Relationship: ದಾಂಪತ್ಯ ಜೀವನವನ್ನು ಸದಾ ಸಂತೋಷವಾಗಿಡುವ 8 ರಹಸ್ಯಗಳಿವು; ನೀ ನನಗೆ, ನಾ ನಿನಗೆ ಎನ್ನುತ್ತಾ ಸಾಗಲಿ ಸಂಸಾರದ ದೋಣಿ
Oct 27, 2023 10:23 AM IST
ದಾಂಪತ್ಯ ಜೀವನವನ್ನು ಸದಾ ಸಂತೋಷವಾಗಿಡುವ 8 ರಹಸ್ಯಗಳಿವು
- ಮದುವೆ ಎನ್ನುವ ಬಾಂಧವ್ಯ ವೃದ್ಧಿಯಾಗಲು ಹಲವು ಅಂಶಗಳು ಮುಖ್ಯವಾಗುತ್ತದೆ. ಸಾಂಸಾರಿಕ ಬಂಧನದಲ್ಲಿ ಪ್ರೀತಿ ಬಹಳ ಮುಖ್ಯ, ಆದರೆ ಪ್ರೀತಿಯೊಂದೇ ಸಂಬಂಧದಲ್ಲಿ ಎಲ್ಲವೂ ಅಲ್ಲ. ದಾಂಪತ್ಯ ಜೀವನ ಸದಾ ಸಂತೋಷದಿಂದ ಕೂಡಿದ್ದು, ದೀರ್ಘಾಕಾಲ ಮುಂದುವರಿಯಬೇಕು ಎಂದರೆ ಈ ರಹಸ್ಯ ಪಾಲಿಸಿ.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ನಮಗಾಗಿ ಒಂದು ಜೀವ ಇದೆ, ಆ ಜೀವ ನಮಗಾಗಿಯೇ ಬದುಕುತ್ತದೆ ಎನ್ನುವ ಭಾವವನ್ನು ಮನದಲ್ಲಿ ಮೂಡುವಂತೆ ಮಾಡುವುದು ಮದುವೆ. ಮದುವೆ ಎಂಬ ಬಂಧನವು ಪ್ರೀತಿ, ಪ್ರೇಮ, ಸ್ನೇಹ, ಜಗಳ, ಕೋಪ ಈ ಎಲ್ಲಾ ಭಾವನೆಗಳ ಸಮ್ಮಿಲನ.
ಸಂಸಾರ ಎನ್ನುವ ದೋಣಿಯಲ್ಲಿ ಯಾವುದೇ ಬಿರುಗಾಳಿ, ನೆರೆಗೆ ಸಿಲುಕದೇ ಸಾಗಬೇಕು ಎಂದರೆ ದಂಪತಿಗಳ ನಡುವೆ ಕೆಲವು ಅಗತ್ಯ ಅಂಶಗಳಿರಬೇಕು. ಈ ಅಂಶಗಳು ಸಂತೋಷ ಹಾಗೂ ಯಶಸ್ವಿ ದಾಂಪತ್ಯ ಜೀವನದ ಆಧಾರ ಸ್ತಂಭಗಳಾಗಿವೆ. ಮದುವೆ ಅಥವಾ ಸಂಸಾರ ಜೀವನ ಸುಸೂತ್ರವಾಗಿ ಸಾಗಲು ಹಾಗೂ ಸಂಬಂಧ ದೀರ್ಘಕಾಲ ಮುಂದುವರಿಯಲು ಕೆಲವು ಮೂಲಭೂತ ತತ್ವಗಳು ಬಹಳ ಮುಖ್ಯವಾಗುತ್ತವೆ. ಸಾಂಸಾರಿಕ ಜೀವನದಲ್ಲಿ ದೀರ್ಘಕಾಲ ಸಂತಸ ಇರಬೇಕು ಎಂದರೆ ಸಂಬಂಧದಲ್ಲಿ ಗೌರವದ ಜೊತೆಗೆ ಬದ್ಧತೆ ಹಾಗೂ ಪ್ರೀತಿಯೂ ಬಹಳ ಮುಖ್ಯ. ಇದು ಮದುವೆ ಸಂಬಂಧದಲ್ಲಿ ಪ್ರೀತಿ ಹಾಗೂ ಗೌರವ ಮೂಡಲು ತಳಹದಿಯಾಗುತ್ತದೆ. ಆದರೆ ಇಬ್ಬರಲ್ಲೂ ಇಬ್ಬರ ಮೇಲೂ ಈ ಭಾವನೆ ಇರಬೇಕು.
ʼಸಂಸಾರದಲ್ಲಿ ಕೆಲವು ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಅವು ನಮಗೆ ತಿಳಿಯದಂತೆ ಸಂಸಾರದ ಬಂಧನವನ್ನು ಗಟ್ಟಿಗೊಳಿಸುತ್ತಾ ಹೋಗುತ್ತವೆ. ಮೊದಲು ನಿಮ್ಮ ಸಂಗಾತಿಯ ಮೇಲೆ ವಾತ್ಸಲ್ಯ ಹೊಂದಿರಬೇಕು. ಅಪ್ಪುಗೆ, ಚುಂಚನ ಹಾಗೂ ಕಿರುನಗೆ ಇವು ಸರಳ ಸಂಜ್ಞೆಯಾಗಿ ಕಾಣಬಹುದು. ಆದರೆ ಸಂಬಂಧದಲ್ಲಿ ಇವು ಬಹಳ ಅರ್ಥಪೂರ್ಣ ಎನ್ನಿಸಿಕೊಳ್ಳುತ್ತವೆ. ಇವು ನಿಮ್ಮ ಸಂಗಾತಿಯ ದಿನ ಉತ್ಸಾಹದಿಂದ ಕಳೆಯುವಂತೆ ಮಾಡುವ ತಂತ್ರಗಳಾಗಿವೆ. ಮದುವೆಯಾದ ಮೇಲೆ ʼನಾನುʼ ಎಂಬುದಲ್ಲ, ʼನಾವುʼ ಎಂಬುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ಮ್ಯಾರೇಜ್ ಕೋಚ್ ಅಮಂಡಾ ಟ್ವಿಗ್ಸ್. ಇವರು ಸಾಂಸಾರಿಕ ಜೀವನದ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.
ʼಯಾವುದೇ ಸಂಬಂಧದಲ್ಲಿ ಸಂವಹನ ಬಹಳ ಮುಖ್ಯ ಎನ್ನಿಸುತ್ತದೆ. ಇದು ಮಹತ್ವದ್ದು ಕೂಡ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮನಸ್ಸು ಬಿಚ್ಚಿ ಮಾತನಾಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಮನಸ್ಸಿನ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನಂತರ ಬರುವುದು ಅನ್ಯೋನ್ಯತೆ. ಅನ್ಯೋನ್ಯತೆ ಎಂದರೆ ದೈಹಿಕವಾಗಿ ಒಂದಾಗುವುದು ಮಾತ್ರವಲ್ಲ, ಭಾವನಾತ್ಮಕವಾಗಿಯೂ ತಮ್ಮ ಸಂಗಾತಿಗೆ ನಾವು ಹತ್ತಿರವಾಗಬೇಕು. ಲೈಂಗಿಕ ಜೀವನವು ಮದುವೆಯ ಭಾಗ. ಆರೋಗ್ಯಕರ ಲೈಂಗಿಕ ಜೀವನ ನಡೆಸುವುದು ಸಾಂಸಾರಿಕ ಬಂಧನದಲ್ಲಿ ಮುಖ್ಯವಾಗುತ್ತದೆ. ಇದರೊಂದಿಗೆ ಕಾಳಜಿ, ಪ್ರೀತಿ, ಮೆಚ್ಚುಗೆ ಈ ಎಲ್ಲವೂ ಸಂಸಾರವನ್ನು ಭದ್ರವಾಗಿಸುವ ಸೂತ್ರಗಳಾಗಿವೆʼ ಎನ್ನುತ್ತಾರೆ ಅಮಂಡಾ.
ಅಮಂಡಾ ಅವರ ಪ್ರಕಾರ ಸಂಬಂಧದಲ್ಲಿ ನಿಷ್ಠೆಯಿಂದ ಇರುವುದು ಬಹಳ ಮುಖ್ಯ. ಯಾವುದೇ ಸಂಬಂಧ ದೀರ್ಘಕಾಲ ಅಲುಗಾಡದಂತೆ ಭದ್ರವಾಗಿರಲು ನಂಬಿಕಯೆಂಬ ತಳಹದಿ ಗಟ್ಟಿಯಾಗಿರಬೇಕು. ಇದರೊಂದಿಗೆ ಪ್ರೀತಿ ಕೂಡ ಅವಶ್ಯ. ಅವರು ಊಹಿಸದಷ್ಟು ಪ್ರೀತಿ ನೀಡಬೇಕು. ಪ್ರತಿದಿನ ಪ್ರೀತಿ ತೋರುವುದು ಮುಖ್ಯವಾಗುತ್ತದೆ. ಇವೆಲ್ಲದರ ಜೊತೆಗೆ ಪ್ರಶಂಸೆ ಹಾಗೂ ದೃಢೀಕರಣ ಕೂಡ ಮುಖ್ಯವಾಗುತ್ತದೆ. ಆತ್ಮವಿಶ್ವಾಸ ಹಾಗೂ ಆತ್ಮಗೌರವ ಹೆಚ್ಚುವಂತೆ ಮಾಡುವುದು ಕೂಡ ಮದುವೆಯ ಸಂಬಂಧಕ್ಕೆ ಒಂದು ಪಾಸಿಟಿವ್ ವೈಬ್ ಸೃಷ್ಟಿಸಲು ಕಾರಣವಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿ, ಗೌರವ ತೋರುವ ಮೂಲಕ ಇಂದು ವಿಶೇಷ ಬಾಂಧವ್ಯ ಸೃಷ್ಟಿಗೆ ಕಾರಣವಾಗಬೇಕು.
ಮದುವೆಯ ಬಂಧವನ್ನು ಗಟ್ಟಿಯಾಗಿಸುವ 8 ರಹಸ್ಯಗಳಿವು
ಒಲವು ಮುಖ್ಯ: ಮದುವೆಯಾಗಿ ಎಷ್ಟು ವರ್ಷಗಳು ಸಂದರೂ ಮದುವೆಯ ಮೊದಲ ದಿನದಂತೆ ಪ್ರೀತಿ ತೋರುವುದು ಮುಖ್ಯವಾಗುತ್ತದೆ. ಸಂಬಂಧ ಮೇಲೆ ಒಲವು ಹೊಂದಿರುವುದು ಅವಶ್ಯ. ಪ್ರೀತಿಯ ಅಪ್ಪುಗೆ, ಸಿಹಿ ಮುತ್ತು ಸಂಬಂಧ ಹಸಿರಾಗಿರುವಂತೆ ಮಾಡುತ್ತದೆ.
ಒಗ್ಗೂಡಿ ಇರುವುದು: ಮದುವೆ ಎನ್ನುವುದು ಟೀಮ್‌ವರ್ಕ್‌ನಂತೆ. ಮದುವೆಯಾದ ಮೇಲೆ ಯಾವುದೇ ಸಂದರ್ಭವನ್ನು ಇಬ್ಬರೂ ಜೊತೆಯಾಗಿಯೇ ಎದುರಿಸಬೇಕು. ಮದುವೆಯಾದ ಎಂದಿಗೂ ನಾನು ಎನ್ನುವುದು ಬರಬಾರದು. ನಾವು ಎಂಬುದಷ್ಟೇ ಮನಸ್ಸಿನಲ್ಲಿ ಉಳಿಯಬೇಕು.
ಸಂವಹನ: ಮುಕ್ತ ಮಾತುಕತೆಯಿಂದ ಬದುಕಿನಲ್ಲಿ ಏನನ್ನೂ ಬೇಕಾದರೂ ಜಯಿಸಬಹುದು. ಮಾತುಕತೆಯ ಮೂಲಕ ಆಸೆ, ಆಕಾಂಕ್ಷೆ, ಕನಸು, ಗುರಿಗಳ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಸದಾ ಮುಕ್ತವಾಗಿ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಅನ್ಯೋನ್ಯತೆ: ಭಾವನಾತ್ಮಕ ಅನ್ಯೋನ್ಯತೆ ಹೊಂದುವುದು ಸಂಬಂಧದಲ್ಲಿ ಬಹಳ ಮುಖ್ಯವಾಗುತ್ತದೆ. ಇದು ಆಳವಾದ ಪ್ರೀತಿ ಸಂಪರ್ಕಕ್ಕೆ ಅಡಿಪಾಯವಾಗಿದೆ.
ದಯೆ, ಕರುಣೆ: ನಿಮ್ಮ ಸಂಗಾತಿಯ ಮೇಲೆ ದಯೆ ಕರುಣೆ ಹೊಂದಿರುವುದು ಸಂಬಂಧವನ್ನು ಗಟ್ಟಿಗೊಳಿಸಲು ಬುನಾದಿಯಾಗುತ್ತದೆ.
ನಿಷ್ಠೆ, ನಂಬಿಕೆ: ನೀವು ಸಂಬಂಧಗೆ ಬದ್ಧತೆಗೆ ನಿಷ್ಠರಾಗಿರಬೇಕು. ನಿಷ್ಠೆಯು ನಂಬಿಕೆಯ ಮೂಲಾಧಾರವಾಗಿದೆ.
ಪ್ರೀತಿ: ಪ್ರೀತಿಗೆ ಅಂತ್ಯವಿರಬಾರದು. ಪ್ರತಿದಿನ, ಪ್ರತಿಕ್ಷಣ ನಿಮ್ಮ ಸಂಗಾತಿಯನ್ನು ಪ್ರೀತಿಸಬೇಕು. ಸಂಕೇತಗಳ ಮೂಲಕ ಪ್ರತಿದಿನ ಪ್ರೀತಿಯನ್ನು ವ್ಯಕ್ತಪಡಿಸಬೇಕು.
ಮೆಚ್ಚುಗೆ: ಒಬ್ಬರಿಗೊಬ್ಬರು ಮೆಚ್ಚುಗೆ ಸೂಚಿಸಲು ಮರೆಯದಿರಿ. ಇದು ಆತ್ಮಗೌರವ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುತ್ತದೆ.
ಇದನ್ನೂ ಓದಿ
Best Couple: ಜನ್ಮರಾಶಿಗೆ ಅನುಗುಣವಾಗಿ ಈ ರಾಶಿಯವರೇ ನೋಡಿ ಬೆಸ್ಟ್ ಜೋಡಿ ಆಗೋದು; ಈ ಎರಡು ರಾಶಿಗಳು ಒಂದಾದ್ರೆ ಬದುಕೆಲ್ಲಾ ಹಾಲು ಜೇನು
Relationship: ಅನ್ಯೋನ್ಯತೆಗೆ ಅಡ್ಡಿಯಾಗದಿರಲಿ ನಡವಳಿಕೆ; ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುವ ವರ್ತನೆಗಳಿವು
Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ
Relationship: ಮದುವೆಯಾಗಲು ಯೋಚಿಸಿದ್ದೀರಾ; ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು
ವಿಭಾಗ