logo
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ‌ಪ್ರತಿ ಮನೆಯಲ್ಲೂ ಮಂಡಿಸಬೇಕು ಬಜೆಟ್ಟು, ವೈಯಕ್ತಿಕ ಖರ್ಚು ವೆಚ್ಚಗಳ ಲೆಕ್ಕಾಚಾರಕ್ಕೆ ಬಳಸಿ ಗ್ಯಾಜೆಟ್ಟು

Digital Jagathu: ‌ಪ್ರತಿ ಮನೆಯಲ್ಲೂ ಮಂಡಿಸಬೇಕು ಬಜೆಟ್ಟು, ವೈಯಕ್ತಿಕ ಖರ್ಚು ವೆಚ್ಚಗಳ ಲೆಕ್ಕಾಚಾರಕ್ಕೆ ಬಳಸಿ ಗ್ಯಾಜೆಟ್ಟು

Praveen Chandra B HT Kannada

Jul 06, 2023 06:04 PM IST

google News

ಬಜೆಟ್‌- ಖರ್ಚು ವೆಚ್ಚದ ಮೇಲೆ ನಿಗಾ ಇಡಲು ತಂತ್ರಜ್ಞಾನ ಬಳಕೆ

    • ಕರ್ನಾಟಕದಲ್ಲಿ ಈ ವರ್ಷ ಎರಡನೆ ಬಾರಿ ಬಜೆಟ್‌ (Karnataka Budget) ಮಂಡನೆಯಾಗುತ್ತಿದೆ. ಪ್ರತಿವರ್ಷ ರಾಜ್ಯ ಬಜೆಟ್‌, ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದೆ. ರಾಜ್ಯ ಅಥವಾ ದೇಶದ ಆದಾಯ ಖರ್ಚು ವೆಚ್ಚ ಸಾಲ ತೆರಿಗೆ ಬಾಧ್ಯತೆಗಳ ಮುನ್ನೋಟ ಹಿನ್ನೋಟ ಪಡೆಯಲು ಬಜೆಟ್ ಬೇಕು. ಇದೇ ರೀತಿಯ ಬಜೆಟ್‌ ಪ್ರತಿ ಮನೆಯಲ್ಲೂ ಮಂಡಿಸಿದರೆ ಸಾಕಷ್ಟು ಲಾಭವಿದೆ.
ಬಜೆಟ್‌- ಖರ್ಚು ವೆಚ್ಚದ ಮೇಲೆ ನಿಗಾ ಇಡಲು ತಂತ್ರಜ್ಞಾನ ಬಳಕೆ
ಬಜೆಟ್‌- ಖರ್ಚು ವೆಚ್ಚದ ಮೇಲೆ ನಿಗಾ ಇಡಲು ತಂತ್ರಜ್ಞಾನ ಬಳಕೆ

ರಾಮ್‌, ರಮ್ಯ ದಂಪತಿಗಳು. ಅವರಿಗೆ ರಿತ್ವಿಕ್‌ ಮತ್ತು ರಿತ್ವಿ ಎಂಬ ಇಬ್ಬರು ಮಕ್ಕಳು. ಪ್ರತಿದಿನ ರಾತ್ರಿ ಎಲ್ಲಾ ಕೆಲಸ ಮುಗಿದ ನಂತರ ರಾಮ್‌ ಮತ್ತು ರಮ್ಯ ತಮ್ಮ ಮೊಬೈಲ್‌ನಲ್ಲಿಯೇ ಗೂಗಲ್‌ ಡ್ರೈವ್‌ ತೆರೆದು ಅದರಲ್ಲಿರುವ ಗೂಗಲ್‌ ಡಾಕ್ಸ್‌ ಶೀಟ್‌ ತೆರೆದು ತಮ್ಮ ಈ ದಿನದ ಖರ್ಚು ವೆಚ್ಚಗಳನ್ನು ಬರೆಯುತ್ತಾರೆ. ಬಳಿಕ ಮಕ್ಕಳನ್ನು ಕರೆದು ಅವರು ಅವರು ಮಾಡಿರುವ ಖರ್ಚಿನ ವಿವರವನ್ನು ಪಡೆದು ಅದನ್ನೂ ಆ ಶೀಟ್‌ನಲ್ಲಿ ಬರೆಯುತ್ತಾರೆ. ಪ್ರತಿದಿನ ಒಂದೈದು ನಿಮಿಷ ಆಯಾ ದಿನದ ಖರ್ಚು ವೆಚ್ಚಗಳನ್ನು ದಾಖಲಿಸಲು ವಿನಿಯೋಗಿಸುತ್ತಾರೆ.

ತಿಂಗಳ ಕೊನೆಗೆ ವಾರದ ರಜೆಯಂದು ಈ ನಾಲ್ವರು ಸುತ್ತ ಕುಳಿತುಕೊಳ್ಳುತ್ತಾರೆ. ಅದು ತಿಂಗಳ ಬಜೆಟ್‌ ಮಂಡನೆ. ಹೋಂ ಮಿನಿಸ್ಟರ್‌ ಯಾರೆಂದು ಹೇಳಬೇಕಾಗಿಲ್ಲ ಅಲ್ವಾ. ಈ ತಿಂಗಳು ಒಟ್ಟು ಎಷ್ಟು ಖರ್ಚಾಗಿದೆ ಎಂದು ಲೆಕ್ಕ ಹಾಕುತ್ತಾರೆ. ಆ ಮೀಟಿಂಗ್‌ ತುಂಬಾ ಮಜಾವಾಗಿರುತ್ತದೆ. ಅಲ್ಲಿ ನಗು, ಕೋಪ, ಪುಟ್ಟ ಜಗಳ ಎಲ್ಲವೂ ಇರುತ್ತದೆ. ಯಾವ ಖರ್ಚು ಅನಗತ್ಯವಾಗಿತ್ತು, ಯಾವ ಖರ್ಚು ಅನಿವಾರ್ಯವಾಯಿತು ಎಂದು ಚರ್ಚೆಯಾಗುತ್ತದೆ. ಈ ತಿಂಗಳು ಇಷ್ಟು ಖರ್ಚಾಗಿದೆ, ಅದರಲ್ಲಿ ನಿಮ್ಮ ಎಣ್ಣೆಯ ಖರ್ಚೇ ಹೆಚ್ಚಾಗಿದೆ ಎಂದು ಹೋಂ ಮಿನಿಸ್ಟರ್‌ ಎಚ್ಚರಿಸುತ್ತಾರೆ. ಈ ತಿಂಗಳು ಇಂತಹ ಖರ್ಚು ಕಡಿಮೆ ಮಾಡಿಕೊಳ್ಳಬೇಕು ಎಂಬ ಸಂಕಲ್ಪವೂ ಆಗುತ್ತದೆ. ನೋಡಿ ಆಟದ ಸಾಮಾನು ಎಂದು ಇಷ್ಟು ಹಣ ಪೋಲು ಮಾಡಿದ್ದೀರಿ" ಎಂದು ಮಕ್ಕಳಿಗೆ ಹಣಕಾಸು ಪಾಠವೂ ಆಗುತ್ತದೆ. ಪ್ರತಿ ತಿಂಗಳು ಈ ರೀತಿ ಬಜೆಟ್‌ ಚರ್ಚೆಯಾಗುತ್ತದೆ. ಆ ಸಮಯದಲ್ಲಿ ಬಿಸಿಬಿಸಿ ಟೀ, ತಿಂಡಿ ಎಲ್ಲವೂ ಇರುತ್ತದೆ.

ವರ್ಷದ ಕೊನೆಗೂ ಇವರು ಇದೇ ರೀತಿ ಕುಳಿತುಕೊಳ್ಳುತ್ತಾರೆ. ವರ್ಷದ ಒಟ್ಟು ಖರ್ಚು ಇಷ್ಟು ಲಕ್ಷ ಆಗಿದೆ ಎಂದು ಲೆಕ್ಕ ಮಾಡುತ್ತಾರೆ. ಆದಾಯ ಇಷ್ಟೇ ಇತ್ತು, ಉಳಿತಾಯ ಇಷ್ಟಿದೆ, ಮನೆ ಖರೀದಿಸಬಹುದಾ? ನಿವೇಶನ ಖರೀದಿಸಬಹುದಾ? ತುರ್ತು ಖರ್ಚಿಗೆ ಹಣವಿದೆಯೇ? ಚಿನ್ನ ಒಡವೆ ಹೂಡಿಕೆ ಇತ್ಯಾದಿಗಳ ಕುರಿತು ಚರ್ಚಿಸುತ್ತಾರೆ.

ಖರ್ಚು ವೆಚ್ಚ ಲೆಕ್ಕ ಪುಸ್ತಕದಲ್ಲಿ ಬರೆದಿಡಿ

ಮೇಲಿನ ರಾಮ್‌ ರಮ್ಯ ಮನೆಯ ಬಜೆಟ್‌ ಕಾಲ್ಪನಿಕದಂತೆ ಅನಿಸಬಹುದು. ಆದರೆ, ಈಗ ಬಹುತೇಕರು ತಮ್ಮದೇ ರೀತಿಯಲ್ಲಿ ಬಜೆಟ್‌ ಮಾಡುತ್ತಾರೆ. ತಮ್ಮ ದಿನನಿತ್ಯದ ಖರ್ಚುವೆಚ್ಚಗಳ ಮೇಲೆ ನಿಗಾ ಇಡುತ್ತಾರೆ. ತಮ್ಮ ಪ್ರತಿನಿತ್ಯದ ಖರ್ಚು ವೆಚ್ಚಗಳು ಸ್ವಯಂಚಾಲಿತವಾಗಿ ದಾಖಲಾಗುವಂತಹ ಆಪ್‌ಗಳನ್ನು ಕೆಲವರು ಬಳಸುತ್ತಾರೆ. ಪರ್ಸನಲ್‌ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ಗೆ ಈಗ ತಂತ್ರಜ್ಞಾನದ ಸಹಕಾರ ದೊರಕುತ್ತಿದೆ. ಕೆಲವರು ಎಕ್ಸೆಲ್‌ ಶೀಟ್‌ನಲ್ಲಿ ಖರ್ಚು ವೆಚ್ಚಗಳ ಲೆಕ್ಕವನ್ನು ಪ್ರತಿನಿತ್ಯ ದಾಖಲಿಸುತ್ತಾರೆ. ಗ್ಯಾಡ್ಜೆಟ್‌ ಟೆಕ್ನಾಲಜಿ ಇತ್ಯಾದಿಗಳು ಬೇಡ ಎನ್ನುವವರು ತಮ್ಮ ಲೆಕ್ಕದ ಪುಸ್ತಕದಲ್ಲಿ ಪ್ರತಿನಿತ್ಯ ಖರ್ಚು ವೆಚ್ಚಗಳನ್ನು ದಾಖಲಿಸುತ್ತಾರೆ.

ಡಿಜಿಟಲ್‌ ಜಗತ್ತಿನಲ್ಲಿ ಖರ್ಚುವೆಚ್ಚದ ಮೇಲೆ ನಿಗಾ

ವೈಯಕ್ತಿಕ ಬಜೆಟ್‌ ನಿರ್ವಹಣೆಗೆ ಈಗ ತಂತ್ರಜ್ಞಾನದ ಬೆಂಬಲವಿದೆ. ಸಾಕಷ್ಟು ಆಪ್‌ಗಳು ಇವೆ. ಎಕ್ಸೆಪೆನ್ಸ್‌ ಟ್ರ್ಯಾಕರ್‌ ಆಪ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ನೀವು ಎಟಿಎಂಗೆ ಹೋಗಿ ಐದು ಸಾವಿರ ರೂಪಾಯಿ ವಿತ್‌ಡ್ರಾ ಮಾಡಿದ್ದೀರಿ ಎಂದಿರಲಿ. ಇದಕ್ಕೆ ಸಂಬಂಧಪಟ್ಟ ಎಸ್‌ಎಂಎಸ್‌ ನಿಮ್ಮ ಮೊಬೈಲ್‌ಗೆ ಬರುತ್ತದೆ. ತಕ್ಷಣ ನಿಮ್ಮ ಮನಿ ಟ್ರ್ಯಾಕರ್‌ ಆಪ್‌ ಕಡಿತವಾದ ಮೊತ್ತವನ್ನು ದಾಖಲಿಸುತ್ತದೆ. ಇದೇ ರೀತಿ ಯುಪಿಐ ಬಳಸಿ ಅಂಗಡಿಯಲ್ಲಿ ಏನೋ ಖರೀದಿಸಿದ್ದೀರಿ ಎಂದಿರಲಿ. ಅದೂ ದಾಖಲಾಗುತ್ತದೆ. ಹೀಗೆ, ಮೊಬೈಲ್‌ನಲ್ಲಿ ನಡೆಯುವ ಪ್ರತಿಯೊಂದು ಹಣಕಾಸು ವ್ಯವಹಾರದ ಮಾಹಿತಿಯನ್ನು ಎಸ್‌ಎಂಎಸ್‌ ಇತ್ಯಾದಿಗಳ ಮೂಲಕ ಈ ಆಪ್‌ ಪಡೆದುಕೊಳ್ಳುತ್ತದೆ. ನಿಮ್ಮ ಎಸ್‌ಎಂಎಸ್‌ ನೋಡುವ ಅನುಮತಿಯನ್ನು ಈ ಆಪ್‌ಗೆ ನೀಡಿರಬೇಕು. ನೀವು ನೇರವಾಗಿ ನಿಮ್ಮ ದಿನದ ಖರ್ಚು ವೆಚ್ಚಗಳನ್ನು ನಮೂದಿಸುವ ಅವಕಾಶವೂ ಆಪ್‌ನಲ್ಲಿರುತ್ತದೆ. ಜತೆಗೆ ನಿಮ್ಮ ಮುಂಬರುವ ಬಾಕಿ ಬಿಲ್‌ಗಳ ಪಾವತಿಯ ಅಲಾರ್ಟ್‌ ಕೂಡ ಇಂತಹ ಆಪ್‌ಗಳಲ್ಲಿ ದೊರಕುತ್ತದೆ. ಮುಂಬರುವ ವಿಮಾ ಕಂತುಗಳು, ಬಾಕಿ ಬಿಲ್‌ಗಳ ವಿವರದ ಜತೆ ಇಂತಹ ಆಪ್‌ಗಳಲ್ಲಿಯೇ ಪಾವತಿಸುವ ಅವಕಾಶ ಇರುತ್ತದೆ.

ಪರ್ಸನಲ್‌ ಫೈನಾನ್ಸ್‌ ಮತ್ತು ಬಜೆಟ್ಟಿಂಗ್‌ ಆಪ್‌ಗಳಲ್ಲಿ ಎರಡು ವಿಧವಿದೆ. ಒಂದು ಉಚಿತ ಆಪ್‌. ಇನ್ನೊಂದು ಪ್ರೀಮಿಯಂ ಆಪ್‌. ಕೆಲವೊಂದು ಬ್ಯಾಂಕ್‌ಗಳ ಆಪ್‌ಗಳಲ್ಲಿಯೂ ಇಂತಹ ಫೀಚರ್‌ ಇರುತ್ತದೆ. ನಮ್ಮ ಪ್ರತಿನಿತ್ಯದ ಖರ್ಚುಗಳನ್ನು ಈ ಆಪ್‌ಗಳು ಟ್ರ್ಯಾಕ್‌ ಮಾಡುತ್ತವೆ. ಅಂದರೆ, ನಮ್ಮ ಎಸ್‌ಎಂಎಸ್‌ ಮೇಲೆ ನಿಗಾ, ಮುಂಬರುವ ಬಿಲ್‌ಗಳ ಮಾಹಿತಿ ಎಲ್ಲವೂ ದೊರಕುತ್ತದೆ.

ಇಂತಹ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಾಗ ಕೆಲವೊಂದು ಎಚ್ಚರಿಕೆಯನ್ನೂ ಹೊಂದಿರಬೇಕು. ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ಗೆ ಹೋಗಿ ಕಣ್ಣಿಗೆ ಕಂಡ ಯಾವುದೋ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದಲ್ಲ. ನಂಬಿಕಸ್ಥ ಎನಿಸುವ, ಅಸ್ತಿತ್ವದಲ್ಲಿರುವ ಪ್ರಮುಖ ಹಣಕಾಸು ಸಂಸ್ಥೆಯ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇಲ್ಲೂ ಫೇಕ್‌ ಆಪ್‌ಗಳು ಇರಬಹುದು, ವಂಚನೆಯೂ ನಡೆಯಬಹುದು. ಡಿಜಿಟಲ್‌ ಜಗತ್ತಿನಲ್ಲಿ ಈಗ ಎಲ್ಲಿ ಯಾವ ರೀತಿಯಲ್ಲಿ ವಂಚನೆ ನಡೆಯುತ್ತದೆ ಎಂದು ಹೇಳಲಾಗದು. ಇಂತಹ ಎಚ್ಚರಿಕೆಯೂ ಇರಬೇಕು. ನಿಮ್ಮ ಹಣಕಾಸು ಮಾಹಿತಿಯನ್ನು ಪಡೆದು ವಿವಿಧ ಹೂಡಿಕೆಗಳ ಕುರಿತು ಕಿರಿಕಿರಿ ಮಾಡುವ ಫೋನ್‌ ಕರೆ ಮಾಡುವುದೂ ಹೆಚ್ಚಾಗಬಹುದು.

ನಿಮ್ಮ ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಹೊರತುಪಡಿಸಿ ಬೇರೆ ಯಾವುದೇ ಆಕ್ಸೆಸ್‌ ಪಡೆಯುವ ಆಪ್‌ಗಳ ಕುರಿತು ಎಚ್ಚರಿಕೆಯಿಂದ ಇರಿ. ಇಂತಹ ಆಪ್‌ಗಳಲ್ಲಿ ಬ್ಯಾಂಕ್‌ ಪಾಸ್ವರ್ಡ್‌, ಬ್ಯಾಂಕ್‌ ಮಾಹಿತಿ ಇತ್ಯಾದಿಗಳನ್ನು ನೀಡಬೇಡಿ. ಕೆಲವೊಂದು ಎಕ್ಸೆಪೆನ್ಸ್‌ ಟ್ರ್ಯಾಕರ್‌ ಆಪ್‌ಗಳು ಸುರಕ್ಷಿತವಾಗಿದ್ದು, ನಮ್ಮ ಪ್ರತಿದಿನದ ಖರ್ಚು ವೆಚ್ಚಗಳ ಕುರಿತು ಅಲಾರ್ಟ್‌ ಮಾಡಿ ನಮ್ಮಲ್ಲಿ ಹಣಕಾಸು ಜಾಗೃತಿ ಮೂಡಿಸುತ್ತವೆ. ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಅದರ ರಿವ್ಯೂ, ರೇಟಿಂಗ್‌ ನೋಡಲು ಮರೆಯಬೇಡಿ.

***

ತಂತ್ರಜ್ಞಾನದ ನೆರವಿನಿಂದ ಅಥವಾ ತಂತ್ರಜ್ಞಾನ ನೆರವಿಲ್ಲದೆ ಲೆಕ್ಕ ಪುಸ್ತಕದಲ್ಲಿ ಬರೆದಿಡುವ ಮೂಲಕವಾದರೂ ಪ್ರತಿ ಮನೆಯಲ್ಲಿಯೂ ಕುಟುಂಬದ ಖರ್ಚು ವೆಚ್ಚಗಳ ಬಜೆಟ್‌ ಮಾಡುವುದು ಇಂದಿನ ಅಗತ್ಯ. ಇದು ನಾವು ನಿತ್ಯ ಮಾಡುವ ಅನಗತ್ಯ ಖರ್ಚುಗಳ ಮೇಲೆ ನಿಗಾ ಇಡಲು ನೆರವಾಗುತ್ತದೆ. ಜತೆಗೆ, ಹಣ ಉಳಿತಾಯ ಮಾಡಲು ಪ್ರೋತ್ಸಾಹಿಸುತ್ತದೆ. ಉಳಿತಾಯದ ಹಣವನ್ನು ಉತ್ತಮ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಜತೆಗೆ, ಮನೆಯ ಪ್ರತಿ ಸದಸ್ಯರಿಗೂ ಹಣಕಾಸು ಪಾಠ ಮಾಡುತ್ತದೆ. ಈ ಅಂಕಣದಲ್ಲಿ ಹೇಳಿರುವ ರಾಮ್‌ ಮತ್ತು ರಮ್ಯ ಹಾಗೂ ಅವರ ಮಕ್ಕಳಿಗೆ ಫ್ಯಾಮಿಲಿ ಬಜೆಟ್‌ನಿಂದ ಏನೆಲ್ಲ ಲಾಭವಾಗಿರಬಹುದು ಎಂದು ನೋಡೋಣ.

  1. ಇವರು ಸ್ವಂತ ಮನೆ ಖರೀದಿಸುವ ಕನಸು ಹೊಂದಿದ್ದರು. ಖರ್ಚು ವೆಚ್ಚ ದಾಖಲೀಕರಣದ ಮೂಲಕ ಅನಗತ್ಯ ಖರ್ಚು ತಪ್ಪಿದೆ. ಉಳಿತಾಯ ಹೆಚ್ಚಾಗಿದೆ. ಶೀಘ್ರದಲ್ಲಿ ಇವರು ಮನೆ ಖರೀದಿಸಲಿದ್ದಾರೆ.
  2. ರಾಮ್‌ಗೆ ಕೆಲವು ದುರಾಭ್ಯಾಸಗಳು ಇದ್ದವು. ಇದನ್ನು ಕುಡಿತ, ಸಿಗರೇಟು ಇತ್ಯಾದಿಗಳು ಎಂದಿಟ್ಟುಕೊಳ್ಳಿ. ಪ್ರತಿತಿಂಗಳ ಖರ್ಚಿನ ಪಟ್ಟಿಯಲ್ಲಿ ಈ ದುಶ್ಚಟದ ಮೊತ್ತವೇ ಅಧಿಕವಾಗಿರುವುದನ್ನು ಗಮನಿಸಿದಾಗ ಅವರಲ್ಲಿ ನಿಧಾನವಾಗಿ ಪರಿವರ್ತನೆಯಾಗಿದೆ. ನಾನು ಈ ಖರ್ಚು ಕಡಿಮೆ ಮಾಡಿಕೊಳ್ಳಬೇಕು ಎಂದೆನಿಸಿದೆ. ತಿಂಗಳಿನಿಂದ ತಿಂಗಳಿಗೆ ಇವುಗಳಿಗೆ ಮಾಡುವ ಖರ್ಚನ್ನು ಕಡಿಮೆ ಮಾಡಲು ತೊಡಗಿದ್ದಾರೆ. ಈಗ ಇವರು ದುಶ್ಚಟ ಮುಕ್ತರಾಗಿದ್ದಾರೆ.
  3. ರಮ್ಯಳಿಗೆ ಕೂಡ ಈ ಹೋಂ ಬಜೆಟ್‌ನಿಂದ ಹಲವು ಉಪಯೋಗವಾಗಿದೆ. ಮನೆಗೆ ತಿಂಗಳಿಗೆ ಎಷ್ಟು ಖರ್ಚು ಮಾಡಬೇಕು ಎಂಬ ಸ್ಪಷ್ಟತೆ ದೊರಕಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ನೆರವಾಗಿದೆ.
  4. ಮಕ್ಕಳು ಈಗ ಪೇಟೆಗೆ ಹೋದಾಗ ಅದು ಬೇಕು ಇದು ಬೇಕು ಎಂದು ಅನಗತ್ಯ ವಸ್ತುಗಳಿಗೆ ಹಠ ಮಾಡುವುದಿಲ್ಲ. ಅಗತ್ಯ ಇದ್ದರೆ ಮಾತ್ರ ಖರೀದಿಸಬೇಕು ಎಂಬ ಅರಿವು ಇದೆ. ಮನೆಯಲ್ಲಿ ಒಂದು ಆಟಿಕೆ ಇರುವಾಗ ಇನ್ನೊಂದು ಅದೇ ರೀತಿಯ ಆಟಿಕೆ ಬೇಡ ಎಂದು ತಿಳಿದಿದ್ದಾರೆ. ಜತೆಗೆ, ಅವರ ಶಾಲಾ ಫೀಸ್‌ಗಳ ವಿವರಗಳೂ ಬಜೆಟ್‌ನಲ್ಲಿ ಚರ್ಚೆಯಾಗುವುದರಿಂದ ಮನೆಯವರು ತಮಗಾಗಿ ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬ ಅರಿವೂ ಅವರಿಗೆ ಉಂಟಾಗಿದೆ.

ಸಿಎಂ ಸಿದ್ದರಾಮಯ್ಯ ನಾಳೆ ಕರ್ನಾಟಕದ ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವು ಕೂಡ ನಮ್ಮ ಆದಾಯ ನೋಡಿಕೊಂಡು ಖರ್ಚುವೆಚ್ಚದ ಮೇಲೆ ನಿಗಾ ಇಡೋಣ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

ನೀವು ಓದಬೇಕಾದ ಡಿಜಿಟಲ್‌ ಜಗತ್ತಿನ ಇತರೆ ಅಂಕಣಗಳು

1. ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ