ಮನಃಶಾಂತಿಯೇ ಇಲ್ಲ ಅಂತ ಕೊರಗಬೇಡಿ; ನೆಮ್ಮದಿಯ ಬದುಕಿಗೆ ಇಲ್ಲಿವೆ ನೋಡಿ 7 ಸರಳ ಸೂತ್ರಗಳು; ರೂಪಾ ರಾವ್ ಬರಹ
Oct 29, 2024 07:43 AM IST
ನೆಮ್ಮದಿಯ ಬದುಕಿಗೆ 7 ಸೂತ್ರಗಳು
- ರೂಪಾ ರಾವ್ ಬರಹ: ಮನುಷ್ಯನ ಬಳಿ ಇರುವ ಅತ್ಯಂತ ಶಕ್ತಿಶಾಲಿ ಸಾಧನ ಎಂದರೆ ಅದು ನಮ್ಮ ಮನಸ್ಸು ಹಾಗೂ ಇದನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ಎಂದು ಪ್ರಾಚೀನ ಸ್ಟೊಯಿಕ್ ತತ್ವಜ್ಞಾನಿ ಎಪಿಕ್ಟೆಟಸ್ ಹೇಳುತ್ತಾರೆ. ಅವರ ಪ್ರಕಾರ ಮನಸ್ಸಿನ ಕಾರ್ಯಗಳು ಹೀಗಿವೆ. ಇದನ್ನು ಪಾಲಿಸುವುದರಿಂದ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮಲ್ಲಿ ಬಹುತೇಕರು ನೆಮ್ಮದಿ ಇಲ್ಲ, ಮನಃಶಾಂತಿ ಇಲ್ಲ ಎಂದು ಕೊರಗುತ್ತಾರೆ. ಆದರೆ ನೆಮ್ಮದಿ ಕಂಡುಕೊಳ್ಳುವ ಮಾರ್ಗ ಮಾತ್ರ ಹುಡುಕುವುದಿಲ್ಲ. ನೆಮ್ಮದಿ ಎಂಬುದು ಇರುವುದು ನಮ್ಮ ಮನಸ್ಸಿನಲ್ಲೇ. ನಮ್ಮ ಮನಸ್ಸು ದೃಢವಾಗಿದ್ದರೆ ನೆಮ್ಮದಿ ತಾನಾಗಿಯೇ ನಮ್ಮ ಬಳಿ ಬರುತ್ತದೆ. ಬದುಕಿನಲ್ಲಿ ಮನಃಶಾಂತಿ ಇಲ್ಲ, ನೆಮ್ಮದಿ ಇಲ್ಲ ಎನ್ನುವವರಿಗಾಗಿ ಇಲ್ಲಿದೆ 7 ಸೂತ್ರಗಳು. ಮನಃಶಾಸ್ತ್ರಜ್ಞೆ ರೂಪಾ ರಾವ್ ಅವರು ನೆಮ್ಮದಿಯ ಬದುಕಿಗೆ 7 ಸೂತ್ರಗಳನ್ನು ನಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹವನ್ನು ನೀವೂ ಓದಿ.
ರೂಪಾ ರಾವ್ ಬರಹ
ನಮ್ಮ ಬಳಿ ಇರುವ ಅತ್ಯಂತ ಶಕ್ತಿಶಾಲಿ ಸಾಧನ ಯಾವುದು ಎಂದು ಕೇಳಿದರೆ ಕೆಲವರು ತಂತ್ರಜ್ಞಾನ, ಕೆಲವರು ಹಣ, ಇನ್ನೂ ಕೆಲವರು ಅಧಿಕಾರ ಎಂದು ಹೇಳುತ್ತಾರೆ. ಆದರೆ ಪ್ರಾಚೀನ ಸ್ಟೊಯಿಕ್ ತತ್ವಜ್ಞಾನಿ ಎಪಿಕ್ಟೆಟಸ್ ಹೇಳುವುದೇನೆಂದರೆ ‘ನಮ್ಮ ಬಳಿ ಇರುವ ಶಕ್ತಿಶಾಲಿ ಸಾಧನ ಎಂದರೆ ಅದು ಮಾನವನ ಮನಸ್ಸು ಹಾಗೂ ಆ ಮನಸನ್ನು ಹೇಗೆ ಬಳಸುತ್ತೇವೆ ಎಂಬುದು‘ ಎನ್ನುತ್ತಾರೆ. ಅವರ ಪ್ರಕಾರ, ಮನಸ್ಸಿನ ಕೆಲವು ಸರಿಯಾದ ಕಾರ್ಯಗಳೆಂದರೆ ಆಯ್ಕೆಗಳನ್ನು ಮಾಡುವುದು, ಪ್ರಲೋಭನೆಯನ್ನು ವಿರೋಧಿಸುವುದು, ಸ್ವಯಂ ಸುಧಾರಣೆಗಾಗಿ ಹಾತೊರೆಯುವುದು, ನಕಾರಾತ್ಮಕತೆಯನ್ನು ತಿರಸ್ಕರಿಸುವುದು, ಸವಾಲುಗಳಿಗೆ ಸಿದ್ಧವಾಗುವುದು, ನಮ್ಮ ಉದ್ದೇಶಕ್ಕೆ ಅಂಟಿಕೊಳ್ಳುವುದು. ನಮ್ಮ ನಿಯಂತ್ರಣಕ್ಕೆ ಮೀರಿದದ್ದನ್ನು ಒಪ್ಪಿಕೊಳ್ಳುವುದು.
ಇದು ಸಿಂಪಲ್ ಅನಿಸುತ್ತದೆ? ಆದರೆ ಸಂಪೂರ್ಣವಾಗಿ ಅಲ್ಲ, ಹೇಗೆ ನೋಡೋಣ.
1. ಆಯ್ಕೆ: ಸರಿಯಾದ ಆಯ್ಕೆ ಮಾಡುವುದು ಮತ್ತು ಯೋಚಿಸುವುದು
ಪ್ರತಿದಿನ, ನಾವು ಲೆಕ್ಕವಿಲ್ಲದಷ್ಟು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಬೆಳಗಿನ ತಿಂಡಿಗೆ ಏನು ತಿನ್ನಬೇಕು, ಸಹೋದ್ಯೋಗಿಯ ವ್ಯಂಗ್ಯದ ಹೇಳಿಕೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಕೂಡ.
ಹಲವಾರು ಆಯ್ಕೆಗಳನ್ನು ಹೊಂದಿರುವುದು ಜಾಸ್ತಿ ಅನಿಸಬಹುದು ಮತ್ತು ಒಂದೇ ಸಮನೆ ನಿರ್ಧಾರ ತೆಗೆದುಕೊಳ್ಳುವುದು ಮನಸ್ಸಿನ ಆಯಾಸಕ್ಕೆ ಕಾರಣವಾಗಬಹುದು. ಹಾಗಾಗಿ ಮನಸು ಕೆಲವೊಮ್ಮೆ ವಿವೇಚಿಸದೇ ನೇರ ಆಯ್ಕೆಗೆ ಉಳಿದುಬಿಡುತ್ತದೆ. ಸರಿಯಾದ ಆಯ್ಕೆ ಮಾಡಲು ನಿಧಾನದ ಮನಸು ಬೇಕು, ಆದರೆ ಈಗಿನ ಇನ್ಸ್ಟಂಟ್ ಯುಗದಲ್ಲಿ ಎಲ್ಲವೂ ದಿಢೀರ್ ಎಂದು ಬಂದಾಗ ವಿವೇಚನೆಗೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಮನಸಿಗೆ ನಿಧಾನಿಸಲು ಕಲಿಸಬೇಕು. ನಮ್ಮ ಬದುಕಿನ ಹಲವಾರು ಅವಘಡಗಳಿಗೆ ನಾವು ಮುಂದಾಲೋಚನೆ ಮಾಡದೇ ಮಾಡಿದ ಆಯ್ಕೆಯೇ ಕಾರಣ ಅನ್ನುವುದು ಎಷ್ಟು ನಿಜ ನೋಡಿ.
ಉದಾಹರಣೆಗೆ ಬೆಳಿಗ್ಗೆ ಅಲಾರಾಂ ಬಾರಿಸಿತು, ಅದೇ ದಿನ ಆಫೀಸಿನಲ್ಲಿ ಆದರೆ ದೊಡ್ಡ ಪ್ರೆಸೆಂಟೇಷನ್ ಕೊಡಬೇಕಿದೆ.
ನಿಮ್ಮ ಮನಸ್ಸು, ‘ಸ್ನೂಜ್ ಪ್ರೆಸ್ ಮಾಡು ಇನ್ನೊಂದು ಸ್ವಲ್ಫ ಹೊತ್ತು ಮಲಗು‘ ಎಂದು ಟೆಂಪ್ಟ್ ಮಾಡುತ್ತದೆ, ಆದರೂ ಬೇಗ ಎದ್ದು ಒಳ್ಳೆಯ ತಿಂಡಿ ತಿಂದು ಆಫೀಸಿಗೆ ಸರಿಯಾದ ಸಮಯಕ್ಕೆ ಹೋಗಲು ನಿರ್ಧಾರ ಮಾಡಿ ಏಳುತ್ತೀರಿ. ಈ ಒಂದು ಸಣ್ಣ ನಿರ್ಧಾರ ಆ ದಿನದ ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಲು ಸಹಾಯ ಮಾಡುತ್ತದೆ.
2. ನಿರಾಕರಣೆ: ಪ್ರಲೋಭನೆಯನ್ನು ನಿರಾಕರಿಸುವುದು
ಪ್ರಲೋಭನೆಯನ್ನು (ಆಸೆ) ನಿರಾಕರಿಸುವುದು ನಿತ್ಯದ ಯುದ್ಧವೇ ಸರಿ. ಅದು ಹೆಚ್ಚು ತಿನ್ನುವ ಆಸೆಯಿಂದ ಹಿಡಿದು, ಸೋಮಾರಿತನ ಮಾಡಿ ಮಲಗುವವರೆಗೂ ಅಥವಾ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಸಮಯ ಕಳೆಯುವವರೆಗೂ.
ವಿಲ್ ಪವರ್ (ಇಚ್ಚಾ ಶಕ್ತಿ) ಅನ್ನುವುದು ಮಸಲ್ ತರಹವೇ, ರಾಯ್ ಬೌಮಿಸ್ಟರ್ನ ಸಂಶೋಧನೆಯು ವಿಲ್ ಪವರ್ ಅನ್ನು ನಾವು ಅದನ್ನು ಎಷ್ಟು ಉಪಯೋಗಿಸುತ್ತೇವೆಯೋ ಅದು ಅಷ್ಟೂ ಬಲಗೊಳ್ಳುತ್ತದೆ ಎಂದು ಹೇಳುತ್ತದೆ. ಆದರೆ ವಿಲ್ ಪವರ್ ಅನ್ನು ಒಮ್ಮೆ ಬಳಸಿ ಬಿಟ್ಟರೆ ಅದು ದುರ್ಬಲವಾಗುತ್ತಾ ಹೋಗುತ್ತದೆ. ಆದ್ದರಿಂದ ವಿಲ್ ಪವರ್ ಪ್ರತಿದಿನದ ಅಭ್ಯಾಸವಾಗುತ್ತಾ ಹೋಗಬೇಕು.
ಉದಾಹರಣೆ: ಇಡೀ ದಿನ ಸತತವಾಗಿ ಸಿನಿಮಾ ನೋಡುತ್ತಾ ಕೊನೆಗೆ ಇನ್ನೇನು ಏಳುವಾಗ, ಮತ್ತೆ ಕಣ್ಣು ಹೊಸ ಸಿನಿಮಾ ಅಥವಾ ವೆಬ್ ಸಿರೀಸ್ ಮೇಲೆ ಬೀಳುತ್ತದೆ.
ಹೌದು ಎಂದು ರಿಮೋಟ್ ಹಿಡಿದು ಕೂತರೆ ಅದರ ಪ್ರಲೋಭನೆಗೆ ಸಿಕ್ಕಿ ಹಾಕಿಕೊಂಡೆವು ಎಂದು ಅರ್ಥ.
ಆದರೆ ಬದಲಿಗೆ, ಇಲ್ಲ ಸಾಕು ಎಂದು ಎದ್ದು ಬೇರೆಯೇ ಕೆಲಸದಲ್ಲಿ ತೊಡಗಿಕೊಳ್ಳುವುದು ಅಥವಾ ಓದಿನಲ್ಲಿಯೋ ತೊಡಗಿಕೊಂಡರೆ ಮನಸ್ಸು ಗಟ್ಟಿಯಾಗುತ್ತದೆ. ಈ ಸಣ್ಣ ಇಲ್ಲ ಎಂಬ ನಿರಾಕರಣೆ ನಮ್ಮ ಮಾನಸಿಕ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಈ ಅಭ್ಯಾಸವನ್ನು ಪ್ರತಿ ದಿನ ಸಣ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದರೂ ಸಾಕು
3. ಹಂಬಲ: ನಾವು ಇನ್ನೂ ಉತ್ತಮವಾಗಬೇಕೆಂಬ ಹಂಬಲ
ಹಂಬಲ ಎಂದರೆ ಕೇವಲ ಹೆಚ್ಚು ಹಣ ಅಥವಾ ಯಶಸ್ಸನ್ನು ಬಯಸುವುದಲ್ಲ. ಇದು ನಮ್ಮದೇ ಆದ ಬೆಸ್ಟ್ ವರ್ಷನ್ ಆಗುವ ಮಹತ್ವಾಕಾಂಕ್ಷೆಯ ಬಗ್ಗೆ. ಬೆಳವಣಿಗೆಯ ಮನಃಸ್ಥಿತಿಯ ಬಗೆಗಿನ ತಮ್ಮ ಪುಸ್ತಕದಲ್ಲಿ ಕರೋಲ್ ಡ್ವೆಕ್ ಅವರು ವ್ಯಕ್ತಿ ಬೆಳವಣಿಗೆ ಪ್ರಮುಖವಾದದ್ದು ನಾವು ಯಾವಾಗಲೂ ಬೆಳೆಯುತ್ತಾ ಹೋಗಬಹುದು ಎಂದು ನಂಬುವುದು ಯಾವಾಗಲೂ ಒಳ್ಳೆಯದು ಎಂದು ಹೇಳಿದ್ದಾರೆ.
ಪ್ರತಿದಿನ ಪ್ರತಿಕ್ಷಣ ನಾವು ನೆನ್ನೆಗಿಂತ ಇನ್ನೂ ಹೆಚ್ಚು ಬೆಳೆಯಬೇಕು ಎಂಬ ಹಂಬಲವಿರಬೇಕು . ಇನ್ನೊಬ್ಬರೊಡನೆ ಕಂಪೇರ್ ಮಾಡಿಕೊಂಡಲ್ಲ. ಹೋಲಿಕೆ, ಸ್ಪರ್ಧೆ ಯಾವತ್ತಿದ್ದರೂ ನಮ್ಮ ನೆನ್ನೆಯ ವರ್ಶನ್ ಜೊತೆಗಷ್ಟೇ.
4. ವಿಕರ್ಷಣೆ: ನಕಾರಾತ್ಮಕತೆಯ ದೂರ ಇರುವುದು
ನಕಾರಾತ್ಮಕತೆಯ ಸುಳಿಯಲ್ಲಿ ಬೀಳುವುದು ಎಷ್ಟು ಸುಲಭ ಎಂಬುದನ್ನು ಯಾವತ್ತಾದರೂ ಗಮನಿಸಿದ್ದೀರಾ? ವಿಕರ್ಷಣೆಯು ವಾಸ್ತವದಿಂದ ದೂರ ಓಡುವುದಲ್ಲ; ಇದು ಟಾಕ್ಸಿಕ್ ಆಲೋಚನೆಗಳು, ಟಾಕ್ಸಿಕ್ ಜನರು ಮತ್ತು ನಮ್ಮ ಸೆಲ್ಫ್ ಎಸ್ಟೀಮ್ ಅನ್ನು ಕಡಿಮೆ ಮಾಡುವ ವಿಷಯಗಳಿಂದ ದೂರ ಇರುವುದು.
ಉದಾಹರಣೆಗೆ ನೀವು ನೆಗೆಟಿವಿಟಿ ಹರಡುವ ಸುಳ್ಳು ಗಾಸಿಪ್ಗಳ ಗ್ರೂಪಿನಲ್ಲಿದ್ದೀರಿ ಅಂದುಕೊಳ್ಳಿ . ನೀವದನ್ನು ಮ್ಯೂಟ್ ಮಾಡಿಯೋ ಅಥವಾ ಅಲ್ಲಿಂದ ಹೊರ ಬರಬೇಕೆಂದು ನಿರ್ಧರಿಸಿದೆ. ದಿನದಿಂದ ನಿಮ್ಮಲ್ಲಿ ಮೈಕ್ರೋ ಬದಲಾವಣೆಗಳನ್ನು ಕಾಣಬಹುದು.
ಹಾಗೆಯೇ ನಿಮ್ಮ ಪ್ರತಿಯೊಂದೂ ವರ್ತನೆಯನ್ನೂ ಅನುಮಾನಿಸುತ್ತಾ, ಅವಮಾನಿಸುತ್ತಾ, ಲೇವಡಿ ಮಾಡುವ ಜನರಿಂದ ಮಾನಸಿಕವಾಗಿ ದೂರವಿರಲು ನಿರ್ಧರಿಸಿದ ಆ ಒಂದು ಕ್ಷಣದಲ್ಲಿ ನೀವು ಮಾನಸಿಕವಾಗಿ ಇನ್ನಷ್ಟು ದೃಢವಾಗಿ ಬೆಳೆಯಬಹುದು. ನಕಾರಾತ್ಮಕ ಜನ, ವಿಚಾರ ಹಾಗೂ ವಿಷಯಗಳು ನಮಗೆ ಅರಿವಿಲ್ಲದಂತೆ ನಮ್ಮನ್ನು ವಿಷವರ್ತುಲಕ್ಕೆ ನೂಕುತ್ತಿರುತ್ತದೆ.
5. ಸಿದ್ಧತೆ: ಭವಿಷ್ಯಕ್ಕೆ ಸಿದ್ಧರಾಗಿರಬೇಕು
ಜೀವನದಲ್ಲಿ ಬರುವ ಸನ್ನಿವೇಶಗಳು ಅನಿರೀಕ್ಷಿತ ನಿಜ, ಆದರೆ ನಮ್ಮ ದಾರಿಯಲ್ಲಿ ಬರುವ ಯಾವುದೇ ಸನ್ನಿವೇಶಗಳಿಗೆ ನಾವು ಮಾನಸಿಕವಾಗಿ ಸಿದ್ಧರಾಗಿರಬೇಕು.
ಸ್ಟೀಫನ್ ಕೋವೆ ಅವರ 7 ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್ ಪುಸ್ತಕದಲ್ಲಿ ಹೇಳಿರುವಂತೆ ‘ಬಿಗಿನ್ ವಿತ್ ದಿ ಎಂಡ್ ಇನ್ ಮೈಂಡ್‘ ಅಂದರೆ ನಾವು ಮಾಡುವ ಯಾವುದೇ ಕಾರ್ಯವನ್ನು ಕೊನೆಯ ಹಂತದವರೆಗೆ ಗಮನದಲ್ಲಿಟ್ಟುಕೊಂಡು ಶುರು ಮಾಡಿದರೆ ಬಹುತೇಕ ಕೆಲಸಗಳು ಯಶಸ್ವಿಯಾಗುವ ಸಾಧ್ಯತೆ ಇದೆ.
ಉದಾಹರಣೆಗೆ ಮೇಲಧಿಕಾರಿಯೊಂದಿಗೆ ಸ್ವಲ್ಪ ಕಠಿಣ ಹಾಗೂ ಕಾಂಪ್ಲೆಕ್ಸ್ ಚರ್ಚೆ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಹೆದರುವ ಅಥವಾ ಆತಂಕಗೊಳ್ಳುವ ಬದಲು, ನಿಮ್ಮ ಅಂಕಿ–ಅಂಶಗಳು, ಮಾತನಾಡಬೇಕಾದ ಪಾಯಿಂಟ್ಗಳು ಎಲ್ಲವನ್ನೂ ಯೋಚಿಸಿ, ಶಾಂತ ಮತ್ತು ಸಕಾರಾತ್ಮಕ ಫಲಿತಾಂಶವನ್ನು ಮನಸಿನ ಕಣ್ಣಿನಲ್ಲಿ ವಿಶ್ಯುಲೈಸ್ ಮಾಡಿದರೆ ಮುಂದಾಗುವುದನ್ನು ಮನಸಿನಲ್ಲಿ ರಿಹರ್ಸಲ್ ಮಾಡಿದಂತಾಗಿ ಆತಂಕಕ್ಕೊಳಗಾಗುವ ಬದಲು ಸಿದ್ಧರಾಗಿರಬಹುದು.
ಯಾವಾಗಲೂ ಅತ್ಯಂತ ಒಳ್ಳೆಯ ಸ್ಥಿತಿಯನ್ನು ಎದುರು ನೋಡೋಣ, ಆದರೆ ಅತ್ಯಂತ ಕೆಟ್ಟ ಸ್ದಿತಿಗಾಗಿ ಸಿದ್ಧರಾಗೋಣ.
6. ಉದ್ದೇಶ: ಇದು ನಮ್ಮ ಪ್ರತಿಯೊಂದೂ ಕೆಲಸದ ಸ್ಪಷ್ಟ ಉದ್ದೇಶ
ಜೀವನದಲ್ಲಿ ಪರ್ಪಸ್ ಅಥವಾ ಮೀನಿಂಗ್ ಇದ್ದಾಗ ಅಂದರೆ ಈ ಕಾರ್ಯದ ಗಮ್ಯ ಎಲ್ಲಿಗೆ ಅಥವಾ ನಮ್ಮಬದುಕಿನ ಗಮ್ಯ ಯಾವುದು ಎಂದು ತಿಳಿದಿದ್ದಾಗ ಬದುಕು ಎಷ್ಟೇ ಕಷ್ಟವಾದರೂ ಮೇಲೆ ಹೇಳಿದ ಉದ್ದೇಶ ನಮ್ಮನ್ನು ಕೈ ಹಿಡಿದು ನಡೆಸುತ್ತದೆ.
ನಮಗಾಗಿ ಏನೋ ಒಂದು ಕಾದಿದೆ. ಅದನ್ನೇ ಪ್ರಕೃತಿ ಹಾಗು ಭೂಮಿ ಕೂಡ ನಂಬಿವೆ.
ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಎನ್ನುವ ಪುಸ್ತಕದಲ್ಲಿ, ಉದ್ದೇಶದ ಅರಿವನ್ನು ಹೊಂದಿರುವುದು ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸಹ ಜಯಿಸಲು ನಮಗೆ ಸಹಾಯ ಮಾಡುತ್ತದೆ ಎಂದು ವಿಕ್ಟರ್ ಫ್ರಾಂಕ್ಲ್ ಹೇಳುತ್ತಾರೆ.
ಒಂದು ಇರುವೆ ಕೂಡ ತನ್ನ ಗಮ್ಯವನ್ನು ಅರಿತು ಹೋಗುತ್ತಿರುತ್ತದೆ. ನಾವು ನಮ್ಮ ಉದ್ದೇಶವನ್ನು ಅರಿತರೆ ಬದುಕು ನಿಜಕ್ಕೂ ಚೆಂದ.
ನೀವೆಲ್ಲಾ ಲವ್ ಮಾಕ್ಟೈಲ್ 2 ಸಿನಿಮಾ ನೋಡೇ ಇದ್ದೀರಿ. ಹೆಂಡತಿ ಸತ್ತು ವರ್ಷಗಳಾದರೂ ಅವಳ ನೆನಪಿನಲ್ಲಿಯೇ ಕೊರಗುವ ನಾಯಕನಿಗೆ ಮಗುವನ್ನು ಅಡಾಪ್ಟ್ ಮಾಡಿಕೊಳ್ಳುವ ಮೂಲಕ ಜೀವನದ ಪರ್ಪಸ್ ಸಿಗುತ್ತೆ.
ಜೀವನಚೈತ್ರದಲ್ಲಿ ಕುಟುಂಬದಿಂದ ರೋಸಿ ಹೋಗಿ ದೇಶಾಂತರ ಸುತ್ತಿ ಬಂದ ರಾಜ್ ಅವರಿಗೆ ಮದ್ಯದ ವಿರುದ್ದದ ಹೋರಾಟವೇ ಪರ್ಪಸ್ ಆಗುತ್ತೆ.
ಚಾರ್ಲಿ ಸಿನಿಮಾದಲ್ಲಿ ಏತಕ್ಕೆ ಬದುಕುತ್ತಿರುವೆ ಎಂದೇ ತಿಳಿಯದ ಧರ್ಮ ಚಾರ್ಲಿ ಇಂದ ಜೀವನಕ್ಕೊಂದು ಅರ್ಥ ಪಡೆಯುತ್ತಾನೆ.
ಕೆಜಿಎಫ್ ಸಿನಿಮಾ ನೋಡಿ ಏತಕ್ಕೆ ಈ ಹೊಡೆದಾಟ ಬಡಿದಾಟ ಇದರ ಅಂತ್ಯ ಏನು ಎಂದು ಏನೂ ಗೊತ್ತಿರದ ನಾಯಕ ಅಷ್ಟೂಸಂಪಾದನೆ ಹೊತ್ತು ನೀರಲ್ಲಿ ಮುಳುಗುತ್ತಾನೆ. ಪರ್ಪಸ್ ಇರದೇ ಇದ್ದುದರಿಂದ ಆ ಇಡೀ ಸಿನಿಮಾವೇ ಅರ್ಥವಿಲ್ಲದಾಗಿದೆ. (ಸಾರಿ. ಅಭಿಮಾನಿಗಳು ಕ್ಷಮಿಸಿ)
7. ಸ್ವೀಕಾರ: ನಮ್ಮ ನಿಯಂತ್ರಣದಲ್ಲಿರದನ್ನು ಒಪ್ಪುವುದು
ಇದು ಬಹುಶಃ ಅತ್ಯಂತ ಕಠಿಣವಾದ ವಿಷಯ ಹೇಳಿದಷ್ಟು ಸುಲಭವಲ್ಲ-ನಾವು ನಿಯಂತ್ರಿಸಲು ಸಾಧ್ಯವಾಗದದ್ದನ್ನು ಒಪ್ಪಿ ಮುಂದೆ ಹೋಗುವುದು.
ಉದಾಹರಣೆಗೆ ಯಾರದ್ದೋ ಮನಸು ನಿಮಗಾಗಿ ಒಲಿಯದೇ ಇರುವುದು, ಇನ್ಯಾವುದೋ ಕೆಲಸ ಯಾವುದೋ ಕಾರಣಕ್ಕೆ ಕೈ ತಪ್ಪಿ ಹೋಗುವುದು. ಯಾರೋ ನಮ್ಮನ್ನು ಇಷ್ಟಪಡದೇ ಇರುವುದು ಇಂತಹವುಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದಾಗ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು
ಇದರಿಂದ ನಮ್ಮ ಮನಸ್ಸಿನ ಶಾಂತಿ ಹಾಗೂ ನೆಮ್ಮದಿಯಾದರೂ ಕದಡದೇ ಇರುತ್ತದೆ.
ಕೊನೆಯದಾಗಿ ಮನಸ್ಸು ನಮ್ಮ ಬದುಕಿನ ಅತಿದೊಡ್ಡ ಉಪಯುಕ್ತ ಸಾಧನ ನಿಜ, ಆದರೆ ನಾವು ಅದನ್ನು ಸರಿಯಾಗಿ ಬಳಸದಿದ್ದರೆ ಅದು ನಮ್ಮ ಅತಿದೊಡ್ಡ ಶತ್ರುವೂ ಆಗಬಹುದು.
ಈ ಮನಸನ್ನು ಕಲುಷಿತಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಹಾಗೊಮ್ಮೆ ಸಾಧ್ಯ ಆಗುವುದಾದರೆ ನಮ್ಮ ಸ್ವಂತ ಕೆಟ್ಟ ಅಥವಾ ನಿರ್ಧಾರಗಳಿಂದ ಮಾತ್ರ ಸಾಧ್ಯ.
ಅದೃಷ್ಟವಶಾತ್ ನಮ್ಮ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡುವ ಸ್ವಾತಂತ್ರ್ಯ ಹಾಗೂ ವಿವೇಚನೆ ಎರಡೂ ನಮಗಿವೆ. ನಮ್ಮ ನಿರ್ಧಾರ ಅಥವಾ ಆಯ್ಕೆ ಏನೇ ಆಗಿದ್ದರೂ ಅದರ ಕಾನ್ಸೀಕ್ವೆನ್ಸ್ ಅನುಭವಿಸುವವರೂ ಕೂಡ ನಾವೇ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನ ಪ್ರತಿಯೊಂದು ಆಯ್ಕೆ ಮಾಡಬೇಕು.
ಆದ್ದರಿಂದ
* ಆಯ್ಕೆಯ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡೋಣ
* ಬೇಡದ್ದನ್ನು ನಿರಾಕರಿಸೋಣ
* ವ್ಯಕ್ತಿಯಾಗಿ ಬೆಳವಣಿಗೆಗೆ ಹಂಬಲಿಸೋಣ
* ನಕಾರಾತ್ಮಕತೆಯನ್ನು ದೂರವಿಡೋಣ
* ಪ್ರತಿಯೊಂದಕ್ಕೂ ಸರಿಯಾದ ಸಿದ್ದತೆ ಮತ್ತು ಯೋಜನೆಯೊಡನೆ ಎದುರು ನೋಡೋಣ
* ಬದುಕಿನ ಉದ್ದೇಶವನ್ನು ರೂಪಿಸಿ ಕಾರ್ಯಗತಗಳಿಸುವತ್ತ ಹೆಜ್ಜೆ ಹಾಕೋಣ
* ನಮ್ಮ ನಿಯಂತ್ರಣಕ್ಕೆ ಮೀರಿದ್ದನ್ನು ಒಪ್ಪಿಕೊಂಡು ಮನಸಿನ ಶಾಂತಿಯನ್ನು ಕಾಪಾಡಿಕೊಳ್ಳೋಣ.
ಅಕ್ಟೋಬರ್ 24 ರಂದು ರೂಪಾ ರಾವ್ ಈ ಲೇಖನವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕೆಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೂಪಾ ರಾವ್ ಅವರ ಪೋಸ್ಟ್ಗೆ ಬಂದ ಕಾಮೆಂಟ್ಗಳು
‘ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ..."ಮನುಷ್ಯ ತನಗೆದುರಾಗುವ ಯಾವುದೇ ಘಟನೆಯ ಕೊನೆಯ ನಿರ್ಣಾಯಕ ಫಲಿತಾಂಶಕ್ಕೆ ಮಾನಸಿಕವಾಗಿ ಸಿದ್ಧನಾದರೆ ಅದು ತ್ರಾಸ ಕೊಡುವ ಶಕ್ತಿಯನ್ನ ತನ್ನತಾನೆ ಕಳೆದುಕೊಳ್ಳುತ್ತದೆ". ( ಇದು ಭಾವಾರ್ಥ ಮಾತ್ರ ಅವರೇ ಬರೆದ ಸರಿಯಾದ ವಾಕ್ಯ ಅಲ್ಲ )‘ ಎಂದು ಶ್ರೀಧರ ಮೂರ್ತಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
‘ಅತ್ಯುತ್ತಮ ಲೇಖನ.. ಜೀವನಕ್ಕೆ ಅತ್ಯಗತ್ಯ..ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಸರಳವಾಗಿ ಮನಮುಟ್ಟುವಂತೆ ವಿಷಯಗಳನ್ನು ತಿಳಿಸುವ ನಿಮಗೆ ಧನ್ಯವಾದಗಳು‘ ಎಂದು ಆಶಾ ಎನ್ಎಂ ಅವರು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಭಾಗ