಿಗೆ ಬರುತ್ತಂತೆ ಸೀರೆ ಕ್ಯಾನ್ಸರ್: ಏನಿದು ಅಪರೂಪದ ಕಾಯಿಲೆ, ಹೆಂಗಳೆಯರೆ ಇರಲಿ ಕಾಳಜಿ
ಸೀರೆಯುಟ್ಟಾಗ ಪ್ರತಿಯೊಬ್ಬ ಹೆಣ್ಣು ಸುಂದರವಾಗಿ ಕಂಗೊಳಿಸುತ್ತಾಳೆ. ಸೀರೆಯ ವಿಶಿಷ್ಟವೇ ಅಂಥದ್ದು. ಕಾಂಜಿವರಂ ಸೀರೆ, ಮೈಸೂರು ಸಿಲ್ಕ್ ಸೀರೆ, ಫ್ಯಾನ್ಸಿ ಸೀರೆ, ಹೀಗೆ ವಿವಿಧ ಬಗೆಯ ಸೀರೆಗಳನ್ನು ಹೆಂಗಳೆಯರು ಆಯ್ಕೆ ಮಾಡಿ ಉಡುತ್ತಾರೆ. ಆದರೆ, ಪ್ರತಿದಿನ ಸೀರೆ ಉಡುವುದರಿಂದ ಸೀರೆ ಕ್ಯಾನ್ಸರ್ ಎಂಬ ಅಪರೂಪದ ಕಾಯಿಲೆ ಬರುತ್ತಂತೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಹೆಣ್ಣಿಗೆ ಸೀರೆ ಏಕೆ ಅಂದ.. ಎಂಬ ಹಾಡನ್ನು ನೀವು ಕೇಳಿರಬಹುದು. ನಾರಿ ಸೀರೆಯುಟ್ಟರೆ ಅವಳ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಮದುವೆ, ಶುಭ ಕಾರ್ಯಕ್ರಮಗಳಿಗೆ ನಾರಿಯರು ತರಹೇವಾರಿ ಸೀರೆಗಳನ್ನು ಉಡುತ್ತಾರೆ. ಆರು ಗಜದ ಸೀರೆ ಹೆಣ್ಣಿಗೆ ಕೊಡುವ ಸೌಂದರ್ಯ ಅಷ್ಟಿಷ್ಟಲ್ಲ. ಆದರೆ, ದಿನವೂ ಸೀರೆ ಉಡುವವರಿಗೆ ಸೀರೆ ಕ್ಯಾನ್ಸರ್ ಬರುವ ಆತಂಕವಿದೆ. ಈ ಅಭಿಪ್ರಾಯವು ತಪ್ಪು ಕಲ್ಪನೆ ಎಂದು ಭಾವಿಸುವವರೂ ಇದ್ದಾರೆ. ಅಪರೂಪದ ಕಾಯಿಲೆ ಸೀರೆ ಕ್ಯಾನ್ಸರ್ ಅಪಾಯವಿದೆ ಎಂದು ವೈದ್ಯರು ಕೂಡ ಹೇಳಿದ್ದಾರೆ. ಇದು ಪ್ರತಿದಿನ ಸೀರೆ ಉಡುವ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆಯಂತೆ. ಸೊಂಟದ ಸುತ್ತ ಎಲ್ಲಿ ಬೇಕಾದರೂ ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದು ಒಂದು ರೀತಿಯ ಚರ್ಮದ ಕ್ಯಾನ್ಸರ್. ಸೀರೆಯೊಳಗೆ ಧರಿಸಿರುವ ಪೆಟಿಕೋಟ್ ಅನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟಲಾಗುತ್ತದೆ. ಇದು ದೀರ್ಘಕಾಲದ ಕಿರಿಕಿರಿಯನ್ನು ಉಂಟುಮಾಡಬಹುದು.
ಸೀರೆ ಕ್ಯಾನ್ಸರ್‌ಗೆ ಕಾರಣವೇನು?
ಸೀರೆ ಕ್ಯಾನ್ಸರ್ ಅನ್ನು ಪೆಟಿಕೋಟ್ ಕ್ಯಾನ್ಸರ್ ಎಂದೂ ಹೇಳುತ್ತಾರೆ. ಪೆಟಿಕೋಟ್ (ಸೀರೆಯೊಳಗೆ ಧರಿಸುವ ಸ್ಕರ್ಟ್ ಅಥವಾ ಲಂಗ) ನಡುವನ್ನು ಸೊಂಟದ ಸುತ್ತಲೂ ಬಿಗಿಯಾಗಿ ಕಟ್ಟಿಕೊಳ್ಳಲಾಗುತ್ತದೆ. ಪ್ರತಿದಿನ ಸೊಂಟದ ಸುತ್ತ ಈ ದಾರವನ್ನು ಬಿಗಿಯಾಗಿ ಕಟ್ಟಿಕೊಳ್ಳುವುದು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಇದು ಹುಣ್ಣುಗಳಾಗಿ ಬದಲಾಗುತ್ತದೆ. ಇದನ್ನು ಮಾರ್ಜೋಲಿನ್ ಹುಣ್ಣು ಎಂದು ಹೇಳಲಾಗುತ್ತದೆ. ಬಹಳ ಅಪರೂಪದ ಸಂದರ್ಭಗಳಲ್ಲಿ, ಇದು ಮಾರಕವಾಗಿ ಪರಿಣಮಿಸಬಹುದು.
ಸೀರೆ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳು
ಪೆಟಿಕೋಟ್ ಸೊಂಟದ ಪಟ್ಟಿಯು ಚರ್ಮವನ್ನು ಕೆರಳಿಸಬಹುದು. ಶೆಖೆ, ಆರ್ದ್ರ ವಾತಾವರಣದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ಥಿತಿಯು ಹದಗೆಡುತ್ತದೆ. ಭಾರತವು ಶಾಖ ಮತ್ತು ಆರ್ದ್ರ ವಾತಾವರಣವನ್ನು ಹೊಂದಿದೆ. ವಿಶೇಷವಾಗಿ ಆರೋಗ್ಯ ಸೇವೆಗಳು ಲಭ್ಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪೆಟ್ಟಿಕೋಟ್ ಧರಿಸುವ ಮಹಿಳೆಯರು ಈ ಕಿರಿಕಿರಿಗೆ ಒಳಗಾಗುತ್ತಾರೆ. ಪೆಟಿಕೋಟ್ ಕಟ್ಟಿರುವ ಹಗ್ಗದ ಸುತ್ತ ಬೆವರು ಮತ್ತು ಧೂಳು ಸಂಗ್ರಹವಾಗುತ್ತದೆ. ಇದರಿಂದ ತುರಿಕೆ ಹೆಚ್ಚಾಗುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಚರ್ಮದ ತೊಂದರೆಗಳು ಪ್ರಾರಂಭವಾದಾಗ, ವೈದ್ಯರ ಸಹಾಯವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗಬಹುದು.
ಸೀರೆಗಳಷ್ಟೇ ಅಲ್ಲ ಇವುಗಳಿಂದಲೂ ಬರಬಹುದು ಕ್ಯಾನ್ಸರ್
ಚೂಡಿದಾರ್ ಧರಿಸುವ ಮಹಿಳೆಯರಲ್ಲೂ ಈ ಸಮಸ್ಯೆ ಕಂಡುಬರುತ್ತಿದೆ. ಸೊಂಟದ ಸುತ್ತಲೂ ಪ್ಯಾಂಟ್ ದಾರವನ್ನು ಬಿಗಿಯಾಗಿ ಕಟ್ಟುತ್ತಾರೆ. ಅದೇ ರೀತಿ, ಧೋತಿಗಳನ್ನು ಧರಿಸುವ ಪುರುಷರು ಸಹ ಇದೇ ರೀತಿಯ ಚರ್ಮದ ಸ್ಥಿತಿಯನ್ನು ಹೊಂದುವ ಸಾಧ್ಯತೆಯಿದೆ.
ಸೀರೆ ಕ್ಯಾನ್ಸರ್ ಬರದಂತೆ ತಡೆಗಟ್ಟುವ ಮುನ್ನೆಚ್ಚರಿಕೆಗಳು
- ತುಂಬಾ ಬಿಗಿಯಾದ ಪ್ಯಾಂಟ್ ಮತ್ತು ಪೆಟಿಕೋಟ್‌ಗಳನ್ನು ಧರಿಸುವುದನ್ನು ಕಡಿಮೆ ಮಾಡುವುದು ಉತ್ತಮ.
- ಪೆಟಿಕೋಟ್‌ಗೆ ಬಳಸುವ ಕವಚವು ಪಟ್ಟಿಯಂತಲ್ಲದೆ ಹಗ್ಗದಂತಿರಬೇಕು. ಇದು ಚರ್ಮದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
- ಮನೆಯಲ್ಲಿದ್ದಾಗ ಬಿಗಿಯಾದ ಪೆಟಿಕೋಟ್‌ಗಳನ್ನು ಧರಿಸದಿರಿ. ಸ್ವಲ್ಪ ಸಡಿಲವಾದ ಪೆಟಿಕೋಟ್ ಧರಿಸುವುದು ಉತ್ತಮ. ಅದರಲ್ಲೂ ಮನೆಯಲ್ಲಿದ್ದಾಗ ಸೀರೆ, ನೈಟಿ ಧರಿಸಿದರೆ ಸೀರೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
- ಸೊಂಟದ ಪ್ರದೇಶವನ್ನು ನಿಯಮಿತವಾಗಿ ಶುಚಿಗೊಳಿಸುವುದು ಅತ್ಯಗತ್ಯ. ವಿಶೇಷವಾಗಿ ಧೂಳು ಮತ್ತು ಬೆವರು ಸಂಗ್ರಹವಾಗುವ ಹೊರಾಂಗಣದಲ್ಲಿ ಕೆಲಸ ಮಾಡುವವರು ಈ ಬಗ್ಗೆ ಗಮನಹರಿಸಬೇಕು. ಅಂಥವರು ಹೆಚ್ಚು ಜಾಗರೂಕರಾಗಿರಬೇಕು.
ವಿಭಾಗ