logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ಎದ್ದ ಕೂಡಲೇ ಮೂಡ್ ಆಫ್‌ ಅನ್ಬೇಡಿ; ಸೋಮಾರಿತನ ಕಡಿಮೆಯಾಗಬೇಕು ಅಂದ್ರೆ ನಿತ್ಯ ಈ ಯೋಗಾಸನ ಮಾಡಿ

ಬೆಳಗ್ಗೆ ಎದ್ದ ಕೂಡಲೇ ಮೂಡ್ ಆಫ್‌ ಅನ್ಬೇಡಿ; ಸೋಮಾರಿತನ ಕಡಿಮೆಯಾಗಬೇಕು ಅಂದ್ರೆ ನಿತ್ಯ ಈ ಯೋಗಾಸನ ಮಾಡಿ

Jayaraj HT Kannada

Sep 18, 2024 09:04 AM IST

google News

ಎದ್ದ ಕೂಡಲೇ ಸೋಮಾರಿತನ ಕಡಿಮೆಯಾಗಬೇಕು ಅಂದ್ರೆ ನಿತ್ಯ ಯೋಗಾಸನ ಮಾಡಿ

    • Yoga for laziness: ಪ್ರತಿದಿನ ನೀವು ಈ ಎರಡು ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದಿನವಿಡೀ ಲವಲವಿಕೆಯಿಂದ ಇರಬಹುದು. ನಿಮ್ಮ ಆಯಾಸ ಕಡಿಮೆಯಾಗಿ ಉಲ್ಲಾಸ ಹೆಚ್ಚುತ್ತದೆ. ಮಾಡುವ ಕೆಲಸಗಳು ಪರಿಣಾಮಕಾರಿಯಾಗಿ ಪೂರ್ಣಗೊಳ್ಳುತ್ತವೆ.
ಎದ್ದ ಕೂಡಲೇ ಸೋಮಾರಿತನ ಕಡಿಮೆಯಾಗಬೇಕು ಅಂದ್ರೆ ನಿತ್ಯ ಯೋಗಾಸನ ಮಾಡಿ
ಎದ್ದ ಕೂಡಲೇ ಸೋಮಾರಿತನ ಕಡಿಮೆಯಾಗಬೇಕು ಅಂದ್ರೆ ನಿತ್ಯ ಯೋಗಾಸನ ಮಾಡಿ (Pexel)

ರಾತ್ರಿ ಸರಿಯಾದ ಸಮಯಕ್ಕೆ ಮಲಗಿ ಎಷ್ಟೇ ಚೆನ್ನಾಗಿ ನಿದ್ದೆ ಮಾಡಿದರೂ, ಕೆಲವೊಮ್ಮೆ ಬೆಳಗ್ಗೆ ಎದ್ದಾಗಲೂ ನಿದ್ದೆ ಮಂಪರು ಬಿಡುವುದಿಲ್ಲ. ಹಿಂದಿನ ದಿನ ಸುಸ್ತಾಗಿ ಮಲಗಿದ್ದರೆ‌, ಮರುದಿನ ಕೂಡಾ ಆ ಸುಸ್ತು ಇರುತ್ತದೆ. ಇನ್ನೂ ಕೆಲವೊಮ್ಮೆ ಆಲಸ್ಯ ಇರಬಹುದು. ಒಂದು ವೇಳೆ ಆಲಸ್ಯ ಅಥವಾ ಮೂಡ್‌ ಆಫ್‌ ಆಗಿದ್ದರೆ ನೀವು ಮಾಡುವ ಕೆಲಸದಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಹಾಕಲು ಆಗುವುದಿಲ್ಲ. ಏನೇ ಮಾಡಿದರೂ ನಿಮ್ಮ ಮೂಡ್‌ ಸರಿ ಹೋಗದಿದ್ದರೆ, ಒಂದೊಳ್ಳೆ ಉಪಾಯವಿದೆ. ಜಗತ್ತೇ ಒಪ್ಪಿಕೊಂಡಿರುವ ಪತಂಜಲಿ ಯೋಗದ ಮುಂದೆ ಯಾವ ಆಲಸ್ಯಗಳೂ ಇಲ್ಲ. ಈ ಸರಳ ಯೋಗಾಸನಗಳನ್ನು ನೀವು ನಿಮ್ಮ ನಿತ್ಯ ದಿನಚರಿಯಲ್ಲಿ ಅಳವಡಿಸಿಕೊಂಡರೆ, ಪ್ರತಿನಿತ್ಯ ತಾಜಾತನ ನಿಮ್ಮದಾಗುತ್ತದೆ. ಹಾಗಂತಾ ಇದಕ್ಕೆ ಹೆಚ್ಚು ಸಮಯವೂ ಬೇಕಾಗಿಲ್ಲ.

ಪ್ರತಿದಿನ ಈ ಯೋಗಾಸನ ಮಾಡಲು ನೀವು ಹತ್ತು ನಿಮಿಷ ಮೀಸಲಿಟ್ಟರೆ ಸಾಕು. ದಿನವಿಡೀ ಕ್ರಿಯಾಶೀಲರಾಗಿರುತ್ತೀರಿ. ಅಲ್ಲದೆ ಮಾಡುವ ಕೆಲಸದಲ್ಲಿ ಉತ್ಸಾಹ ಬರುತ್ತದೆ. ಆ ಯೋಗಾಸನಗಳು ಹೀಗಿವೆ.

ಭುಜಂಗಾಸನ

ಇದನ್ನು ನಾಗರ ಹಾವಿನ ಭಂಗಿ ಎಂದೂ ಕರೆಯುತ್ತಾರೆ. ಈ ಆಸನವನ್ನು ಮಾಡುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕರಗುತ್ತದೆ. ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ. ಈ ಆಸನವು ಕೆಳ ಬೆನ್ನನ್ನು ಬಲಪಡಿಸುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಭುಜಂಗಾಸನ ಮಾಡಲು ಯೋಗ ಮ್ಯಾಟ್‌ ಮೇಲೆ ಬೋರಲು ಮಲಗಿ ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ. ಮೊಣಕೈಗಳನ್ನು ಬಗ್ಗಿಸಿ ಮತ್ತು ಎರಡೂ ಅಂಗೈಗಳನ್ನು ಎದೆಯ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ಆಸನ ಮಾಡುವಾಗ ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಕುತ್ತಿಗೆಯನ್ನು ನಿಧಾನವಾಗಿ ಮೇಲಕ್ಕೆತ್ತಿ. ಇದಾದ ನಂತರ ನಿಮ್ಮ ಎದೆಯನ್ನು ನಿಧಾನವಾಗಿ ಮೇಲಕ್ಕೆತ್ತಿ. ನಂತರ ನಿಧಾನವಾಗಿ ಹೊಟ್ಟೆಯ ಭಾಗವನ್ನು ಕೂಡಾ ಮೇಲಕ್ಕೆತ್ತಿ. ಇದೇ ಭಂಗಿಯಲ್ಲಿ ಆಕಾಶದ ಕಡೆಗೆ ನೋಡಿ. ಇದೇ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.

ಪವನಮುಕ್ತಾಸನ

ಪವನಮುಕ್ತಾಸನ ಎಂದರೆ, ಇಂಗ್ಲಿಷ್‌ನಲ್ಲಿ ವಿಂಡ್ ರಿಲೀವಿಂಗ್ ಪೋಸ್. ಪವನಮುಕ್ತಾಸನದ ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಬಹುದು. ಮಹಿಳೆಯರು ಕೂಡಾ ಗರ್ಭಾಶಯಕ್ಕೆ ಸಂಬಂಧಿತ ಸಮಸ್ಯೆಗಳಿಂದ ಪ್ರಯೋಜನ ಪಡೆಯುತ್ತಾರೆ. ತೂಕ ನಷ್ಟದ ಜೊತೆಗೆ, ಈ ಆಸನವು ಆಲಸ್ಯ ಮತ್ತು ಆಯಾಸವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಈ ಆಸನ ಮಾಡಲು ಮೊದಲಿಗೆ ಅಂಗಾತ ಮಲಗಬೇಕು. ಉಸಿರಾಡುತ್ತಾ ನಿಮ್ಮ ಕಾಲುಗಳನ್ನು 90 ಡಿಗ್ರಿಗಳವರೆಗೆ ಮೇಲಕ್ಕೆತ್ತಿ. ಈಗ ಕಾಲುಗಳನ್ನು ಬಗ್ಗಿಸಲು ಪ್ರಯತ್ನಿಸಿ. ಉಸಿರಾಡುವಾಗ ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಗೆ ಹತ್ತಿರಕ್ಕೆ ತರಲು ಪ್ರಯತ್ನಿಸಿ. ಆ ಬಳಿಕ ಮೊಣಕಾಲುಗಳನ್ನು ನಿಮ್ಮ ಎರಡು ಕೈಗಳ ಸಹಾಯದಿಂದ ಹಿಡಿದುಕೊಳ್ಳಿ. ತಲೆಯನ್ನು ಮೇಲಕ್ಕೆತ್ತಿ, ಹಣೆಯನ್ನು ಮೊಣಕಾಲುಗಳಿಗೆ ಸ್ಪರ್ಶಿಸಲು ಪ್ರಯತ್ನಿಸಿ. ಇದೇ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ. ಉಸಿರಾಟ ಮುಂದುವರೆಸಿ. ಇದೇ ಭಂಗಿಯನ್ನು 2 ರಿಂದ 3 ಬಾರಿ ಅಭ್ಯಾಸ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ