ತನ್ನ ಮದುವೆ ದಿನವೂ ಕೆಲಸ ಮಾಡುತ್ತಿರುವ ಟೆಕಿ: ಇದೆಂಥ ಹುಚ್ಚು, ಕೆಲಸ ನಿಲ್ಸಿ ಹುಡುಗಿನ ನೋಡು, ಇಲ್ಲದಿದ್ರೆ ಡೈವೋರ್ಸ್ ಪಕ್ಕಾ ಎಂದ ನೆಟ್ಟಿಗರು
Oct 08, 2024 01:48 PM IST
ತನ್ನದೇ ಮದುವೆ ದಿನ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ವರ, ಫೋಟೊ ವೈರಲ್
- ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಫೋಟೊಗಳನ್ನು ನೋಡಿದ್ರೆ ಹೀಗೂ ಇರುತ್ತಾ ಗುರು ಅನ್ನಿಸದೇ ಇರೋಲ್ಲ. ಇಲ್ಲೊಂದು ಅಂಥದ್ದೇ ಫೋಟೊ ಇದೆ. ಇದರಲ್ಲಿ ವ್ಯಕ್ತಿಯೊಬ್ಬ ತನ್ನದೇ ಮದುವೆ ದಿನ, ಮದುವೆ ಮಂಟಪದಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ‘ನಿಂಗೆ ಡಿವೋರ್ಸ್ ಫಿಕ್ಸ್ ಬಿಡು ಅಂತಿದ್ದಾರೆ‘, ಏನಿದು ಸ್ಟೋರಿ ನೋಡಿ.
ಇಂದಿನ ಬ್ಯುಸಿ ಜಮಾನದಲ್ಲಿ ವರ್ಕ್‌ಲೈಫ್ ಬ್ಯಾಲೆನ್ಸ್ ಮಾಡೋದು ಖಂಡಿತ ಸುಲಭವಲ್ಲ. ನಿದ್ದೆಯಲ್ಲೂ ಕೆಲಸದ್ದೇ ಯೋಚನೆ ಬರುತ್ತೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಮದುವೆ ದಿನದಂದೂ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡಿದ್ದಾನೆ. ಇದೀಗ ಮದುವೆ ದಿನವೇ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ವರನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
AI ಸ್ಟಾರ್ಟ್‌ಅಪ್‌ನ ಸಹ ಸಂಸ್ಥಾಪಕ ತಮ್ಮದೇ ಮದುವೆಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತಿರುವ ಫೋಟೊ ಇದೀಗ ಭಾರಿ ಸಂಚಲನ ಮೂಡಿಸಿದೆ. ವರ್ಕ್‌ಲೈಫ್ ಬ್ಯಾಲೆನ್ಸ್ ಅನ್ನೋದು ಇಂದಿನ ಸಮಾಜದಲ್ಲಿ ಒಂದು ದೊಡ್ಡ ಸವಾಲಾಗಿರುವ ಈ ಹೊತ್ತಿನಲ್ಲಿ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ. ‘ನಿಂದೆ ಮುದುವೆ ಕಣಯ್ಯ, ಇವತ್ತೂ ಕೆಲಸ ಮಾಡ್ಬೇಕಾ, ನಿಂಗೆ ಡಿವೋರ್ಸ್ ಪಕ್ಕಾ ಬಿಡು ಗುರು‘ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಥಾಟ್ಲಿ ಎಂಬ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಕೇಸಿ ಮ್ಯಾಕ್ರೆಲ್, ತಮ್ಮ ಮದುವೆಗೆ ಬಂದ ಅತಿಥಿಗಳೆಲ್ಲಾ ಡಾನ್ಸ್ ಮಾಡಿಕೊಂಡು ಖುಷಿಯಿಂದ ಇದ್ದರೆ, ತಾವು ಮಾತ್ರ ಸ್ವಲ್ಪ ದೂರದಲ್ಲಿ ಕುಳಿತು ಲ್ಯಾಪ್‌ಟಾಪ್ ಆನ್ ಮಾಡಿಕೊಂಡು ಕೆಲಸ ಮಾಡುತ್ತಿರುವುದು ಚಿತ್ರದಲ್ಲಿ ಕಾಣುತ್ತದೆ. ಅವರ ಈ ಚಿತ್ರವನ್ನು ಕಂಪನಿಯ ಇನ್ನೊಬ್ಬ ಸಂಸ್ಥಾಪಕ ಟೊರೆ ಲಿಯೊನಾರ್ಡ್ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಸಹ-ಸಂಸ್ಥಾಪಕ ಕೇಸಿ SF ನಿಂದ NYC ವರೆಗೆ ಬಾರ್‌ಗಳಲ್ಲಿ ತನ್ನ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವ ವ್ಯಕ್ತಿ ಎಂದೇ ಖ್ಯಾತಿ ಪಡೆದಿದ್ದಾನೆ‘ ಎಂದು ಬರೆದುಕೊಂಡು ಲಿಯೊನಾರ್ಡ್ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಢಾಟ್ಲಿ ಅನ್ನೋದು ಅಮೆರಿಕ ಮೂಲಕ ಸ್ಪಾರ್ಟ್‌ಅಪ್ ಕಂಪನಿಯಾಗಿದೆ. ವ್ಯವಹಾರಗಳಿಗೆ ಮಾನವ-ರೀತಿಯ AI ಧ್ವನಿ ಏಜೆಂಟ್‌ಳನ್ನು ನಿರ್ಮಿಸಲು ಮತ್ತು ನಿಯೋಜಿಸಲು ಕೆಲಸ ಮಾಡುತ್ತದೆ ಈ ಕಂಪನಿ. ಅದೇನೇ ಇರ್ಲಿ, ಮದುವೆಗಿಂತಲೂ ಕೆಲಸ ಅಷ್ಟು ಮುಖ್ಯನಾ, ಹಾಗಾದ್ರೆ ಮದುವೆ ಯಾಕೆ ಬೇಕು ಎಂದು ಕೇಳಿರುವ ನೆಟ್ಟಿಗರು ಕೂಡಲೇ ಲ್ಯಾಪ್‌ಟಾಪ್ ಬದಿಗಿಡು, ಇಲ್ಲಾಂದ್ರೆ ಡಿವೋರ್ಸ್ ಫಿಕ್ಸ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಲಿಯೋನಾರ್ಡ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
‘ಇದರಲ್ಲಿ ಯಾರು ಕೆಟ್ಟವರು ಎಂಬುದೇ ಅರ್ಥವಾಗಿಲ್ಲ. ಮದುವೆಯ ದಿನವೂ ವರನಿಗೆ ಕೆಲಸ ಮಾಡುವಂತೆ ಹೇಳಿದವರು ಕೆಟ್ಟವರಾ ಅಥವಾ ಮದುವೆ ಛತ್ರದಲ್ಲೂ ಲ್ಯಾಪ್‌ಟಾಪ್ ಹಿಡಿದು ಕೂತ ಗೆಳೆಯ ಫೋಟೊ ಹಂಚಿಕೊಂಡು ಇವರು ಏನು ಹೇಳೋಕೆ ಹೊರಟಿದ್ದಾರೆ. ಇದರಿಂದ ಬೇರೆಯವರು ಪ್ರೇರಣೆ ಪಡೆಯಲಿ ಎಂಬ ಉದ್ದೇಶವೇ‘ ಎಂದು ನೆಟ್ಟಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಮದುವೆಗೂ ಮೊದಲೇ ಕೆಲಸ ಮಾಡಿ ಮುಗಿಸಿಬಿಡಬಹುದಿತ್ತಲ್ಲಾ ಗುರು‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಟೈಮ್ ಮ್ಯಾನೇಜ್‌ಮೆಂಟ್ ಅಂದ್ರೆ ಇದು ನೋಡಿ, ಗ್ರೇಟ್‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿ ವ್ಯಂಗ್ಯವಾಡಿದ್ದಾರೆ. ‘ಮದುವೆಯ ದಿನವೂ ಈ ವ್ಯಕ್ತಿಗೆ ಲ್ಯಾಪ್‌ಟಾಪ್ ಇಲ್ಲದೇ ಇರಲು ಸಾಧ್ಯವಿಲ್ಲ ಎಂದರೆ, ಇವನಿಗೆ ಡಿವೋರ್ಸ್ ಫಿಕ್ಸ್, ಡೌಟೇ ಬೇಡ‘ ಎಂದು ಹಲವರು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ‘ಸದ್ಯದಲ್ಲಿ ಅವರ ಡಿವೋರ್ಸ್ ಸುದ್ದಿ ನಮ್ಮ ಕಿವಿಗೆ ಬೀಳುತ್ತೆ‘ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.