ನವೋದಯ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ, ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ-education news application invited for navodaya residential school entrance test how to apply here are more details rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನವೋದಯ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ, ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ

ನವೋದಯ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ, ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ

ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕು, ಇವರು ಅವಕಾಶ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ನವೋದಯ ಶಾಲೆಗಳು ಆರಂಭವಾದವು. ಇಲ್ಲಿ ಆರನೇ ತರಗತಿಯಿಂದ ಪಿಯುಸಿವರೆಗೆ ಉಚಿತವಾಗಿ ವಸತಿ ಶಿಕ್ಷಣ ನೀಡಲಾಗುತ್ತದೆ. 2024–25ರ ಸಾಲಿನ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಸೆಪ್ಟೆಂಬರ್ 16 ಕೊನೆಯ ದಿನಾಂಕ.

ನವೋದಯ ವಸತಿ ಶಾಲೆ
ನವೋದಯ ವಸತಿ ಶಾಲೆ

ಜವಾಹರ್ ನವೋದಯ ವಿದ್ಯಾಲಯ (JNV) ಪ್ರಧಾನವಾಗಿ ಗ್ರಾಮೀಣ ಪ್ರದೇಶದ ಆರ್ಥಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಅನಾನುಕೂಲತೆಗಳಿಂದ ಅವಕಾಶ ವಂಚಿತರಾಗುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರೀಯ ಶಾಲೆಗಳ ವ್ಯವಸ್ಥೆಯಾಗಿದೆ. ಅವುಗಳನ್ನು ನವೋದಯ ವಿದ್ಯಾಲಯ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆ, ಕೇಂದ್ರ ಶಿಕ್ಷಣ ಸಚಿವಾಲಯ ನಡೆಸುತ್ತಿದೆ. ಕೇಂದ್ರ ಶಿಕ್ಷಣ ಸಚಿವರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಈ ವಿದ್ಯಾಸಂಸ್ಥೆಗಳು 6ನೇ ತರಗತಿಯಿಂದ ಹನ್ನೆರೆಡನೇ ತರಗತಿಯವರೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗೆ ಸಂಯೋಜಿತವಾಗಿರುವ ಸಂಪೂರ್ಣ ವಸತಿ ಮತ್ತು ಸಹ-ಶಿಕ್ಷಣ ಶಾಲೆಗಳಾಗಿವೆ. ವಿಶೇಷ ಪ್ರತಿಭೆ ಮತ್ತು ಅರ್ಹತೆ ಹೊಂದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಲ್ಲಿನ ಗುಣಮಟ್ಟದ ಶಿಕ್ಷಣವನ್ನು ಪಡೆದು ನಗರ ಪ್ರದೇಶದ ತಮ್ಮ ಸಹವರ್ತಿಗಳೊಂದಿಗೆ ಸಮಾನ ನೆಲೆಯಲ್ಲಿ ಶೈಕ್ಷಣಿಕವಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-1986 ರ ಪ್ರಕಾರ ಈ ವಸತಿ ಶಾಲೆಗಳು ದೇಶದಾದ್ಯಂತ ಜಿಲ್ಲೆಗೊಂದರಂತೆ ಸ್ಥಾಪಿತವಾಗಿದ್ದು, ತುಮಕೂರು ಜಿಲ್ಲೆಯ ಶಾಲೆಯು ದೇವರಾಯನದುರ್ಗದ ತಪ್ಪಲಿನಲ್ಲಿ ವಿಸ್ತಾರವಾದ ಕ್ಯಾಂಪಸ್ಸಿನಲ್ಲಿ ಸ್ಥಾಪಿತವಾಗಿದೆ. ದೇಶದಾದ್ಯಂತ 661 ಶಾಲೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಕರ್ನಾಟಕದ 31 ಶಾಲೆಗಳು ಸೇರಿವೆ.

ನವೋದಯ ಶಾಲೆಯಲ್ಲಿ ಅರ್ಹತೆ ಪಡೆಯಲು ಮಾನದಂಡಗಳು

ನವೋದಯ ಶಾಲೆಗಳಲ್ಲಿ 6ನೇ ತರಗತಿಗಯ ಪ್ರವೇಶಕ್ಕಾಗಿ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯಲ್ಲಿ ((JNVST) ಉತ್ತಮ ಅಂಕಗಳನ್ನು ಪಡೆದು ಅರ್ಹತೆ ಗಳಿಸಬೇಕಾಗುತ್ತದೆ. ಇದು CBSE ವಿನ್ಯಾಸಗೊಳಿಸಿರುವ ಪ್ರವೇಶ ಪರೀಕ್ಷೆಯಾಗಿದೆ. ಪ್ರತಿ JNV ಗೆ 80ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 6ನೇ ತರಗತಿಗೆ JNVST ಅನ್ನು ವಾರ್ಷಿಕವಾಗಿ ದೇಶದಾದ್ಯಂತ ನಡೆಸಲಾಗುತ್ತದೆ. ಮುಂದಿನ ಶೈಕ್ಷಣಿಕ ಸಾಲಿಗೆ ಪ್ರವೇಶ ಪರೀಕ್ಷೆ ಜನವರಿ 18, 2025ಕ್ಕೆ ನಿಗದಿಯಾಗಿದ್ದು, ಪ್ರವೇಶಕ್ಕಾಗಿ ಅರ್ಜಿಗಳು ಜುಲೈ 16ರಿಂದ ಆನ್‌ಲೈನ್‌ =ನಲ್ಲಿ ಲಭ್ಯವಿದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 16, ಸೆಪ್ಟೆಂಬರ್ 2024. ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ಅಧಿವೇಶನ ರಚನೆಯನ್ನು ಅವಲಂಬಿಸಿ ಇದನ್ನು ವರ್ಷಕ್ಕೆ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಐದನೇ ತರಗತಿಯ ಸಮಯದಲ್ಲಿ ಒಮ್ಮೆ ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯಲ್ಲಿನ ಸ್ಪರ್ಧೆಯಲ್ಲಿ ಒಟ್ಟು 25 ಲಕ್ಷ ವಿದ್ಯಾರ್ಥಿಗಳು ಅಪೇಕ್ಷಿತರಾಗಿದ್ದು ಕೇವಲ 47,320 ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ.

ಪರೀಕ್ಷಾ ವಿಧಾನ

ಈ ಪರೀಕ್ಷೆಯು ಪ್ರಶ್ನೆಗಳು ಮಾನಸಿಕ ಸಾಮರ್ಥ್ಯ ಕೌಶಲ್ಯಗಳು (Logical reasoning), ಗಣಿತ(Mathematics) ಮತ್ತು ಇಂಗ್ಲಿಷ್(English) ಭಾಷೆಗಳನ್ನು ಒಳಗೊಳ್ಳುತ್ತದೆ. ಆಯ್ಕೆಗಳು ಎಸ್‌ಸಿ, ಎಸ್‌ಸಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಒಳಗೊಂಡಿರುತ್ತದೆ. ಕನಿಷ್ಠ ಶೇ 75 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಗರಿಷ್ಠ ಶೇ 25 ನಗರ ಪ್ರದೇಶಗಳಿಂದ, ನಿಗದಿತ ಶೇ 33 ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಶೇ 3 ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರುತ್ತದೆ. ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಿ 9ನೆಯ ತರಗತಿಗೆ ಪ್ರವೇಶ ನೀಡಲು ಲ್ಯಾಟರಲ್ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ.

ನವೋದಯ ವಿದ್ಯಾರ್ಥಿಗಳು ಸ್ಥಿರವಾಗಿ CBSE ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾ ಬಂದಿದ್ದಾರೆ. ಅಂಕಿ–ಅಂಶಗಳ ಪ್ರಕಾರ ನವೋದಯ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ 98.87 ಮತ್ತು 12ನೇ ಬೋರ್ಡ್ ಪರೀಕ್ಷೆಗಳಲ್ಲಿ ಶೇ 96.73 ರಷ್ಟು ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶವನ್ನು ಖಾಸಗಿ ಶಾಲೆಗಳು, ಸರ್ಕಾರಿ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಿಗೆ ಹೋಲಿಸಿದಾಗ ನವೋದಯ ವಿದ್ಯಾರ್ಥಿಗಳ ಉತ್ತೀರ್ಣ ಶೇಕಡಾವಾರು ಹೆಚ್ಚಾಗಿದೆ.

ನವೋದಯ ಶಾಲೆಯಲ್ಲಿ ಕಲಿಸುವ ಇತರ ಚಟುವಟಿಕೆಗಳು

ನವೋದಯ ವಿದ್ಯಾಲಯ ಸಮಿತಿಯು ವಿಜ್ಞಾನದ ಉತ್ತೇಜನಕ್ಕೆ ಕಾರಣವಾಗುವ ವಿವಿಧ ಅನುಭವಗಳನ್ನು ಒದಗಿಸಿ ವೃತ್ತಿಪರ ಪದವಿ ಕೋರ್ಸುಗಳನ್ನು ಆಯ್ಕೆಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ಅಡಿಪಾಯವನ್ನು ಕಲ್ಪಿಸುತ್ತಿದೆ. ಮಕ್ಕಳ ವಿಜ್ಞಾನ ಕಾಂಗ್ರೆಸ್, ಬಹು ಶೈಕ್ಷಣಿಕ ಸ್ಪರ್ಧೆಗಳು, ಒಲಿಂಪಿಯಾಡ್‌ಗಳಲ್ಲಿ ಭಾಗವಹಿಸುವಿಕೆ, ಸಂಶೋಧನಾ ಸಂಸ್ಥೆಗಳಿಗೆ ಭೇಟಿ, ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್‌ಗಳು, ಪರಿಸರ ಚಟುವಟಿಕೆಗಳು, ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ಮತ್ತು ಉದ್ಯಮಶೀಲ ಕೌಶಲ ತರಬೇತಿಯಂತಹ ವಿವಿಧ ಚಟುವಟಿಕೆಗಳು ವರ್ಷಪೂರ್ತಿ ಪ್ರಾದೇಶಿಕ ಮಟ್ಟದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲ್ಪಡುತ್ತವೆ. ಜೊತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ ಮತ್ತು ಗಣಿತಕ್ಕಾಗಿ ಶಾಲೆ, ಕ್ಲಸ್ಟರ್, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

ನವೋದಯ ವಿದ್ಯಾಲಯಗಳು Samsung ಇಂಡಿಯಾದ ಸಹಯೋಗದೊಂದಿಗೆ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಿವೆ. ಒಂದೊಂದೂ ತರಗತಿಗಳು ಸಾಮಾನ್ಯವಾಗಿ ಸಂವಾದಾತ್ಮಕ ಸ್ಮಾರ್ಟ್‌ಬೋರ್ಡ್‌, ಲ್ಯಾಪ್‌ಟಾಪ್‌ಗಳು /ಟ್ಯಾಬ್ಲೆಟ್‌ಗಳು, ವೈ-ಫೈ ಸಂಪರ್ಕ ಮತ್ತು ಪವರ್ ಬ್ಯಾಕ್‌ಅಪ್‌ನೊಂದಿಗೆ ಸಜ್ಜುಗೊಂಡಿದೆ. ಒಂದು ಸ್ಮಾರ್ಟ್ ಕ್ಲಾಸ್ ಗಣಿತ, ವಿಜ್ಞಾನ ಸಮಾಜ ವಿಜ್ಞಾನ ಮತ್ತುಇಂಗ್ಲಿಷ್ ಭಾಷೆಯಲ್ಲಿ ನಿಯಮಿತ ಪಾಠಗಳನ್ನು ಪೂರೈಸುತ್ತದೆ ಮತ್ತು ಪರಿಕಲ್ಪನೆಗಳನ್ನು ಆಕರ್ಷಕವಾಗಿ ಮತ್ತು ಸಂವಾದಾತ್ಮಕ ರೀತಿಯಲ್ಲಿ ವಿವರಿಸುತ್ತದೆ. ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸುವ ಅನುಭವಸ್ಥ ಶಿಕ್ಷಕರಿದ್ದಾರೆ.

ನಾಗೇಂದ್ರ ಟಿಸಿ (ಬಲಚಿತ್ರ)
ನಾಗೇಂದ್ರ ಟಿಸಿ (ಬಲಚಿತ್ರ)

ನವೋದಯ ಶಾಲೆಗಳ ಸಾಮಾಜಿಕ ಪರಿಸರ ಭಾರತದ ವಿವಿಧ ಪ್ರದೇಶಗಳ ಸಮಾಜದ ವಿವಿಧ ವಿಭಾಗಗಳ ಮಿಶ್ರಣವಾಗಿದೆ. ಈ ಶಾಲೆಗಳಲ್ಲಿನ ಶಿಕ್ಷಕರು ದೇಶದಾದ್ಯಂತ ಆಯ್ಕೆಯಾದವರಾಗಿದ್ದು ಒಂದೇ ಕ್ಯಾಂಪಸ್‌ನಲ್ಲಿ ವಾಸಿಸುತ್ತಾರೆ ಮತ್ತು ಸದಾ ಮೇಲೆ ವಿದ್ಯಾರ್ಥಿಗಳೊಂದಿಗೆ ಬೆರೆತಿರುವುದರಿಂದ ಇಡೀ ಕ್ಯಾಂಪಸ್ ಒಂದು ಕೌಟುಂಬಿಕ ಭಾವನೆಗೆ ಕಾರಣವಾಗುತ್ತದೆ. ನವೋದಯ ಯೋಜನೆಯ ಒಂದು ಪ್ರಮುಖ ಧ್ಯೇಯ, ಶಿಕ್ಷಣದ ಮೂಲಕ ‘ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ವಿಷಯವನ್ನು ಉತ್ಕೃಷ್ಟಗೊಳಿಸುವುದು‘.

ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ದೈಹಿಕ ವ್ಯಾಯಾಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಮತ್ತು ತಮ್ಮ ಶಾಲಾ ವರ್ಷಗಳಲ್ಲಿ ವಿವಿಧ ಕ್ರೀಡೆಗಳನ್ನು ಕಲಿಯಬಹುದು ಮತ್ತು ಭಾಗವಹಿಸಬಹುದು. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಕ್ರೀಡೆಯ ಸಾಮರ್ಥ್ಯವನ್ನು ಪ್ರದರ್ಶಿಸಿದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಂಪನ್ಮೂಲಗಳನ್ನು ಸಹ ಒದಗಿಸಲಾಗುತ್ತದೆ. ಅಂತರ ಶಾಲಾ ಸ್ಪರ್ಧೆಗಳನ್ನು ಕ್ಲಸ್ಟರ್, ಪ್ರಾದೇಶಿಕ, ರಾಷ್ಟ್ರೀಯ ಮತ್ತು SGFI (ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ) ಮಟ್ಟದಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತದೆ. ನವೋದಯ ಶಾಲೆಗಳಲ್ಲಿ ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕೋರ್) ಮತ್ತು ಎನ್‌ಎಸ್‌ಎಸ್‌ (ರಾಷ್ಟ್ರೀಯ ಸೇವಾ ಯೋಜನೆ) ಅನ್ನು ಸಹ ಪರಿಚಯಿಸಲಾಗಿದೆ.

ಶಿಕ್ಷಣ ಎಲ್ಲರ ಆಸ್ತಿಯಾಗಬೇಕು. ಬಡ ಕುಟುಂಬಗಳು ತಮ್ಮ ಬುದ್ದಿವಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಸ್ತಿ ಮಾರುವುದು, ಒಡವೆ ಗಿರವಿ ಇಡುವುದು, ಹೆಚ್ಚಿನ ಬಡ್ಡಿ ತೆತ್ತು ಕೈಸಾಲ ಪಡೆಯುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಈ ಪ್ರವೇಶ ಪರೀಕ್ಷೆಗೆ ತರಬೇತಿಗೊಳಿಸಿ, ಶೈಕ್ಷಣಿಕ ಪ್ರಗತಿಗಾಗಿ ಅನುಭವಿಸುವ ಆರ್ಥಿಕ ನೋವನ್ನು ನಿವಾರಿಸಿಕೊಳ್ಳಬೇಕು. ಮಕ್ಕಳು ಪ್ರತಿಭಾವಂತರಾಗಿದ್ದು ಆರ್ಥಿಕ ಹಿಂಜರಿತವಿರುವ ಎಲ್ಲ ಕುಟುಂಬಗಳೂ ನವೋದಯ ಶಾಲೆಗಳು ನೀಡುವ ಅವಕಾಶಗಳನ್ನು ಸದುಪಯೋಗಮಾಡಿಕೊಳ್ಳಬೇಕು. ಅರ್ಜಿ ತುಂಬುವುದು, ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುವ ಕ್ರಮ, ಪರೀಕ್ಷಾ ಪದ್ಧತಿಯ ಬಗ್ಗೆ ಮಾಹಿತಿಯಂತಹ ಯಾವುದೇ ವಿಷಯಗಳಿಗೆ ದೂರವಾಣಿ ಅಥವಾ ವಾಟ್ಸಪ್ಪ್ ಮೂಲಕ ಸಂಪರ್ಕಿಸಿ.

(ಲೇಖನ: ನಾಗೇಂದ್ರ ಟಿಸಿ, ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪೇಸ್(ಪ್ರಣವಸ್ಯ ಅಕಾಡೆಮಿ ಫಾರ್ ಕಾಂಪಿಟೇಟಿವ್ ಎಕ್ಸಲೆನ್ಸ್) 9483846333. tc.nagendra@gmail.com)