Huawei Mate XT Tri fold: ಜಗತ್ತಿನ ಮೊದಲ ತ್ರಿಬಲ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಪರಿಚಯಿಸಿದ ಹುವೈ; ಮಡಿಚಿ ಬಿಡಿಸಿದ್ದಷ್ಟು ಅಚ್ಚರಿ
Sep 11, 2024 11:16 AM IST
Huawei Mate XT Tri fold: ಜಗತ್ತಿನ ಮೊದಲ ತ್ರಿಬಲ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್
- Huawei Mate XT Ultimate Design: ಈಗಾಗಲೇ ಟೆಕ್ ಜಗತ್ತಿನಲ್ಲಿ ಎರಡು ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಇದೀಗ ಜಗತ್ತಿನ ಮೊದಲ ತ್ರಿಬಲ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಅನ್ನು ಹುವೈ ಪರಿಚಯಿಸಿದೆ. ಹುವೈ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Huawei Mate XT Tri fold: ಆಪಲ್ ಕಂಪನಿಯು ಐಫೋನ್ 16 ಸರಣಿಯ ಫೋನ್‌ಗಳನ್ನು ಪರಿಚಯಿಸಿದ ಬೆನ್ನಲ್ಲೇ ಹುವೈ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್ ಎಂಬ ಜಗತ್ತಿನ ಮೊದಲ ತ್ರೀಫೋಲ್ಡ್ (ಮೂರು ಹಂತದಲ್ಲಿ ಮಡುಚಬಹುದಾದ) ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಿಡಿಸಿದರೆ 10.2 ಇಂಚಿನ ಸ್ಕ್ರಿನ್ ದೊರಕುತ್ತದೆ. ಈ ಸ್ಮಾರ್ಟ್‌ಫೋನ್‌ನ ಪರದೆಯನ್ನು ಫ್ಲೆಕ್ಸಿಬಲ್ ವಸ್ತುಗಳಿಂದ ತಯಾರಿಸಲಾಗಿದ್ದು, ಬೇರೆಬೇರೆ ದಿಕ್ಕಿಗೆ ಮಡುಚಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಮಾರ್ಟ್‌ಫೋನ್ ತ್ರಿಬಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅಂದರೆ, ಒಂದು 50 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಫಿಕ್ಸೆಲ್ನ ಆಲ್ಟ್ರಾವೈಡ್ ಕ್ಯಾಮೆರಾ ಮತ್ತು 12ಮೆಗಾಫಿಕ್ಸೆಲ್‌ನ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಈ ತ್ರಿಬಲ್ ಫೋಲ್ಡಿಂಗ್ ಕ್ಯಾಮೆರಾಗೆ ಹುವೈ ಕಂಪನಿಯು 5,600 ಎಂಎಎಚ್ ಬ್ಯಾಟರಿ ಜೋಡಿಸಿದೆ.
ಹುವೈ ಮೇಟ್ ಎಕ್ಸ್‌ಟಿಯ ದರ, ಲಭ್ಯತೆ
ಹುವೈ ಕಂಪನಿಯ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್ ದರ ಸಿಎನ್‌ವೈ 19,999. ಸಿಎನ್‌ವೈ ಅಂದ್ರೆ ಚೈನೀಸ್ ಯುವಾನ್ ಕರೆನ್ಸಿ. ಭಾರತದ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ ಇದರ ದರ ಸುಮಾರು 2,35,900 ರೂಪಾಯಿ ಆಗುತ್ತದೆ. ಬೇಸ್ ಮಾದರಿಯು 16 ಜಿಬಿ ರಾಮ್ ಮತ್ತು 256 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 512 ಜಿಬಿ ಮತ್ತು 1ಟಿಬಿ ಸ್ಟೋರೇಜ್ ಆಯ್ಕೆಯಲ್ಲೂ ದೊರಕುತ್ತದೆ. ಇದರ ದರ 21,999 ಯುವಾನ್ ಮತ್ತು 23,999 ರೂಪಾಯಿ. ಅಂದ್ರೆ, 2,59,500 ರೂಪಾಯಿ ಮತ್ತು 2,83,100 ರೂಪಾಯಿ.
ಮೂರು ಹಂತದಲ್ಲಿ ಮಡುಚಬಹುದಾದ ಈ ಫೋನ್ ಡಾರ್ಕ್ ಬ್ಲ್ಯಾಕ್ ಮತ್ತು ರೂಯಿ ರೆಡ್ ಕಲರ್ ಆಯ್ಕೆಗಳಲ್ಲಿ ದೊರಕುತ್ತದೆ. ಇದನ್ನು ಹುವೈ ವಿಮಾಲ್‌ನಲ್ಲಿ ಖರೀದಿಸಬಹುದು. ಚೀನಾದಲ್ಲಿ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಹುವೈ ಕಂಪನಿಯು ಭಾರತದಲ್ಲಿ ಈ ತ್ರಿಬಲ್ ಫೋಲ್ಡ್ ಫೋನ್ ಅನ್ನು ಯಾವಾಗ ಪರಿಚಯಿಸಲಿದೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಭಾರತದಲ್ಲಿ ಚೀನಾ ಮೊಬೈಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮೂರು ಹಂತದಲ್ಲಿ ಮಡುಚಬಹುದಾದ ಈ ಹುವೈ ಸ್ಮಾರ್ಟ್‌ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಆಗಮಿಸುವ ಕುರಿತು ನಿರೀಕ್ಷಿಸಬಹುದು.
ಹುವೈ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ವಿನ್ಯಾಸ
ಡ್ಯೂಯೆಲ್ ಸಿಮ್ ಫೋನ್ ಇದಾಗಿದೆ. ಅಂದ್ರೆ ಎರಡೂ ನ್ಯಾನೋ ಸಿಮ್‌ಗಳನ್ನು ಅಳವಡಿಸಬಹುದು. ಇದು 10.2 ಇಂಚಿನ ಪರದೆ ಹೊಂದಿದೆ. ಮಡುಚಿದಾಗ 7.9 ಇಂಚು ಫೋನ್ ಆಗುತ್ತದೆ. ಇನ್ನೊಮ್ಮೆ ಮಡುಚಿದಾಗ 6.4 ಇಂಚಿನ ಸ್ಕ್ರೀನ್‌ನ ಫೋನ್ ಆಗುತ್ತದೆ.