ನನ್ನ ಮಗುವಿಗೆ 3 ವರ್ಷ ಈಗ, ಹೊಸ ಎನ್‌ಪಿಎಸ್ ವಾತ್ಸಲ್ಯದಲ್ಲಿ ತಿಂಗಳ 1000 ರೂ ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟಾಗಬಹುದು, ಲೆಕ್ಕ ಹೀಗಿದೆ
ಎನ್‌ಪಿಎಸ್ ವಾತ್ಸಲ್ಯ ಯೋಜನೆ ಇದೇ ಬುಧವಾರ (ಸೆಪ್ಟೆಂಬರ್ 18) ಜಾರಿಗೊಳ್ಳುತ್ತಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಏನು ಪ್ರಯೋಜನ, ನನ್ನ ಮಗುವಿಗೆ 3 ವರ್ಷ ಈಗ, ಹೊಸ ಎನ್‌ಪಿಎಸ್ ವಾತ್ಸಲ್ಯದಲ್ಲಿ ತಿಂಗಳ 1000 ರೂ ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟಾಗಬಹುದು ಎಂದು ಆಲೋಚಿಸುತ್ತಿದ್ದರೆ, ಸರಳ ಲೆಕ್ಕಾಚಾರದ ಮಾಹಿತಿಗಾಗಿ ಈ ಲೇಖನ ಗಮನಿಸಬಹುದು.
ಸದ್ಯ ನ್ಯಾಷನಲ್ ಪೆನ್ಶನ್ ಸ್ಕೀಮ್ ಅಥವಾ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಸುದ್ದಿಯಲ್ಲಿದೆ. ಈ ಯೋಜನೆ ಬುಧವಾರ (ಸೆಪ್ಟೆಂಬರ್ 18) ಜಾರಿಗೆ ಬರಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆ ಸೇರುವ ಮಕ್ಕಳಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (ಪಿಎಆರ್‌ಎನ್) ಕಾರ್ಡ್ ಅನ್ನು ಕೂಡ ಒದಗಿಸಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ವಿಸ್ತೃತ ಮತ್ತು ಕಡ್ಡಾಯ ಮಾರ್ಗಸೂಚಿ ಕೂಡ ಬಿಡುಗಡೆಯಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಜುಲೈನಲ್ಲಿ 2024-25ರ ಹಣಕಾಸು ವರ್ಷದ ಪೂರ್ಣ ಬಜೆಟ್ ಮಂಡಿಸುವಾಗ ಈ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.
ಮಕ್ಕಳ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಲು ಈ ಹೊಸ ಉಪಕ್ರಮವನ್ನು ಪ್ರಾರಂಭಿಸಲಾಗುತ್ತಿದೆ, ಇದು ದೇಶದ ಪಿಂಚಣಿ ವ್ಯವಸ್ಥೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರದ ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್‌ಡಿಎ) ನಿರ್ವಹಿಸುತ್ತದೆ.
ಮಗುವಿನ ಆರ್ಥಿಕ ಭವಿಷ್ಯ ಭದ್ರ ಪಡಿಸುವ ಯೋಜನೆ
ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ, ಪೋಷಕರು ಮಗುವಿನ ಹೆಸರಿನಲ್ಲಿ ವಾರ್ಷಿಕ ಕನಿಷ್ಠ 1000 ರೂ ಹೂಡಿಕೆ ಮಾಡಬಹುದು. ಇದರಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಇದಕ್ಕೆ ಯಾವುದೇ ವಾರ್ಷಿಕ ಆದಾಯ ಮಿತಿ ಇಲ್ಲ. ದೀರ್ಘಾವಧಿಯ ಹೂಡಿಕೆಯಾದ ಕಾರಣ ಚಕ್ರಬಡ್ಡಿ ಈ ಹಣವನ್ನು ದೊಡ್ಡಮೊತ್ತವನ್ನಾಗಿಸುತ್ತದೆ.
ಮಗುವಿಗೆ 18 ವರ್ಷ ತುಂಬಿದಾಗ ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಎನ್‌ಪಿಎಸ್‌ಯೇತರ ಯೋಜನೆಯನ್ನಾಗಿ ಪರಿವರ್ತಿಸಬಹುದು. ನಿಯತ ಎನ್‌ಪಿಎಸ್ ಯೋಜನೆಯು ನಿವೃತ್ತಿ ನಿಧಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಎನ್‌ಪಿಎಸ್‌ನಲ್ಲಿ ಹೂಡಿಕೆಯಾಗುವ ಹಣವನ್ನು ಹೆಚ್ಚಿನ ಆದಾಯ ಸೃಜನೆಗಾಗಿ ಷೇರುಗಳು ಮತ್ತು ಬಾಂಡ್‌ಗಳಂತಹ ಮಾರುಕಟ್ಟೆ-ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ತಿಂಗಳಿಗೆ 1,000 ರೂಪಾಯಿ ಎಸ್‌ಐಪಿ ಮಾಡಿದ್ರೆ ಮಗುವಿಗೆ 18 ವರ್ಷ ಆದಾಗ ಎಷ್ಟಾಗಬಹುದು
ಹೊಸ ಎನ್‌ಪಿಎಸ್ ವಾತ್ಸಲ್ಯದ ಬಗ್ಗೆ ಕುತೂಹಲ ಹೆಚ್ಚಾಗುವುದು ಸಹಜ. ಮಗುವಿನ ಆರ್ಥಿಕ ಭದ್ರತೆಗೆ ಇದು ಹೆಚ್ಚು ಪ್ರಯೋಜನವಾಗಬಹುದಾ ಎಂದು ಹುಡುಕಾಡುವುದು ಕೂಡ ಕಾಣುತ್ತೇವೆ. ಈ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಪಾಲಕರು ಮಗುವಿನ ಹೆಸರಿನಲ್ಲಿ ಖಾತೆ ತೆರೆದರೆ ಹೇಗೆ ಎಂದು ಆಲೋಚಿತ್ತಿರುವವರಿಗಾಗಿ ಉದಾಹರಣೆಗಾಗಿ ಒಂದು ಲೆಕ್ಕಾಚಾರ ಕೊಡಬಹುದು.
ನನ್ನ ಮಗುವಿಗೆ ಈಗ 3 ವರ್ಷ. ಹೊಸ ಎನ್‌ಪಿಎಸ್ ವಾತ್ಸಲ್ಯ ಖಾತೆ ತೆರೆದು ಪ್ರತಿ ತಿಂಗಳು 1,000 ರೂಪಾಯಿ ಜಮೆ ಮಾಡುತ್ತ ಹೋದರೆ ಮಗುವಿಗೆ 18 ವರ್ಷ ತುಂಬಿದಾಗ ಅಂದರೆ 15 ವರ್ಷ ಬಿಟ್ಟು ಆ ದುಡ್ಡು ಎಷ್ಟಾಗಬಹುದು? - ಲೆಕ್ಕಾಚಾರ ಹೀಗಿದೆ. ತಿಂಗಳ 1,000 ರೂಪಾಯಿ ಅಂದರೆ ವರ್ಷಕ್ಕೆ 12,000 ರೂಪಾಯಿ ಆಗುತ್ತೆ. ಹೂಡಿಕೆ ಮೊತ್ತ 1,80,000 ರೂಪಾಯಿ. ಕೈಗೆ ಸೇರುವ ಮೊತ್ತ 6,30,000 ರೂಪಾಯಿ ಆಗಬಹುದು.
ಈ ಲೆಕ್ಕಾಚಾರಕ್ಕಾಗಿ ಕೆಲವು ಪೆನ್ಶನ್ ಫಂಡ್‌ಗಳನ್ನು ಉಲ್ಲೇಖಿಸಬಹುದು.
ಪೆನ್ಶನ್ ಫಂಡ್‌ಗಳಲ್ಲಿ 1,000 ರೂಪಾಯಿ ಎಸ್‌ಐಪಿಗೆ 15 ವರ್ಷ ಬಳಿಕದ ರಿಟರ್ನ್ಸ್
ಫಂಡ್ | ಶೇಕಡಾವಾರು ರಿಟರ್ನ್ಸ್ (ಅಂದಾಜು) | ಹೂಡಿಕೆ ಮೊತ್ತ | ಒಟ್ಟು ಮೌಲ್ಯ (ಅಂದಾಜು) |
ಯುಟಿಐ ಪೆನ್ಶನ್ ಫಂಡ್ | 14.28 | 180000 | 630000 |
ಎಚ್‌ಡಿಎಫ್‌ಸಿ ಪೆನ್ಶನ್ ಮ್ಯಾನೇಜ್‌ಮೆಂಟ್ | 14.15 | 180000 | 622000 |
ಕೊಟಾಕ್ ಮಹಿಂದ್ರಾ ಪೆನ್ಶನ್ ಫಂಡ್ | 14 | 180000 | 613000 |
ಐಸಿಐಸಿಐ ಪ್ರುಡೆನ್ಶಿಯಲ್ ಪೆನ್ಶನ್ ಫಂಡ್ | 13.97 | 180000 | 611000 |
ಎಸ್‌ಬಿಐ ಪೆನ್ಶನ್ ಫಂಡ್ | 13.25 | 180000 | 569300 |
ಎಲ್‌ಐಸಿ ಪೆನ್ಶನ್ ಫಂಡ್ | 13.02 | 180000 | 556700 |
ಎನ್‌ಪಿಎಸ್ ಯೋಜನೆ ಎಂದರೆ
ನ್ಯಾಷನಲ್ ಪೆನ್ಶನ್ ಸ್ಕೀಮ್ (ಎನ್‌ಪಿಎಸ್) ಎಂಬುದು ಪಿಂಚಣಿಗೆ ಸಂಬಂಧಿಸಿದ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡಬೇಕಾದರೆ ಸಿಆರ್‌ಎ ಖಾತೆ ತೆೆರೆಯಬೇಕು. ಈ ರೀತಿ ಖಾತೆ ಹೊಂದಿರುವವರಿಗೆ ವಿಶಿಷ್ಟ ಶಾಶ್ವತ ನಿವೃತ್ತಿ ಕಾತೆ ಸಂಖ್ಯೆ (ಪಿಆರ್‌ಎಎನ್) ನೀಡಲಾಗುತ್ತದೆ. ಎನ್‌ಪಿಎಸ್‌ನಲ್ಲಿ ಶ್ರೇಣಿ ಒಂದು ಮತ್ತು ಶ್ರೇಣಿ ಎರಡು ಎಂಬ ಎರಡು ವಿಧ ಇದ್ದು, ಎನ್‌ಪಿಎಸ್ ಶ್ರೇಣಿ 1ರಲ್ಲಿ ನಿವೃತ್ತಿಗಾಗಿ ಮಾಡಿರುವ ಹಣವನ್ನು ಮಧ್ಯದಲ್ಲಿ ಹಿಂತೆಗೆದುಕೊಳ್ಳುವ ಅವಕಾಶ ಇರುವುದಿಲ್ಲ. ಶ್ರೇಣಿ ಎರಡರ ಎನ್‌ಪಿಎಸ್ ಖಾತೆಯಲ್ಲಿ ತಮ್ಮ ಉಳಿತಾಯವನ್ನು ಯಾವಾಗ ಬೇಕಾದರೂ ಹಿಂಪಡೆಯಲು ಅವಕಾಶವಿದೆ. ಹಣಕಾಸು ದೃಷ್ಟಿಯಿಂದ ಉದ್ಯೋಗಿಯು ನಿವೃತ್ತಿ ಬಳಿಕ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅಥವಾ ತಿಂಗಳಿಗೆ ಇಂತಿಷ್ಟು ಎಂದು ಪಡೆಯುವ ಅವಕಾಶವನ್ನು ಎನ್‌ಪಿಎಸ್ ಒದಗಿಸುತ್ತದೆ.