ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ

ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಧೂಮಪಾನ ಮಾಡುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗುವಂತೆ ಧೂಮಪಾನ ಮಾಡುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು, ಬೆಂಗಳೂರು ಪೊಲೀಸರು ಕಾನೂನು ಮರೆತವರಂತೆ ವರ್ತಿಸುತ್ತಿದ್ದಾರೆ, ಈ ಕುರಿತು ಪತ್ರಕರ್ತ ರಾಜೀವ ಹೆಗಡೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾನೂನು ಮರೆತಿರುವ ಬೆಂಗಳೂರು ಪೊಲೀಸರು
ಕಾನೂನು ಮರೆತಿರುವ ಬೆಂಗಳೂರು ಪೊಲೀಸರು

ಬೆಂಗಳೂರಿನಲ್ಲಿ ಧೂಮಪಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಎಲ್ಲೆಂದರಲ್ಲಿ ನಿಂತು ಹೊಗೆ ಉಗುಳುತ್ತಿರುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆ ಆಗುತ್ತದೆ ಎನ್ನುವ ಭಾವವೂ ಅವರಲ್ಲಿ ಇರುವುದಿಲ್ಲ. ಹಾಗಂತ ಈ ಬಗ್ಗೆ ಕಾನೂನು ಸುವವಸ್ಥೆ ಕಾಪಾಡುವ ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನವಿಲ್ಲ. ನಿಮ್ಮ ಪ್ರಕಾರ ಧೂಮಪಾನ ಮಾಡುವುದು ಅಪರಾಧವೇ ಎಂದು ಪೊಲೀಸರೇ ಪ್ರಶ್ನೆ ಮಾಡುತ್ತಾರೆ ಎಂದು ಪತ್ರಕರ್ತ ರಾಜೀವ ಹೆಗಡೆ ತಮ್ಮ ಅನುಭವವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಧೂಮಪಾನಿಗಳ ಬಗ್ಗೆ ಬೆಂಗಳೂರು ಪೊಲೀಸರಿಗೆ ಸಲಹೆಯೊಂದನ್ನೂ ನೀಡಿದ್ದಾರೆ.

ರಾಜೀವ ಹೆಗಡೆ ಅವರ ಬರಹ

ನಾನು ಪ್ರತಿದಿನ ಬೆಳಗ್ಗೆ 6-7 ಗಂಟೆ ಸಮಯದಲ್ಲಿ ಕಚೇರಿಗೆ ಬರುವಾಗಲೇ ಒಂದಿಷ್ಟು ಜನ ಪಾದಚಾರಿ ಮಾರ್ಗದಲ್ಲಿ ನಿಂತುಕೊಂಡು ಧೂಮಪಾನ ಮಾಡುತ್ತಿದ್ದರು. ಕೆಲವರಂತೂ ಮುಖಕ್ಕೆ ಹೊಗೆಯನ್ನು ಬಿಟ್ಟು ಎಂಜಾಯ್‌ ಮಾಡುತ್ತಿದ್ದರು. ಅವರ ಎದುರಿಗೆ ಕ್ಯಾಕರಿಸಿ ಉಗಿದು ಬಂದರೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಇವತ್ತು ತಾಳ್ಮೆ ಮೀರಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದೆ.

ಐದು ನಿಮಿಷದ ಬಳಿಕ ಮಾರತಹಳ್ಳಿ ಠಾಣೆಯ ಹೊಯ್ಸಳ ಪೊಲೀಸರಿಂದ ಕರೆ ಬಂತು. ʼನಾನು ಪ್ರತಿ ದಿನ ಕಚೇರಿಗೆ ಹೋಗುವ ಜಾಗದಲ್ಲಿ ಓಡಾಡಲು ಆಗದಷ್ಟು ಸಮಸ್ಯೆ ಎದುರಾಗಿದೆ. ಪಾದಚಾರಿ ಮಾರ್ಗದ ಮಧ್ಯದಲ್ಲಿ ನಿಂತುಕೊಂಡು ಸಿಗರೇ... ಸೇದುತ್ತಿರುತ್ತಾರೆ. ಪ್ರತಿ ದಿನ ರೌಂಡ್ಸ್‌ ಮಾಡುವ ಪೊಲೀಸರಿಗೆ ಇದೆಲ್ಲ ಕಾಣಿಸುವುದಿಲ್ಲವೇ?ʼ ಎಂದು ಕೇಳಿದೆ. ʼನಮಗೆ ಇಲ್ಲಿಯವರೆಗೆ ಯಾರೂ ದೂರು ನೀಡಿಲ್ಲ. ಹಾಗೆಯೇ ನಿಮ್ಮ ಪ್ರಕಾರ ಸಿಗರೇ... ಹಾಗೂ ಬೀ... ಸೇದುವುದು ಅಪರಾಧವೇ? ಎಂದು ಪೊಲೀಸ್‌ ಮಹಾಶಯರು ನನಗೆ ಪ್ರತಿಯಾಗಿ ಪ್ರಶ್ನೆ ಕೇಳಿದರು.

ʼಪೊಲೀಸರಿಗೆ ನಾವು ಕಾನೂನು ಹೇಳಿ ಕೊಡುವ ಪರಿಸ್ಥಿತಿ ಬರಬಾರದಿತ್ತು. ಸಾರ್ವಜನಿಕ ಜಾಗದಲ್ಲಿ ಸೇದುವುದು ಅಪರಾಧವೇ? ಈ ಸಂಬಂಧ ವಿಧಾನಸಭೆಯಲ್ಲಿ ಯಾವುದಾದರೂ ಕಾನೂನು ರಚನೆ ಆಗಿದೆಯೇ ಎನ್ನುವುದನ್ನು ನಿಮ್ಮ ಆಯುಕ್ತರ ಬಳಿಯೊಮ್ಮೆ ಕೇಳಿ ನೋಡಿ, ಉತ್ತರ ಸಿಗಬಹುದು. ಹಾಗೆಯೇ ನಮಗೂ ಉಸಿರಾಡಲು ಹಾಗೂ ಆರಾಮಾಗಿ ಓಡಾಡಲು ಅವಕಾಶ ಮಾಡಿಕೊಡಿ. ಇದರ ಜತೆಗೆ ದೂರು ನೀಡುವರೆಗೂ ಕಣ್ಮುಚ್ಚಿ ಕೂರುವುದನ್ನು ಬಿಡಿʼ ಎಂದಾಗ, ಕ್ರಮದ ಭರವಸೆ ನೀಡಿದರು.

ಅದಾದ ಹತ್ತು ನಿಮಿಷದ ಬಳಿಕ ಅದ ಹೊಯ್ಸಳ ಪೊಲೀಸರಿಂದ ಕರೆ ಬಂದಾಗ, ಕಾಯ್ದೆಯ ಹೆಸರು ಅವರ ಬಾಯಲ್ಲಿತ್ತು. ಹಾಗೆಯೇ ಕಾಯ್ದೆಯಲ್ಲಿನ ನಿಯಮಗಳು ಕೂಡ ಅವರ ಗಮನಕ್ಕೆ ಬಂದಿತ್ತು.

ಒಂದು ಕಾಲದಲ್ಲಿ ಬೆಂಗಳೂರು ಪೊಲೀಸರ ಬಗ್ಗೆ ತುಂಬಾ ಒಳ್ಳೆಯ ಮಾತುಗಳಿದ್ದವು. ಆದರೆ ಇತ್ತೀಚೆಗೆ ವರ್ಗಾವಣೆ ದಂಧೆಯು ತಾರಕಕ್ಕೇರಿದ ಬೆನ್ನಲ್ಲೇ, ಕಾನೂನು ಸುವ್ಯವಸ್ಥೆಗಿಂತ ಸಿವಿಲ್‌ ಹಾಗೂ ಇತರ ವ್ಯವಹಾರಗಳ ಪ್ರಕರಣ ವಿಲೇವಾರಿ ಇಷ್ಟವಾಗಿದೆ ಎನ್ನುವ ಆರೋಪವಿದೆ. ಇದೇ ಕಾರಣಕ್ಕಾಗಿಯೇ ಸಾರ್ವಜನಿಕರ ಪರವಾಗಿರುವ ಕಾಯ್ದೆಗಳ ಪರಿಚಯ ಕೂಡ ಪೊಲೀಸರಿಗೆ ಇಲ್ಲದಂತಾಗಿದೆ.

ಈ ರೀತಿ ಸಾರ್ವಜನಿಕ ಜಾಗದಲ್ಲಿ ಅಸಂಭದ್ಧವಾಗಿ ನಡೆದುಕೊಳ್ಳುವುದನ್ನು ನಿಯಂತ್ರಿಸಲು ಕಾನೂನು ಇರುವುದು ಜನರಿಗೂ ಅಷ್ಟೊಂದು ಪರಿಚಯವಿಲ್ಲ, ಪೊಲೀಸರಿಂದಲೂ ಜಾಣ ಮೌನವಿದೆ. ಏಕೆಂದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ಪಾಕೆಟ್‌ ಮನಿ ಹುಟ್ಟುವುದಿಲ್ಲ.

ಕೊನೆಯದಾಗಿ: ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎನ್ನುವ ಆರೋಪ ಬರುತ್ತಲೇ ಇದೆ. ಒಂದೊಮ್ಮೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವರ ಮೇಲೆ ಕಾನೂನು ಬದ್ಧವಾಗಿರುವ ದಂಡ ಪ್ರಯೋಗ ಮಾಡಿದರೆ ಬೆಂಗಳೂರು ನಗರವೊಂದರಲ್ಲೇ ಪ್ರತಿ ದಿನ ಲಕ್ಷಾಂತರ ರೂಪಾಯಿ ಗಳಿಸಬಹುದು. ಸರ್ಕಾರವು ಈ ಹಣ ಸಂಗ್ರಹ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಂದ್ಹಾಗೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಬಹುದು.

ಸೆಪ್ಟೆಂಬರ್ 16 ರಂದು ರಾಜೀವ ಹೆಗಡೆ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗಾಗಲೇ ಹಲವರು ಪೋಸ್ಟ್ ನೋಡಿ ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

ರಾಜೀವ ಹೆಗಡೆ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ಸ್ವಚ್ಛತೆಯ ಬಗ್ಗೆ ನಮ್ಮ ದೇಶದ ಜನರಿಗಿರುವಷ್ಟು ನಿಷ್ಕಾಳಜಿ ಬೇರೆಲ್ಲೂ ಇಲ್ಲವೇನೋ ಅನ್ನಿಸಿಬಿಡುತ್ತದೆ... ಸಿಕ್ಕಸಿಕ್ಕಲ್ಲಿ ಉಗಿಯೋದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡೋದು ಇದನ್ನೆಲ್ಲಾ ಯಾವಾಗ ಬಿಡ್ತಾರೋ…‘ ಎಂದು ಗಿರೀಶ್ ಭಟ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

‘ನಾನು ವಿಜಯನಗರದಲ್ಲಿರುವುದು. ಪ್ರತಿದಿನ ಮಗಳನ್ನು ಪ್ರಿಸ್ಕೂಲ್‌ಗೆ ಬಿಡಲು ಹೋಗುವಾಗ ಮೂರು ಬೇಕರಿಗಳು ಸಿಗುತ್ತವೆ. ಅವು ಸಿಗರೇಟ್ ಹಬ್‌ಗಳಾಗಿವೆ. ನಡೆದಾಡುವುದು, ಉಸಿರಾಡುವುದು ಕಷ್ಟವಾಗಿದೆ. ನಾನು ಮೂಗಿಗೆ ಕರ್ಚಿಫ್ ಮುಚ್ಚಿಕೊಂಡು, ಅವರ ಕಡೆ ನೋಡಿ ಹೋಗುತ್ತೇನೆ. ಆದರೂ ಅವರಿಗೆ ಏನೂ ಅನ್ನಿಸುವುದಿಲ್ಲ. ದುರಾದೃಷ್ಟ ಎಂದರೆ ಪೊಲೀಸ್ ಹಾಗೂ ಸರ್ಕಾರ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲು ಯಾರಾದರೂ ಬಂದು ದೂರು ನೀಡಲಿ ಎಂದು ಕಾಯುವುದು‘ ಎಂದು ಸಚಿನ್ ಎಚ್‌. ಎನ್ನುವವರು ತನ್ನ ಅನುಭವವನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

Whats_app_banner