Digital Jagathu: ಡಿಜಿಟಲ್ ವಂಚಕರು ಅನ್ಯ ಭಾಷೆಯಲ್ಲೇ ಮಾತನಾಡಬೇಕೆಂದಿಲ್ಲ, ಕನ್ನಡ ತುಳುವಿನಲ್ಲೂ ಯಾಮಾರಿಸಬಹುದು
Online scam awareness: ಡಿಜಿಟಲ್ ವಂಚಕರು ಯಾವುದೋ ಅನ್ಯರಾಜ್ಯದಿಂದ ಕರೆ ಮಾಡಬಹುದು, ಹಿಂದಿ ಅಥವಾ ಇತರೆ ಅನ್ಯ ಭಾಷೆಯಲ್ಲಿ ಮಾತನಾಡಬಹುದು ಎಂದುಕೊಳ್ಳಬೇಡಿ. ನಿಮ್ಮ ಮಾತೃಭಾಷೆಯಲ್ಲಿ, ನಿಮ್ಮ ಲೋಕಲ್ ಭಾಷೆಯಲ್ಲಿ ಮಾತನಾಡಿ ಬಲೆಗೆ ಬೀಳಿಸಬಹುದು.
ಒಂದು ತಿಂಗಳಾಗಿರಬಹುದು. ಯಾವುದೋ ವೈಯಕ್ತಿಕ ಕಾರ್ಯಕ್ರಮದಲ್ಲಿ ಬಿಝಿಯಾಗಿ ಊರಲ್ಲಿದ್ದೆ. ಸಂಬಂಧಿಕರ ಮದುವೆ ದಿಬ್ಬಣದ ಗಡಿಬಿಡಿ. ಈ ಸಂದರ್ಭದಲ್ಲಿ ಎರಡು ಮೂರು ಬಾರಿ ಮಿಸ್ ಕಾಲ್ ಬಂದಿರುವುದನ್ನು ಗಮನಿಸಿದೆ. ಅಪರಿಚಿತ ಸಂಖ್ಯೆ, ಆದರೆ, ಫೋನ್ ನಂಬರ್‌ಗೆ ಯಾವುದೇ ಸ್ಪ್ಯಾಮ್ ಅಲರ್ಟ್ ಇರಲಿಲ್ಲ. ಮತ್ತೊಮ್ಮೆ ಅದೇ ಸಂಖ್ಯೆಯಿಂದ ಕರೆ ಬಂದಾಗ ಸ್ವೀಕರಿಸಿದೆ. "ಹಲೋ ಸರ್ ಓಲರ್ (ಹಲೋ ಸರ್ ಎಲ್ಲಿದ್ದೀರಿ)" ಎಂದು ಸ್ಥಳೀಯ ವ್ಯಕ್ತಿಯೊಬ್ಬರ ಧ್ವನಿ. ಯಾರೋ ಫಂಕ್ಷನ್‌ಗೆ ಸಂಬಂಧಪಟ್ಟ ನೆಂಟರಿರಬಹುದು ಎಂದುಕೊಂಡೆ. "ಪನ್ಲೆ ಅಣ್ಣಾ(ಹೇಳಿ ಅಣ್ಣಾ)" ಎಂದೆ. "ದನಿ, ಈರೇಗ್ ಮುರಾನಿಡ್ ಬೊಕ್ಕ ಕಾಲ್ ಮಾಲ್ತೊಂದು ಉಲ್ಲೆ, ಫ್ಲಿಪ್‌ಕಾರ್ಟ್‌ಡ್ ಒಂಜಿ ಆರ್ಡರ್ ಬಂತುಂಡ್. ಫೋನ್ ತಿಕ್ಕೊಂದಿಜಿ" (ನಿಮಗೆ ಮೊನ್ನೆಯಿಂದ ಕರೆ ಮಾಡುತ್ತಿದ್ದೇನೆ, ಫ್ಲಿಪ್‌ಕಾರ್ಟ್‌ನಿಂದ ಆರ್ಡರ್ ಮಾಡಿದ್ದು. ನಿಮ್ಮ ಫೋನ್ ಸಿಗುತ್ತಿರಲಿಲ್ಲ) ಎಂದ. ಹೌದಾ, ನಾನು ಆರ್ಡರ್ ಮಾಡಿಲ್ಲ. ಬೇರೆ ಯಾರಾದರೂ ಮಾಡಿರಬಹುದು, ಆರ್ಡರ್ ತಲುಪಿಸಿ ಎಂದೆ. ಸದ್ಯ ನಾನ್ಯಾವುದು ಆರ್ಡರ್ ಮಾಡಿರಲಿಲ್ಲ. ಹೆಂಡ್ತಿ ಮಾಡಿದ್ದಾಳೋ ಏನೋ ಅಂದುಕೊಂಡೆ.
ಈಗ ಎಲ್ಲಿದ್ದೀರಿ ಎಂದು ಕೇಳಿದಾಗ ಸುಳ್ಯ ಗುತ್ತಿಗಾರ್‌ನಲ್ಲಿದ್ದೇನೆ ಎಂದ. "ನಾನು ಮನೆಯ ಹತ್ತಿರ ಇಲ್ಲ, ಹೀಗಾಗಿ, ಆರ್ಡರ್ ಅನ್ನು ನಮ್ಮ ಮನೆಯ ಪಕ್ಕದಲ್ಲಿ... ಅವರ ಅಂಗಡಿಯಲ್ಲಿ ಕೊಡಿ ಎಂದೆ. "ಅಣ್ಣಾ ಹಣ 900 ರೂಪಾಯಿ ಕೊಡಬೇಕು" ಎಂದ. ಹಣ ಎಂದಾಗ ಅಲರ್ಟ್ ಆದೆ. ನಾನು ನನ್ನ ಕುಟುಂಬ ಆನ್‌ಲೈನ್‌ನಲ್ಲಿ ಕ್ಯಾಷ್ ಆಂಡ್ ಡೆಲಿವರಿ ಮಾಡೋದು ಕಡಿಮೆ. ಇವನ್ಯಾಕೆ ಹಣ ಕೇಳುತ್ತಿದ್ದಾನೆ ಎಂದುಕೊಂಡೆ. ಹೆಂಡತಿಯ ಹತ್ತಿರ ಹೋಗಿ ಏನಾದರೂ ಬುಕ್ಕಿಂಗ್ ಮಾಡಿದ್ದೀಯಾ ಎಂದು ವಿಚಾರಿಸಿದೆ. ಇಲ್ಲ ಅಂದಳು.
"ಏನು ಆರ್ಡರ್ ಬಂದಿದೆ" ಎಂದು ಅವನಲ್ಲಿ ಕೇಳಿದೆ. "ಅದು ಕುಕ್ಕರ್" ಅಂದ. ಕುಕ್ಕರ್ ಮನೆಯಲ್ಲಿರುವುದೇ ಹೆಚ್ಚಾಗಿದೆ. ಇವನು ಕಳ್ಳ ಅಂದುಕೊಂಡೆ. "ಸರಿ ಎಷ್ಟು ರೂಪಾಯಿ" ಎಂದೆ. "900 ರೂಪಾಯಿ" ಎಂದ. ನಂಗೆ ಅದು ಬೇಡ, ನೀವೇ ಇಟ್ಟುಕೊಳ್ಳಿ ಅಂದೆ. ಹಾಗಾದ್ರೆ ಕ್ಯಾನ್ಸಲ್ ಮಾಡೋದ ಎಂದ. ಮಾಡಿ ಅಂದೆ. ಒಟಿಪಿ ಒಂದು ಬರುತ್ತೆ ಅದನ್ನು ಕೊಡಿ ಅಂದ. ಒಟಿಪಿ ವಿಷಯವೆಲ್ಲ ಗೊತ್ತಿದೆ ಎಂದೆ. ಆಗಲೇ ಒಟಿಪಿ ಬಂದಾಗಿತ್ತು. (ಇಲ್ಲೇ ಕೆಳಗೆ ಒಟಿಪಿ ಫೋಟೊ ಇದೆ ನೋಡಿ) "ಅಣ್ಣಾ ಬೇರೆಯವರಿಗೆ ಡೆಲಿವರಿ ಮಾಡಬೇಕಿದೆ, ಲೇಟ್ ಆಯ್ತು, ಬೇಗ ಒಟಿಪಿ ಕೊಡಿ" ಅಂತ ಅವಸರ ಮಾಡಲು ಆರಂಭಿಸಿದ. ಅಲ್ಲಾ ಮಾರಾಯ ತುಳುವಿನಲ್ಲೂ ಆನ್‌ಲೈನ್ ವಂಚನೆ ಮಾಡೋಕೆ ಶುರು ಮಾಡಿದ್ದೀರಿ ಅಲ್ವಾ, ನೋಡ್ಕೊತ್ತಿನಿ ಅಂದೆ. ಮುಂದಿನ ಸಂವಹನ ಇಲ್ಲಿ ಅನಗತ್ಯ.
***
ನಿಮ್ಮಲ್ಲಿ ಯಾರಿಗಾದರೂ ಇಂತಹ ಅನುಭವ ಆಗಿರಬಹುದು. ಆನ್‌ಲೈನ್ ವಂಚನೆ ಮಾಡುವವರು ಯಾವುದೋ ಅನ್ಯರಾಜ್ಯದಲ್ಲಿ ಪೊಲೀಸರ ಕೈಗೆ ಸಿಗದಂತೆ ಕುಳಿತಿರುತ್ತಾರೆ, ಅವರಿಗೆ ಹಿಂದಿ ಅಥವಾ ಹೊರರಾಜ್ಯದ ಸ್ಥಳೀಯ ಭಾಷೆ ಬಿಟ್ಟು ಬೇರೆ ತಿಳಿಯೋದಿಲ್ಲ ಎಂಬ ಕಲ್ಪನೆ ಹೆಚ್ಚಿನವರಿಗೆ ಇರಬಹುದು. ಅನ್ಯ ಭಾಷೆಯಲ್ಲಿ ಈ ರೀತಿ ಕರೆ ಬಂದಾಗ ಎಚ್ಚೆತ್ತುಕೊಳ್ಳಬಹುದು. ಆದರೆ, ನಮ್ಮದೇ ತುಳು ಭಾಷೆಯಲ್ಲಿ, ಕನ್ನಡ ಭಾಷೆಯಲ್ಲಿ, ಧಾರವಾಡ ಕನ್ನಡದಲ್ಲಿ, ವಿಜಯಪುರ ಕನ್ನಡದಲ್ಲಿ, ಬೆಳಗಾವಿ ಕನ್ನಡದಲ್ಲಿ, ಮಂಗಳೂರು ಕನ್ನಡದಲ್ಲಿ ಮಾತನಾಡಿ "ಇವನು ನಮ್ಮವನೇ" ಅನ್ನುವ ಫೀಲ್ ಆಗುವಂತೆ ಮಾತನಾಡಿ ವಂಚನೆ ಮಾಡುತ್ತಾರೆ ಎನ್ನುವ ಎಚ್ಚರಿಕೆ ಅಗತ್ಯ. ಈ ಕುರಿತು ನಾವು ಮಾತ್ರವಲ್ಲದೆ ನಮ್ಮ ಮನೆಯ ಹಿರಿಯರಿಗೂ ಅಲರ್ಟ್ ಮಾಡುವುದು ಅಗತ್ಯ. ಈ ಕುರಿತು ಇಂದಿನ ಡಿಜಿಟಲ್ ಜಗತ್ತು ಅಂಕಣದಲ್ಲಿ ಎಚ್ಚರಿಸಬೇಕೆನಿಸಿತು.
ಉಳಿದಂತೆ ಇತ್ತೀಚೆಗೆ ನಡೆಯುತ್ತಿರುವ ಡಿಜಿಟಲ್ ವಂಚನೆಗಳ ಕುರಿತು ನಿಮಗೆಲ್ಲರಿಗೂ ತಿಳಿದಿರಬಹುದು. ಪ್ರತಿನಿತ್ಯ ಡಿಜಿಟಲ್ ವಂಚನೆಗೆ ಒಳಗಾದವರ ಸುದ್ದಿಗಳನ್ನು ಓದಿರುತ್ತೀರಿ. ಆನ್‌ಲೈನ್‌ನಲ್ಲಿ ಪರಿಚಯವಾದವರು ಎಲ್ಲೋ ದೆಹಲಿ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದೇನೆ, ಫಾರಿನ್ ಕರೆನ್ಸಿ ಕ್ಲಿಯರ್ ಮಾಡಲು ನೆರವಾಗಿ ಎನ್ನುವುದು, ವಿಮಾನ ನಿಲ್ದಾಣಕ್ಕೆ ಪಾರ್ಸೆಲ್ ಬಂದಿದೆ, ಕಸ್ಟಮ್ ಕ್ಲಿಯರ್ ಮಾಡಲು ಹಣ ನೀಡಿ ಎನ್ನುವುದು, ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡು ವಂಚನೆ ಮಾಡುವುದು ಇತ್ಯಾದಿಗಳೆಲ್ಲವೂ ನಿತ್ಯವೂ ವರದಿಯಾಗುತ್ತದೆ. ಅಚ್ಚರಿಯೆಂದರೆ ವಿದ್ಯಾವಂತರೇ ಇಂತಹ ಮೋಸದ ಜಾಲಕ್ಕೆ ಬಿದ್ದು, ಲಕ್ಷಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ.
***
ಡಿಜಿಟಲ್ ಜಗತ್ತಿನ ವಂಚನೆ, ಮೋಸಕ್ಕೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುವ ಪ್ರಸಂಗಗಳು ಹೆಚ್ಚುತ್ತಿರುವುದು ಮಾತ್ರ ಭಯಾನಕ. ನ್ಯಾಯ ನೀತಿ ಧರ್ಮ ಮರ್ಯಾದೆ ಪ್ರತಿಷ್ಠೆ ಇತ್ಯಾದಿಗಳೇ ಬದುಕು ಎಂದು ನಂಬಿಕೊಂಡು ಬದುಕುವವರು ಒಮ್ಮೊಮ್ಮೆ ಇಂತಹ ವಂಚಕರ ಜಾಲಕ್ಕೆ ಬೀಳುವುದುಂಟು. ಬಳಿಕ ಮರ್ಯಾದೆಗೆ ಅಂಜಿ ಪ್ರಾಣ ಕಳೆದುಕೊಳ್ಳುತ್ತಾರೆ. ಆನ್‌ಲೈನ್ ಸಾಲದ ಜಾಲಕ್ಕೆ ಸಿಲುಕಿ ಸಾಕಷ್ಟು ಜನರು ಮೋಸ ಹೋಗಿದ್ದಾರೆ. ಸಾಲ ಮರುಪಾವತಿ ಮಾಡಿದರೂ ಮತ್ತೆ ಹಲವು ಪಟ್ಟು ಹಣ ಕೇಳುವುದು, ಬಳಿಕ ಯಾವುದೋ ಅಶ್ಲೀಲ ಫೋಟೊಗೆ ಇವರ ಫೋಟೊ ಮರ್ಜ್ ಮಾಡಿ ಕಾಂಟ್ಯಾಕ್ಟ್‌ನಲ್ಲಿರುವವರಿಗೆಲ್ಲ ಕಳುಹಿಸುವುದು ಇತ್ಯಾದಿಗಳೆಲ್ಲವೂ ನಡೆಯುತ್ತವೆ.
ಕೆಲವು ಗಂಡಸರಿಗೆ ಯಾವುದೋ ವೀಕ್‌ನೆಸ್ ಇರುತ್ತದೆ. ಅಪರಿಚಿತ ಸುಂದರ ಪ್ರೊಫೈಲ್ ಫೋಟೊ ಇರುವ ಫೇಸ್‌ಬುಕ್ ಅಥವಾ ವಾಟ್ಸಪ್‌ನಿಂದ ಬಂದ ಹಾಯ್ ಡಿಯರ್ ಹೌ ಆರ್ ಯು ಎಂಬ ಸಂದೇಶ ಬಂದರೆ ನಿಮುರಿಕೊಳ್ಳುತ್ತಾರೆ. ಬಳಿಕ ವಿಡಿಯೋ ಕಾಲ್ ಮಾಡೋಣ ಎನ್ನುತ್ತಾರೆ. ಏನೋ ಒಂದು ಅಶ್ಲೀಲ ಪದ ಬಳಸಿ ಇಂತಹ ಗಂಡಸರನ್ನು ಸೆಳೆದುಕೊಳ್ಳುತ್ತಾರೆ. ಸರಿ ಎಂದುಕೊಂಡು ವಿಡಿಯೋ ಕಾಲ್ ಮಾಡಿದರೆ ಆ ಕಡೆಯಲ್ಲಿ ಯಾವುದೋ ಅಶ್ಲೀಲ ದೃಶ್ಯ ಕಾಣಿಸಿಕೊಳ್ಳುತ್ತದೆ, ಈ ಕಡೆಯಲ್ಲಿ ನೀವು ವಿಡಿಯೋ ಕಾಲ್‌ನಲ್ಲಿ ಅವರೊಂದಿಗೆ ಮಾತನಾಡುವ ಫೋಟೊ ಇರುತ್ತದೆ. ಅದೇ ಸ್ಕ್ರೀನ್‌ಶಾಟ್ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ. ನಿಮ್ಮ ಫೋಟೊ ಇರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವುದಾಗಿ, ನಿಮ್ಮ ಕಾಂಟ್ಯಾಕ್ಟ್‌ಗೆ ಕಳುಹಿಸುವುದಾಗಿ ಭಯ ಪಡಿಸುತ್ತಾರೆ. ಇದೇ ವಿಷಯಕ್ಕೂ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ.
***
ಈಗ ಪುಟ್ಟ ಮಕ್ಕಳ ಕೈಯಲ್ಲಿ ಮನೆಯ ದೊಡ್ಡವರ ಮೊಬೈಲ್ ಫೋನ್ ಇರುವುದು ಸಾಮಾನ್ಯ. ಅವರು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುತ್ತ ಇರಬಹುದು. ಆನ್‌ಲೈನ್ ಗೇಮ್ಸ್ ಆಡಬಹುದು. ಅವರು ಒಂದು ನಿರ್ದಿಷ್ಟ ಗೇಮ್ ಆಡುವಾಗ ಮತ್ತೊಂದು ಗೇಮ್ ಡೌನ್‌ಲೋಡ್ ಮಾಡುವಂತಹ ಜಾಹೀರಾತುಗಳು ಬರಬಹುದು. ಆದರೆ, ಅದು ಮತ್ತೊಂದು ಆಪ್ ಎಂದು ತಿಳಿಯದ ಪುಟ್ಟ ಮಕ್ಕಳು ಇಂತಹ ಅನಪೇಕ್ಷಿತ ಲಿಂಕ್‌ಗಳನ್ನು, ಇನ್‌ಸ್ಟಾಲ್ ಬಟನ್‌ಗಳನ್ನು ಕ್ಲಿಕ್ ಮಾಡುತ್ತಾರೆ. ಇದರಿಂದ ಮೊಬೈಲ್‌ನಲ್ಲಿ ಸ್ಮ್ಪಾಮ್ ಆಪ್‌ಗಳು, ನಿಮ್ಮ ಮೊಬೈಲ್ ಹಿಡಿತಕ್ಕೆ ತೆಗೆದುಕೊಳ್ಳುವಂತಹ ತಂತ್ರಾಂಶಗಳು ಇನ್‌ಸ್ಟಾಲ್ ಆಗಬಹುದು. ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ದಿನದ ಕೊನೆಗೆ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗೆ ಹೋಗಿ ಅಲ್ಲಿರುವ ಆಪ್ ಲಿಸ್ಟ್‌ನಲ್ಲಿ ಅನವಶ್ಯಕ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಮರೆಯಬೇಡಿ.
ಡಿಜಿಟಲ್ ಜಗತ್ತಿನ ವಿರಾಟ್ ವಂಚನೆಯ ವಿವಿಧ ರೂಪಗಳನ್ನು ಮತ್ತೆ ಈ ಅಂಕಣದಲ್ಲಿ ನೆನಪಿಸಿಕೊಳ್ಳುತ್ತಿಲ್ಲ. ಇಂತಹ ವಂಚನೆಗೆ ಜನ ಸಾಮಾನ್ಯರು ಮಾತ್ರವಲ್ಲದೆ ಐಎಎಸ್ ಅಧಿಕಾರಿಗಳು, ಪೊಲೀಸ್ ಆಯುಕ್ತರೇ ಬಿದ್ದು ಹಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟು ಇದೆ. ಆನ್‌ಲೈನ್ ವಂಚನೆಯು ಯಾವುದೇ ಸ್ವರೂಪದಲ್ಲಿ ನಿಮ್ಮ ಎದುರಿಗೆ ಬರಬಹುದು. ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರವಿರಲಿ. ವಾಟ್ಸಪ್‌ನಲ್ಲಿ ಬರುವ ಆಮೀಷದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಎಲ್ಲಾದರೂ ಇಂತಹ ವಂಚನೆಗೆ, ಮೋಸದ ಜಾಲಕ್ಕೆ ಬಿದ್ದಾಗ ದೃತಿಗೆಡಬೇಡಿ. ದೊಡ್ಡ ಮೊತ್ತ ಕಳೆದುಕೊಂಡಾಗ ಸೈಬರ್ ಪೊಲೀಸರಿಗೆ ದೂರು ನೀಡಿ. ಅಶ್ಲೀಲ ಬೆದರಿಕೆಗೆ ಅಂಜಿ ಅಮೂಲ್ಯ ಪ್ರಾಣ ಕಳೆದುಕೊಳ್ಳಬೇಡಿ. ಯಾವುದೋ ಸ್ಕ್ರೀನ್‌ಶಾಟ್‌ಗೆ, ಕೃತಕ ವಿಡಿಯೋಗೆ ಹೆದರಿ ಜೀವವ ಕಳೆದುಕೊಳ್ಳುವಷ್ಟು ದುರ್ಬಲರು ನೀವಾಗಬೇಡಿ. ಈ ಜಗತ್ತಿನಲ್ಲಿ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ. ಘಟನೆ ನಡೆದಾಗ ಸಂಬಂಧಪಟ್ಟವರಿಗೆ ಸತ್ಯ ವಿಷಯ ಏನೆಂದು ಮನವರಿಕೆ ಮಾಡಲು ಪ್ರಯತ್ನಿಸಿ. ಇಂತಹ ಘಟನೆಗಳನ್ನು ಎಲ್ಲರಿಗೂ ಅರ್ಥ ಮಾಡಿಸುವುದು ಕಷ್ಟವೆಂದಾದರೆ ಒಂದಿಷ್ಟು ಆಪ್ತರಿಗೆ ವಿಷಯ ತಿಳಿಸಿ ಸ್ವಲ್ಪ ದಿನ ಎಲ್ಲಾದರೂ ಬೇರೆ ಊರಿಗೆ ಹೋಗಿ ಬನ್ನಿ. ಎಲ್ಲರೂ ಅವರವರ ಭ್ರಮೆಗಳಲ್ಲಿ ಬದುಕುತ್ತಿದ್ದಾರೆ. ಇತರರಿಗೆ ಭಯಪಟ್ಟು ನಿಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸುತ್ತ ಈ ಅಂಕಣ ಮುಗಿಸುತ್ತಿದ್ದೇನೆ. ಮುಂದಿನ ವಾರ ಡಿಜಿಟಲ್ ಜಗತ್ತಿನ ಇನ್ನಷ್ಟು ವಿಷಯ ತಿಳಿದುಕೊಳ್ಳೋಣ.
- ಪ್ರವೀಣ್ ಚಂದ್ರ ಪುತ್ತೂರು