ಮಕ್ಕಳ ವಿಚಾರದಲ್ಲಿ ಪೋಷಕರು ಮಾಡುವ 7 ಪ್ರಮುಖ ತಪ್ಪುಗಳಿವು, ಇದು ಅವರ ಭವಿಷ್ಯಕ್ಕೆ ಮಾರಕವಾಗಬಹುದು ನೆನಪಿರಲಿ
ಮಕ್ಕಳನ್ನು ಬೆಳೆಸುವ ವಿಚಾರಕ್ಕೆ ಬಂದಾಗ ಒಬ್ಬೊಬ್ಬರು ಪೋಷಕರದ್ದು ಒಂದೊಂದು ಅಭಿಪ್ರಾಯ. ಆದರೆ ಈ ಎಲ್ಲದರ ಹಿಂದೆ ಇರುವುದು ತಮ್ಮ ಮಗುವಿಗೆ ಉಜ್ವಲ ಭವಿಷ್ಯ ಸಿಗಬೇಕು ಎನ್ನುವುದು. ಆದರೆ ಮಕ್ಕಳನ್ನ ಬೆಳೆಸುವ ವಿಚಾರದಲ್ಲಿ ಪೋಷಕರು ಮಾಡುವ 7 ಪ್ರಮುಖ ತಪ್ಪುಗಳಿವು. ಇದರಿಂದ ಮಕ್ಕಳ ಬೆಳವಣಿಗೆಯೇ ಕುಂಠಿತವಾಗಬಹುದು. ಇದು ಅವರ ಭವಿಷ್ಯಕ್ಕೆ ಮಾರಕವಾಗಬಹುದು.
ಮಕ್ಕಳನ್ನ ಬೆಳೆಸುವುದು ಎಂದರೆ ಪೋಷಕರಿಗೆ ಸವಾಲು ಸುಳ್ಳಲ್ಲ. ಹಾಗಂತ ಈ ಸವಾಲನ್ನು ಸ್ವೀಕರಿಸದೇ ಅಥವಾ ಸಮರ್ಥವಾಗಿ ನಿಭಾಯಿಸದೇ ಇರಲು ಸಾಧ್ಯವಿಲ್ಲ. ಬಾಲ್ಯದಿಂದಲೇ ಮಕ್ಕಳ ಸರಿಯಾದ ದಾರಿಯಲ್ಲಿ ನಡೆಸುವ ಕರ್ತವ್ಯ ಪೋಷಕರದ್ದು. ಮಕ್ಕಳ ಬಾಲ್ಯವು ಬಹಳ ಮುಖ್ಯ ಎನ್ನಿಸುತ್ತದೆ, ಮಾತ್ರವಲ್ಲ ಬುಡದಿಂದಲೇ ಭವಿಷ್ಯ ರೂಪಿಸಬೇಕು ಎಂಬಂತೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು.
ಇದೆಲ್ಲಾ ಕಾರಣಕ್ಕೆ ಪೋಷಕರು ಮಕ್ಕಳನ್ನು ಬೆಳೆಸಲು ಕೆಲವೊಂದು ಕ್ರಮಗಳನ್ನು ಅನುಸರಿಸುತ್ತಾರೆ. ಕೆಲವರು ಬುದ್ಧಿಮಾತಿನಿಂದಲೇ ಮಗುವನ್ನು ತಿದ್ದಿದರೆ ಇನ್ನೂ ಕೆಲವರು ದಂಡಂದಶಗುಣಂ ಎನ್ನುತ್ತಾರೆ. ಇದು ಮಕ್ಕಳಿಗೂ ಕೂಡ ಅಭ್ಯಾಸವಾಗಿರುತ್ತದೆ. ಆದರೆ ಪೋಷಕರು ಮಕ್ಕಳ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪಿನಿಂದ ಮಕ್ಕಳ ಬೆಳವಣಿಗೆ ಹಾಗೂ ಭವಿಷ್ಯಕ್ಕೆ ತೊಂದರೆಯಾಗಬಹುದು. ಅಂತಹ 7 ಪ್ರಮುಖ ತಪ್ಪುಗಳು ಯಾವುವು ನೋಡಿ.
ಬಯ್ಯವುದು–ಅತಿಯಾದ ನಿರೀಕ್ಷೆ
ಕೆಲವು ಪೋಷಕರು ಮಕ್ಕಳಿಗೆ ಸಿಕ್ಕಾಪಟ್ಟೆ ಬಯ್ಯುತ್ತಾರೆ, ಕೆಲವೊಮ್ಮೆ ಕಾರಣವೇ ಇಲ್ಲದೆ ತಮ್ಮ ಮಾನಸಿಕ ಒತ್ತಡವನ್ನು ಮಕ್ಕಳ ಮೇಲೆ ಹಾಕುತ್ತಾರೆ. ಯಾರದ್ದೋ ಮೇಲಿನ ಸಿಟ್ಟಿಗೆ ಮಕ್ಕಳಿಗೆ ಬಯ್ಯುವ ಅಭ್ಯಾಸವೂ ಕೆಲವು ಪೋಷಕರಿಗಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಿಕ್ಕಪುಟ್ಟ ವಿಷಯಕ್ಕೂ ಬಯ್ಯವುದು, ರೇಗಾಡುವುದು ಮಾಡದಿರಿ.
ಇನ್ನೊಂದು ತಪ್ಪು ಎಂದರೆ ಮಗುವಿನ ಮೇಲೆ ಅತಿಯಾದ ನಿರೀಕ್ಷೆ ಇಡುವುದು, ಮಗುವಿನ ಸಾಮರ್ಥ್ಯಕ್ಕೂ ಮೀರಿ ನಿರೀಕ್ಷೆ ಇಡುವುದು ನಿಮಗೆ ನಿರಾಸೆ ಉಂಟು ಮಾಡುವುದು ಖಂಡಿತ. ಈ ಸಿಟ್ಟನ್ನು ನೀವು ಮಗುವಿನ ಮೇಲೆ ಹೇರಬಹುದು.
ಪ್ರಮುಖ ದಿನ, ಕ್ಷಣಗಳನ್ನು ಮಿಸ್ ಮಾಡುವುದು
ಇತ್ತೀಚಿನ ಬ್ಯುಸಿ ಲೈಫ್‌ನಲ್ಲಿ ಪೋಷಕರಿಗೆ ಮಕ್ಕಳಿಗಾಗಿ ಸಮಯ ಕೊಡುವುದೇ ಕಷ್ಟವಾಗಿದೆ. ಮಕ್ಕಳು ಕಿಂಡರ್ ಗಾರ್ಡನ್, ಕೆಲಸದವರ ಕೈಯಲ್ಲಿ ಬೆಳೆಯುವುದೇ ಹೆಚ್ಚು. ಅಂತಹ ಸಂದರ್ಭಗಳಲ್ಲಿ ಮಗು ತನ್ನ ಹುಟ್ಟಿದ ದಿನ, ಹಬ್ಬ ದಿನಗಳು, ಶಾಪಿಂಗ್ ಹೋಗುವ ಸಂದರ್ಭಗಳಲ್ಲಿ ಪೋಷಕರು ಜೊತೆ ಇರಬೇಕು ಎಂದು ಬಯಸುತ್ತದೆ. ಅಂತಹ ಸಂದರ್ಭದಲ್ಲಿ ಪೋಷಕರು ಜೊತೆ ಇಲ್ಲ ಎಂದರೆ ಮಗು ತುಂಬಾ ಬೇಸರ ಮಾಡಿಕೊಳ್ಳುತ್ತದೆ, ಮಾತ್ರವಲ್ಲ ಇದು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.
ಮಕ್ಕಳ ಮಾತಿಗೆ ಬೆಲೆ ಕೊಡದೇ ಇರುವುದು
ಮಕ್ಕಳ ಮಾತು ಎನ್ನುವ ಗಾದೆ ಇದೆ, ಅಂದ್ರೆ ಮಕ್ಕಳ ಮಾತಿಗೆ ಬೆಲೆ ಕಡಿಮೆ, ತೂಕ ಇರುವುದಿಲ್ಲ ಅರ್ಥವಿದೆ. ಆದರೆ ಪೋಷಕರು ಮಕ್ಕಳ ಮಾತನ್ನು ಪರಿಗಣಿಸಬೇಕು. ಅವರ ಮಾತಿಗೂ ಬೆಲೆ ಕೊಡಬೇಕು. ತಮ್ಮ ಅಭಿಪ್ರಾಯ ಕೆಲಸಕ್ಕೆ ಬಾರದ್ದು ಎಂಬ ಭಾವನೆ ಮಕ್ಕಳಲ್ಲಿ ಹುಟ್ಟುವಂತೆ ಮಾಡಬೇಡಿ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳು ಪೋಷಕರು ನಮ್ಮನ್ನು ನೆಗ್ಲೆಕ್ಟ್ ಮಾಡುತ್ತಿದ್ದಾರೆ ಎಂದುಕೊಳ್ಳಬಹುದು.
ಮಾತನಾಡದೇ ಇರುವುದು
ಮೊದಲೇ ಹೇಳಿದಂತೆ ಮಕ್ಕಳೊಂದಿಗೆ ಮಾತನಾಡಲು ಪೋಷಕರಿಗೆ ಸಮಯವಿಲ್ಲದ ಕಾಲವಿದು. ಹಲವು ಬಾರಿ ಮಕ್ಕಳಿಗೆ ಏನೋ ಹೇಳಿಕೊಳ್ಳಬೇಕು ಎನ್ನಿಸಿದಾಗ ಮಗುವಿಗೆ ಪೋಷಕರು ಸಿಗದೇ ಇರಬಹುದು. ಇದರಿಂದ ಕೂಡ ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ ಮಗುವಿನ ಜೊತೆ ಗುಣಮಟ್ಟದ ಸಂವಹನ ನಡೆಸುವುದು ಬಹಳ ಮುಖ್ಯ. ಇದರಿಂದ ಮಗುವಿಗೆ ಪೋಷಕರು ತನ್ನ ಜೊತೆ ಸದಾ ಇರುತ್ತಾರೆ ಎಂಬ ಭಾವನೆ ಬೆಳೆಯಬಹುದು.
ಸಂತೋಷದ ಕ್ಷಣಗಳಲ್ಲಿ ಜೊತೆ ಇಲ್ಲದೇ ಇರುವುದು
ಪೋಷಕರು ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬುದು ನಿಜ. ಆದರೆ ಸಮಯ ಸಿಕ್ಕಾಗೆಲ್ಲಾ ಮಗುವನ್ನು ಸಂತೋಷದಿಂದ ನೋಡಿಕೊಳ್ಳಬೇಕು, ಮಗು ಆಸೆ ಪಟ್ಟಿದ್ದೆನ್ನೆಲ್ಲಾ ಮಾಡಬೇಕು. ಮಕ್ಕಳೊಂದಿಗೆ ಆಡುವುದು, ಸಿನಿಮಾ ನೋಡುವುದು ಇದೆಲ್ಲವನ್ನೂ ಮಾಡಬೇಕು, ಇದರಿಂದ ಮಗು ಖುಷಿ ಪಡುತ್ತದೆ. ಅಲ್ಲದೇ ಅಪ್ಪ–ಅಮ್ಮ ತನ್ನ ಖುಷಿಗೆ ಏನು ಬೇಕಾದರೂ ಮಾಡುತ್ತಾರೆ ಎನ್ನುವ ಭಾವನೆ ಮಗುವಿನ ಮನಸ್ಸಲ್ಲಿ ಮೂಡುತ್ತದೆ.
ನಿರಂತರತೆ ಇಲ್ಲದಿರುವುದು
ಪೋಷಕರು ಮಕ್ಕಳ ಜೊತೆ ಒಂದೇ ರೀತಿ ಇರುವುದು ಬಹಳ ಮುಖ್ಯ. ಒಮ್ಮೆ ಕೋಪ ಬಂತು ಎಂದು ರೇಗಾಡುವುದು, ಇನ್ನೊಮ್ಮೆ ಅತಿಯಾಗಿ ಮುದ್ದಿಸುವುದು ಇದೆಲ್ಲಾ ಮಾಡಬಾರದು. ಯಾವಾಗಲೂ ಮಗುವಿನ ಮೇಲೆ ಪ್ರೀತಿ, ಕಾಳಜಿ ತೋರಬೇಕು. ಆರಂಭದಲ್ಲೇ ಒಂದು ನಿರ್ದಿಷ್ಟ ಚೌಕಟ್ಟು ಹಾಕಿಕೊಳ್ಳಬೇಕು. ಅದರಂತೆ ನಡೆಯಬೇಕು. ಪದೇ ಪದೇ ಬದಲಾಗುವ ಪೋಷಕರ ಮನೋಭಾವು ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ಹಣದ ಮೌಲ್ಯ ಕಲಿಸದೇ ಇರುವುದು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಷಕರಿಗೆ ಒಂದೇ ಮಗು. ಹಾಗಾಗಿ ಆ ಮಗು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ. ತಮಗೆ ಕಷ್ಟ ಆದರೂ ಕೂಡ ಮಗುವಿನ ಖುಷಿಗಾಗಿ ಏನು ಬೇಕಾದ್ರೂ ಮಾಡುತ್ತಾರೆ. ಇದರಿಂದ ಮಗುವಿಗೆ ಹಣದ ಮೌಲ್ಯದ ಅರಿವೇ ಆಗುವುದಿಲ್ಲ. ಇದು ಪೋಷಕರು ಮಾಡುವ ಪ್ರಮುಖ ತಪ್ಪುಗಳಲ್ಲಿ ಒಂದು. ಮಗುವಿಗೆ ಬಾಲ್ಯದಿಂದಲೇ ಹಣದ ಮೌಲ್ಯ ಕಲಿಸಬೇಕು.
ಪೋಷಕರು ಮಾಡುವ ಈ ಮೇಲಿನ ತಪ್ಪುಗಳು ಬಾಲ್ಯದಿಂದಲೇ ಮಕ್ಕಳ ಮೇಲೆ ಪರಿಣಾಮ ಬೀರಲು ಆರಂಭವಾಗುತ್ತದೆ. ಮಕ್ಕಳು ಬೆಳೆಯುತ್ತಾ ಬಂದಂತೆ ಈ ತಪ್ಪುಗಳ ಪರಿಣಾಮವೂ ಬೆಳೆಯುತ್ತದೆ. ಇದು ಅವರ ಶೈಕ್ಷಣಿಕ, ವೈಯಕ್ತಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು.