ಚಳಿಗಾಲದಲ್ಲಿ ಮಗುವಿಗೆ ಬಾಡಿ ಮಸಾಜ್ ಮಾಡುವಾಗ ಹೇಗೆ ಜಾಗ್ರತೆ ವಹಿಸಬೇಕು, ಎಣ್ಣೆ ಮಸಾಜ್‌ನಿಂದ ಏನು ಉಪಯೋಗ?
Dec 21, 2024 05:01 PM IST
ಚಳಿಗಾಲದಲ್ಲಿ ಮಗುವಿಗೆ ಬಾಡಿ ಮಸಾಜ್ ಮಾಡುವಾಗ ವಹಿಸಬೇಕಾದ ಮುನ್ನೆಚರಿಕೆಗಳು
ಮಕ್ಕಳು ಆರೋಗ್ಯವಾಗಿ ಬೆಳೆಯಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ. ಅದಕ್ಕಾಗಿ ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸುವುದು, ಎಣ್ಣೆ ಮಸಾಜ್ ಮಾಡುವುದು ಎಂದರೆ ಅಮ್ಮಂದಿರಿಗೆ ಇನ್ನಿಲ್ಲದ ಉತ್ಸಾಹ. ಆದರೆ ಚಳಿಗಾಲದಲ್ಲಿ ಮಸಾಜ್ ಮಾಡಬಹುದೇ? ಏನು ಮುನ್ನಚರಿಕೆ ತೆಗೆದುಕೊಳ್ಳಬೇಕು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಒಂದು ವರ್ಷದೊಳಗಿನ ಶಿಶುಗಳಿಗೆ ಮಸಾಜ್ ಅತ್ಯಗತ್ಯ. ಆದರೆ ಅನೇಕ ತಾಯಂದಿರು ಮಸಾಜ್ ಮಾಡಬೇಕೇ ಅಥವಾ ಬೇಡವೇ ಎಂದು ಅನುಮಾನಿಸುತ್ತಾರೆ ಏಕೆಂದರೆ ಚಳಿಗಾಲದಲ್ಲಿ ಹವಾಮಾನವು ತಂಪಾಗಿರುತ್ತದೆ. ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡಬಹುದು ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದು ಹೇಗೆ ಎಂದು ತಿಳಿಯೋಣ.
ಒಂದು ವರ್ಷದೊಳಗಿನ ಮಕ್ಕಳಿಗೆ ಬಾಡಿ ಮಸಾಜ್ ಬಹಳ ಮುಖ್ಯ. ಮಸಾಜ್ ಮಾಡುವುದರಿಂದ ಮಕ್ಕಳಿಗೆ ವಿಶ್ರಾಂತಿ ದೊರೆಯುತ್ತದೆ. ಅವುಗಳ ಬೆಳವಣಿಗೆಯೂ ಹೆಚ್ಚುತ್ತದೆ. ಆದರೆ ಚಳಿಗಾಲ ಬಂದಾಗ ಅನೇಕ ತಾಯಂದಿರಿಗೆ ಮಗುವಿಗೆ ಮಸಾಜ್ ಮಾಡುವುದೋ ಬೇಡವೋ ಎಂಬ ಅನುಮಾನವಿರುತ್ತದೆ. ಹವಾಮಾನವು ತಂಪಾಗಿರುವ ಕಾರಣ ನೀವು ಮಗುವಿಗೆ ಮಸಾಜ್ ಮಾಡಬಹುದೇ? ಇದರಿಂದ ಮಗುವಿಗೆ ಶೀತವಾಗಬಹುದಾ ಎಂಬ ಅನುಮಾನ ಮೂಡುತ್ತದೆ. ಸೂಕ್ತ ಮಾಹಿತಿ ಇಲ್ಲದೆ ಅನೇಕರು ಮಗುವಿಗೆ ಮಸಾಜ್ ಮಾಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಆದರೆ ಇತರ ಹವಾಮಾನಗಳಂತೆ ಚಳಿಗಾಲದಲ್ಲಿ ಕೂಡಾ ಮಗುವಿನ ಮಸಾಜ್ ತುಂಬಾ ಅವಶ್ಯಕ ಎಂದು ಮಕ್ಕಳ ವೈದ್ಯರು ಹೇಳುತ್ತಾರೆ. ಕೆಲವು ಮುನ್ನೆಚ್ಚರಿಕೆಗಳೊಂದಿಗೆ ಮಗುವಿಗೆ ಮಸಾಜ್ ಮಾಡುವುದರಿಂದ ಮಗು ಹೆಚ್ಚು ಆರೋಗ್ಯಕರವಾಗಿರುತ್ತದೆ.
ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಮಸಾಜ್ ಮಾಡುವುದು ಹೇಗೆ?
ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ
ಚಳಿಗಾಲದಲ್ಲಿ ಅಥವಾ ಇತರ ಸಮಯಗಳಲ್ಲಿ ಮಗುವಿಗೆ ಮಸಾಜ್ ಮಾಡುವಾಗ ಪ್ರತಿ ಬಾರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡುವುದನ್ನು ಮರೆಯಬೇಡಿ. ಬೆಚ್ಚಗಿನ ಎಣ್ಣೆಯನ್ನು ತೆಗೆದುಕೊಂಡು ಮಗುವಿನ ದೇಹಕ್ಕೆ ಮಸಾಜ್ ಮಾಡುವುದರಿಂದ ವಾತಾವರಣ ತಂಪಾಗಿದ್ದರೂ ಮಗುವಿಗೆ ಶೀತವಾಗುವುದಿಲ್ಲ.
ಮಕ್ಕಳ ಬಟ್ಟೆ ತೆಗೆಯಬೇಡಿ
ಮಸಾಜ್ ಮಾಡುವಾಗ ಕೆಲವರು ಮಗುವಿನ ಮೈ ಮೇಲೆ ಪೂರ್ತಿ ಬಟ್ಟೆಗಳನ್ನು ತೆಗೆದು ಸ್ನಾನ ಮಾಡಿಸುವವರೆಗೂ ಹಾಗೇ ಬಿಡುತ್ತಾರೆ. ಆದರೆ ಚಳಿಗಾದಲ್ಲಿ ಈ ರೀತಿ ಮಾಡುವುದರಿಂದ ಮಕ್ಕಳಿಗೆ ಶೀತ ಆಗಬಹುದು. ಆದ್ದರಿಂದ ಮಸಾಸ್ ಮಾಡುತ್ತಿದ್ದಂತೆ ಮಗುವಿಗೆ ಬಟ್ಟೆ ಹಾಕಿ. ಸಾಧ್ಯವಾದಷ್ಟು ಬಟ್ಟೆ ಪೂರ್ತಿ ತೆಗೆಯದೆ ಸಿಂಪಲ್ ಆಗಿ ಚರ್ಮದ ಮೇಲೆ ಕೈ ಆಡಿಸುವ ಮೂಲಕ ಮಸಾಜ್ ಮಾಡಿ.
ಕೋಣೆಯ ವಾತಾವರಣ ಬೆಚ್ಚಗಿರಲಿ
ಚಳಿಗಾಲದಲ್ಲಿ ಮಸಾಜ್ ಆರಂಭಿಸುವ ಮುನ್ನ ಫ್ಯಾನ್ ಅಥವಾ ಎಸಿ ಆಫ್ ಮಾಡಿ. ಕಿಟಕಿಗಳನ್ನು ಕೂಡಾ ಮುಚ್ಚಿ. ರೂಮ್ ವಾತಾವರಣ ಬೆಚ್ಚಗೆ ಇರಲು ಹೀಟರ್ ಅಥವಾ ಬ್ಲೋವರ್ ಆನ್ ಮಾಡಿ. ಇದರಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ. ಶೀತವೂ ಆಗುವುದಿಲ್ಲ.
ಪ್ಲಾಸ್ಟಿಕ್ ಅಥವಾ ಹತ್ತಿ ಶೀಟ್ ಮೇಲೆ ಮಲಗಿಸಬೇಡಿ
ಮಗುವನ್ನು ಹಾಸಿಗೆಯಲ್ಲಿ ಮಲಗಿಸಬೇಕಾದರೆ ನೇರವಾಗಿ ಹತ್ತಿ ಅಥವಾ ಪ್ಲಾಸ್ಟಿಕ್ ಹಾಳೆಗಳ ಮೇಲೆ ಮಲಗಿಸಬೇಡಿ.ಇದರಿಂದ ಮಗುವಿಗೆ ತಣ್ಣನೆಯ ಅನುಭವವಾಗುತ್ತದೆ. ಮಗುವನ್ನು ಮಲಗಿಸಲು ಮೃದುವಾದ ಉಣ್ಣೆಯ ಬಟ್ಟೆ ಬಳಸಿ, ಇದರಿಂದ ಮಗುವಿಗೆ ಶೀತ ಅನಿಸುವುದಿಲ್ಲ ಮತ್ತು ಮಸಾಜ್ ಮಾಡಲು ಕಷ್ಟವಾಗುವುದಿಲ್ಲ. ಕಂದನಿಗೂ ಕಂಫರ್ಟ್ ಫೀಲ್ ಆಗುತ್ತದೆ.
ಮಗುವಿಗ್ ಮಸಾಜ್ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು
- ಮಕ್ಕಳಿಗೆ ಮಸಾಜ್ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
- ಮಕ್ಕಳ ಸ್ನಾಯುಗಳನ್ನು ಮೃದು ಮತ್ತು ಬಲವಾಗಿ ಮಾಡುತ್ತದೆ.
- ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನು ಸುಧಾರಿಸುತ್ತದೆ.
- ಮಸಾಜ್, ನರಗಳನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ದೇಹದ ಆಕಾರ ಚೆನ್ನಾಗಿರುತ್ತದೆ.
- ಮಸಾಜ್ ಮಾಡುವುದರಿಂದ ಮಕ್ಕಳು ಮಾನಸಿಕವಾಗಿ ಸದೃಢರಾಗುತ್ತಾರೆ. ಪರಿಣಾಮವಾಗಿ,ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ.
- ಮಗುವಿಗೆ ಮಸಾಜ್ ಮಾಡುವುದರಿಂದ ಅವರ ಚರ್ಮ ಮೃದುವಾಗುತ್ತದೆ. ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಉತ್ತಮ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ.
- ಮಗುವಿನ ಮಸಾಜ್ ಒತ್ತಡ, ಚರ್ಮ ರೋಗಗಳು ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಹೆಚ್ಚಿನ ಮಾಹಿತಿಗೆ ಮಕ್ಕಳ ವೈದ್ಯರನ್ನು ಸಂಪರ್ಕಿಸಿ