Post Menstrual Syndrome: ಏನಿದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌; ಮುಟ್ಟಿನ ನಂತರ ಕಾಡುವ ಈ ಸಮಸ್ಯೆಗಳಿಗೆ ಕಾರಣವೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Post Menstrual Syndrome: ಏನಿದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌; ಮುಟ್ಟಿನ ನಂತರ ಕಾಡುವ ಈ ಸಮಸ್ಯೆಗಳಿಗೆ ಕಾರಣವೇನು?

Post Menstrual Syndrome: ಏನಿದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌; ಮುಟ್ಟಿನ ನಂತರ ಕಾಡುವ ಈ ಸಮಸ್ಯೆಗಳಿಗೆ ಕಾರಣವೇನು?

ಮುಟ್ಟಿನ ದಿನಗಳು ಎಂದರೆ ಹೆಣ್ಣು ಮಕ್ಕಳಿಗೆ ಅದೇನೋ ಹಿಂಸೆ. ಆ ಮೂರು ದಿನಗಳಲ್ಲಿ ಹೇಳಲಾರದ ವೇದನೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಮುಟ್ಟು ಮುಗಿದ ನಂತರವೂ ಮೂಡ್‌ ಸ್ವಿಂಗ್‌ನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಎನ್ನುತ್ತಾರೆ. ಹಾಗಾದರೆ ಏನಿದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌?

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ನೋವು, ವಿಚಿತ್ರ ಯಾತನೆ, ಮೂಡ್‌ಸ್ವಿಂಗ್‌, ಹೊಟ್ಟೆಯುಬ್ಬರ ಇಂತಹ ಸಮಸ್ಯೆಗಳನ್ನು ಎದುರಿಸುವುದು ಸಹಜ. ಹಲವು ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ವಿಪರೀತ ತೊಂದರೆ ಅನುಭವಿಸುತ್ತಾರೆ. ಕೆಲವರಿಗೆ ಈ ನೋವು ಸ್ವಲ್ಪಮಟ್ಟಿಗೆ ಕಡಿಮೆ ಇರುತ್ತದೆ. ಆದರೆ ಕೆಲವರಿಗೆ ಮುಟ್ಟಿನ ದಿನಗಳ ಆರಂಭದಲ್ಲಿ ಇಂತಹ ಅನುಭವವಾಗಬಹುದು. ಇದಕ್ಕೆ ಕಾರಣ ಪ್ರಿ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಅಥವಾ ಪಿಎಂಎಸ್‌ ಎನ್ನುತ್ತಾರೆ. ಇದು ಹಲವರಲ್ಲಿ ಸಹಜವಾಗಿರುತ್ತದೆ. ಆದರೆ ಕೆಲವರಿಗೆ ಮುಟ್ಟು ನಿಂತ ನಂತರ ಇಂತಹ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಎನ್ನುತ್ತಾರೆ.

ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌

ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಇದು ವೈದ್ಯಕೀಯ ಪರಿಭಾಷೆಯಲ್ಲ. ಇದು ಆಡುಮಾತಿನಿಂದ ಹುಟ್ಟಿದ ಶಬ್ದವಾಗಿರಬಹುದು. ರೋಗಲಕ್ಷಣಗಳ ಆಧಾರದ ಮೇಲೆ ಈ ಪದವನ್ನು ಉಲ್ಲೇಖಿಸಬಹುದು. ಇದು ದೀರ್ಘಕಾಲದ ಆಯಾಸ ಮತ್ತು ಮನಸ್ಥಿತಿಯ ಬದಲಾವಣೆ (ಮೂಡ್‌ ಸ್ವಿಂಗ್‌) ಯನ್ನು ಸೂಚಿಸುತ್ತದೆ ಎಂದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಬಗ್ಗೆ ವಿವರಣೆ ನೀಡುತ್ತಾರೆ ಡಾ. ಗಾಯತ್ರಿ ದೇಶಪಾಂಡೆ.

ಇದನ್ನೂ ಓದಿ: Menstruation: ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು

ಪೋಸ್ಟ್‌ ಮೆನ್ಸ್ಟ್ರವಲ್‌ ಸಿಂಡ್ರೋಮ್‌ ಪಿಎಂಎಸ್‌ಗಿಂತ ಹೇಗೆ ಭಿನ್ನ?

ಪ್ರಿ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಹಾಗೂ ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಎರಡೂ ಸಮಯ ಹಾಗೂ ರೋಗಲಕ್ಷಣಗಳ ವಿಚಾರದಲ್ಲಿ ಭಿನ್ನವಾಗಿವೆ.

ಪ್ರಿ ಮೆನ್ಸ್ಟ್ರುವಲ್‌ ಸಿಂಡ್ರೋಮ್‌

ಪಿಎಂಎಸ್‌ ಎಂದು ಮಾನ್ಯತೆ ಪಡೆದ ವೈದ್ಯಕೀಯ ವಿದ್ಯಮಾನವಾಗಿದೆ. ಇದು ಮುಟ್ಟಿನ ದಿನಗಳಿಗೂ ಮೊದಲು ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ಮುಟ್ಟಾಗುವ ದಿನ ಅಥವಾ ವಾರಗಳಿಂದ ಕಾಣಿಸುವ ವಿವಿಧ ರೀತಿ ದೈಹಿಕ ಹಾಗೂ ಭಾವನಾತ್ಮಕ ಲಕ್ಷಣಗಳನ್ನು ಹೊಂದಿರುತ್ತದೆ. ಪಿಎಂಎಸ್‌ನಲ್ಲಿ ಈ ರೋಗಲಕ್ಷಣಗಳು ಕಾಣಿಸಬಹುದು.

* ಕಿರಿಕಿರಿ ಹಾಗೂ ಆಲಸ್ಯದ ಮನೋಭಾವ

* ಹೊಟ್ಟೆಯುಬ್ಬರ

* ಸ್ತನಗಳು ಮೃದುವಾಗುವುದು

* ತಲೆನೋವು

* ಆಯಾಸ

* ಹಸಿವಿನಲ್ಲಿ ವ್ಯತ್ಯಾಸವಾಗುವುದು

* ನಿದ್ದೆಯಲ್ಲಿನ ತೊಂದರೆಗಳು

* ಗಮನ ಕೊಡಲು ಕಷ್ಟವಾಗುವುದು

ಇದು ಮುಟ್ಟಾಗುವ ಸಂದರ್ಭದಲ್ಲಿ ಬಹಳಷ್ಟು ಹೆಣ್ಣುಮಕ್ಕಳನ್ನು ಕಾಡುವ ಸಮಸ್ಯೆಯಾಗಿದೆ.

ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌

ಕೆಲವರಿಗೆ ಮುಟ್ಟಿನ ದಿನಗಳು ಮುಗಿದ ನಂತರವೂ ಇಂತಹ ಕೆಲವು ಲಕ್ಷಣಗಳು ಕಾಣಿಸಬಹುದು.

* ಸುಸ್ತಾಗುವುದು

* ಮೂಡ್‌ ಸ್ವಿಂಗ್‌ ಅಥವಾ ಭಾವನೆಗಳಲ್ಲಿನ ವ್ಯತ್ಯಾಸ

ಪಿಎಂಎಸ್‌ ಹಾಗೂ ಮುಟ್ಟಿನ ನಂತರದ ರೋಗಲಕ್ಷಣಗಳ ನಡುವಿನ ವ್ಯತ್ಯಾಸವು ಮುಟ್ಟಿನ ಸಮಯವನ್ನು ಆಧರಿಸಿರುತ್ತದೆ. ಪಿಎಂಎಸ್‌ ಎಂದರೆ ಮುಟ್ಟಿನ ಮೊದಲು ಅಥವಾ ಮುಟ್ಟಿನ ಸಮಯದಲ್ಲಿ ಅನುಭವಕ್ಕೆ ಬರುವುದಾಗಿದೆ. ಈ ಮೊದಲೇ ಹೇಳಿದಂತೆ ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಮುಟ್ಟಿನ ನಂತರ ಕಾಣಿಸುವ ಸಮಸ್ಯೆಗಳನ್ನು ಸೂಚಿಸುತ್ತದೆ. ಕೆಲವರಿಗೆ ಈ ಸಮಸ್ಯೆ ಸೌಮ್ಯತರದಲ್ಲಿ ಇರಬಹುದು. ಆದರೆ ರೋಗಲಕ್ಷಣಗಳು ಸ್ಥಿರವಾಗಿ ಇರುವುದಿಲ್ಲ. ಕೆಲವರಿಗೆ ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ಒಂದು ವಾರಗಳವರೆಗೆ ಕಾಡಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Tampon: ಟ್ಯಾಂಪೂನ್‌ ಬಳಸುವುದು ಹೇಗೆ, ಮುಟ್ಟಿನ ದಿನಗಳಲ್ಲಿ ಇದರ ಉಪಯೋಗವೇನು; ಈ ಕುರಿತು ನಿಮಗೆ ತಿಳಿದಿರದ ವಿಷಯಗಳು ಇಲ್ಲಿವೆ

ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ಗೆ ಕಾರಣಗಳೇನು?

ಮುಟ್ಟಿನ ನಂತರ ಕಾಣಿಸುವ ಮೂಡ್‌ಸ್ವಿಂಗ್‌ನಂತಹ ಸಮಸ್ಯೆಗಳಿಗೆ ಕಾರಣಗಳು ಹಲವಿರಬಹುದು.

ಹಾರ್ಮೋನ್‌ಗಳಲ್ಲಿನ ವ್ಯತ್ಯಾಸ: ಮುಟ್ಟಿನ ದಿನಗಳ ನಂತರ ಮುಂದಿನ ಬಾರಿ ಋತುಚಕ್ರಕ್ಕೆ ದೇಹ ತಯಾರಿ ನಡೆಸುತ್ತದೆ. ಆಗ ಹಾರ್ಮೋನ್‌ಗಳಲ್ಲಿನ ವ್ಯತ್ಯಾಸ ಸಹಜವಾಗಿರುತ್ತದೆ. ಈಸ್ಟ್ರೋಜೆನ್‌, ಪ್ರೊಜೆಸ್ಟೆರಾನ್‌ನಂತಹ ಹಾರ್ಮೋನ್‌ಗಳಲ್ಲಿನ ವ್ಯತ್ಯಾಸವು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ಗೆ ಮುಖ್ಯ ಕಾರಣವಾಗಬಹುದು.

ಆಯಾಸ: ಮುಟ್ಟು ದೈಹಿಕ ಶಕ್ತಿಯಲ್ಲಿ ಒಂದಿಷ್ಟು ತಾತ್ಕಾಲಿಕ ಬದಲಾವಣೆಗಳನ್ನು ಮಾಡುವುದು ಸಹಜ. ರಕ್ತಸ್ರಾವದ ಕಾರಣ ಹಿಮೊಗ್ಲೋಬಿನ್‌ ಮಟ್ಟವು ಕಡಿಮೆಯಾಗಿರುತ್ತದೆ. ಇದು ಮುಟ್ಟಿನ ನಂತರ ಕಾಡುವ ಆಯಾಸಕ್ಕೆ ಕಾರಣವಾಗುತ್ತದೆ ಎಂದು ಹೆಲ್ತ್‌ಶಾಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ಡಾ. ಗಾಯತ್ರಿ ದೇಶಪಾಂಡೆ.

ಒತ್ತಡ ಹಾಗೂ ಜೀವನಶೈಲಿಯ ಕಾರಣಗಳು: ಒತ್ತಡ, ಅಸಮರ್ಪಕ ನಿದ್ದೆ, ಪೋಷಕಾಂಶ ಕೊರತೆಯು ಇದಕ್ಕೆ ಕಾರಣವಾಗಬಹುದು. ಇದು ಮಹಿಳೆಯರನ್ನು ಈ ರೋಗಲಕ್ಷಣಗಳು ಕಾಡುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಅನಾರೋಗ್ಯ ಸಮಸ್ಯೆಗಳು: ಅನಿಮಿಯಾ, ಥೈರಾಯಿಡ್‌ ಹಾಗೂ ದೀರ್ಘಕಾಲದ ಆಯಾಸದ ಸಮಸ್ಯೆಯಂತಹ ಕೆಲವು ವೈದ್ಯಕೀಯ ಕಾರಣಗಳು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ಗೆ ಮುಖ್ಯ ಕಾರಣವಾಗುತ್ತದೆ.

ವೈಯಕ್ತಿಕ ಬದಲಾವಣೆ: ಪ್ರತಿಯೊಬ್ಬರ ದೇಹವು ಭಿನ್ನವಾಗಿರುತ್ತದೆ. ಅಲ್ಲದೇ ಹಾರ್ಮೋನ್‌ ಬದಲಾವಣೆಗಳಿಗೆ ಒಬ್ಬೊಬ್ಬರ ದೇಹ ಒಂದೊಂದು ರೀತಿ ಸ್ಪಂದಿಸುತ್ತದೆ. ಆ ಕಾರಣಕ್ಕೆ ಕೆಲವರನ್ನು ಜಾಸ್ತಿ ಕಾಡಬಹುದು. ಕೆಲವರಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರಬಹುದು.

ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ ನಿವಾರಣೆಗೆ ಮನೆಮದ್ದು

ಈ ಸಮಸ್ಯೆಗೆ ನಿವಾರಣೆಗೆ ಕೆಲವು ಸರಳ ಮನೆಮದ್ದುಗಳಿವೆ. ಅವುಗಳನ್ನು ಪಾಲಿಸುವುದರಿಂದ ತಕ್ಕಮಟ್ಟಿಗೆ ಪರಿಹಾರ ಪಡೆಯಬಹುದು.

ವಿಶ್ರಾಂತಿ, ನಿದ್ದೆ: ಮುಟ್ಟಿನ ದಿನಗಳ ನಂತರ ಸುಸ್ತು ಕಾಡುವುದು ಸಹಜ. ಇದಕ್ಕೆ ಸಮರ್ಪಕ ನಿದ್ದೆ ಹಾಗೂ ವಿಶ್ರಾಂತಿ ಬಹಳ ಅವಶ್ಯ. ನಿಮ್ಮಲ್ಲಿ ಚೈತನ್ಯ ಮರಳಲು ಸಾಕಷ್ಟು ನಿದ್ದೆ ಸಿಗುತ್ತಿದೆಯೇ ಎಂಬುದನ್ನು ಗಮನಿಸಲು ಮರೆಯದಿರಿ.

ಡಯೆಟ್‌: ಆರೋಗ್ಯಕರ ಡಯೆಟ್‌ ಕ್ರಮ ಪಾಲಿಸುವುದು ಪೋಸ್ಟ್‌ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ಗೂ ಅವಶ್ಯ. ಹಣ್ಣು, ತರಕಾರಿಗಳು, ಲೀನ್‌ ಪ್ರೊಟೀನ್‌, ಧಾನ್ಯಗಳು ಇರುವಂತಹ ಸಮತೋಲಿತ ಆಹಾರ ಸೇವೆನೆಗೆ ಇತ್ತು ನೀಡಿ. ಇದು ದೇಹಕ್ಕೆ ಶಕ್ತಿ ಮರಳಲು ಸಹಾಯ ಮಾಡುತ್ತದೆ. ಕಬ್ಬಿಣಾಂಶ ಸಮೃದ್ಧ ಆಹಾರ ಸೇವಿಸುವುದು ಮುಖ್ಯವಾಗುತ್ತದೆ.

ಹೈಡ್ರೇಷನ್‌: ಸಾಕಷ್ಟು ನೀರು ಕುಡಿಯುವುದು ಅವಶ್ಯ. ಇದು ನಮ್ಮ ಒಟ್ಟಾರೆ ದೇಹಕ ಕಾರ್ಯಸುಧಾರಣೆಗೂ ಮುಖ್ಯ. ಇದು ಆಯಾಸ, ಕಿರಿಕಿರಿಯಂತಹ ಸಮಸ್ಯೆಗಳನ್ನು ಸುಧಾರಿಸುತ್ತದೆ.

ವ್ಯಾಯಾಮ: ಯೋಗ, ವಾಕಿಂಗ್‌ನಂತಹ ದೈಹಿಕ ಚಟುವಟಿಕೆಯೂ ಮುಟ್ಟಿನ ನಂತರ ಕಾಡುವ ಮೂಡ್‌ ಸ್ವಿಂಗ್‌ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.

ಒತ್ತಡ ನಿರ್ವಹಣೆ: ಧ್ಯಾನ, ದೀರ್ಘ ಉಸಿರಾಟದಂತಹ ಒತ್ತದ ನಿರ್ವಹಣೆಯ ಅಭ್ಯಾಸವನ್ನೂ ರೂಢಿಸಿಕೊಳ್ಳಿ. ಇದು ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಬಿಸಿ ನೀರಿನ ಸ್ನಾನ: ಬಿಸಿನೀರಿನ ಶಾಖ ಪಡೆಯುವುದು ಹಾಗೂ ಬಿಸಿನೀರಿನ ಸ್ನಾನ ಮಾಡುವುದರಿಂದ ಈ ಸಮಸ್ಯೆಗೆ ಕೊಂಚ ನೆಮ್ಮದಿ ಎನ್ನಿಸಬಹುದು.

Whats_app_banner