logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ನಾಯು, ಮೂಳೆಗಳು ದುರ್ಬಲಗೊಳ್ಳಲು ಇದುವೇ ಕಾರಣ; ವಿಟಮಿನ್‌ ಡಿ ಕೊರತೆಯಾದ್ರೆ ಆರೋಗ್ಯದಲ್ಲಾಗುತ್ತೆ ಏರು‍ಪೇರು

ಸ್ನಾಯು, ಮೂಳೆಗಳು ದುರ್ಬಲಗೊಳ್ಳಲು ಇದುವೇ ಕಾರಣ; ವಿಟಮಿನ್‌ ಡಿ ಕೊರತೆಯಾದ್ರೆ ಆರೋಗ್ಯದಲ್ಲಾಗುತ್ತೆ ಏರು‍ಪೇರು

Priyanka Gowda HT Kannada

Nov 07, 2024 12:53 PM IST

google News

ಸ್ನಾಯು ಮತ್ತು ಮೂಳೆಗಳು ದುರ್ಬಲಗೊಳ್ಳಲು ಇದುವೇ ಕಾರಣ; ವಿಟಮಿನ್‌ ಡಿ ಕೊರತೆಯಾದ್ರೆ ಆರೋಗ್ಯದಲ್ಲಾಗುತ್ತೆ ಏರು‍ಪೇರು

    • ವಿಟಮಿನ್‌ ಡಿ ಯ ಕೊರತೆಯಿಂದ ಸ್ನಾಯು ಮತ್ತು ಮೂಳೆಗಳು ದುರ್ಬಲಗೊಳ್ಳುತ್ತವೆ. ಮೂಳೆಗಳು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೀರಿಕೊಳ್ಳಲು ದೇಹಕ್ಕೆ ವಿಟಮಿನ್‌ ಡಿ ಅಗತ್ಯವಾಗಿ ಬೇಕು. ವಿಟಮಿನ್‌ ಡಿ ಯ ಕೊರತೆಯಿಂದ ದೇಹವು ಈ ಐದು ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಅವು ಯಾವುದು ಇಲ್ಲಿದೆ ಓದಿ.
ಸ್ನಾಯು ಮತ್ತು ಮೂಳೆಗಳು ದುರ್ಬಲಗೊಳ್ಳಲು ಇದುವೇ ಕಾರಣ; ವಿಟಮಿನ್‌ ಡಿ ಕೊರತೆಯಾದ್ರೆ ಆರೋಗ್ಯದಲ್ಲಾಗುತ್ತೆ ಏರು‍ಪೇರು
ಸ್ನಾಯು ಮತ್ತು ಮೂಳೆಗಳು ದುರ್ಬಲಗೊಳ್ಳಲು ಇದುವೇ ಕಾರಣ; ವಿಟಮಿನ್‌ ಡಿ ಕೊರತೆಯಾದ್ರೆ ಆರೋಗ್ಯದಲ್ಲಾಗುತ್ತೆ ಏರು‍ಪೇರು (PC: HT File Photo)

ಮನುಷ್ಯನ ದೇಹವು ಸಮರ್ಪಕವಾಗಿ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ವಿಟಮಿನ್‌ಗಳು ಬಹಳ ಅವಶ್ಯಕ. ದೇಹವು ಸರಿಯಾಗಿ ಕೆಲಸ ಮಾಡಲು ಪ್ರಮುಖವಾಗಿ 13 ವಿಟಮಿನ್‌ಗಳು ಬೇಕು. ಯಾವುದೇ ಒಂದು ವಿಟಮಿನ್‌ ಕೊರತೆಯಾದರೂ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಟಮಿನ್‌ಗಳು ಆಹಾರ ಸೇವನೆಯಿಂದ ದೊರಕುತ್ತವೆ. ವಿಟಮಿನ್‌ ಡಿ ಸೂರ್ಯನಿಂದ ಮತ್ತು ಕೆಲವು ಆಹಾರಗಳಿಂದ ಸಿಗುತ್ತದೆ. ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ರಂಜಕ ಬೇಕು. ಇದನ್ನು ಹೀರಿಕೊಳ್ಳಲು ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿದೆ. ಸೂರ್ಯನ ಬೆಳಕು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಡಿಯನ್ನು ಒದಗಿಸುತ್ತದೆ. ಚರ್ಮವು ಸೂರ್ಯನ ಯುವಿ ಕಿರಣಗಳನ್ನು ಹೀರಿಕೊಂಡು ಅದನ್ನು ವಿಟಮಿನ್‌ ಡಿ ಆಗಿ ಪರಿವರ್ತಿಸುತ್ತದೆ. ಮೀನು, ಮೊಟ್ಟೆಯ ಹಳದಿ ಭಾಗ, ಹಾಲು ಮತ್ತು ಧಾನ್ಯಗಳಿಂದಲೂ ವಿಟಮಿನ್‌ ಡಿ ದೊರಕುತ್ತದೆ. ವಿಟಮಿನ್‌ ಡಿ ಕೊರತೆಯಿಂದ ದೇಹವು ಸಾಕಷ್ಟು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೀರಿಕೊಳ್ಳಲು ಅಸಮರ್ಥವಾಗುತ್ತದೆ. ಆಗ ವ್ಯಕ್ತಿಯು ಸ್ನಾಯು ಮತ್ತು ಮೂಳೆಗಳು ದುರ್ಬಲಗೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಷ್ಟೇ ಅಲ್ಲದೇ ದೇಹವು ಕೆಲವು ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಯಾವ ಕೆಲಸಗಳಿಗೆ ವಿಟಮಿನ್‌ ಡಿ ಅವಶ್ಯಕ ಮತ್ತು ಎಷ್ಟು ಪ್ರಮಾಣದಲ್ಲಿ ವಿಟಮಿನ್‌ ಡಿ ಬೇಕು ಎಂದು ತಿಳಿಯೋಣ.

ದಿನವೊಂದಕ್ಕೆ ಎಷ್ಟು ವಿಟಮಿನ್‌ ಅಗತ್ಯವಿದೆ?

ಪ್ರತಿದಿನ ನಿಮಗೆ ಎಷ್ಟು ವಿಟಮಿನ್‌ ಡಿ ಬೇಕು ಎಂದು ತಿಳಿಯಲು ನಿಮ್ಮ ವಯಸ್ಸು ಪ್ರಮುಖವಾಗುತ್ತದೆ. ಇಂಟರ್‌ನ್ಯಾಷನಲ್‌ ಯೂನಿಟ್‌ (IU) ಸೂಚಿಸಿದ ಪ್ರಮಾಣಗಳ ಪ್ರಕಾರ ಮಗುವಿನ ಜನನದ ನಂತರ 12 ತಿಂಗಳುಗಳವರೆಗೆ 400 IU, 1 ರಿಂದ 13 ವರ್ಷಗಳವರೆಗೆ 600 IU, 14 ರಿಂದ 18 ವರ್ಷದವರಿಗೆ 600 IU, 19 ರಿಂದ 70 ವರ್ಷದವರಿಗೆ 600 IU, 71 ವರ್ಷ ಮೇಲ್ಪಟ್ಟವರಿಗೆ 800 IU ಮತ್ತು ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ 600 IU ವಿಟಮಿನ್‌ ಡಿ ಅಗತ್ಯವಿದೆ. ನಿಮಗೆ ಎಷ್ಟು ವಿಟಮಿನ್‌ ಡಿ ಅಗತ್ಯವಿದೆ ಎಂಬುದನ್ನು ಇದರಿಂದ ಅರಿಯಬಹುದು.

ವಿಟಮಿನ್‌ ಡಿ ಏಕೆ ಬೇಕು?

ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅಗತ್ಯ: ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್‌ ಡಿ ಯು ಪ್ರಮುಖ ಪಾತ್ರವಹಿಸುತ್ತದೆ. ಇದರ ಕೊರತೆಯಿಂದ ದೇಹವು ಆಹಾರದಿಂದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಟ್ಟಿಮುಟ್ಟಾದ ಮೂಳೆ ಪಡೆಯಲು ಕ್ಯಾಲ್ಸಿಯಂ ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ ವಿಟಮಿನ್‌ ಡಿಯ ಕೊರತೆಯಿಂದ ಮೂಳೆಗಳಲ್ಲಿ ನೋವು, ಮುರಿತ, ಸ್ನಾಯು ಸೆಳೆತ ಮತ್ತು ದುರ್ಬಲಗೊಳ್ಳುವಂತಹ ಅಪಾಯವು ಹೆಚ್ಚುತ್ತದೆ.

ಸ್ನಾಯುಗಳ ಕಾರ್ಯ ಸುಧಾರಿಸಲು: ಮೂಳೆಗಳ ಆರೋಗ್ಯ ಮತ್ತು ಸ್ನಾಯುವಿನ ಕಾರ್ಯವು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಇವೆರಡಕ್ಕೂ ವಿಟಮಿನ್‌ ಡಿ ಅವಶ್ಯಕ. ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯದ ಸಮೀಪದಲ್ಲಿರುವವರಿಗೆ ಸ್ನಾಯುವಿನ ಶಕ್ತಿ ಮತ್ತು ಕಾರ್ಯವನ್ನು ನಿರ್ವಹಿಸಲು ವಿಟಮಿನ್ ಡಿಯ ಅಗತ್ಯತೆಯಿದೆ. ಅವರಲ್ಲಿ ಕಾಣಿಸುವ ಮೂಳೆ ಮುರಿತ ಮತ್ತು ಬೀಳುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಬಲವಾದ ಸ್ನಾಯು ಮತ್ತು ಮೂಳೆಗಳನ್ನು ಪಡೆಯಲು ವಿಟಮಿನ್‌ ಡಿ ಸಹಾಯ ಮಾಡುತ್ತದೆ.

ಆಸ್ಟಿಯೊಪೊರೋಸಿಸ್‌ ತಡೆಗಟ್ಟುತ್ತದೆ: ಮೂಳೆಗಳು ದುರ್ಬಲಗೊಳ್ಳುವ ಅಥವಾ ಮೂಳೆಗಳಲ್ಲಿ ಚಿಕ್ಕ ಚಿಕ್ಕ ರಂದ್ರಗಳಾಗುವ ಸ್ಥಿತಿಯನ್ನು ಆಸ್ಟಿಯೊಪೊರೋಸಿಸ್‌ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ವಿಟಮಿನ್‌ ಡಿಯ ಕೊರತೆ. ಮೂಳೆಗಳು ಸರಿಯಾಗಿ ಕ್ಯಾಲ್ಸಿಯಂ ಹೀರಿಕೊಂಡು ಖನಿಜಗಳ ಪ್ರಮಾಣವನ್ನು ಹೆಚ್ಚಿಸಿ ಮೂಳೆಗಳ ಸಾಂದ್ರತೆ ಮತ್ತು ಬಲವನ್ನು ಕಾಪಾಡಿಕೊಳ್ಳಲು ವಿಟಮಿನ್‌ ಡಿ ಸಹಾಯ ಮಾಡುತ್ತದೆ. ಇದು ಮೂಳೆ ಮುರಿತ ಮತ್ತು ಮೂಳೆಗಳ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೂಳೆಗಳ ಬಲವರ್ಧನೆಗೆ: ಮೂಳೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಶೇಖರಣೆಯಾಗಲು ವಿಟಮಿನ್‌ ಡಿ ಮಹತ್ವದ ಪಾತ್ರವಹಿಸುತ್ತದೆ. ಮೂಳೆಗಳಲ್ಲಿ ಖನಿಜಗಳು ಸೇರ್ಪಡೆಯಾಗುವ ಮೂಲಕ ಅದು ಮೂಳೆಗಳನ್ನು ಬಲಪಡಿಸುತ್ತದೆ. ವಿಡಮಿನ್‌ ಡಿ ಯ ಕೊರತೆಯಿಂದ ವಯಸ್ಕರರಲ್ಲಿ ಆಸ್ಟಿಯೋಮಲೇಶಿಯಾ ಮತ್ತು ಮಕ್ಕಳಲ್ಲಿ ರಿಕೆಟ್‌ ಕಾಯಿಲೆ ಕಂಡುಬರುತ್ತದೆ.

ಮೂಳೆಗಳ ಬೆಳವಣಿಗೆಗೆ: ಮೂಳೆಯ ರಚನೆ ಮತ್ತು ಬೆಳವಣಿಗೆಯಲ್ಲಿ ವಿಟಮಿನ್‌ ಡಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಮೂಳೆಯ ಆರೋಗ್ಯ ಮತ್ತು ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ