logo
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಸೊಪ್ಪು ಸರ್ವ ರೋಗಗಳಿಗೂ ಮದ್ದು; ಉತ್ತಮ ಆರೋಗ್ಯಕ್ಕಾಗಿ ಉತ್ತರ ಕರ್ನಾಟಕದವರ ಊಟದ ತಟ್ಟೆಯ ನಿತ್ಯ ಸಂಗಾತಿಯಿದು

ಈ ಸೊಪ್ಪು ಸರ್ವ ರೋಗಗಳಿಗೂ ಮದ್ದು; ಉತ್ತಮ ಆರೋಗ್ಯಕ್ಕಾಗಿ ಉತ್ತರ ಕರ್ನಾಟಕದವರ ಊಟದ ತಟ್ಟೆಯ ನಿತ್ಯ ಸಂಗಾತಿಯಿದು

Umesha Bhatta P H HT Kannada

Oct 31, 2024 04:27 PM IST

google News

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಆಹಾರದ ಗುಟ್ಟು ಹಕ್ಕರಕಿ ಸೊಪ್ಪು.

    • ಆಹಾರದಲ್ಲಿ ಯಥೇಚ್ಛ ಸೊಪ್ಪು ಆರೋಗ್ಯಕರ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಳುಸುವ ಹಲವು ದೇಸಿ ಸೊಪ್ಪುಗಳು ಜನರ ಬದುಕನ್ನು ಚೆನ್ನಾಗಿಯೇ ಇರಿಸಿವೆ. ಹಕ್ಕರಕಿ ಸೊಪ್ಪು ಇದರಲ್ಲಿ ಒಂದು. ಅದರ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಆಹಾರದ ಗುಟ್ಟು ಹಕ್ಕರಕಿ ಸೊಪ್ಪು.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಆಹಾರದ ಗುಟ್ಟು ಹಕ್ಕರಕಿ ಸೊಪ್ಪು.

ವಿಜಯಪುರ: ವಿಜಯಪುರ, ಬಾಗಲಕೋಟೆ ಸಹಿತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಂದು ಮಳೆ ಬಿದ್ದರೆ ಸಾಕು ಹಲವು ಸೊಪ್ಪುಗಳು ಜೀವಕಳೆ ಪಡೆಯುತ್ತಿವೆ. ಅದರಲ್ಲಿ ಹಕ್ಕರಕಿ ಸೊಪ್ಪು ಕೂಡ ಒಂದು. ಇದನ್ನು ಹತ್ತರಕಿ ಸೊಪ್ಪು ಎಂದು ಕೆಲವು ಭಾಗದಲ್ಲಿ ಕರೆಯುತ್ತಾರೆ. ಈ ಸೊಪ್ಪು ಹಚ್ಚ ಹಸಿರಿನಿಂದ ಕೂಡಿದೆ. ಅದರಲ್ಲೂ ಈ ಸೊಪ್ಪನ್ನು ಸರ್ವರೋಗಗಳಿಗೂ ಮದ್ದು ಎಂದು ಜನ ಈಗಲೂ ನಿತ್ಯದ ಆಹಾರದಲ್ಲಿ ಸೇವಿಸುತ್ತಾರೆ. ಹಕ್ಕರಕಿ ಸೊಪ್ಪು, ನಮ್ಮ ಉತ್ತರ ಕರ್ನಾಟಕದ ಕಪ್ಪು ಮಣ್ಣಿನ ಜೋಳದ ನಡುವೆ ತಂತಾನೇ ಬೆಳೆಯುವ ಸೊಪ್ಪು. ಕೆಲವರು ರೊಟ್ಟಿ ಊಟದೊಂದಿಗೆ ಈ ಸೊಪ್ಪನ್ನು ಸೇವಿಸಿದರೆ, ಉಳ್ಳಾಗಡ್ಡೆ (ಈರುಳ್ಳಿ) , ಹಸಿ ಮೆಣಸಿನಕಾಯಿ, ಅರಿಶಿನ ಹಾಕಿ ತಾಳಿಸಿ ತಿನ್ನುವ ಪರಿ ಪಾಠ ವಿದೇ.

ಹುಲ್ಲು ಹುಲ್ಲಾಗಿರುವ ಅಗಲವಾದ ಎಲೆಗಳನ್ನು ಬಿಡುವ ಸೊಪ್ಪು ಇದು. ಉತ್ತರ ಕರ್ನಾಟಕದ ಭಾಗದಲ್ಲಿ ಬೆಳೆಗಳ ಮಧ್ಯೆದಲ್ಲಿ ತನ್ನಿಂದ ತಾನಾಗಿಯೇ ಹುಟ್ಟಿ ಬೆಳೆಯುವ ಸೊಪ್ಪು ಇದಾಗಿದೆ. ಅದೇನೇ ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ಹಕ್ಕರಿಕೆ ಸೊಪ್ಪು. ಇದು ಶತಮಾನಗಳಿಂದ ಈ ಭಾಗದ ಊಟದ ತಟ್ಟೆಯ ಸಂಗಾತಿ. ಯಾವುದೇ ಮನೆಗೆ ಹೋದರೂ ಇದು ಊಟದೊಂದಿಗೆ ಕಾಯಂ. ಈ ಭಾಗದ ಖಾನಾವಳಿಯಲ್ಲೂ ಹಕ್ಕರಕಿ ಸೊಪ್ಪನ್ನು ಊಟದ ಜತೆ ಕಡ್ಡಾಯವಾಗಿ ನೀಡಲಾಗುತ್ತದೆ. ಏಕೆಂದರೆ ಯಾಕ್ರೀ ಅಣ್ಣಾರ ಹಕ್ಕರಕಿ ಕೊಟ್ಟ ಇಲ್ಲಲ್ಲ ಎಂದು ಕೇಳಿ ಬಿಡುತ್ತಾರೆ.

ಹೊಲದಲ್ಲಿ ಕೆಲಸ ಮಾಡುವ ರೈತರು ಇದನ್ನು ಊಟದ ಜೊತೆಗೆ ಇದನ್ನು ಬಳಕೆ ಮಾಡುತ್ತಾರೆ. ಇದರ ಹುಟ್ಟು ಹೇಗಿರಬಹುದು. ಈ ಕುರಿತ ಸತ್ಯ ಕೇಳಿದರೆ ನೀವೇ ಬೆರಗಾಗುತ್ತೀರಿ.

ಇದನ್ನು ಯಾವುದೆ ಬೀಜ ಬಿತ್ತನೆ ಮಾಡಿ ಬೆಳೆಯುವುದಿಲ್ಲ ಮತ್ತು ಇತರೆ ಮೂಲಗಳಂತೆ ನಾಟಿ ಮಾಡಿ ಸಹ ಬೆಳೆಯಲಾಗುವುದಿಲ್ಲ. ಬದಲಾಗಿ ಇದು ರೈತರು ಬೆಳೆದ ಬೆಳೆಗಳ ಮಧ್ಯೆ ಕಳೆಯ ರೂಪದಲ್ಲಿ ತಾನಾಗಿಯೇ ಬೆಳೆಯತ್ತದೆ. ಇದನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಾಗಿ ಇತ್ತೀಚಿನ ದಿನಮಾನಗಳಲ್ಲಿ ಇದರ ಮಹತ್ವ ತಿಳಿದ ಜನರು ತಮ್ಮ ಮನೆಗಳ ಮುಂಭಾಗದಲ್ಲಿ ಬೆಳೆದು ತಿನ್ನುತ್ತಾರೆ.

ಇನ್ನು ನಮ್ಮ ಆಡು ಭಾಷೆಯಲ್ಲಿ ಹಕ್ಕರಿಕೆ ಸೊಪ್ಪು ಎಂದು ಕರೆದರೆ ಇಂಗ್ಲೀಷ್ ಭಾಷೆಯಲ್ಲಿ ದಾಂಡೇಲೀಯನ್ ಗ್ರೀನ್ಸ್ ಎನ್ನುವರು. ಈ ಸೊಪ್ಪಿನ ಎಲೆಗಳು ಅತೀ ಹೆಚ್ಚಾಗಿ ಪ್ರೋಟೀನ್ ಅಂಶವನ್ನೊಳಗೊಂಡಿದೆ. ಎಲೆ ಮತ್ತು ಬೇರಿನಲ್ಲಿ ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶದ ಜೊತೆಗೆ ರೋಗ ನಿರೋಧಕ ಗುಣವನ್ನು ಹೊಂದಿದೆ ಹಾಗೂ ರಕ್ತದ ಪ್ರಮಾಣವನ್ನು ಹೆಚ್ಚಿಸಿ, ನಿದ್ದೆ ಬರುವಂತೆ ಮಾಡುತ್ತದೆ ಎಂದು ವೈಧ್ಯರು ಹೇಳುತ್ತಾರೆ. ಜೀರ್ಣಕ್ರಿಯೆ ಮತ್ತು ಚರ್ಮದ ಸಮಸ್ಯೆಗಳ ನಿವಾರಣೆಗೆ ಇದು ಸಹಾಯ ಮಾಡುತ್ತದೆ.

ಬೇರಿನಿಂದ ಚಿಗುರಿನವರೆಗೂ ಔಷಧಿಯ ಗುಣಗಳನ್ನು ಹೊಂದಿರುವ ಹಕ್ಕರಿಕೆ ಸೊಪ್ಪಿನ ಮಹತ್ವದ ಬಗ್ಗೆ ಕೇಳಿದರೆ ಊಟದ ಬದಲು ಸೊಪ್ಪನ್ನೆ ತಿಂದು ಬದುಕಬೇಕು ಅನ್ನಿಸುತ್ತದೆ. ನಮ್ಮೆಲ್ಲರ ಅಕ್ಕರೆಗಾಗಿ ಹಕ್ಕರಿಕೆ ಸೊಪ್ಪನ್ನು ಸೇವಿಸಿ ಎಂದು ಪ್ರೀತಿಯಿಂದ ಹೇಳುವವರೂ ಉತ್ತರ ಕರ್ನಾಟಕ ಭಾಗದ ಮನೆಗಳಲ್ಲಿ ಈಗಲೂ ಸಿಗುತ್ತಾರೆ.

ಉತ್ತರ ಕರ್ನಾಟಕ ಭಾಗದ ಮಂದಿ ಇದನ್ನು ರೊಟ್ಟಿ ಜೊತೆ ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಮತ್ತು ಹಕ್ಕರಿಕೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿರುವ ಹಲವಾರು ರೋಗಗಳಿಗೆ ಇದು ಮನೆ ಮದ್ದಾಗಿದೆ ಎಂದು ಉತ್ತರ ಕರ್ನಾಟಕ ಮಂದಿ ನಂಬುತ್ತಾರೆ.

ರೈತರು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಊಟ ಮಾಡುವ ಹೊತ್ತಿನಲ್ಲಿ ಈ ಸೊಪ್ಪನ್ನು ತಾಜಾ ತಾಜಾವಾಗಿ ಕಿತ್ತುಕೊಂಡು ತಿನ್ನುತ್ತಾರೆ. ಇದರಿಂದ ತಾಜಾತನದಿಂದ ತುಂಬಿರುವ ಸೊಪ್ಪನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ತುಂಬಾ ಉಪಾಯ ಕಾರಿ ಎನ್ನುವುದು ವೈದ್ಯರ ಭಾಗ.

ವಿಜಯಪುರ, ಬಾಗಲಕೋಟೆ ಜಿಲ್ಲೆಯ ಹಲವು ಊರುಗಳಲ್ಲಿ ಈಗಲೂ ವಾರದ ಸಂತೆ ನಡೆಯುತ್ತದೆ.ಅಲ್ಲಿಗೆ ಹೋದರೆ ನಿಮಗೆ ಹಕ್ಕರಕಿ ಸಿಗಬಹುದು. ಹೋದಾಗ ತಂದು ತಿಂದು ಅದರ ಸವಿ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ