ಪೂಜೆ ಮಾಡುವುದು ದೇವರನ್ನು ಒಲಿಸಿಕೊಳ್ಳುವುದಕ್ಕಲ್ಲ, ನಮ್ಮ ಮನಸ್ಸನ್ನು ನಾವೇ ಪ್ರಫುಲ್ಲಗೊಳಿಸಿಕೊಳ್ಳಲು- ಕಾಳಜಿ ಅಂಕಣ
ಡಾ ರೂಪಾ ರಾವ್ ಬರಹ: ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದಕ್ಕೂ ಪೂಜೆ ಮಾಡುವುದಕ್ಕೆ ಕಾರಣವಿದೆ. ಇದರ ಪ್ರಮುಖ ಉದ್ದೇಶ ಕೃತಜ್ಞತೆ ತೋರುವುದು. ಈ ಕೃತಜ್ಞತೆ ತೋರುವುದು ನಮ್ಮಸಮೃದ್ದಿಗಾಗಿಯೇ ಹೊರತು ಇತರರಿಗಲ್ಲ.
ಪ್ರಶ್ನೆ: ಮನುಷ್ಯರಿಗೆ ಕೃತಜ್ಞತೆ ಕೊಡುವುದು ಸರಿ , ಆದರೆ ಗಾಳಿ ಬೆಳಕು, ಭೂಮಿ, ಮರು ಗಿಡ ಅಂತ ಎಲ್ಲಕ್ಕೂ ಕೃತಜ್ಞತೆ ಕೊಟ್ಟರೆ ಅವಕ್ಕೇನು ಗೊತ್ತಾಗುತ್ತದೆ , ಅದಿರಲಿ ಈ ಆಯುಧಪೂಜೆಯ ದಿನ ವಾಹನ , ಸೌಟು ಎಲ್ಲಕ್ಕೂ ಪೂಜೆ ಮಾಡುವ ಮೂಲಕ ಕೃತಜ್ಞತೆ ತೋರಿಸುವ ದಿನ. ಅನ್ನುತ್ತಾರೆ ಅವು ಜಡವಸ್ತುಗಳು ಅವೇನು ಖುಷಿ ಪಡುತ್ತವೆಯಾ ಮೇಡಂ? '"
ಅನುಪಮಾ ಒಪಿ | ಇಮೇಲ್ ಮೂಲಕ
ಉತ್ತರ: ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು . ಮೊದಲಿಗೆ ಕೃತಜ್ಞತೆ ಕೊಡುವುದು ಇನ್ನೊಬ್ಬರನ್ನು ಸಂತೋಷಗೊಳಿಸಲು ಎನ್ನುವುದೇ ತಪ್ಪು ಕಲ್ಪನೆ. ಕೃತಜ್ಞತೆ ಎನ್ನುವುದೊಂದು ಭಾವ ಆ ಭಾವವನ್ನು ತೋರಿಸುವುದು ನಾವು. ಇಷ್ಟು ಒಂದು ಪಕ್ಕಕ್ಕಿರಲಿ.
ಮನುಷ್ಯರ ಮನಸ್ಥಿತಿಯಲ್ಲಿ ಸಮೃದ್ದ ಮನಸ್ಥಿತಿ, ಅಭಾವ ಮನಸ್ಥಿತಿ ಅಂತ ಇದೆ. ಇದನ್ನು ಬೆಳವಣಿಗೆಯ ಮನಸ್ಥಿತಿ ಹಾಗು ನಿಶ್ಚಿತ ಮನಸ್ಥಿತಿಗೆ ಹತ್ತಿರವಾಗಿಯೂ ಕರೆಯಬಹುದು.
ಈ ಸಮೃದ್ದ ಮನಸ್ಥಿತಿ ಅಂದರೆ ಪ್ರಪಂಚದಲ್ಲಿ ಎಲ್ಲರಿಗೂ ಬೇಕಾಗುವಷ್ಟು ಸಂಪನ್ಮೂಲಗಳು ಈಗಾಗಲೇ ಇವೆ .ಇವುಗಳಲ್ಲಿ ನನಗೂ ಪಾಲಿದೆ ಎಂಬ ಹೋಪ್ ಅಥವಾ ಭರವಸೆ . ಇಲ್ಲಿ ಸಮರಸವೇ ಜೀವನ, ಸಹ ಬಾಳ್ವೆ, ಎಲ್ಲರೊಡನಾಟ ಸಾಮಾನ್ಯ. ದಟ್ಟವಾದ ಕಾಡುಗಳಲ್ಲಿ ಮರಗಳು ಇದೇ ರೀತಿಯ ಸಹಬಾಳ್ವೆ, ಸಮನ್ವಯ ತೋರಿಸಿಯೇ ಸಮೃದ್ದವಾಗಿರುವುದು. ವುಡ್ ವೈಡ್ ನೆಟ್ವರ್ಕ್ ಅಥವಾ ಮರಗಳ ವಿಶಾಲವಾದ ಸಂಪರ್ಕ ಜಾಲ ಎಂದೇ ಕರೆಯಲಾಗುವ ಈ ಜಾಲದಲ್ಲಿ ಕಾಡಿನ ಅಷ್ಟೂ ತಮ್ಮ ಪೋಷಕಾಂಶವನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಒಂದು ಮರಕ್ಕೆ ಅಪಾಯ ಎದುರಾದರೆ ಎಲ್ಲಾ ಮರಗಳು ಅದಕ್ಕೆ ಅಗತ್ಯ ಆರೈಕೆಯನ್ನು ಕೊಡುತ್ತವೆ. ಒಂದು ರೀತಿಯ ಟೀಮ್ ವರ್ಕ್ ರೀತಿ ಇಡೀ ಕಾಡು ಸಮೃದ್ದವಾಗಿದ್ದರೆ ತಾವೂ ಬಾಳಬಹುದು ಎಂಬ ಮಂತ್ರ ಅಲ್ಲಿದೆ.
ಅಭಾವ ಮನಸ್ಥಿತಿ ಎಂದರೆ ನನಗೇನೂ ಸಿಗುವುದಿಲ್ಲ ಹಾಗಾಗಿ ಇಂದೇ ಎಲ್ಲವನ್ನೂ ಸಂಗ್ರಹಿಸೋಣ, ಬೇರೆ ಯಾರಿಗೂ ಸಿಗಬಾರದು ಎಂಬ ಮನೋಭಾವ. ಇದು ಪ್ಯಾನಿಕ್ ಮನಸ್ಥಿತಿ . ಇಲ್ಲಿ ಇತರರೊಡನೆ ಕದನವಾಡುತ್ತಾ ಕಾಲಕಳೆಯುತ್ತಾರೆ. ವಿರಸವೇ ಜೀವನವಾಗುತ್ತದೆ.
ಕೆಲವು ವಸ್ತುಗಳ ಬೆಲೆ ಇದ್ದಕ್ಕಿದ್ದ ಹಾಗೆ ಜಾಸ್ತಿ ಆಗುತ್ತದೆ. ಇದಕ್ಕೆ ಕಾರಣ ಅದರ ವ್ಯಾಪಾರಿಗಳು ಸೃಷ್ಟಿಸಿದ ಕೃತಕ ಅಭಾವ. ಹಾಗೆಯೇ ವ್ಯಾಪಾರದಲ್ಲಿ ಕೊರತೆಯಾಗುವ (ಸಿಗದೇ ಹೋಗುವ) ಭಯದಿಂದಲೇ ಅನೇಕರು ಮೋಸ ಹೋಗುವುದು.
ಅಭಾವ ಮನಸ್ಥಿತಿ ಹೊಂದಿದ್ದರೆ ಏನಾಗುತ್ತದೆ?
1. ಭಯ ಮತ್ತು ಸ್ಪರ್ಧಾ ಕೊರತೆಯ ಮನಸ್ಥಿತಿಯನ್ನು ಹೊಂದಿರುವ ಜನರು ಭಯದಿಂದಲೇ ಮೋಟಿವೇಟ್ ಆಗಿರುತ್ತಾರೆ. ತಮ್ಮಲ್ಲಿರುವುದನ್ನು ಕಳೆದುಕೊಳ್ಳುವ ಭಯ ಇರುತ್ತದೆ. ಅವರು ಜೀವನವನ್ನು ಸ್ಪರ್ಧೆಯಾಗಿಯೂ ಹಾಗೂ ಜೀವನದ ಇತರರನ್ನು ತಮ್ಮ ಕಾಂಪಿಟೇಟರ್ ಎಂದು ನೋಡುತ್ತಿರುತ್ತಾರೆ. ಅಲ್ಲಿ ಬೇರೆಯವರ ಯಶಸ್ಸು ಅವರಿಗೆ ತಮ್ಮ ವೈಫಲ್ಯವಾಗಿ ಕಾಡುತ್ತದೆ. ಇದು ಅಸೂಯೆ ಮತ್ತು ನಿರಂತರ ಹೋಲಿಕೆಗೆ ಕಾರಣವಾಗುತ್ತದೆ.
2. ಅಲ್ಪಾವಧಿಯ ಲಾಭದ ಬಗ್ಗೆ ಚಿಂತನೆ: ಈ ಕೊರತೆಯು ಟನ್ನೆಲ್ ಅಥವ ಸೀಮಿತ ದೃಷ್ಟಿಯನ್ನು ತರುತ್ತದೆ, ಈ ವ್ಯಕ್ತಿಗಳು ದೀರ್ಘಾವಧಿಯ ಲಾಭ ಹಾಗು ಗುರಿಗಳಿಗಿಂತ ತಕ್ಷಣದ ಅಗತ್ಯಗಳ ಮೇಲೆ ಗಮನ ಹರಿಸುತ್ತಾರೆ. ಎಲ್ಡಾರ್ ಶಫೀರ್ ಎಂಬುವವರು ತಮ್ಮ ಸಂಶೋಧನೆಯಲ್ಲಿ ಹೇಳಿರುವ ಪ್ರಕಾರ ಅಭಾವದ ಭಯವು ಯೋಚನೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಇದರಿಂದಾಗಿ ಜನರು ಹೇಗಾದರೂ ಸರ್ವೈವ್ ಆಗೋಣ ಎಂಬ ಯೋಚನೆಯ ಸೈಕಲ್ನಲ್ಲಿ ಸಿಲುಕುತ್ತಾರೆ. ಉದಾಹರಣೆಗೆ ಇನ್ನೊಬ್ಬರಿಗೆ ಹಾನಿ ಮಾಡಿಯೇ ತಾನು ಬದುಕಬೇಕು , ಅಥವಾ ಇನ್ನೊಬ್ಬರಿಗೆ ನಷ್ಟ ಮಾಡಿಯೇ ಲಾಭ ಗಳಿಸಬೇಕು ಹಾಗು ಒಬ್ಬರು ಸೋಲು ತನ್ನ ಗೆಲುವಿಗೆ ಕಾರಣ ಎಂಬೆಲ್ಲಾ ಇನ್ನೊಬ್ಬರ ಮೇಲೆ ಆಧರಿಸಿದ ಯೋಚನೆ ಇಂದಾಚೆ ಯೋಜಿಸಲು ಇವರಿಗೆ ಸಾಧ್ಯವಾಗುವುದಿಲ್ಲ.
3. ಒತ್ತಡ ಮತ್ತು ಆತಂಕ : ಈ ಕೊರತೆಯ ಮನಸ್ಥಿತಿ ನಿರಂತರ ಚಿಂತೆ ದೀರ್ಘಕಾಲದ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಕಾಲಾನಂತರದಲ್ಲಿ ದೈಹಿಕ ಸಮಸ್ಯೆಗಳಿಗೂ ಕಾರಣವಾಗಬಹುದು.
4. ಇತರರಲ್ಲಿ ಮನಸನ್ನು ಹಂಚಿಕೊಳ್ಳಲು ಹಿಂಜರಿಕೆ: ಸಂಬಂಧಗಳಲ್ಲಿ, ಈ ಮನಸ್ಥಿತಿಯು ಒಂದು ರೀತಿ ಅಪನಂಬಿಕೆಯನ್ನು ಸೃಷ್ಟಿಸುತ್ತದೆ. ಇತರರಿಗೆ ಕೊಡುವುದರಿಂದ ತಮ್ಮ ಪೂರೈಕೆಯು ಕಡಿಮೆಯಾಗುತ್ತದೆ ಎಂಬ ಭಯದಿಂದ ಜನರು ತಮ್ಮಲ್ಲಿರುವ ಜ್ಞಾನ ಅಥವಾ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಹಿಂಜರಿಯಬಹುದು. ಈ ನಡವಳಿಕೆಯು ಅವರನ್ನು ಸಹ ಬಾಳುವೆ ಮತ್ತು ಬೆಳವಣಿಗೆಯ ಅವಕಾಶಗಳಿಂದ ಬೇರಾಗಿಸಬಹುದು.
5. ಸೀಮಿತ ಬೆಳವಣಿಗೆ: ಭಯದಲ್ಲಿ ಸಿಲುಕಿರುವ, ಕೊರತೆಯ ಮನಸ್ಥಿತಿಯನ್ನು ಹೊಂದಿರುವ ಜನರು ರಿಸ್ಕ್ ತೆಗೆದುಕೊಳ್ಳಲು ಹಿಂಜರೆಯುತ್ತಾರೆ, ಇದು ಅವರ ವೈಯಕ್ತಿಕ ಮತ್ತು ಪ್ರೊಫೆಶನಲ್ ಅಭಿವೃದ್ಧಿಯ ಸಾಮರ್ಥ್ಯವನ್ನು ಮೊಟಕುಗೊಳಿಸುತ್ತದೆ.
ಒಂದು ಉದಾಹರಣೆ ಅಳಿಲು ತನ್ನ ಆಹಾರವನ್ನು ಮುಂದೆ ಬೇಕಾಗಬಹುದು ಎಂದು ಅಲ್ಲಲ್ಲಿ ಭೂಮಿಯಲ್ಲಿ ಅಗೆದು ಬಚ್ಚಿಡುತ್ತದೆ .ಹೀಗೆ ಎಷ್ಟು ಮಾಡುತ್ತದೆ ಎಂದರೆ ಒಂದು ಸಮಯದಲ್ಲಿ ತಾನು ಎಲ್ಲಿ ಹುದುಗಿಸಿರುವೆ ಎಂದೇ ತಿಳಿಯದಷ್ಟು ಬಚ್ಚಿಡುತ್ತದೆ. ಕೊನೆಗೆ ತಾ ಬಿಚ್ಚಿಟ್ಟಿದ್ದು ತನಗೇ ಸಿಗದೇ ಹಾಗೆ ಆಗುತ್ತೆ. ಕೆಲವು ಸಲ ಇದು ಮಣ್ಣಿನಲ್ಲಿ ಹೂತಿಟ್ಟ ಬಿಂದುಗಳು ಮರಗಳಾಗಿ ಬೆಳೆದು ಇತರರಿಗಾದರೂ ಸಹಾಯವಾಗುವುದು, ಆದರೆ ಮನುಷ್ಯ ಬಚ್ಚಿಟ್ಟದ್ದು ಯಾರಿಗೋ ಸೇರುತ್ತೆ.
ಇವೆಲ್ಲಾ ಯಾಕೆ ಹೇಳುತ್ತಿರುವೆ ಎಂದರೆ.. ಕೃತಜ್ಞತೆ ಎಂಬ ವಿಷಯಕ್ಕೆ.
ಈ ಕೃತಜ್ಞತೆ ನಮ್ಮ ಪ್ರಕೃತಿಯಲ್ಲಿ ಎಷ್ಟು ಆಳವಾಗಿ ಬೇರು ಬಿಟ್ಟಿದೆ ನೋಡಿ. ಒಂದು ದುಂಬಿ ಹೂವಿನಿಂದ ಅದರ ಮಧುವನ್ನುಹೀರುತ್ತದೆ. ಅದಕ್ಕೆ ಕೃತಜ್ಞತೆಯ ರೂಪದಲ್ಲಿ ಹೂವಿನ ಪರಾಗಸ್ಪರ್ಶಕ್ಕೆ ಸಹಾಯ ಮಾಡಿ ಅದರ ಫಲೀಕರಣಕ್ಕೆ ಅನುವು ಮಾಡಿಕೊಡುತ್ತದೆ. ಹಾಗೆಯೇ ದಟ್ಟವಾದ ಕಾಡುಗಳಲ್ಲಿ ಮರಗಳ ಬೇರುಗಳಿಗೆ ಫಾಸ್ಪರಸ್ ಎನ್ನುವ ಪೋಷಕಾಂಶಗಳನ್ನು ಕೊಡುವ ಕೆಲಸವನ್ನು ಒಂದು ಬಗೆಯ ಶಿಲೀಂದ್ರ (Mycorrhizal Fungi )ಮಾಡುತ್ತದೆ. ಅದಕ್ಕೆ ಪ್ರತಿಯಾಗಿ ಮರವು ಆ ಶಿಲೀಂದ್ರಕ್ಕೆ ತನ್ನ ದ್ಯುತಿಸಂಶ್ಲೇಷಣಕ್ರಿಯೆ ಇಂದ ತಯಾರಾದ ಸಕ್ಕರೆಯನ್ನು ಕೊಡುತ್ತದೆ.ಇದೇ ಕೃತಜ್ಞತೆ.
ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದಕ್ಕೂ ಪೂಜೆಮಾಡುವ ಉದ್ದೇಶ ಕೃತಜ್ಞತೆ ತೋರುವುದಾಗಿದೆ. ಈ ಕೃತಜ್ಞತೆ ತೋರುವುದು ನಮ್ಮಸಮೃದ್ದಿಗಾಗಿಯೇ ಹೊರತು ಇತರರಿಗಲ್ಲ. ಅದು ಜಡವಸ್ತುವೇ ಆಗಲೀ ಅಥವಾ ಜೀವಂತವೇ ಇರಲಿ ಕೃತಜ್ಞತಾ ಭಾವವನ್ನು ಅನುಭವಿಸುವುದರ ಮೂಲಕ ನಮ್ಮ ಮನಸಿಗೆ ನಾವು ಶ್ರೀಮಂತರೆಂಬ ಭಾವನೆಯ ಸಿಗ್ನಲ್ ಕಳಿಸುತ್ತೇವೆ. ಅದರ ಮೂಲಕ ನಾವು ಸಂತೋಷ ಹಾಗು ಭದ್ರತಾ ಭಾವವನ್ನು ಹೊಂದುತ್ತೇವೆ , ಅಷ್ಟೇ. ಒಂದು ಆಟೋ ಇಟ್ಟಿರುವವ ತನ್ನ ಆಟೋವನ್ನು ತೊಳೆದು ಪೂಜೆಮಾಡಿ ದೊಡ್ಡ ಹಾರ ಹಾಕಿ ಸಂಭ್ರಮಿಸುವಾಗ ಹೆಮ್ಮೆ ಆಗುವುದು ಆಟೋ ಮಾಲೀಕನಿಗೆ. ಮನೆಯಲ್ಲಿರುವ ವಿವಿಧ ವಸ್ತುಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಕುಂಕುಮ ಹೂವು ಇಟ್ಟಾಗ ಸಂಭ್ರಮದ ಸುಖ ಮನೆಯೊಡತಿಗೆ ಆ ವಸ್ತುಗಳಿಗಲ್ಲ. ಇನ್ನು ಪೂಜೆ ಮಾಡುವುದು ಸಹಾ ದೇವರನ್ನು ಒಲಿಸಿಕೊಳ್ಳಲಲ್ಲ. ನಮ್ಮ ಮನಸನ್ನು ನಾವೇ ಪ್ರಫುಲ್ಲಗೊಳಿಸಿಕೊಳ್ಳಲು.
ಈ ಸಂಭ್ರಮ ಸಂತೋಷವನ್ನು ನಾವು ಏನೂ ಮಾಡದೆ ಅನುಭವಿಸುತ್ತೆವೆ ಎನ್ನುವವರದ್ದೂ ಸರಿಯೇ , ಅಥವಾ ಇದರ ಬಗ್ಗೆ ಸಂಶಯವಿದ್ದು ನಿಮ್ಮ ಹಾಗೆ ಪರಿಹರಿಸಿಕೊಳ್ಳುವವರದ್ದೂ ಸರಿಯೇ, ಆದರೆ ಪೂಜೆಮಾಡುವವರನ್ನು ಅವಹೇಳನ ಮಾಡುವವರದ್ದು ಅಭಾವ ಮನ:ಸ್ಥಿತಿ. ಹಾಗೆಯೇ ಪೂಜೆ ಮಾಡದೇ ತಮ್ಮಷ್ಟಕ್ಕೆ ತಾವಿರುವವರನ್ನು ಆಡಿಕೊಂಡರೂ ಸಹಾ ಅದು ಸಹಾ ನ್ಯಾರೋ ಮನಸ್ಥಿತಿ.
ಪ್ರಕೃತಿ ಪ್ರತಿಯೊಬ್ಬರಿಗೂ ಅವರದ್ದೇ ಆಕಾರ ರೂಪ ಮಾತ್ರವಲ್ಲ ಅಭಿಪ್ರಾಯಗಳನ್ನು ಹೊಂದಲೂ ಅವಕಾಶ ಕೊಟ್ಟಿದೆ. ಇತರರಿಗಾಗಾಲಿ ಅಥವಾ ತನಗಾಗಲಿ ಯಾವುದೇ ತೊಂದರೆಯಾಗದ ಆಚರಣೆಗಳನ್ನು ಮಾಡಲು ಸಂವಿಧಾನ ಅವಕಾಶ ಕೊಟ್ಟಿದೆ. ಹಾಗೆಯೆ ಒಂದು ಚೌಕಟ್ಟಿನಲ್ಲಿ ಕೆಲಸ ಮಾಡಲು ಕಾನೂನು ಸಹಾ ಅವಕಾಶ ಕೊಟ್ಟಿದೆ. ಇವುಗಳನ್ನೆಲ್ಲಾ ನಡೆಸಿಕೊಂಡು ಹೋಗಲು ಬೇಕಿರುವುದು ಸಮೃದ್ಧಿಯ ಮನಸ್ಥಿತಿ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990