Menstrual Health: ಮುಟ್ಟಿನ ದಿನಗಳಲ್ಲಿ ಈ ಸಮಸ್ಯೆಗಳು ಕಾಡ್ತಿದ್ಯಾ, ನಿರ್ಲಕ್ಷ್ಯ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ
Jan 23, 2024 12:33 PM IST
ಸಾಂಕೇತಿಕ ಚಿತ್ರ
- ಮುಟ್ಟಿನ ಬಗ್ಗೆ ಹಾಗೂ ಮುಟ್ಟಿನ ಅವಧಿಯ ಬಗ್ಗೆ ಹೆಣ್ಣುಮಕ್ಕಳು ಗಮನ ಹರಿಸುವುದು ಮುಖ್ಯವಾಗುತ್ತದೆ. ಆರೋಗ್ಯಕರ ಮುಟ್ಟಿನ ಅವಧಿಯು ಬಹಳ ಮುಖ್ಯ. ಹಾಗಾದರೆ ಮುಟ್ಟಿನ ಆರೋಗ್ಯವನ್ನು ಸೂಚಿಸುವ ಲಕ್ಷಣಗಳು ಯಾವುವು? ಇಲ್ಲಿದೆ ಉತ್ತರ.
ಮುಟ್ಟಿನ ಬಗ್ಗೆ ಹಲವು ಹೆಣ್ಣುಮಕ್ಕಳಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಮುಟ್ಟಿನ ಅವಧಿಯು ಕ್ರಮವಾಗಿರಬೇಕು. ಆರೋಗ್ಯಕರ ಋತುಚಕ್ರವು ಉತ್ತಮ ಸಂತಾನೋತ್ಪತ್ತಿ ಆರೋಗ್ಯ ಮಾತ್ರವಲ್ಲ, ಇದು ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಋತುಚಕ್ರದ ಬಗ್ಗೆ ಗಮನ ಹರಿಸುವುದು ಅವಶ್ಯ. ಮುಟ್ಟಿನ ಅವಧಿಯ ಬಗ್ಗೆಯೂ ಸರಿಯಾಗಿ ನಿಗಾ ವಹಿಸಬೇಕು. ಋತುಚಕ್ರಕ್ಕೆ ಸಂಬಂಧಿಸಿದ ಈ 5 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ಮೆಡಿಸೇವಾ ಸಂಸ್ಥಾಪಕರಾದ ಡಾ. ವಿಶೇಷ್ ಕಸ್ಲಿವಾಲ್.
ಆರೋಗ್ಯಕರ ಮುಟ್ಟಿನ ಅವಧಿಯನ್ನು ಸೂಚಿಸುವ 5 ಲಕ್ಷಣಗಳಿವು
ನಿಯಮಿತ ಋತುಚಕ್ರದ ಅವಧಿ: ನಿಯಮಿತ ಋತುಚಕ್ರವು ಸಾಮಾನ್ಯವಾಗಿ 21 ರಿಂದ 35 ದಿನಗಳವರೆಗೆ ಇರುತ್ತದೆ. ಈ ದಿನಗಳ ಅಂತರದಲ್ಲಿ ಮುಟ್ಟಾಗುತ್ತದೆ. ಅಪರೂಪಕ್ಕೆ ಕೆಲವು ಮಹಿಳೆಯರಲ್ಲಿ ಮುಟ್ಟಿನ ಈ ದಿನಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ಮುಟ್ಟಿನ ಅವಧಿಯು ಸರಿಯಾಗಿ ಇದ್ದರೆ ದೇಹವು ನಿಯಮಿತವಾಗಿ ಅಂಡೋತ್ಪತ್ತಿ ಮಾಡುತ್ತದೆ. ಸಂಭಾವ್ಯ ಫಲೀಕರಣಕ್ಕಾಗಿ ಅಂಡಾಣುವನ್ನು ಬಿಡುಗಡೆ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹಾರ್ಮೊನುಗಳ ಅಸಮೋಲನ ಹಾಗೂ ಒತ್ತಡದಿಂದ ಅನಿಯಮಿತ ಋತುಚಕ್ರ ಉಂಟಾಗಬಹುದು. ನೀವು ಪದೇ ಪದೇ ಮುಟ್ಟಿನ ದಿನಗಳಲ್ಲಿ ತೊಂದರೆ ಎದುರಿಸುತ್ತಿದ್ದರೆ, ಸರಿಯಾದ ಸಮಯಕ್ಕೆ ಮುಟ್ಟಾಗದೇ ಇದ್ದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಸಾಮಾನ್ಯ ರಕ್ತಸ್ರಾವ: ಮುಟ್ಟಿನ ರಕ್ತಸ್ರಾವದ ಪ್ರಮಾಣ ಹಾಗೂ ಮುಟ್ಟಿನ ಅವಧಿಯು ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಆರೋಗ್ಯಕರ ಋತುಚಕ್ರವು ಎರಡರಿಂದ ಏಳು ದಿನಗಳವರೆಗೆ ಮಧ್ಯಮದಿಂದ ಭಾರಿ ರಕ್ತಸ್ರಾವವನ್ನು ಹೊಂದಿರುತ್ತದೆ. ಆದರೆ ಪದೇ ಪದೇ ಪ್ಯಾಡ್ ಬದಲಿಸುವ ಅಂದರೆ ಎರಡು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸುವುದು, ಅತಿಯಾದ ರಕ್ತಸ್ರಾವ ಹಾಗೂ ಎಳು ದಿನಗಳಿಗೂ ಅಧಿಕ ಕಾಲ ರಕ್ತಸ್ರಾವವಿದ್ದರೆ ಇದು ಗರ್ಭಾಶಯದ ಫೈಬ್ರಾಯ್ಡ್‌ಗಳಾಗಿರಬಹುದು ಅಥವಾ ಹಾರ್ಮೋನುಗಳ ಅಸಮೋಲತನಕ್ಕೆ ಸಂಬಂಧಿಸಿದ ಆರೋಗ್ಯ ಸ್ಥಿತಿ ಆಗಿರಬಹುದು. ಇದಲ್ಲದೇ ಮುಟ್ಟಾದಂತೆ ಭಾಸವಾಗುವುದು (ಕಡಿಮೆ ರಕ್ತಸ್ರಾವ), ಸ್ಪಾಟಿಂಗ್ (ರಕ್ತ ಆಗಾಗ ತೊಟ್ಟಿಕ್ಕುವುದು) ಇದು ಗರ್ಭಾಶಯದ ಒಳಪದರದ ಸಮಸ್ಯೆಗಳನ್ನು ಸೂಚಿಸಬಹುದು.
ನೋವು ಕಡಿಮೆ ಇರುವುದು: ಮುಟ್ಟಿನ ಸಮಯದಲ್ಲಿ ಸ್ವಲ್ಪ ಮಟ್ಟಿನ ನೋವು ಎಲ್ಲರಲ್ಲೂ ಇರುತ್ತದೆ. ಆದರೆ ಅತಿಯಾದ ನೋವು, ಜೀವ ಹಿಂಡುವಂತಹ ಸೆಳೆತ ಇದು ಸಮಸ್ಯೆಯ ಸಂಕೇತ ಆಗಿರಬಹುದು. ಮುಟ್ಟಿನ ಅವಧಿಯಲ್ಲಿ ಗರ್ಭಾಶಯದ ಸಂಕೋಚನದಿಂದ ಉಂಟಾಗುವ ಸೌಮ್ಯವಾದ ಸೆಳೆತ ಸಾಮಾನ್ಯವಾಗಿದೆ. ಆದರೆ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅಥವಾ ನೋವು ನಿವಾರಕ ತೆಗೆದುಕೊಂಡು ನೋವು ನಿವಾರಿಸುವ ಪರಿಸ್ಥಿತಿ ಇದ್ದರೆ ಈ ಬಗ್ಗೆ ನೀವು ಗಮನಹರಿಸಲೇಬೇಕು. ಎಂಡೊಮೆಟ್ರಿಯೋಸಿಸ್, ಶ್ರೋಣಿಯ ಉರಿಯೂತದ ಕಾಯಿಲೆ ಅಥವಾ ಫೈಬ್ರಾಯ್ಡ್‌ಗಳಂತಹ ಪರಿಸ್ಥಿತಿಗಳು ತೀವ್ರವಾದ ಮುಟ್ಟಿನ ನೋವನ್ನು ಉಂಟುಮಾಡಬಹುದು. ಮುಟ್ಟಿನ ದಿನಗಳಲ್ಲಿ ಅತಿಯಾದ ನೋವು ಇದ್ದರೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
ಸ್ಥಿರವಾದ ಋತುಚಕ್ರ: ನಿರ್ದಿಷ್ಟ ದಿನಾಂಕಕ್ಕೆ ಸರಿಯಾಗಿ ಮುಟ್ಟಾಗುವುದು ಮುಖ್ಯವಾಗುತ್ತದೆ. ಒಂದೆರಡು ದಿನಗಳ ವ್ಯತ್ಯಾಸವಾದರೆ ತೊಂದರೆಯಿಲ್ಲ. ಆದರೆ ಮುಟ್ಟಿನ ಅವಧಿಯಲ್ಲಿ ಪದೇ ಪದೇ ವ್ಯತ್ಯಾಸ ಉಂಟಾಗುವುದು ತೊಂದರೆ ಲಕ್ಷಣ ಇರಬಹುದು. ಇದು ಹಾರ್ಮೋನುಗಳ ಅಸಮತೋಲನ, ಒತ್ತಡ ಹಾಗೂ ಇತರ ಆರೋಗ್ಯ ಪರಿಸ್ಥಿತಿಯಿಂದ ಉಂಟಾಗಬಹುದು. ಪದೇ ಪದೇ ಮುಟ್ಟಿನ ಅವಧಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ವೈದ್ಯರ ಬಳಿ ತೋರಿಸುವುದು ಮುಖ್ಯವಾಗುತ್ತದೆ.
ಸಮತೋಲಿತ ಮನಸ್ಥಿತಿ ಹಾಗೂ ಶಕ್ತಿಯ ಮಟ್ಟ: ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಏರಿಳಿತವು ಮನಸ್ಥಿತಿ ಹಾಗೂ ಶಕ್ತಿಯ ಮಟ್ಟದ ಮೇಲೆ ಪರಿಣಾಮ ಉಂಟುಮಾಡಬಹುದು. ನಿರ್ವಹಿಸಬಹುದಾದ ಮೂಡ್ ಸ್ವಿಂಗ್ ಮುಟ್ಟಿನ ದಿನಗಳಲ್ಲಿ ಸಾಮಾನ್ಯ. ಅಲ್ಲದೆ ಶಕ್ತಿಯ ಮಟ್ಟದಲ್ಲೂ ಕೊಂಚ ಏರುಪೇರು ಆಗಬಹುದು. ಆದರೆ ಅತಿಯಾದ ಆಯಾಸ, ಪದೇ ಪದೇ ಮೂಡ್ ಸ್ವಿಂಗ್ ಎದುರಾಗುವುದು, ನಿರಂತರವಾದ ದುಃಖ, ಆತಂಕ ಕಾಡುವುದು ಹಾರ್ಮೋನುಗಳು ಅಸಮತೋಲನ ಅಥವಾ ಪ್ರೀ ಮೆನ್ಸ್ಟ್ರುವಲ್ ಡಿಸ್ಫೊರಿಕ್ ಡಿಸಾರ್ಡರ್ (PMDD) ನಂತಹ ಸಮಸ್ಯೆಯನ್ನು ಸೂಚಿಸಬಹುದು. ಈ ರೋಗಲಕ್ಷಣಗಳು ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿದರೆ ಅವುಗಳನ್ನು ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.
ಮಹಿಳೆಯರು ಮುಟ್ಟಿನ ಅವಧಿ ಹಾಗೂ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಮುಟ್ಟಿನ ಅವಧಿಯಲ್ಲಿ ಯಾವುದೇ ತೊಂದರೆ ಎದುರಾಗದಂತೆ ಇರುವುದು ಒಟ್ಟಾರೆ ಯೋಗಕ್ಷೇಮಕ್ಕೂ ಉತ್ತಮ. ನಿಮ್ಮಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದರೂ ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವುದು ಉತ್ತಮ.