ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವವರ ಲಿಸ್ಟ್‌ನಲ್ಲಿ ನೀವೂ ಇದ್ದೀರಾ, ಜೀವನಪೂರ್ತಿ ಈ ಸಮಸ್ಯೆಗಳನ್ನ ಎದುರಿಸಬೇಕಾಗಬಹುದು ಎಚ್ಚರ
Oct 19, 2024 11:58 AM IST
ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದರಿಂದಾಗುವ ತೊಂದರೆಗಳು
- ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಮ್ಮ ಬದುಕಿನ ಭಾಗವಾಗಿದೆ. ಎಷ್ಟರಮಟ್ಟಿಗೆ ಅಂದರೆ ಹಲವರು ಟಾಯ್ಲೆಟ್‌ಗೂ ಮೊಬೈಲ್ ಹಿಡಿದುಕೊಂಡು ಹೋಗುತ್ತಾರೆ. ಟಾಯ್ಲೆಟ್‌ನಲ್ಲಿ ಕೂತು ಮೊಬೈಲ್ ನೋಡುವುದು ಬಹಳ ಅಪಾಯಕಾರಿ. ಇದರಿಂದ ಜೀವನಪೂರ್ತಿ ನೀವು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ, ಈ ಕೆಲವು ರೋಗಗಳು ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದರಿಂದ ಬರುತ್ತದೆ ನೆನಪಿರಲಿ.
ನಮ್ಮ ದೈನಂದಿನ ಬದುಕಿನಲ್ಲಿ ನಾವು ಅತಿ ಹೆಚ್ಚು ಬಳಸುವ ವಸ್ತು ಎಂದರೆ ಅದು ಮೊಬೈಲ್. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್ ತಮ್ಮ ಜೊತೆಯಲ್ಲೇ ಇರುತ್ತದೆ. ಈಗೀಗ ಹಲವರು ಟಾಯ್ಲೆಟ್‌ಗೂ ಮೊಬೈಲ್ ತೆಗೆದುಕೊಂಡುವ ಹೋಗುವ ಅಭ್ಯಾಸ ಮಾಡುತ್ತಿದ್ದಾರೆ. ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದು ಆ ಕ್ಷಣಕ್ಕೆ ನಿಮಗೆ ಖುಷಿ ನೀಡಿದರೂ ಇದರಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗಬಹುದು. ಈ ಅಭ್ಯಾಸವು ನೀವು ಯೋಚಿಸಿದ್ದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಆಗಾಗ ಎಚ್ಚರಿಸುತ್ತಿರುತ್ತಾರೆ.
ಮಲವಿಸರ್ಜಿಸುವಾಗ ಅಥವಾ ಸ್ನಾನಕ್ಕೆ ಹೋಗುವಾಗ ನಿಮಗೆ ಮೊಬೈಲ್ ಹಿಡಿದು ಹೋಗುವ ಅಭ್ಯಾಸ ಇದ್ದರೆ ಇಂದೇ ಇದಕ್ಕೆ ಫುಲ್‌ಸ್ಟಾಪ್ ಇಡಿ. ಇದರಿಂದ ಏನೆಲ್ಲಾ ಸಮಸ್ಯೆಗಳು ಬರಬಹುದು ಎಂಬುದನ್ನು ನಿಮಗೆ ಯೋಚಿಸುವುದು ಕೂಡ ಕಷ್ಟವಾಗಬಹುದು.
ನೀವು ಬಾತ್‌ರೂಮ್ ಅಥವಾ ಟಾಯ್ಲೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗುವುದರಿಂದ ವಿವಿಧ ರೀತಿಯ ಸೂಕ್ಷ್ಮಜೀವಿಗಳು ಮೊಬೈಲ್‌ಗೆ ಅಂಟಿಕೊಳ್ಳಬಹುದು. ಬಾತ್‌ರೂಮ್‌ನಲ್ಲಿ ಸಾಮಾನ್ಯವಾಗಿ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಹೆಚ್ಚಿರುತ್ತವೆ. ಇವು ಮೊಬೈಲ್ ಮೂಲಕ ದೇಹವನ್ನು ಸೇರಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು.
ಹೆಮರೊಯಿಡ್ಸ್
ಕೆಲವು ದಿನಗಳವರೆಗೆ ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದರಿಂದ ಸೂಕ್ಷ್ಮಾಣು ಜೀವಿಗಳು ದೇಹವನ್ನು ಸೇರಿ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೆಮೊರೊಯಿಡ್ಸ್, ಗುದದ ಮತ್ತು ಕೆಳಭಾಗದ ಗುದನಾಳದಲ್ಲಿ ಊದಿಕೊಂಡಂತಹ ಪರಿಸ್ಥಿತಿಗಳು ಎದುರಾಗಬಹುದು. ಇದು ಮಲವಿರ್ಸಜನೆಯನ್ನು ಕಷ್ಟಗೊಳಿಸಬಹುದು. ಇದರಿಂದ ಮಲವಿರ್ಸಜಿಸುವಾಗ ನೋವು ಉಂಟಾಗಬಹುದು.
ಮಲಬದ್ಧತೆ, ಮೂಲವ್ಯಾಧಿ
ಮೊಬೈಲ್ ಬಾತ್‌ರೂಮ್‌ಗೆ ತೆಗೆದುಕೊಂಡು ಹೋದಾಗ ನಾವು ರೀಲ್ಸ್, ಸೋಷಿಯಲ್ ಮಿಡಿಯಾ ನೋಡುತ್ತಾ ಇಲ್ಲಿ ಟೈಮ್‌ಪಾಸ್ ಮಾಡುತ್ತೇವೆ. ಇದರಿಂದ ನಮಗೆ ಅಲ್ಲಿ ನಾವೆಷ್ಟು ಸಮಯ ಕುಳಿತುಕೊಂಡಿದ್ದೇವೆ ಎಂಬುದು ಅರಿವಿಗೆ ಬರುವುದಿಲ್ಲ. 5 ನಿಮಿಷ ಕುಳಿತುಕೊಳ್ಳುವವರು ಅರ್ಧ ಗಂಟೆ ಕುಳಿತುಕೊಳ್ಳುತ್ತೇವೆ. ದೀರ್ಘಾವಧಿಯವರೆಗೆ ಬಾತ್‌ರೂಮ್‌ನಲ್ಲಿ ಕುಳಿತುಕೊಳ್ಳುವುದು ಮಲಬದ್ಧತೆ ಸಮಸ್ಯೆಗೂ ಕಾರಣವಾಗುತ್ತದೆ.
ಈ ದೀರ್ಘಾವಧಿಯ ಕುಳಿತುಕೊಳ್ಳುವಿಕೆಯು ಗುದನಾಳ ಮತ್ತು ಗುದದ್ವಾರದ ಸುತ್ತಲಿನ ರಕ್ತನಾಳಗಳ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಶೌಚಾಲಯದ ಆಸನದ ಸ್ಥಾನವು ಈಗಾಗಲೇ ಈ ಪ್ರದೇಶದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ಫೋನ್‌ನಿಂದ ವಿಚಲಿತರಾಗುವ ಮೂಲಕ ನಿಮ್ಮ ಕರುಳಿನ ಚಲನೆಯನ್ನು ಮುಗಿಸಲು ನೀವು ವಿಳಂಬಿಸಿದಾಗ, ಒತ್ತಡವು ಮತ್ತಷ್ಟು ಹೆಚ್ಚಾಗುತ್ತದೆ. ಕಾಲಾನಂತರದಲ್ಲಿ, ಈ ಪುನರಾವರ್ತಿತ ಒತ್ತಡವು ಹೆಮೊರೊಯಿಡ್‌ಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಹೆಮೊರೊಯಿಡ್ಸ್ ಸಮಸ್ಯೆಯು ನೋವು, ತುರಿಕೆ ಮತ್ತು ರಕ್ತಸ್ರಾವವನ್ನು ಉಂಟುಮಾಡಬಹುದು. ಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ, ಚಿಕಿತ್ಸೆಯು ಔಷಧಿ, ಜೀವನಶೈಲಿಯ ಬದಲಾವಣೆಗಳು ಅಥವಾ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರಬಹುದು. ಹೆಮರಾಯಿಡ್ಡ್‌ನಂತೆ ಮೂಲವ್ಯಾಧಿ ಕೂಡ ದೀರ್ಘಕಾಲದವರೆಗೆ ಮುಂದುವರಿದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
10 ನಿಮಿಷಕ್ಕಿಂತ ಹೆಚ್ಚು ಕೂತರೆ ಅಪಾಯ
ಟಾಯ್ಲೆಟ್ ಸೀಟ್ ಮೇಲೆ 10 ನಿಮಿಷಕ್ಕಿಂತ ಹೆಚ್ಚು ಕಾಲ ಕುಳಿತುಕೊಳ್ಳಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಮೂಲವ್ಯಾಧಿ, ಮಲಬದ್ಧತೆ ಮತ್ತು ಹೆಮರಾಯಿಡ್ ಅಲ್ಲದೇ ಟಾಯ್ಲೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗುವುದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆಯ ಮೇಲೆ ಪರಿಣಾಮ ಬೀರಬಹುದು. ಟಾಯ್ಲೆಟ್‌ನಲ್ಲಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೇ ಇರುವುದು ಬೆನ್ನು ಹಾಗೂ ಕುತ್ತಿಗೆಯ ನೋವಿಗೂ ಕಾರಣವಾಗಬಹುದು.
ಮಾನಸಿಕ ಸಮಸ್ಯೆಗಳು
ದೀರ್ಘಕಾಲ ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದು ದೈಹಿಕ ಸಮಸ್ಯೆಗಳು ಮಾತ್ರವಲ್ಲದೇ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಟಾಯ್ಲೆಟ್‌ನಲ್ಲಿ ಕೂತು ಮೊಬೈಲ್ ನೋಡುತ್ತಾ ನೋಡುತ್ತಾ ಬೇರೆ ಯೋಚನೆಗಳೇ ಇಲ್ಲದಂತೆ ಕಳೆದು ಹೋಗಬಹುದು. ಇದರಿಂದ ಕಣ್ಣು ಹಾಗೂ ಮೆದುಳಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಬಾತ್‌ರೂಮ್ ಅಥವಾ ಟಾಯ್ಲೆಟ್‌ಗೆ ಹೋದಾಗ ನಮ್ಮ ಯೋಚನೆಗಳು ಭಿನ್ನವಾಗಿರಬಹುದು. ಆದರೆ ಮೊಬೈಲ್ ಬಳಕೆ ಮಾಡುವುದರಿಂದ ಬೇರೆ ಯಾವುದೇ ಯೋಚನೆಗಳು ಮನದಲ್ಲಿ ಸುಳಿಯದಂತೆ ಬರಿ ಮೊಬೈಲ್‌ನಲ್ಲಿ ಮುಳುಗಿ ಹೋಗುತ್ತೇವೆ. ಇದು ಆತಂಕ, ಒತ್ತಡದ ಮಾನಸಿಕ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.