ಪರ, ವಿರೋಧ, ಸ್ಪಷ್ಟನೆ: ನವೋದಯ ಶಾಲೆ ಹೊಗಳಿದ್ದಕ್ಕೆ ಇಷ್ಟೆಲ್ಲಾ ನೀತಿಬೋಧನೆ ಬೇಕಿತ್ತೆ? ಚರ್ಚೆ ಹುಟ್ಟುಹಾಕಿದ ಸಾಹಿತಿ ವಸುಧೇಂದ್ರ ಬರಹ
Sep 20, 2024 04:06 PM IST
ನವೋದಯ ಶಾಲೆ (ಸಾಂಕೇತಿಕ ಚಿತ್ರ) ಸಾಹಿತಿ ವಸುಧೇಂದ್ರ (ಬಲಚಿತ್ರ)
- ಕಳೆದೊಂದು ದಿನದ ಹಿಂದೆ ಸಾಹಿತಿ ವಸುಧೇಂದ್ರ ನವೋದಯ ಶಾಲೆ ಹಾಗೂ ಅಲ್ಲಿ ಓದಿರುವ ವಿದ್ಯಾರ್ಥಿಗಳ ಬಗ್ಗೆ ಹೊಗಳಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ಆ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪರ–ವಿರೋಧವೂ ವ್ಯಕ್ತವಾಗಿತ್ತು. ಈ ವಿಚಾರವಾಗಿ ಇನ್ನೊಂದು ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ ವಸುಧೇಂದ್ರ.
ನಿನ್ನೆಯ ನನ್ನ ನವೋದಯ ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಬರೆದ ಪೋಸ್ಟ್ ವಿಚಿತ್ರ ಗೊಂದಲಗಳನ್ನು ಸೃಷ್ಟಿಸಿದಂತಿದೆ. ಶಾಲೆಯೊಂದರಿಂದ ಹಲವಾರು ಒಳ್ಳೆಯ ಸಾಹಿತಿಗಳು ಬಂದಾಗ ಆ ಶಾಲೆಯ ಬಗ್ಗೆ ನಾಲ್ಕು ಒಳ್ಳೆಯ ಮಾತಾಡುವುದು ಧರ್ಮ. ಆ ಧರ್ಮವನ್ನು ನಾನಿಲ್ಲಿ ಪಾಲಿಸಿರುವುದು. ಆದರೆ ಅದಕ್ಕೆ ವಿಪರೀತ ಅರ್ಥಗಳನ್ನು ಕಲ್ಪಿಸಿ, ಕೇವಲ ಅದೊಂದೇ ಜಾಣ ಶಾಲೆ ಎಂದು ನಾನು ಆರೋಪಿಸಿದೆ ಎಂದು ಓದುಗರು ಅಭಿಪ್ರಾಯ ಪಡುವುದು ಕಂಡು ಹೆದರಿಕೆಯಾಗಿದೆ. ನಾಲ್ಕಾರು ಬಾರಿ ನನ್ನ ಪೋಸ್ಟ್ ಓದಿದರೂ ನನಗೆ ಅಂತಹ ತಪ್ಪು ವಾಕ್ಯಗಳು ಕಾಣಲಿಲ್ಲ. ನನಗೆ ಕಾಣದ ಗೂಢಾರ್ಥ ಅದರಲ್ಲಿ ಅಡಗಿರಬಹುದು ಎಂಬ ಭಯದಲ್ಲಿ ಈ ಸ್ಪಷ್ಟೀಕರಣ ಕೊಡುತ್ತಿರುವೆ.
ಕಾರ್ಪೊರೇಟ್‌ಗಳಲ್ಲಿ ಸಾಮಾನ್ಯವಾಗಿ ಕೆಲವು ಶಾಲೆಗಳಿಗೆ ಪ್ರಾಮುಖ್ಯ ಕೊಡುವ ಸಂಪ್ರದಾಯವಿರುತ್ತದೆ. ಉದಾಹರಣೆಗೆ ಐಐಟಿ ವಿದ್ಯಾರ್ಥಿಯೆಂದರೆ ಅವರನ್ನು ತೆಗೆದುಕೊಳ್ಳಲು ಕಂಪನಿಗಳು ಇಷ್ಟ ಪಡುತ್ತವೆ. ಅಂತಹ ಶಾಲೆ/ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ನಡೆಸುವ ಪರೀಕ್ಷೆಗಳ ಗುಣಮಟ್ಟ, ಅಲ್ಲಿರುವ ಪ್ರಾಧ್ಯಾಪಕರ ಗುಣಮಟ್ಟ, ನಿರಂತರವಾಗಿ ಆ ಕಾಲೇಜಿನ ಮಕ್ಕಳು ವೃತ್ತಿಜೀವನದಲ್ಲಿ ತೋರಿದ ಪ್ರತಿಭೆಯಿಂದಾಗಿ ಅಂತಹ 'ಥಂಬ್ ರೂಲ್' ನಿರ್ಮಾಣವಾಗಿರುತ್ತದೆ. ಅದು ಸಹಜ. ಅದಿಲ್ಲದಿದ್ದರೆ ಒಳ್ಳೆಯ ಶಾಲೆ/ಕಾಲೇಜಿಗೆ ತಮ್ಮ ಮಕ್ಕಳು ಸೇರಲಿ ಎಂದು ತಂದೆ-ತಾಯಿ ಹಾತೊರೆಯುವುದಾದರೂ ಯಾಕೆ? ಕೇವಲ ಮಕ್ಕಳ ಪ್ರತಿಭೆಯೊಂದೇ ಮುಖ್ಯ, ಶಾಲೆಯಲ್ಲ ಎನ್ನುವುದಾದರೆ, ದೊಡ್ಡ ಮೊತ್ತದ ಶುಲ್ಕವನ್ನು ನೀಡಿ ಮುಖ್ಯ ಶಾಲೆಗೆ ಮಕ್ಕಳನ್ನು ಸೇರಿಸುವುದರಲ್ಲಿ ಅರ್ಥವಿಲ್ಲ.
ಹಾಗಂತ ಯಾವ ಕಾರ್ಪೊರೇಟ್ ಸಂಸ್ಥೆಯೂ ಬರೀ ಶಾಲೆಯ ಹೆಸರೊಂದರಿಂದಲೇ ಅಭ್ಯರ್ಥಿಗೆ ಕೆಲಸ ಕೊಡುವುದಿಲ್ಲ. ನಾನು ಕೆಲಸ ಮಾಡುತ್ತಿದ್ದುದು ಅತ್ಯಂತ ಉನ್ನತ ಹುದ್ದೆಯಲ್ಲಿ. ನಾಲ್ಕು ಸುತ್ತು ಸಂದರ್ಶನದಲ್ಲಿ ಉತ್ತೀರ್ಣರಾದ ಮೇಲೆಯೇ ಕೊನೆಯ ಆಯ್ಕೆಗೆ ನನ್ನ ಬಳಿ ಅಭ್ಯರ್ಥಿಯನ್ನು ಕಳುಹಿಸುತ್ತಿದ್ದಿದು. ಎಚ್‌ಆರ್ ಮ್ಯಾನೇಜರ್ ಸಹಜವಾಗಿ ತಮ್ಮ ಸಲಹೆಯನ್ನು ಆಡು ಮಾತಲ್ಲಿ ಹೇಳಿದ್ದನ್ನು ದಾಖಲಿಸಿದ್ದೆ. ಅದು ಯಾವ ಕಾರ್ಪೊರೇಟ್ ಕಡತದ ನಿಯಮಗಳ ವಾಕ್ಯವೂ ಅಲ್ಲ. ಕಾಫಿ ಕುಡಿಯುವಾಗ ಸಹೋದ್ಯೋಗಿಗಳು ಒಬ್ಬರಿಗೊಬ್ಬರು ಆಡುವ ವೃತ್ತಿಸಂಬಂಧದ ಹರಟೆ. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಕಷ್ಟವೆ? ಇವೆಲ್ಲಾ ವಿವರ ಕೊಡುವುದು ಆ ಪೋಸ್ಟಿನ ಉದ್ದೇಶವಾಗಿರಲಿಲ್ಲ.
ಇಷ್ಟೊಂದು ನೀತಿಬೋಧನೆ ಬೇಕಿತ್ತೆ?
ಶಾಲೆಯೊಂದನ್ನು ಮತ್ತು ಅದರ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಹೊಗಳಿದ್ದಕ್ಕೆ ಈ ಮಟ್ಟಿನ 'ನೀತಿಬೋಧನೆ' ಎದುರಿಸಬೇಕಾದೀತು ಎಂದು ಊಹಿಸಿರಲಿಲ್ಲ. ಈ ಹಿಂದೆ ಉಜಿರೆಯ ಕಾಲೇಜು, ಆಳ್ವಾಸ್ ಕಾಲೇಜು - ಎಲ್ಲದರ ಬಗ್ಗೆಯೂ ಒಳ್ಳೆಯ ಮಾತುಗಳನ್ನು ಬರೆದಿದ್ದೇನೆ. ಉತ್ತಮ ಸಂಗತಿಗಳನ್ನು ಹೇಳಿವುದು ತಪ್ಪೆ? ಋಣಾತ್ಮಕ ಸಂಗತಿಗಳ ಬಗ್ಗೆ ನಾನು ಸಾರ್ವಜನಿಕವಾಗಿ ಬರೆಯುವುದೇ ಅಪರೂಪ. ಅದು ನನ್ನ ಸ್ವಭಾವಕ್ಕೆ ಒಗ್ಗದ್ದು.
ಆದರೆ ವಾಸುದೇವ್ ನಾಡಿಗ್ ನವೋದಯ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಅಲ್ಲವೆಂದು ಅನಂತರ ತಿಳಿಯಿತು.ಆ ತಪ್ಪು ಮಾಹಿತಿ ನೀಡಿದ್ದಕ್ಕೆ ಬೇಸರವಾಗಿದೆ. ಅವರು ಕನ್ನಡದಲ್ಲಿ 30 ವರ್ಷದಿಂದ ಕಾವ್ಯ ರಚಿಸುತ್ತಿರುವ ಹಿರಿಯರು. ಅವರನ್ನು ಹೊಸ ಸಾಹಿತಿಗಳ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಸಹಜವಾಗಿಯೇ ಅವರಿಗೆ ಬೇಸರವಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುವೆ. ಬರೆದ ಪೋಸ್ಟನ್ನು ಅಳಿಸಿ ಬದಲಿಸುವ ಬದಲು ಈ ಸ್ಪಷ್ಟನೆ ನೀಡುತ್ತಿರುವೆ.
ಇನ್ನು ಮುಂದೆ ಯಾರನ್ನಾದರೂ, ಏನನ್ನಾದರೂ ಹೊಗಳುವಾಗಲೂ ವಿಪರೀತ ಎಚ್ಚರದಿಂದ ಇರುವೆ. ಈ 'ಪಾಲಿಟಿಕಲಿ ಕರೆಕ್ಟ್' ಕೌಶಲ್ಯ ನನಗೆ ಒಲಿದಿಲ್ಲ. ಸಹಜವಾಗಿರುತ್ತೇನೆ. ಇನ್ನು ಮುಂದೆ ತುಸು ಎಚ್ಚರ ವಹಿಸುವೆ.
ವಸುದೇಂದ್ರ ಅವರ ಸ್ಪಷ್ಟೀಕರಣದ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ನೀವು ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಯಾರನ್ನೂ ತೆಗಳಿಲ್ಲ. ಮೆಚ್ಚುಗೆ ಸೂಚಿಸುವುದು ತಪ್ಪಲ್ಲ ಎಂದು ಬಹುತೇಕ ಹೇಳಿದ್ದಾರೆ.
ವಸುದೇಂದ್ರ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
ವಸುದೇಂದ್ರ ಸರ್, ಪರಿಸ್ಥಿತಿ ಎಷ್ಟು ಅಸಹ್ಯವಾಗಿದೆ ಎಂದರೆ ನೀವು ಎಷ್ಟೇ ಆರೋಗ್ಯಕರ ಮನಸ್ಥಿತಿ ಇಟ್ಟುಕೊಂಡು, ಸಕಾರಾತ್ಮಕವಾಗಿ ಚಿಂತಿಸುತ್ತಾ, ಒಳ್ಳೆಯದನ್ನು ಬರೆಯಲು ಹೇಳುತಿದ್ದರೂ .. ನಿಮಗೊಂದು ಹಿನ್ನೆಲೆಯನ್ನು ಸೃಷ್ಟಿಸಿ.. ಅದಕ್ಕೊಂದು ಜಾತಿಯ ಬಣ್ಣ ಬಳಿದು ಎಲ್ಲವನ್ನೂ ತಮ್ಮ ಕಿರಾತಕ ಕಣ್ಣುಗಳಿಂದ ವಕ್ರವಾಗಿಯೇ ನೋಡಿ ಟೀಕೆ ಮಾಡಿ ಪ್ರಚಾರ ಮಾಡಿ ವಿಕೃತ ಮೆರೆಯದಿದ್ದರೆ ಅವರಿಗೆ ಸಮಾಧಾನವೇ ಇಲ್ಲ! ಇದರಲ್ಲಿ ಬಹು ಪಾಲು ವಿದ್ಯಾವಂತರೆನಿಸಿಕೊಂಡವರೇ ಇದ್ದಾರೆ. ನಿಮ್ಮ ಹತ್ತಿರದವರು ಆಗಿರುತ್ತಾರೆ. ಕಾಲೇಜುಗಳಲ್ಲಿ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷ ತುಂಬುತ್ತಾರೆ.. ಇರುವುದು ಒಂದೇ ದಾರಿ, ‘ಒಂದು ನಗೆ ನಕ್ಕು ಮುಂದಕ್ಕೆ ಸಾಗುವುದು ಮತ್ತು ನಮ್ಮ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಇರುವುದು’ ಎಂದು ನಟ ಮಂಡ್ಯ ರಮೇಶ್ ಕಾಮೆಂಟ್ ಮಾಡಿದ್ದಾರೆ.
‘ಸ್ಪಷ್ಟನೆ ಅಗತ್ಯ ಇರಲಿಲ್ಲ. ಆ ಬರಹದಲ್ಲಿ ಯಾವ ಕೊಂಕೂ ಇರಲಿಲ್ಲ. ಇತರರನ್ನು ತೆಗಳಿ ನವೋದಯದವರನ್ನು ಹೊಗಳಿರಲಿಲ್ಲ ನೀವು. ಅದೊಂದು ಶುದ್ಧ ಮೆಚ್ಚುಗೆ ಅಷ್ಟೆ ಆಗಿತ್ತು.‘ ಎಂದು ನವೀನ್ ಸಾಗರ್ ಕಾಮೆಂಟ್ ಮೂಲಕ ಹೇಳಿದ್ದಾರೆ.
‘ಒಂದು ಶಾಲೆಯ ಬಗ್ಗೆ ಒಳ್ಳೆಯ ಅಂಶಗಳನ್ನು ಎತ್ತಿ ತೋರಿಸಿದರೆ ಉಳಿದವರಿಗೆ ಯಾಕೆ ಬೇಸರವಾಗಬೇಕು.ಇತ್ತೀಚೆಗಂತೂ ಎಲ್ಲಕ್ಕೂ ಋಣಾತ್ಮಕ ಚಿಂತನೆಯಿಂದ ಯೋಚಿಸುವ ಮಂದಿಯೇ ಹೆಚ್ಚಾಗಿದ್ದಾರೆ. ನೀವು ಪ್ರಶಂಸಿಸಿ ಬರೆದುದರಲ್ಲಿ ಏನೂ ಲೋಪ ಕಾಣುತ್ತಿಲ್ಲ. ಬಿಟ್ಟು ಬಿಡಿ ಅವರವರ ನಕಾರಾತ್ಮಕ ಚಿಂತನೆಗಳು ಅವರವರಿಗೇ‘ ಪಿಎಸ್ ನಾಗರತ್ನ ಅವರು ವಸುಧೇಂದ್ರ ಅವರ ಅಭಿಪ್ರಾಯ ಸರಿ ಇತ್ತು ಎಂಬಂತೆ ಕಾಮೆಂಟ್ ಮಾಡಿದ್ದಾರೆ.
‘ಸ್ಪರ್ಧೆಯೇ ಇಲ್ಲದ ಜಗತ್ತನ್ನು ಸೃಷ್ಟಿಸಬೇಕು ಎಂಬ ಸಿದ್ಧಾಂತದೊಂದಿಗೆ ಇವೆಲ್ಲ ವಿಷಯಗಳು ಅಂದರೆ ಬಹುಮಾನ ಪ್ರಶಂಸೆ ಗುಣಮಟ್ಟದ ಚರ್ಚೆಗಳು ಅವರಿವರನ್ನು ಎಷ್ಟು ಮೆಲುಮಾತಿನೊಂದಿಗೂ ಎಚ್ಚರಿಸಿದರೂ ..ಕೊನೆಗೆ ಸ್ವತಃ ಈ "ಮೀಡಿಯಾ" ಅಪರಾಧಿ ಆಗಿಬಿಡುತ್ತದೆ. ಮತ್ತು ನಮ್ಮ ವಸುಧೇಂದ್ರರು "ಜೀವಂತಿಕೆ ಇರುವ ಮನಸ್ಸಿನ" ವ್ಯಕ್ತಿ. ಗುಣಮಟ್ಟದ ಬಗ್ಗೆ ಎರಡು ಮಾತಾಡುವಾಗ ಭೇದಭಾವ ಮಾಡಿದನೇನೋ "ಅದೂ ಯಾರೋ ಹೇಳಿದಾಗ "ಎಂದು ಘಾಸಿಕೊಂಡರು. ಮತ್ತು ಈ ಪ್ರತಿಕ್ರಿಯೆಯ ಮಾತುಗಳನ್ನು ಇಲ್ಲಿ ಹಾಕಿದ್ದಾರೆ. ಇಲ್ಲಿ ಎಲ್ಲರ ಸಂಗಮವು ಸಮಾಜದ ಮುಖವನ್ನು ನೋಡುವಂತಾಯಿತು.ವಸುಧೇಂದ್ರರಿಗೆ ನೋವಾಗುತ್ತಿದ್ದರೂ ನಮಗೆ ಸಂತೃಪ್ತಿಯೇ ಆಯಿತು.ಕ್ಷಮಿಸಿ‘ ಎಂದು ಸುರೇಶ್ ಮಹರ್ಷಿ ಎನ್ನುವವರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
‘ಬರಹಗಾರನ ಮನಸ್ಥಿತಿ ಮತ್ತು ಓದುಗ ಸಹೃದಯರ ಮನಸ್ಥಿತಿ ಒಂದೆ ತರಹ ಇರಬೇಕೆಂದಿಲ್ಲ, ಓದುಗರ ವಿಮರ್ಶೆ ನಮ್ಮ ಬರವಣಿಗೆ ಮತ್ತು ಸಹೃದಯರ ಅರ್ಧೈಸುವಿಕೆ ಎರಡನ್ನೂ ಬದಲಿಸುವ ಶಕ್ತಿ ಇದೆಯೆಂಬುದು ನನ್ನ ಅಭಿಮತ. ನೀವು ಸ್ಪಷ್ಟನೆ ನೀಡಿ ನೀವು (ಬರಹಗಾರ) ದೊಡ್ಡವರಾಗಿಬಿಟ್ಟಿರಿ ಸಹೃದಯಿಗಳ ದೃಷ್ಟಿಯಲ್ಲಿ....‘ ಎಂದು ರಘು ಕೆ ಕೊಪ್ಪಲು ಕಾಮೆಂಟ್ ಮಾಡಿದ್ದಾರೆ.
‘ಜಾಲ ಜಗತ್ತೇ ಹಾಗೇ.. ಇದು ನಿಮಗೆ ಇನ್ನಷ್ಟು ಕಥೆಗಳಿಗೆ ಸ್ಫೂರ್ತಿ.. ಕೆಲವರು ಇದ್ದೇ ಇರುತ್ತಾರೆ, ನೀವು ಏನೇ ಮಾಡಿದ್ರೂ, ಬರೆದ್ರೂ ಕೊಂಕು ಮಾತಾಡೋರು. ಅವರಿಗೆ ಔಷಧವಿಲ್ಲದ ರೋಗವಿದೆ‘ ವಸಂತ ಗಿಳಿಯಾರ್ ತಮ್ಮ ಮನದ ಮಾತನ್ನು ಕಾಮೆಂಟ್ ಮೂಲಕ ಹೇಳಿದ್ದಾರೆ.
‘ನೀವು ಬರೆದಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ನಮಗೆ ಇಷ್ಟವಾದ ಯಾರೋ ಒಬ್ಬರನ್ನು ಒಳ್ಳೆಯವರು ಎಂದರೆ ಉಳಿದವರೆಲ್ಲ ಕೆಟ್ಟವರು ಎಂಬ ಅರ್ಥ ಹೇಗಾಗುತ್ತದೆ? ಇತ್ತೀಚೆಗೆ ಏನೇ ಬರೆದರೂ, ಹೇಳಿದರೂ ಅದರಲ್ಲಿ ತಪ್ಪು ಹುಡುಕುವ ಚಾಳಿ ಹೆಚ್ಚಾಗಿದೆ. ತಲೆ ಕೆಡಿಸಿಕೊಳ್ಳಬೇಡಿ‘ ಎಂದು ಸುಧೀಂದ್ರ ಭಾರದ್ವಜ್ ಕಾಮೆಂಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೇ ಇನ್ನೂ ಹಲವರು ವಸುಧೇಂದ್ರ ಅವರು ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲ, ಅವರು ಹೇಳಿದ್ದು ಸರಿ ಇತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ವಿಭಾಗ