ದಿಢೀರ್ ಕೋಟ್ಯಧಿಪತಿ ಆಗಬೇಕೆಂದು ಫ್ಯೂಚರ್ ಆಂಡ್ ಆಪ್ಶನ್ಸ್ ಒಳಸುಳಿ ಗೊತ್ತಿಲ್ದೇ ಕೈ ಸುಟ್ಟುಕೊಳ್ಳಬೇಡಿ; ಲೇಖಕ ವಿಕ್ರಮ್ ಜೋಷಿ ಎಚ್ಚರಿಕೆ
Sep 24, 2024 11:10 AM IST
ದಿಢೀರ್ ಕೋಟ್ಯಧಿಪತಿ ಆಗಬೇಕೆಂದು ಫ್ಯೂಚರ್ ಆಂಡ್ ಆಪ್ಶನ್ಸ್ ಒಳಸುಳಿ ಗೊತ್ತಿಲ್ದೇ ಕೈ ಸುಟ್ಟುಕೊಳ್ಳಬೇಡಿ ಎಂದು ಲೇಖಕ ವಿಕ್ರಮ್ ಜೋಷಿ ಎಚ್ಚರಿಸಿದ್ದಾರೆ. (ಸಾಂಕೇತಿಕ ಚಿತ್ರ)
ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಲು ಸಾಧ್ಯವೇ?. ಸಾಧ್ಯ ಎಂದು ಹೇಳುವ ಅನೇಕರು ಷೇರುಪೇಟೆ ಕಡೆಗೆ ಕೈ ತೋರುತ್ತಾರೆ. ಆದರೆ ಲೇಖಕ ವಿಕ್ರಮ್ ಜೋಷಿ ಅವರು, ದಿಢೀರ್ ಕೋಟ್ಯಧಿಪತಿ ಆಗಬೇಕೆಂದು ಫ್ಯೂಚರ್ ಆಂಡ್ ಆಪ್ಶನ್ಸ್ ಒಳಸುಳಿ ಗೊತ್ತಿಲ್ದೇ ಕೈ ಸುಟ್ಟುಕೊಳ್ಳಬೇಡಿ ಎಂದು ಅದರ ಮತ್ತೊಂದು ಮುಖವನ್ನು ಅನಾವರಣ ಮಾಡಿಕೊಟ್ಟಿದ್ದಾರೆ.
ಇದೊಂದು ರೀತಿ ಸ್ಪರ್ಧಾತ್ಮಕ ಯುಗ. ಬಹುತೇಕ ಎಲ್ಲದರಲ್ಲೂ ಪೈಪೋಟಿ. ಬಹುಬೇಗ ಕೋಟ್ಯಧಿಪತಿಯಾಗಬೇಕು ಎಂದು ಕನಸು ಹೊತ್ತವರು ಅನೇಕರು. ಇತ್ತೀಚಿನ ವರ್ಷಗಳಲ್ಲಿ ಅಂತಹ ಕನಸುಗಳಿಗೆ ಷೇರುಪೇಟೆ ಹೆಚ್ಚು ಒತ್ತು ಕೊಡುತ್ತಿದ್ದು, ಅಲ್ಲಿನ ರಿಟರ್ನ್ಸ್ ಅದಕ್ಕೆ ಕಾರಣ. ಹೀಗಾಗಿ ಅನೇಕರು ಗೊತ್ತಿಲ್ಲದಿದ್ದರೂ ಯಾರದ್ದೋ ನೆರವು ತಗೊಂಡು, ಅವರಿವರು ಹೇಳಿದ್ದನ್ನು ನಂಬಿಕೊಂಡು ಷೇರುಪೇಟೆ ವಹಿವಾಟಿಗೆ ಇಳಿದವರಿದ್ದಾರೆ. ಇನ್ನು ಅನೇಕರು ಫ್ಯೂಚರ್ ಆಂಡ್ ಆಪ್ಶನ್ಸ್ ವಹಿವಾಟಿಗೆ ಇಳಿದಿದ್ದಾರೆ. ಫ್ಯೂಚರ್ ಆಂಡ್ ಆಪ್ಶನ್ಸ್ ಎಂಬುದು ಭಾರತದಲ್ಲಿ ಹಣಕಾಸಿನ ಒಪ್ಪಂದಗಳ ವಿಭಾಗಕ್ಕೆ ಬರುತ್ತದೆ. ಇದು ಭವಿಷ್ಯದಲ್ಲಿ ನಿಗದಿತ ಬೆಲೆಯಲ್ಲಿ ಷೇರುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಹೂಡಿಕೆದಾರರಿಗೆ ಅವಕಾಶ ನೀಡುತ್ತದೆ. ಬೆಲೆ ಬದಲಾವಣೆಗಳಿಂದ ಹಣವನ್ನು ಗಳಿಸಲು ಅಥವಾ ಹೂಡಿಕೆಗಳನ್ನು ರಕ್ಷಿಸಲು ಈ ವಹಿವಾಟು ನೆರವಾಗುತ್ತದೆ. ಆದರೆ, ಸ್ವತಃ ಅದರ ಒಳಸುಳಿಗಳನ್ನು ಅರ್ಥಮಾಡಿಕೊಳ್ಳದೇ ಹೋದರೆ ಅದರಿಂದ ನಿರೀಕ್ಷಿತ ರಿಟರ್ನ್ಸ್ ಪಡೆಯುವುದು ಸಾಧ್ಯವಿಲ್ಲ. ಯಾವುದೇ ವಹಿವಾಟು ಮಾಡಿದರೂ ಅದಕ್ಕೆ ಪೂರ್ಣ ಸಮಯ ಕೊಡಲೇ ಬೇಕು. ಇಲ್ಲದಿದ್ದರೆ ನಷ್ಟ ಖಚಿತ.
ಇತ್ತೀಚೆಗೆ ಸೆಬಿ ಇದೇ ವಿಚಾರಕ್ಕೆ ಸಂಬಂಧಿಸಿ ಪ್ರಕಟಿಸಿದ ವರದಿ ಈಗ ಎಲ್ಲರ ಗಮನಸೆಳೆದಿದೆ. ಬಹುತೇಕ ಹೂಡಿಕೆದಾರರು ಫ್ಯೂಚರ್ ಆಂಡ್ ಆಪ್ಶನ್ಸ್ ಹೂಡಿಕೆಯಲ್ಲಿ ಕೈಸುಟ್ಟುಕೊಂಡಿದ್ದಾರೆ. ಅವರಿಗಾದ ನಷ್ಟವೂ ಕಡಿಮೆ ಏನಲ್ಲ. ಕರ್ನಾಟಕದ ಬಜೆಟ್ ಗಾತ್ರದ (3,71,383 ಕೋಟಿ ರೂಪಾಯಿ) ಸರಿ ಸುಮಾರು ಅರ್ಧದಷ್ಟು. ಲೇಖಕ ವಿಕ್ರಮ್ ಜೋಷಿಯವರು ಇದೇ ವಿಚಾರವಾಗಿ ಜನಸಾಮಾನ್ಯರನ್ನು ಎಚ್ಚರಿಸಿರುವುದು ಹೀಗೆ -
ಫ್ಯೂಚರ್ ಇಲ್ಲದ ಫ್ಯೂಚರ್ ಹಾಗೂ ಆಪ್ಶನ್ಸ್!
- F&O ಟ್ರೇಡ್ ಮಾಡುವವರಲ್ಲಿ 91% ಜನರು ನಷ್ಟ ಅನುಭವಿಸಿದ್ದಾರಂತೆ. ಒಟ್ಟೂ ನಷ್ಟವು 1.8 ಲಕ್ಷ ಕೋಟಿ ರೂಪಾಯಿಗಳು. ಸರಾಸರಿ, ಪ್ರತಿ F&O ಟ್ರೇಡರ್ ಕಳೆದುಕೊಂಡಿದ್ದು 2 ಲಕ್ಷ ರೂಪಾಯಿಗಳಷ್ಟು!
- ಕಳೆದ ಎರಡು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷ ಟ್ರೇಡಿಂಗ್ ಮಾಡುವವರು ಕಳೆದುಕೊಂಡ ಹಣವೆಷ್ಟು ಗೊತ್ತೆ? ಪ್ರತಿಯೊಬ್ಬರು ಸರಾಸರಿಯಾಗಿ 28 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ.
- ಟ್ರೇಡಿಂಗ್ ಮಾಡಿ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಮಾಡಿದವರ ಸಂಖ್ಯೆ ಕೇವಲ - 1%
ಈ ಎಲ್ಲ ಅಂಕಿಅಂಶಗಳನ್ನು ಸೆಬಿಯು ಕೊಟ್ಟಿದೆ. ಇದನ್ನು ನೋಡಿದ ಮೇಲೆ ನಿಮಗೆ ಏನನಿಸುತ್ತದೆ? ಆದರೆ ಕಾಮೆಂಟ್ ಮಾಡಿ.
ಒಂದು ಮಾತನ್ನು ಇಲ್ಲಿ ಹೇಳಬೇಕು:
ನನಗೆ ಪರಿಚಯ ಇರುವವರಲ್ಲಿ, ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿರುವವರಲ್ಲಿ 99% ಜನ F&O ನಲ್ಲಿ ಕೈ ಸುಟ್ಟುಕೊಂಡವರೇ. ನಾನು ಎಂತಹ ದಡ್ಡ ಅಂದರೆ ಇವತ್ತಿನ ತನಕ ಒಮ್ಮೆಯೂ F&O ಟ್ರೇಡ್ ಮಾಡಿಲ್ಲ, ನನಗೆ ಅದು ಅರ್ಥವೇ ಆಗುವುದಿಲ್ಲ. ಅವರೆಲ್ಲ ದಿನವೂ ಸಾವಿರಗಟ್ಟಲೆ ಲಾಭ ಗಳಿಸುತ್ತಿರುವಾಗ, ಒಮ್ಮೊಮ್ಮೆ ಲಕ್ಷ ಲಕ್ಷ ರೂಪಾಯಿಗಳ ಲಾಭವಾಯಿತು ಎನ್ನುತ್ತಿದ್ದಾಗ ನಾನು ಬೊದ್ದು ಗುಂಡನ ಹಾಗೆ ಮೂಲೆಯಲ್ಲಿ ಕೂತು ಯಾರೂ ಹೆಸರು ಕೇಳರಿಯದ ಕಂಪನಿಗಳ ವಾರ್ಷಿಕ ಪತ್ರವನ್ನು ಓದುತ್ತಿದ್ದೆ. ಏನೋ ಆಸಕ್ತಿ ಅಷ್ಟೇ. ಆದರೆ ದಿನವಿಡೀ ಫುಲ್ ಎಕ್ಸೈಟ್ ಆಗಿ ಟ್ರೇಡ್ , F&O ಆಟ ಆಡುತ್ತಾ ಮೋಜು ಮಾಡುತ್ತಿದ್ದವರು ಅವರು. ಅವರೆಲ್ಲ ಸಿಕ್ಕಾಪಟ್ಟೆ ಲಾಭವನ್ನು ಗಳಿಸಿ ಆಗರ್ಭ ಶ್ರೀಮಂತರಾಗಿ ಇನ್ನೇನು ಮರ್ಸಿಡಿಸ್ ಬೆನ್ಜ್ ಕಾರು ಖರೀದಿ ಮಾಡುವವರಿದ್ದಾರೆ ಎನ್ನುವಾಗ ಒಬ್ಬೊಬ್ಬರದ್ದೇ ನಷ್ಟದ ಕಥೆ ಹೊರಗೆ ಬರುತ್ತಾ ಹೋಯಿತು.
ಚಹಾ ಕುಡಿಯುವಾ ಒಬ್ಬ ಹೇಳಿದ, ಮಾರುಕಟ್ಟೆಯಲ್ಲಿ ಸಿಕ್ಕಾಗ ಇನ್ನೊಬ್ಬ ಅತ್ತ, ಅವಳಂತೂ ಗಂಗೆ ಯಮುನೆಯನ್ನೇ ರಸ್ತೆಯ ಮೇಲೆ ಹರಿಸಿ ಬಿಟ್ಟಿದ್ದಳು! ಅವರಲ್ಲಿ ಒಬ್ಬರೂ ಕೊನೆಗೆ ಒಂದು ರೂಪಾಯಿ ಲಾಭವನ್ನು ಗಳಿಸಿದವರಲ್ಲ. ಈಗ ಎಲ್ಲರೂ ಶಾಂತರಾಗಿದ್ದಾರೆ. ಎಷ್ಟು ದಿನವೋ ಈ ಒಳ್ಳೆಯ ಬುದ್ಧಿ ಗೊತ್ತಿಲ್ಲ. ಯಾಕೆಂದರೆ ಈ ಚಾಳಿ ಒಮ್ಮೆ ಅಂಟಿಕೊಂಡರೆ ಬೇಗ ಬಿಟ್ಟು ಹೋಗುವುದಲ್ಲ.
ಅದಕ್ಕೇ ಹೇಳುತ್ತಿದ್ದೇನೆ - F&O ಬಿಡಿ, ದುಡ್ಡು ಹೆಚ್ಚಾಗಿದ್ದರೆ ಮಾತ್ರ ಮಾಡಿ; ಕೆಲಸ ಮಾಡುವವರಾಗಿದ್ದರೆ ಟ್ರೇಡಿಂಗ್ ಎಲ್ಲ ಬೇಡ, ಶೇರು ಮಾರುಕಟ್ಟೆ ಬಗ್ಗೆ ಗೊತ್ತಿರದೆ ಅಲ್ಲಿ ಬೀಳಬೇಡಿ ಮಾರ್ರೆ. ಸುಮ್ಮನೆ ಒಂದಿಷ್ಟು ಎಫ್‌ಡಿ, ಚಿನ್ನ, ಜಾಗ, ಉಳಿದರೆ ಸಿಪ್...ಅಷ್ಟೇ!
ಇತ್ತೀಚೆಗೆ ಕೆಲವರು ತಮಗೆ ಇಷ್ಟು ಲಾಭ ಆಗಿದೆ, ಅಷ್ಟು ಲಾಭ ಆಗಿದೆ ಎನ್ನುವ ಸ್ಕ್ರೀನ್ ಶಾಟ್ ಹಾಕುತ್ತಾರೆ. ಯಾರಾದರೂ ಎರಡು ವರ್ಷಗಳ ಹಿಂದೆ 10 ಲಕ್ಷ ಹಾಕಿದ್ದೆ ಈಗ ಎರಡು ಕೋಟಿ ಆಗಿದೆ ಅಂದರೆ. ಜೀರೋಧಾ ಆ್ಯಪಿನ ಸ್ಕ್ರೀನ್ ಶಾಟ್ ತೋರಿಸದರೆ ಅದನ್ನು ನಂಬಬೇಡಿ, ನಂಬಿ ಕೆಡಬೇಡಿ. ಆ ತರಹದ ಎಲ್ಲ ಸ್ಕ್ರೀನ್ ಶಾಟ್ ಗಳು ಎಡಿಟ್ ಮಾಡಿದ್ದು. ಸುಂದರಿಗೆ ತಾನು ಸುಂದರಿ ಎಂದು ಹೇಳಿಕೊಳ್ಳ ಬೇಕಾಗುವುದಿಲ್ಲ, ಮೇಕಪ್ ಕೂಡ ಬೇಡ. ಒಂದು ಲೋಟ ನೀರಿರುವ ಕೊಡವೇ ಹೆಚ್ಚು ಸದ್ದು ಮಾಡುವುದು.
ನನಗೆ ಗೊತ್ತು - smoking is injurious to health - ಅಂತ ಬರೆದಿದ್ದರೂ ಜನ ಧೂಮಪಾನ ಮಾಡುತ್ತಾರೆ. ಹಾಗಂತ ಸುಮ್ಮನಿದ್ದರೆ ಹೇಗೆ, ಬೋರಿಂಗ್ ಪೋಸ್ಟ್ ಅಂತ ಅನಿಸಿದರೂ ಹೇಳಬೇಕು ಅನಿಸಿತು ಹೇಳಿದೆ. ರಾತ್ರಿ ಕಂಡ ಬಾವಿಗೆ ಹಗಲೇ ಹಾರುತ್ತೇನೆ ಎನ್ನುವವರನ್ನು ತಡೆಯಲು ಬಾವಿಯೇ ಎದ್ದು ಬಂದರೂ ಆಗುವುದಿಲ್ಲ!!!
| ವಿಕ್ರಮ್ ಜೋಷಿ, ಲೇಖಕ
ಕಣ್ತೆರೆಸುವಂತಿದೆ ಫೇಸ್‌ಬುಕ್ ಓದುಗರ ಪ್ರತಿಕ್ರಿಯೆ: “F&O ನಾನೂ ಕೂಡಾ ಬೇಡ ಅಂತಲೇ ಹೇಳುವುದು , ಈಕ್ವಿಟಿ ಬಗ್ಗೆಯೇ ಗಮನ ಕೊಡಿ , ನಾನು ಮೂರು ವರ್ಷದಿಂದ ಮಾಡಿದ ಹೂಡಿಕೆಯಲ್ಲಿ F&O ದಲ್ಲಿ ಓವರಾಲ್ ಲಾಸ್ ಅಲ್ಲಿ ಇಲ್ಲ ಆದರೆ ಅರ್ನ್ ಮಾಡಿದ ರೇಶ್ಯೂ ಈಕ್ವಿಟಿಗೆ ಹೋಲಿಸಿದ ನಂತರ ಸ್ಟಾಪ್ ಮಾಡಿ ಕೇವಲ ಇನ್ವೆಸ್ಟ್ ಮಾತ್ರ ಮಾಡ್ತಾ ಇದ್ದೇನೆ. ಬಂದರೆ ಹತ್ತು ಹತ್ತು ...ಹೋದಾಗ ಒಮ್ಮೆಲೆ ತೊಂಬತ್ತು” ಎಂದು ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಅವರು ಕಾಮೆಂಟ್ ಮಾಡಿದ್ದಾರೆ.
ಅದೇ ರೀತಿ, “ನೀವು ಬರೆದ ಈ ವಿಷಯದ ಬಗ್ಗೆಯೇ ನಾನು ಇವತ್ತು ವಿಡಿಯೋ ಮಾಡಿದ್ದು.. ಮಾಡಿದ್ದಕ್ಕೆ ಕಾರಣ ಇಂತಹ screenshot .. ಒಂದು ದಿನ ಮಾಡಿದ ಟ್ರೇಡ್ ತೋರಿಸಿ, ಅಥವಾ ಒಂದು ಲೆಗ್ ಇಲ್ಲಿ ಟ್ರೇಡ್ ಮಾಡಿ, ಒಪ್ಪೋಸಿಟ್ ಟ್ರೇಡ್ ಇನ್ನೊಂದು ಆಕೌಂಟಲ್ಲಿ ತೊಗೊಂಡು ತಾವು ಸೇಫ್ ಆಗಿ ಬೇರೆಯವರನ್ನು ಮಂಗ ಮಾಡುವ ಜನರು ಬೇಕಾದಷ್ಟು ಇದ್ದಾರೆ.. ಅವರನ್ನು ನಂಬಿ ಅತಿಯಾಸೆಗೆ ಬಿದ್ದು ಲಾಸ್ ಮಾಡಿಕೊಳ್ಳುವ ಜನರೂ ಅಷ್ಟೇ ಇದ್ದಾರೆ.. ಅವರು ಮಾಡಿಕೊಡ್ತಾರೆ, ಇವರು ಮಾಡ್ತಾರೆ ಅಂದವರತ್ರ ಆಯ್ತು ಮಾಡಿಸಿ ಸಾರ್ ಅನ್ನೋದು.. ದುಡ್ಡು ಕಳೆದುಕೊಂಡ ಮೇಲೆಯೇ ಕೆಲವರು ಬುದ್ಧಿ ಕಲಿಯೋದು.. ಹಾಗೆ ಕಲಿಯಿರಿ ಅಂತಾ ಬಿಡಬೇಕು” ಆಶಿಶ್ ಸಾರಡ್ಕ ಪ್ರತಿಕ್ರಿಯಿಸಿದ್ದಾರೆ.
ವಿಕ್ರಮ್ ಜೋಷಿ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ