ನಿಜವಾದ ಪ್ರೀತಿಯನ್ನು ಹುಡುಕುವುದ್ಹೇಗೆ? ಪ್ರೇಮ ಪುಸ್ತಕದ ಪುಟ ತೆರೆಯಲು ಬಯಸುವವರು ಓದಬೇಕಾದ ಪಾಠವಿದು; ಕಾಳಜಿ ಅಂಕಣ
ಇತ್ತೀಚಿನ ದಿನಗಳಲ್ಲಿ ಪ್ರೀತಿ ವಿಚಾರದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ನಿಜವಾದ ಪ್ರೀತಿಯನ್ನು ಹುಡುಕುವಲ್ಲಿ ಯುವ ಮನಸ್ಸುಗಳು ಸೋಲುತ್ತಿವೆ. ನೀನೇ ಬದುಕು, ನಿನ್ನನ್ನೇ ನಾನು ಪ್ರೀತಿಸುವುದು ಎಂದರೆ ಅದು ನಿಜವಾದ ಪ್ರೀತಿಯೇ, ನೈಜ ಪ್ರೀತಿಯನ್ನು ಹುಡುಕುವ ವಿಚಾರದಲ್ಲಿ ಮನೋಶಾಸ್ತ್ರ ಹೇಳೋದೇನು ಎಂಬುದನ್ನು ವಿವರಿಸಿದ್ದಾರೆ ಡಾ. ರೂಪಾ ರಾವ್
ಪ್ರಶ್ನೆ: ʼಮೇಡಂ, ನಾನು ನಿನ್ನ ಪ್ರೀತಿಸುತ್ತೇನೆ ಎನ್ನುವ ಹುಡುಗರು ಬೇಕಾದಷ್ಟು ಕಾಣ್ತಾರೆ. ಆದರೆ ನಿಜವಾಗಿ ಮನಸ್ಸಿಂದ ಪ್ರೀತಿಸುವ ವ್ಯಕ್ತಿಯನ್ನು ಹೇಗೆ ಕಂಡು ಹಿಡಿಯುವುದು? ಮನುಷ್ಯನ ಮಾತು, ವರ್ತನೆಯಿಂದ ಅವನು ಪ್ರೀತಿಸುತ್ತಾನೆ ಅಂತ ಅಂದುಕೊಳ್ಳಬಹುದೇ ಹೊರತು ನಿಜವಾದ ಪ್ರೀತಿಯನ್ನ ಗುರುತಿಸಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾಗಿ ನಂತರ ಕಷ್ಟ ಪಡುವುದರ ಬದಲು ಪ್ರೀತಿಸುವಾಗ ಅಥವಾ ಪ್ರೀತಿಗೆ ಮುಂಚೆ ಇವುಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು. ಈ ಬಗ್ಗೆ ಸೈಕಾಲಜಿ ಏನು ಹೇಳುತ್ತದೆ?
ಸುಮಂಗಲ, ಹಾವೇರಿ
ಉತ್ತರ: ಈ ಪ್ರಶ್ನೆ ಹೊಸದೇನೂ ಅಲ್ಲ. ಮುಕ್ಕಾಲು ಪಾಲು ಹುಡುಗಿಯರು ಇದೇ ಪ್ರಶ್ನೆ ಕೇಳುತ್ತಾರೆ. ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸುಲಭವಾಗಿ ಹೇಳಿಬಿಡ್ತಾರೆ. ʼನಿನ್ನ ಪ್ರೀತಿಸುವ ಹುಡುಗ ನಿನಗೋಸ್ಕರ ಸಹಾಯ ಮಾಡ್ತಾನೆ. ನಿನ್ನ ಹಿಂದೆ ಹಿಂದೆ ಬೀಳ್ತಾನೆ, ನೀನು ಸಿಗಲಿಲ್ಲ ಅಂದರೆ ಸತ್ತೇ ಹೋಗುತ್ತೇನೆ ಎಂದೆಲ್ಲಾ ಹೇಳುತ್ತಾನೆʼ ಇತ್ಯಾದಿ ಇತ್ಯಾದಿ. ಇದು ನಿಜವಾ?
ಸೈಕಾಲಜಿ ಹಾಗೂ ಮನುಷ್ಯನ ವರ್ತನೆಯ ಅಧ್ಯಯನ ಇದನ್ನು ಕೊಂಚ ಬೇರೆಯಾಗಿ ಹೇಳುತ್ತೆ. ಮಾನಸಿಕ ಅಧ್ಯಯನಗಳ ಪ್ರಕಾರ, ಒಬ್ಬ ಹುಡುಗ ಹುಡುಗಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿರುವ ಹಲವಾರು ಚಿಹ್ನೆಗಳು ಇವೆ. ಇಲ್ಲಿ ಪ್ರಮುಖ ಸೂಚಕಗಳು:
1. ಪ್ರೀತಿಯನ್ನು ಹಿಡಿದಿಡಲು ಪ್ರಯತ್ನ: ನಿಜವಾದ ಪ್ರೀತಿಯು ಒಂದು ಸಲ ಮಾತ್ರ ತೋರುವುದಲ್ಲ , ಇದು ಎಂದಿಗೂ ಇರುವ ಭಾವನೆ. ಪ್ರೀತಿಸುತ್ತಿರುವ ವ್ಯಕ್ತಿ ಅವಳ ಜೀವನದಲ್ಲಿ ತಾನೂ ಒಬ್ಬನಾಗಲು ಸತತ ಪ್ರಯತ್ನ ಮಾಡಿದರೆ, ಅದು ನಿಜವಾದ ಪ್ರೀತಿಯನ್ನು ಸೂಚಿಸುತ್ತದೆ.
2. ಭಾವನಾತ್ಮಕ ಬೆಂಬಲ: ನಿಜವಾಗಿ ಪ್ರೀತಿಸುವವರು ನಿಮ್ಮ ಕಷ್ಟದ ಸಮಯದಲ್ಲಿ ಭಾವನಾತ್ಮಕ ಬೆಂಬಲವಾಗಿ ಜೊತೆಯಲ್ಲಿಯೇ ಇರುತ್ತಾರೆ. ನಿಮ್ಮ ಗೆಲುವನ್ನು ಸಂಭ್ರಮಿಸಲು ನಿಮಗಿಂತಲೂ ಹೆಚ್ಚು ಉತ್ಸುಕರಾಗಿರುತ್ತಾರೆ. ಅವರು ನಿಮ್ಮ ಮಾತುಗಳಿಗೆ ಸಂಪೂರ್ಣ ಹಾಗೂ ಸಕ್ರಿಯ ಕೇಳುಗನಾಗಿರುತ್ತಾರೆ. ನಿಮ್ಮ ಭಾವನೆಗಳನ್ನು ತಾನೂ ಅನುಭವಿಸುತ್ತಾರೆ. ಸಮಾಧಾನ, ಸಾಂತ್ವನ ಮತ್ತು ಪ್ರೋತ್ಸಾಹವನ್ನು ಸತತವಾಗಿ ನೀಡುತ್ತಾರೆ.
3. ನಿಮ್ಮ ಬೇಕು ಬೇಡಗಳಿಗೆ ಗೌರವ ಕೊಡುತ್ತಾರೆ: ಅವರು ನಿಮ್ಮ ಬೌಂಡರಿಗಳನ್ನು ಮತ್ತು ವೈಯಕ್ತಿಕ ನೆಲೆಗಳನ್ನು ಗೌರವಿಸುತ್ತಾರೆ. ಇದು ದೈಹಿಕ ಹಾಗು ಮಾನಸಿಕ ಬೌಂಡರಿಗಳಲ್ಲಿ ಮುಂದುವರೆಯುವುದಕ್ಕೆ ನಿಮ್ಮ ಒಪ್ಪಿಗೆಗಾಗಿ ತಾಳ್ಮೆಯಿಂದಿರುವುದು ಮತ್ತು ಸಂಬಂಧದಲ್ಲಿ ನಿಮ್ಮ ನಿಲುವುನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಮ್ಮ ನಿರ್ಧಾರಗಳು ಮತ್ತು ಸ್ವಾಯತ್ತತೆಗೆ ಗೌರವವನ್ನು ತೋರಿಸುವುದನ್ನು ಒಳಗೊಂಡಿರುತ್ತದೆ.
4. ಪರಸ್ಪರ ಪ್ಲಾನಿಂಗ್: ಅವರು ಭವಿಷ್ಯದ ಬಗ್ಗೆ ಮಾತನಾಡುತ್ತಾರೆ ಮತ್ತು ತನ್ನೆಲ್ಲಾ ಯೋಜನೆಗಳಲ್ಲಿ ನಿಮ್ಮನ್ನು ಸೇರಿಸಿಕೊಳ್ಳುತ್ತಾರೆ. ದೀರ್ಘಾವಧಿಯ ಗುರಿಗಳನ್ನು ಚರ್ಚಿಸುವುದು ಮತ್ತು ಒಟ್ಟಿಗೆ ಭವಿಷ್ಯವನ್ನು ಯೋಚಿಸುವುದು ನಿಜವಾದ ಪ್ರೀತಿ ಮತ್ತು ಬದ್ಧತೆಯ ಪ್ರಬಲ ಚಿಹ್ನೆಗಳು.
5. ವಿವರಗಳಿಗೆ ಗಮನ: ಅವರು ನಿಮ್ಮೊಂದಿಗೆ ಜೀವನದ ಪ್ರಮುಖ ದಿನಾಂಕಗಳು, ಆದ್ಯತೆಗಳು ಮತ್ತು ಸಣ್ಣ ಪುಟ್ಪ ವಿವರಗಳನ್ನು ನೀವು ಮರೆತರೂ ನೆನೆಸಿಕೊಳ್ಳುತ್ತಾರೆ. ಅವರು ನಿಮ್ಮನ್ನು ಗೌರವಿಸುತ್ತಾರೆ ಮತ್ತು ನಿಮಗೆ ಮುಖ್ಯವಾದುದನ್ನು ಗಮನಿಸಿ ಗೌರವಿಸುತ್ತಾರೆ.
6. ನಿಮ್ಮ ಬೆಳವಣಿಗೆಗೆ ಬೆಂಬಲ ಕೊಡುತ್ತಾರೆ: ಅವರು ನಿಮ್ಮ ವೃತ್ತಿ, ಹಾಗೂ ವೈಯಕ್ತಿಕ ಬೆಳವಣಿಗೆ, ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳನ್ನು ಪ್ರೋತ್ಸಾಹಿಸುತ್ತಾರೆ. ನಿಜವಾದ ಪ್ರೀತಿ ಎಂದಿಗೂ ತಾನು ಪ್ರೀತಿಸುವವರಿಗೆ ಅತ್ಯುತ್ತವಾದದ್ದನ್ನು ಬಯಸುವುದು ಮತ್ತು ಅವರ ಬದುಕಿನ ಪ್ರಯಾಣದಲ್ಲಿ ಜೊತೆಗಾರರಾಗಿರುವುದೂ ಸಹ ಬಯಸುತ್ತದೆ.
7. ಮುಖ್ಯ ವ್ಯಕ್ತಿಗಳಿಗೆ ಪರಿಚಯ: ಅವರು ನಿಮ್ಮನ್ನು ತನ್ನ ಆತ್ಮೀಯ ಸ್ನೇಹಿತರು ಮತ್ತು ಕುಟುಂಬಕ್ಕೆ ಪರಿಚಯಿಸುತ್ತಾರೆ, ನಿಮ್ಮನ್ನು ತನ್ನ ಜೀವನದಲ್ಲಿ ಒಬ್ಬರಾಗಿ ಮಾಡಿಕೊಳ್ಳುತ್ತಾರೆ. ನಿಮ್ಮನ್ನು ತನ್ನ ಪ್ರಪಂಚದ ಪ್ರಮುಖ ಭಾಗವಾಗಿ ಕನ್ಸಿಡರ್ ಮಾಡಿರುತ್ತಾರೆ.
8. ತೆರೆದ ಮನದ ಸಂವಹನ: ಅವರು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ನಿಮ್ಮೊಂದಿಗೆ ಸಂವಹನ ನಡೆಸುತ್ತಾರೆ, ಅವರ ಆಲೋಚನೆಗಳು, ಭಾವನೆಗಳು ಮತ್ತು ದುರ್ಬಲತೆಗಳನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ತಪ್ಪಿದ್ದಾಗ ನೇರವಾಗಿ ಹೇಳುತ್ತಾರೆ. ನಿಜವಾದ ಪ್ರೀತಿ ಎಂದರೆ ನಂಬಿಕೆ ಮತ್ತು ಪಾರದರ್ಶಕತೆಯ ಅಡಿಪಾಯದಲ್ಲಿ ಕಟ್ಟಿರುವಂತಹದ್ದು .
9. ನಿಮ್ಮ ಕುಟುಂಬದವರು ಹಾಗೂ ಆತ್ಮೀಯರ ಮೇಲೆ ನಿಮ್ಮಂತೆಯೇ ಗೌರವ ಹೊಂದಿರುತ್ತಾರೆ. ನಿಜವಾದ ಪ್ರೇಮಿ ನಿಮ್ಮ ಕುಟುಂಬದಿಂದ ನಿಮ್ಮನ್ನು ಎಂದಿಗೂ ಪ್ರತ್ಯೇಕ ಪಡಿಸಲು ಯತ್ನಿಸುವುದು ಇಲ್ಲ.
10. ದೈಹಿಕ ಸ್ಪರ್ಶ: ನಿಮ್ಮ ಕೈಗಳನ್ನು ಹಿಡಿದಿಟ್ಟುಕೊಳ್ಳುವುದು, ತಬ್ಬಿಕೊಳ್ಳುವುದು ಅಥವಾ ಮೃದುವಾದ ಸ್ಪರ್ಶದಂತಹ ಸೂಕ್ತವಾದ ಮತ್ತು ಒಪ್ಪಿಗೆಯ ಹಿತವಾದ ದೈಹಿಕ ಪ್ರೀತಿಯು ಆಳವಾದ ಭಾವನಾತ್ಮಕ ಸಂಪರ್ಕದ ಸೂಚಕ .
11. ನಿಮ್ಮನ್ನು ಎಂದಿಗೂ ಕೀಳಾಗಿ ನೋಡುವುದಿಲ್ಲ, ಹೀಯಾಳಿಸುವುದಿಲ್ಲ, ನಿಮ್ಮ ವೃತ್ತಿ, ಪ್ರವೃತ್ತಿಯ ಬಗ್ಗೆ ಕೇವಲವಾಗಿ ಈ ಮಾತಾಡುವುದಿಲ್ಲ
12. ಉತ್ತಮ ಸಮಯ ಕಳೆಯುವಿಕೆ: ನಿಮ್ಮೊಂದಿಗಿರುವಷ್ಟೂ ಹೊತ್ತು ನಿಮ್ಮ ಜೊತೆಯೇ ಇರುತ್ತಾರೆ. ಅಂದರೆ ಮಾನಸಿಕವಾಗಿ ಹಾಗೂ ಭೌತಿಕವಾಗಿ. ಅದೇ ಸಮಯಕ್ಕೆ ನಿಮ್ಮ ಸಮಯದ ಆದ್ಯತೆಗಳಿಗೂ ಗಮನ ಕೊಡುತ್ತಾರೆ.
13. ನಿಮ್ಮನ್ನು ನಂಬುತ್ತಾರೆ: ಅನಗತ್ಯ ಶಂಕೆ, ಅತಿರೇಕದ ಪೊಸೆಸೀವ್ನೆಸ್, ನಿಮ್ಮನ್ನು ತನ್ನ ಆಸ್ತಿ ಎಂದುಕೊಳ್ಳುವುದು ಇವೆಲ್ಲಾ ಇಲ್ಲದೇ ನಿಮ್ಮನ್ನೂ ತನ್ನಂತೆಯೇ ಒಬ್ಬ ಮನುಷ್ಯ ಎಂದು ಗೌರವಿಸುತ್ತಾರೆ.
14. ತನ್ನ ಕಷ್ಟ, ತೊಂದರೆ ದೌರ್ಬಲ್ಯಗಳನ್ನು ಮುಚ್ಚು ಮರೆ ಇಲ್ಲದೇ ಹಂಚಿಕೊಳ್ಳುತ್ತಾರೆ. ಹಾಗೆಯೇ ನಿಮ್ಮ ಸಮಸ್ಯೆಗಳನ್ನೂ ಕೇಳಲು ಸಿದ್ದವಾಗಿರುತ್ತಾರೆ. ಅವರೊಂದಿಗೆ ನಿಮ್ಮ ಯಾವುದೇ ತೊಂದರೆಗಳನ್ನೂ ಯಾವುದೇ ಜಡ್ಜ್‌ಮೆಂಟ್‌ಗೆ ಒಳಗಾಗುವ ಭಯ ಇಲ್ಲದೇ ಮಾತಾಡಬಹುದು.
15. ಸಂತಸ ನಿಡುವ ಸಣ್ಣ ಪುಟ್ಟ ವಿಷಯಗಳನ್ನು ಮಾಡುತ್ತಿರುತ್ತಾರೆ: ಸಣ್ಣ ಪುಟ್ಟ ಖುಷಿ ಕೊಡುವ ಸಂದೇಶಗಳು, ನಿಮಗೆ ಖುಷಿಕೊಡುವ ಸರ್ಪ್ರೈಸ್‌ಗಳು ಇವುಗಳನ್ನು ಆಗಾಗ ಮಾಡುತ್ತಿರುತ್ತಾರೆ.
ಒಟ್ಟಿನಲ್ಲಿ ನಿಮ್ಮನ್ನು ಪ್ರೀತಿಸುತ್ತಿರುವವರು ನಿಮ್ಮ ಸಂತೋಷ ಸಂಭ್ರಮದಲ್ಲಿ, ದುಃಖ ನೋವಿನಲ್ಲಿ ತಾನೂ ಪಾಲುದಾರ/ ದಾರೆ ಎಂಬುದನ್ನು ಮಾತಿನ ಮೂಲಕ ಮಾತ್ರವಲ್ಲ ತನ್ನ ಬದುಕು, ನಡತೆ, ಹಾಗು ಕ್ರಿಯೆಗಳ ಮೂಲಕ ಅಪ್ರಯತ್ನ ಪೂರ್ವಕವಾಗಿ ಈ ತಂತಾನೆ ತೋರ್ಪಡಿಸುತ್ತಿರುತ್ತಾರೆ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990
ವಿಭಾಗ