ಪೋಷಕರೇ ಗಮನಿಸಿ, ಮಕ್ಕಳು ಬಹಳ ಬೇಗ ಕಲಿಯುವ 5 ಕೆಟ್ಟ ಅಭ್ಯಾಸಗಳಿವು; ಬಾಲ್ಯದಲ್ಲೇ ಅವರನ್ನು ತಿದ್ದಿ, ಬುದ್ಧಿ ಹೇಳಿ
Sep 21, 2024 08:08 AM IST
ಮಕ್ಕಳು ಬೇಗ ಕಲಿಯುವ 5 ತಪ್ಪುಗಳು
- ಮಕ್ಕಳು ಮನೆ, ಶಾಲೆ, ಸ್ನೇಹಿತರ ಬಳಗ ಹೀಗೆ ತಮ್ಮ ಸುತ್ತಲಿನ ಪ್ರಪಂಚದಿಂದ ಸಾಕಷ್ಟು ಕಲಿಯುತ್ತಾರೆ. ಆದರೆ ಅವರು ಏನನ್ನು ಕಲಿತಿದ್ದಾರೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಮಕ್ಕಳು ಒಳ್ಳೆಯದರ ಜೊತೆಗೆ ಕೆಟ್ಟ ಅಭ್ಯಾಸಗಳನ್ನೂ ಕಲಿತಿರುತ್ತಾರೆ. ಬಾಲ್ಯದಿಂದಲೇ ಅವರನ್ನು ತಿದ್ದುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳು ಬೇಗ ಕಲಿಯುವ 5 ಕೆಟ್ಟ ಅಭ್ಯಾಸಗಳಿವು.
ಮನುಷ್ಯ ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಬೇಗ ಕಲಿಯುತ್ತಾನೆ ಎಂಬ ಗಾದೆ ಮಾತೊಂದಿದೆ. ಇದು ಮಕ್ಕಳಿಗೂ ಅನ್ವಯವಾಗುತ್ತದೆ. ಮಕ್ಕಳು ಬೆಳೆಯುವಾಗಲೇ ತಮ್ಮ ಸುತ್ತಲಿನ ಪ್ರಪಂಚದಲ್ಲಿ ನಡೆಯುತ್ತಿರುವುದನ್ನೆಲ್ಲಾ ಗಮನಿಸಿ, ಎಲ್ಲವನ್ನೂ ಕಲಿಯುತ್ತವೆ. ಒಳ್ಳೆಯದು, ಕೆಟ್ಟದ್ದು ಎಂದು ಗುರುತಿಸದೇ ಎಲ್ಲವನ್ನೂ ಕಲಿತು ಬಿಡುವುದು ಮಕ್ಕಳ ಗುಣ. ಇದು ಸ್ವಾಭಾವಿಕವಾದರೂ ಮಕ್ಕಳ ಕೆಟ್ಟದ್ದನ್ನು ಕಲಿತಾಗ ಅಥವಾ ಕೆಟ್ಟದ್ದನ್ನು ಅನುಸರಿಸಿದಾಗ ಅದನ್ನು ಗುರುತಿಸಿ ಆರಂಭದಲ್ಲೇ ಮಕ್ಕಳನ್ನು ಸರಿದಾರಿಗೆ ತರುವುದು ಪೋಷಕರ ಕರ್ತವ್ಯ. ಹಾಗಾದರೆ ಮಕ್ಕಳು ಬೇಗನೆ ಕಲಿಯುವ 5 ಕೆಟ್ಟ ಗುಣಗಳು ಯಾವುವು, ಅದರಿಂದ ಅವರು ಹೊರ ಬರುವಂತೆ ಮಾಡುವುದು ಹೇಗೆ ನೋಡಿ.
ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದೇ ಇರುವುದು
ಮಕ್ಕಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಕಡಿಮೆ. ತಪ್ಪನ್ನು ಒಪ್ಪಿಕೊಂಡರೆ ಎಲ್ಲಿ ಮನೆಯವರು ಬಯ್ಯುತ್ತಾರೋ ಅಥವಾ ಹೊಡೆಯುತ್ತಾರೋ ಎಂಬ ಭಯದಲ್ಲಿ ತಪ್ಪನ್ನು ಮುಚ್ಚಿಡುತ್ತಾರೆ. ಹೊಣೆಗಾರಿಕೆಯ ಮೌಲ್ಯವನ್ನು ಮಕ್ಕಳಿಗೆ ಪೋಷಕರು ಅರ್ಥ ಮಾಡಿಸಬೇಕು. ಮಕ್ಕಳಿಗೆ ತಮ್ಮ ತಪ್ಪಿನ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು. ಇಲ್ಲದಿದ್ದರೆ ದೊಡ್ಡವರಾದ ಮೇಲೂ ಸುಳ್ಳು ಹೇಳುವುದು, ತಪ್ಪಿನ ಹೊಣೆಗಾರಿಕೆಯನ್ನು ತಮ್ಮ ಮೇಲೆ ತೆಗೆದುಕೊಳ್ಳದೇ ಇರುವುದು ಇಂತಹ ಗುಣಗಳನ್ನು ಅವರು ಬೆಳೆಸಿಕೊಳ್ಳಬಹುದು. ಮುಂದಾಗುವ ಪರಿಣಾಮಗಳ ಬಗ್ಗೆ ಯೋಚಿಸಿದೇ ಮಕ್ಕಳು ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿ.
ಆಲಸ್ಯವೆಂಬ ವಿಷವರ್ತುಲ
ಆಲಸ್ಯವು ಮಕ್ಕಳು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಮತ್ತೊಂದು ಅಭ್ಯಾಸವಾಗಿದೆ. ಶಾಲೆಯಲ್ಲಿ, ಹೋವರ್ಕ್ ಮಾಡುವಾಗ ಅಥವಾ ಯಾವುದೇ ರೀತಿಯ ಕೆಲಸ ಮಾಡುವಾಗಲೂ ಆಲಸ್ಯ ತೋರುತ್ತಿದ್ದರೆ ಆರಂಭದಲ್ಲೇ ತಿದ್ದಿ ಬುದ್ಧಿ ಹೇಳಿ. ಇಲ್ಲದಿದ್ದರೆ ಅದು ದೊಡ್ಡವರಾದ ಮೇಲೂ ಗಂಭೀರ ಸಮಸ್ಯೆಯಾಗಿ ಮುಂದುವರಿಯಬಹುದು. ಮಕ್ಕಳಿಗೆ ಒಂದು ದೊಡ್ಡ ಕೆಲಸವನ್ನು ಚಿಕ್ಕ ಚಿಕ್ಕ ಭಾಗವನ್ನಾಗಿ ಮಾಡಿಕೊಂಡು ಪೂರ್ಣಗೊಳಿಸುವುದನ್ನು ಕಲಿಸಿ, ಇಲ್ಲದೇ ಹೋದಲ್ಲಿ ಅವರು ಅದನ್ನು ಬೇಗ ಕಲಿಯುವುದಕ್ಕೆ ಕಷ್ಟ ಪಡಬೇಕಾಗಬಹುದು. ಆಲಸ್ಯ ಭಾವ ಬೆಳೆಯುತ್ತಾ ಹೋದರೆ ದೊಡ್ಡವರಾದ ಮೇಲೆ ಪೋಷಕರಿಗಷ್ಟೇ ಅಲ್ಲ, ಮಕ್ಕಳಿಗೂ ಕಷ್ಟವಾಗುತ್ತದೆ.
ಇತರರ ಅಭಿಪ್ರಾಯಗಳನ್ನು ಕಡೆಗಣಿಸುವುದು
ಇತ್ತೀಚೆಗೆ ಮಕ್ಕಳು ಪದೇ ಪದೇ ಸ್ನೇಹಿತರ ಜೊತೆ, ಒಡಹುಟ್ಟಿದವರ ಜೊತೆ ಜಗಳ, ವಾದ ಮಾಡುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಅವರು ಬೇರೆಯವರ ಮಾತನ್ನು ಕಡೆಗಣಿಸುವುದು. ಆರಂಭದಿಂದಲೂ ಅವರು ಬೇರೆಯವರ ಮಾತುಗಳನ್ನು ಕಡೆಗಣಿಸಿರುತ್ತಾರೆ. ಆ ಕಾರಣಕ್ಕೆ ಪೋಷಕರು ಬಾಲ್ಯದಿಂದಲೇ ಮಕ್ಕಳಿಗೆ ಬೇರೆಯವರು ಅಂದರೆ ಸಂಬಂಧಿಕರು ಅಥವಾ ಸ್ನೇಹಿತರ ಮಾತುಗಳನ್ನು ಪರಿಗಣಿಸುವಂತೆ ಸಲಹೆ ನೀಡಬೇಕು. ಮೊದಲು ಕೇಳಿಸಿಕೊಳ್ಳಬೇಕು, ನಂತರ ಅದು ನಮ್ಮ ಬದುಕಿಗೆ ಯೋಗ್ಯ ಎನ್ನಿಸಿದರೆ ಅದನ್ನು ಸ್ವೀಕರಿಸಬೇಕು ಎಂದು ಅವರಿಗೆ ಬುದ್ಧಿ ಹೇಳಬೇಕು. ಅವರಿಗೆ ಪರಾನುಭೂತಿ ಮತ್ತು ಇತರರನ್ನು ಕೇಳುವ ಪ್ರಾಮುಖ್ಯತೆಯನ್ನು ಕಲಿಸಿದರೆ ಅವರು ಇತರ ಜನರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಂಬಂಧಗಳು ಸುಧಾರಿಸುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಬೇಕು.
ಗಾಸಿಪ್ ಮಾಡುವುದು
ಮಾಧ್ಯಮ, ಕುಟುಂಬ, ಅಥವಾ ಶಾಲೆಯಲ್ಲಿ ಕ್ಯಾಶುಯಲ್ ಚಾಟ್‌ಗಳಿಂದ ಗಾಸಿಪ್ ಬಗ್ಗೆ ಮಕ್ಕಳು ಕಲಿಯಬಹುದು. ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದರಿಂದ ಆಗುವ ಹಾನಿಯ ಬಗ್ಗೆ ಮಕ್ಕಳಿಗೆ ತಿಳಿದಿರುವುದಿಲ್ಲ, ಆರಂಭದಲ್ಲಿ ಗಾಸಿಪ್ ಎನ್ನುವುದು ಮೋಜಿನ ಭಾಗವಾಗುತ್ತದೆ. ಆದರೆ ಇದು ಜನರ ಭಾವನೆಗಳನ್ನು ಹಾಳುಮಾಡುತ್ತದೆ ಮತ್ತು ಸ್ನೇಹ ಸಂಬಂಧವನ್ನು ಕೆಡಿಸುತ್ತದೆ. ಸಂವಹನದಲ್ಲಿ ದಯೆ ಮತ್ತು ಗೌರವದ ಪ್ರಾಮುಖ್ಯತೆಯನ್ನು ಮಕ್ಕಳಲ್ಲಿ ಮೂಡಿಸಲು ಆರಂಭಿಕ ಮಧ್ಯಸ್ಥಿಕೆ ಅಗತ್ಯ. ಯಾರೊಬ್ಬರ ಬೆನ್ನ ಹಿಂದೆ ಮಾತನಾಡುವುದು ಅಸಭ್ಯವೆಂದು ಅವರಿಗೆ ತಿಳಿಸಿ. ಗಾಸಿಪ್ ಮಾಡುವುದರಿಂದ ಬೇರೆಯವರ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬುದನ್ನು ಅರ್ಥ ಮಾಡಿಸಿ.
ಕಳಪೆ ನೈರ್ಮಲ್ಯ ಅಭ್ಯಾಸಗಳು
ಮಕ್ಕಳು ಚಿಕ್ಕವರಾಗಿದ್ದಾಗ ನೈರ್ಮಲ್ಯದ ಅಭ್ಯಾಸಗಳು ದೊಡ್ಡ ವಿಷಯವೆಂದು ತೋರುವುದಿಲ್ಲ, ಆದರೆ ವೈಯಕ್ತಿಕ ಶುಚಿತ್ವವನ್ನು ನಿರ್ಲಕ್ಷಿಸುವುದು ಕಾಲಾನಂತರದಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಹಲ್ಲುಗಳನ್ನು ಸರಿಯಾಗಿ ಉಜ್ಜದೇ ಇರುವುದು, ಕೈ ತೊಳಯದೇ ಇರುವುದು, ಸ್ನಾನ ಮಾಡದೇ ಇರುವುದು, ಬಟ್ಟೆಗಳನ್ನು ಕೊಳಕಾಗಿ ಇರಿಸಿಕೊಳ್ಳುವುದು ಇಂತಹ ಅಭ್ಯಾಸಗಳು ನಿಮ್ಮ ಮಗುವಿನ ಭವಿಷ್ಯದಲ್ಲಿ ಖಂಡಿತ ತೊಂದರೆ ಉಂಟು ಮಾಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಹಾಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಶುಚಿತ್ವದ ಮಹತ್ವವನ್ನು ತಿಳಿಸಿ.
ಮಕ್ಕಳ ಈ 5 ಕೆಟ್ಟ ಅಭ್ಯಾಸಗಳನ್ನ ಪೋಷಕರು ಆರಂಭದಲ್ಲೇ ಗುರುತಿಸಿ ಬದಲಿಸಬೇಕು, ಇಲ್ಲದೇ ಹೋದಲ್ಲಿ ಮಕ್ಕಳು ಹದಿ ವಯಸ್ಸಿಗೆ ಬಂದಾಗ ಈ ಅಭ್ಯಾಸಗಳಿಂದ ಮಕ್ಕಳಿಗೂ, ಪೋಷಕರಿಗೂ ಹಾಗೂ ಸಂಬಂಧಿಕರಿಗೂ ಎಲ್ಲರಿಗೂ ತೊಂದರೆ ಉಂಟಾಗುವುದು ಖಂಡಿತ.
ವಿಭಾಗ