ಖಿಚಡಿ, ತೆಂಗಿನಕಾಯಿ ಅನ್ನ ಸೇರಿದಂತೆ ಚಳಿಗಾಲದಲ್ಲಿ ಬೆಚ್ಚಗೆ ಸವಿಯಲು ಈ ಸರಳ ರೆಸಿಪಿಗಳನ್ನು ಟ್ರೈ ಮಾಡಿ
Dec 22, 2024 04:41 PM IST
ಚಳಿಗಾಲದಲ್ಲಿ ತಯಾರಿಸಬಹುದಾದ ಸಿಂಪಲ್, ರೈಸ್ ಬ್ರೇಕ್‌ಫಾಸ್ಟ್‌ಗಳು
Rice Recipes: ಚಳಿಗೆ ಬಿಸಿ ಬಿಸಿಯಾಗಿ, ರುಚಿಯಾಗಿ ಏನಾದರು ತಿನ್ನಬೇಕು ಎನಿಸದೆ ಇರದು. ಆದರೆ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಅನ್ನೋದೇ ಸವಾಲು. ಮಕ್ಕಳು ಇದ್ದರಂತೂ ಪ್ರತಿದಿನ ಬೇರೆ ಬೇರೆ ವೆರೈಟಿ ಇರಬೇಕು. ಅಂತಹ ಸಂದರ್ಭದಲ್ಲಿ ಅಕ್ಕಿಯನ್ನು ಬಳಸಿಕೊಂಡು ರುಚಿಯಾಗಿ ಏನು ಮಾಡಬಹುದು? ಈ ರೆಸಿಪಿಗಳನ್ನು ನೀವೇಕೆ ಒಮ್ಮೆ ಟ್ರೈ ಮಾಡಬಾರದು? (ಬರಹ: ಐಜಿ ಕಿರಣ್)
ಚಳಿಗಾಲದಲ್ಲಿ ರುಚಿಕರವಾದ ತಿನಿಸುಗಳನ್ನು ತಯಾರಿಸುವುದು ಮತ್ತು ಸವಿಯುವುದು ಎಲ್ಲರಿಗೂ ಇಷ್ಟದ ಕೆಲಸ. ಚಳಿಗೆ ಬಿಸಿ ಬಿಸಿ ಮತ್ತು ರುಚಿಯಾದ ಏನಾದರೂ ತಿನ್ನಬೇಕು ಎಂದು ಮನಸ್ಸು ಬಯಸುತ್ತಲೇ ಇರುತ್ತದೆ. ಅದರಿಂದಾಗಿಯೇ ಜನರಿಗೆ ಚಳಿಗಾಲದಲ್ಲಿ ತೂಕದಲ್ಲಿ ಏರಿಕೆಯಾಗುವುದು ಎನ್ನುವ ಮಾತಿದೆ. ಅದೇನೇ ಇದ್ದರೂ, ಸೂಕ್ತ ಮಸಾಲೆ, ಜೀರಿಗೆ, ಸಾಸಿವೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಬಳಸಿ ಬಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಹುರಿದರೆ, ಅದರಿಂದ ಬರುವ ಘಮವೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇದರಿಂದ ಸಿದ್ಧವಾಗುವ ಮಸಾಲೆ ಬಳಸಿಕೊಂಡು ವಿವಿಧ ರೀತಿಯ ಅಕ್ಕಿಯ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ.
ಕೇವಲ ಮಸಾಲೆ ಮಾತ್ರವಲ್ಲ, ಅದರ ಜತೆಗೇ ಚಳಿಗಾಲದಲ್ಲಿ ನಾಲಗೆಗೆ ಹೆಚ್ಚಿನ ರುಚಿ ನೀಡಲು ಕ್ಯಾರೆಟ್, ಬಟಾಣಿ, ಬೀನ್ಸ್ ಮತ್ತು ಆಲೂಗಡ್ಡೆ ಸಹಿತ ವಿವಿಧ ತರಕಾರಿಗಳನ್ನು ಬಳಸಿಕೊಂಡು ಅಡುಗೆ ಮಾಡುತ್ತಾರೆ. ಪರಿಮಳದ ಜತೆಗೇ ಹೆಚ್ಚಿನ ಪೋಷಕಾಂಶಗಳನ್ನು ಕೂಡ ಇವು ನಮಗೆ ಒದಗಿಸುತ್ತದೆ. ಅಲ್ಲದೆ, ಬೇಳೆಕಾಳು, ದ್ವಿದಳ ಧಾನ್ಯಗಳನ್ನು ಕೂಡ ಅಕ್ಕಿಯ ಖಾದ್ಯ ತಯಾರಿಕೆಯಲ್ಲಿ ಬಳಸಿದರೆ ಇನ್ನಷ್ಟು ಹೆಚ್ಚಿನ ಅಗತ್ಯ ಪ್ರೊಟೀನ್ ನಮಗೆ ದೊರೆಯುತ್ತದೆ. ಮಸಾಲೆ ಅಥವಾ ನೀರಿನ ಜತೆ ಅಕ್ಕಿಯನ್ನು ಬೇಯಿಸುವಾಗ, ಸುವಾಸಿತ ಘಮವೂ ಮೂಗಿಗೆ ಬಡಿಯುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.
ಚಳಿಗಾಲದ ಬೆಳಗನ್ನು ಹೆಚ್ಚು ಸ್ವಾದಿಷ್ಟವಾಗಿಸಲು ತಯಾರಿಸುವ ಈ ಅಕ್ಕಿಯ ಖಾದ್ಯಗಳನ್ನು ವಿವಿಧ ಸೊಪ್ಪು, ಹುರಿದ ಈರುಳ್ಳಿ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣಿಸುವಂತೆ ಸಿಂಗರಿಸಲಾಗುತ್ತದೆ. ನಂತರ ಅದನ್ನು ಮೊಸರು,ರಾಯ್ತಾ ಅಥವಾ ಉಪ್ಪಿನಕಾಯಿ ಸೇರಿಸಿ ಸವಿಯಲು ನೀಡುತ್ತಾರೆ. ಚಳಿಗಾಲಕ್ಕೆ ಹೆಚ್ಚು ಸೂಕ್ತವೆನಿಸುವ ಈ ಆಹಾರದಲ್ಲಿ ಬೆಚ್ಚಗಿನ ರುಚಿಯ ಜತೆ ಅಗತ್ಯ ಪೋಷಕಾಂಶವೂ ಲಭ್ಯವಾಗುತ್ತದೆ.
ಪಲಾವ್
ಪಲಾವ್ ಅಥವಾ ಪುಲಾವ್. ಇದು ಎಲ್ಲ ಭಾರತೀಯರ ಮೆಚ್ಚಿನ ಆಹಾರ. ಬೆಳಗ್ಗಿನ ತಿಂಡಿಗೆ ಮಾತ್ರವಲ್ಲದೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೂ ಪಲಾವ್ ಮಾಡಬಹುದು. ಅಕ್ಕಿಯ ಜತೆ ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಮಸಾಲೆ ಎಲೆಯನ್ನು ಸೇರಿಸುವ ಮೂಲಕ ಸರಳವಾಗಿ ಇದನ್ನು ತಯಾರಿಸಲಾಗುತ್ತದೆ. ಪಲಾವ್‌ನಲ್ಲಿ ಹಲವು ವಿಧಗಳಿವೆ, ಲಭ್ಯವಿರುವ ತರಕಾರಿ ಮಾತ್ರವಲ್ಲದೆ, ಅದರ ಜತೆಗೇ ಚಿಕನ್/ಮಟನ್ ಸೇರಿಸಿಕೊಂಡು ರುಚಿಕರ ಪಲಾವ್ ತಯಾರಿಸಬಹುದು. ಪಲಾವ್ ಜತೆ ಬಳಸುವ ಬಟಾಣಿ, ಬೀನ್ಸ್, ಕ್ಯಾರೆಟ್ ಎಲ್ಲವೂ ಸಮೃದ್ಧ ಪೋಷಕಾಂಶ ಒದಗಿಸುತ್ತವೆ. ಉಪ್ಪಿನಕಾಯಿ, ರಾಯ್ತಾ ಜತೆ ಇದನ್ನು ಸವಿಯಲು ಕೊಡಬಹುದು. ಸುಲಭವಾಗಿ ತಯಾರಾಗುವ ಮತ್ತು ಆಕರ್ಷಕ ಘಮ ಹೊಂದಿರುವ ಪಲಾವ್ ಚಳಿಗಾಲದ ಬೆಳಗಿಗೆ ಬೆಚ್ಚಗೆ ಸವಿಯಲು ಬೆಸ್ಟ್.
ಬಿರಿಯಾನಿ
ಬಿರಿಯಾನಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ದೇಶದ ವಿವಿಧ ಭಾಗಗಳಲ್ಲಿ ಆಯಾ ಪ್ರಾದೇಶಿಕ ಭಿನ್ನತೆಗೆ ಅನುಗುಣವಾಗಿ ಬಿರಿಯಾನಿಯಲ್ಲಿ ಹಲವು ವಿಧಗಳನ್ನು ನಾವು ಕಾಣಬಹುದು. ಆದರೆ ದಕ್ಷಿಣ ಭಾರತದ ಬಿರಿಯಾನಿ ಚಳಿಗಾಲದಲ್ಲಿ ಹೆಚ್ಚು ಸೂಕ್ತ ಮತ್ತು ವಿಶೇಷತೆಯನ್ನು ಹೊಂದಿದೆ. ಚಿಕನ್, ಮಟನ್ ಅಥವಾ ಹದವಾಗಿ ಬೇಯಿಸಿದ ತರಕಾರಿ ಸೇರಿಸಿ, ಮಸಾಲೆ ಮಿಶ್ರಿತ ಅನ್ನದ ಜತೆ ಹಲವು ಹಂತಗಳಲ್ಲಿ ಚಿಕನ್, ಮಟನ್, ಫಿಶ್ ಅಥವಾ ತರಕಾರಿ ಸೇರಿಸಿ ಬೇಯಿಸುವ ಈ ಪದಾರ್ಥಕ್ಕೆ ಎಲ್ಲಡೆ ಬೇಡಿಕೆಯಿದೆ. ಕುಕ್ಕರ್ ಅಥವಾ ಸೀಲ್ ಮಾಡಲಾದ ಪಾತ್ರೆಯಲ್ಲಿ ತಯಾರಾಗುವ ಬಿರಿಯಾನಿಗೆ ತಕ್ಕಷ್ಟು ಅರಿಶಿನ, ಗರಂ ಮಸಾಲಾ ಮತ್ತು ಕೇಸರಿಯನ್ನು ಸೇರಿಸಲಾಗುತ್ತದೆ. ಅದರಿಂದ ಬಿರಿಯಾನಿಯ ಘಮ ಮತ್ತಷ್ಟು ಹೆಚ್ಚುವ ಜತೆಗೆ ರುಚಿ, ಬಣ್ಣವೂ ಬಂದಿರುತ್ತದೆ. ಮೊಸರು ಬಜ್ಜಿ ಮತ್ತು ಬೇಯಿಸಿದ ಮೊಟ್ಟೆಯೊಂದಿಗೆ ನೀಡುವ ಬಿಸಿ ಬಿಸಿ ಬಿರಿಯಾನಿ, ಚಳಿಗಾಲದಲ್ಲಿ ಆಹಾ ಎಂದು ಸವಿಯಬಹುದು.
ಖಿಚಡಿ
ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಖಚಡಿ ತಯಾರಿಸಲಾಗುತ್ತದೆ. ಚಳಿಗಾಲಕ್ಕೆ ಹೆಚ್ಚು ಸೂಕ್ತವಾದ, ಅಗತ್ಯ ಪೋಷಕಾಂಶ ಒದಗಿಸುವ ಈ ಖಾದ್ಯ ಸೇವನೆಯಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಹೆಚ್ಚಿನ ಪ್ರಮಾಣದ ಆಹಾರ ಬೇಡ ಎನ್ನುವವರಿಗೆ ಖಿಚಡಿ ಸೂಕ್ತ. ಕಡಿಮೆ ಸಮಯದಲ್ಲಿ, ಸರಳವಾಗಿ ಖಚಡಿ ಸಿದ್ಧಪಡಿಸಬಹುದು. ಅಕ್ಕಿ ಮತ್ತು ಹೆಸರುಬೇಳೆ ಜತೆ, ಮಸಾಲೆ ಮಿಶ್ರಣ ಮಾಡಿ ಖಚಡಿ ಸಿದ್ಧಪಡಿಸಲಾಗುತ್ತದೆ. ಕ್ಯಾರೆಟ್, ಬಟಾಣಿ, ಪಾಲಕ್ ಮತ್ತು ಇತರ ಲಭ್ಯ ಸೂಕ್ತ ತರಕಾರಿಗಳನ್ನು ಸೇರಿಸಿ, ತುಪ್ಪದಲ್ಲಿ ತಯಾರಿಸುವ ಖಿಚಡಿ, ಚಳಿಗೆ ಹೆಚ್ಚಿನ ಆರಾಮ ನೀಡುವ ಖಾದ್ಯವಾಗಿದೆ. ಆರೋಗ್ಯಕರ ಮತ್ತು ಅಗತ್ಯ ಪೋಷಣೆಯ ತಿನಿಸು ಎಂದೇ ಖಿಚಡಿ ಪ್ರಸಿದ್ಧವಾಗಿದೆ.
ತಹರಿ
ಉತ್ತರ ಭಾರತದಲ್ಲಿ ಹೆಚ್ಚು ಫೇಮಸ್ ಆಗಿರುವ ತಹರಿಯನ್ನು ಸರಳವಾಗಿ ತಯಾರಿಸಬಹುದು. ಬಟಾಣಿ, ಕ್ಯಾರೆಟ್, ಆಲೂಗಡ್ಡೆ ಅಥವಾ ಇತರ ಲಭ್ಯ ತರಕಾರಿಗಳನ್ನು ಬಳಸಿಕೊಂಡು ತಹರಿ ಸಿದ್ಧವಾಗುತ್ತದೆ. ಅಕ್ಕಿಯ ಮಿಶ್ರಣದ ಜತೆ ಜೀರಿಗೆ, ಕೊತ್ತಂಬರಿ ಮತ್ತು ದಾಲ್ಚಿನ್ನಿ ಸೇರಿಸುವುದರಿಂದ ಸಮೃದ್ಧ ಪೋಷಕಾಂಶ ಜತೆ ಘಮವೂ ಸೇರಿಕೊಳ್ಳುತ್ತದೆ. ಬಿರಿಯಾನಿಯ ರೀತಿ ತಹರಿ ತಯಾರಿಕೆಗೆ ಮಾಂಸಾಹಾರ ಮತ್ತು ಅಕ್ಕಿಯ ಮಿಶ್ರಣದ ಪದರದ ಮಾದರಿ ಅಗತ್ಯವಿಲ್ಲ. ಅದರ ಬದಲು ಮಸಾಲೆ ಮತ್ತು ಸರಳ ತರಕಾರಿ ಬಳಸಿದರಷ್ಟೇ ಸಾಕು. ಉಪ್ಪಿನಕಾಯಿ ಅಥವಾ ಮೊಸರಿನ ಜತೆ ಸವಿಯಲು ತಹರಿ ಹೆಚ್ಚು ಸೂಕ್ತವಾಗಿದ್ದು, ಚಳಿಗಾಲದಲ್ಲಿ ಬಿಸಿ ಬಿಸಿ ಸವಿಯಲು ಬೆಸ್ಟ್.
ಲೆಮೆನ್ ರೈಸ್
ದಕ್ಷಿಣ ಭಾರತದಲ್ಲಿ ಜನಪ್ರಿಯ ಆಹಾರವಾಗಿರುವ ಲೆಮೆನ್ ರೈಸ್ ಅಥವಾ ಚಿತ್ರಾನ್ನ, ಅತ್ಯಂತ ಕಡಿಮೆ ಅವಧಿಯಲ್ಲಿ, ಅತಿ ಕಡಿಮೆ ಪದಾರ್ಥಗಳನ್ನು ಬಳಸಿ ತಯಾರಾಗುವ ಒಂದು ರುಚಿಕರ ಖಾದ್ಯ. ಚಳಿಗಾಲದಲ್ಲಿ ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯೂ ಬಿಸಿಬಿಸಿಯಾಗಿ ಇದನ್ನು ಸವಿಯಬಹುದು. ಉದುರಾಗಿ ಅನ್ನ ತಯಾರಿಸಿಕೊಂಡು, ಅದಕ್ಕೆ ಸಾಸಿವೆ, ಅರಿಶಿನ,ಕಡ್ಲೆಕಾಯಿ ಬೀಜ,ಕಡ್ಲೆಬೇಳೆ, ಹಸಿಮೆಣಸಿನಕಾಯಿ ಕರಿಬೇವಿನ ಎಲೆ, ಸ್ವಲ್ಪ ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಹಿಂಡಿ, ಸರಿಯಾಗಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಸವಿಯಲು ಸಿದ್ಧವಾಗುತ್ತದೆ. ನಿಂಬೆ ರಸವು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಆಹಾರದ ಘಮ ಮತ್ತು ರುಚಿಯನ್ನು ಅದು ಹೆಚ್ಚಿಸುತ್ತದೆ. ಉಪ್ಪಿನಕಾಯಿ ಅಥವಾ ಮೊಸರಿನ ಜತೆ ತಿನ್ನಲು ಲೆಮೆನ್ ರೈಸ್ ಬೆಸ್ಟ್. ಇತರ ಖಾದ್ಯಗಳಿಗೆ ಹೋಲಿಸಿದರೆ, ಇದರಲ್ಲಿ ಪೋಷಕಾಂಶಗಳು ಕಡಿಮೆ, ಆದರೆ ಬಿಸಿಬಿಸಿಯಾಗಿ ಒಂದು ಸಮತೋಲಿತ ಆಹಾರವಾಗಿ, ಸರಳವಾಗಿ ಕಡಿಮೆ ಅವಧಿಯಲ್ಲಿ ಸಿದ್ಧವಾಗುವುದರಿಂದ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ.
ಪೊಂಗಲ್
ತಮಿಳುನಾಡಿನ ಸಾಂಪ್ರದಾಯಿಕ ಅಕ್ಕಿಯ ತಿನಿಸಾಗಿರುವ ಪೊಂಗಲ್, ಸುಗ್ಗಿಯ ಹಬ್ಬದ ಹೆಸರೂ ಹೌದು. ಶೀತ ಚಳಿಗಾಲದ ಬೆಳಗಿಗೆ ಬಿಸಿ ಬಿಸಿ ತುಪ್ಪದ ಘಮದೊಂದಿಗೆ ಸವಿಯಲು ಪೊಂಗಲ್ ಬೆಸ್ಟ್. ಹೆಸರು ಬೇಳೆಯ ಜತೆ ಅಕ್ಕಿಯನ್ನು ಬೇಯಿಸಿ, ಅದಕ್ಕೆ ಜೀರಿಗೆ, ಕರಿಮೆಣಸು ಮತ್ತು ಶುಂಠಿಯ ಮಸಾಲೆಯನ್ನು ಸೇರಿಸಿ, ತುಪ್ಪದಲ್ಲಿ ತಯಾರಿಸುವ ಪೊಂಗಲ್, ಬಿಸಿಬಿಸಿ ಸವಿಯಾಗಲು ಅತ್ಯುತ್ತಮ ಆಯ್ಕೆ. ಪೊಂಗಲ್ ಜತೆ ಮೊಸರು ಬಜ್ಜಿ, ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಕೂಡ ಹೊಂದಾಣಿಕೆಯಾಗುತ್ತದೆ. ಬಿಸಿ ಬಿಸಿ ತುಪ್ಪದ ಜತೆ ಹುರಿದ ಮಸಾಲೆಯ ಘಮ ಪೊಂಗಲ್ ಅನ್ನು ಇನ್ನಷ್ಟು ರುಚಿಯಾಗಿಸುವ ಜತೆ, ಚಳಿಗಾಲದಲ್ಲಿ ಬೆಚ್ಚಗೆ ಹಿತವನ್ನು ನೀಡುತ್ತದೆ.
ಕೊಕನಟ್ ರೈಸ್
ದಕ್ಷಿಣ ಭಾರತದಲ್ಲಿ ಅಡುಗೆಗೆ ತೆಂಗಿನಕಾಯಿ ಬಳಕೆ ಹೆಚ್ಚು. ಅದೇ ತೆಂಗಿನಕಾಯಿ ಮತ್ತು ಅಕ್ಕಿ ಬಳಸಿಕೊಂಡು, ಕಡಿಮೆ ಅವಧಿಯಲ್ಲಿ, ಅತ್ಯಂತ ಕನಿಷ್ಠ ಪದಾರ್ಥಗಳನ್ನು ಸೇರಿಸಿಕೊಂಡು ತಯಾರಿಸುವ ಖಾದ್ಯವೇ ಕೋಕನಟ್ ರೈಸ್. ಜೀರಿಗೆ, ಸಾಸಿವೆ, ಕರಿಬೇವಿನ ಎಲೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ, ತುರಿದ ತಾಜಾ ತೆಂಗಿನಕಾಯಿ ಮತ್ತು ಬೇಯಿಸಿದ ಅನ್ನ ಇದ್ದರೆ ಕೊಕನಟ್ ರೈಸ್ ಕ್ಷಣದಲ್ಲೇ ಸವಿಯಲು ಸಿದ್ಧವಾಗುತ್ತದೆ. ಅನ್ನಕ್ಕೆ ಬಣ್ಣ ನೀಡಲು ಅಲ್ಪ ಪ್ರಮಾಣದಲ್ಲಿ ಅರಿಶಿನ ಪುಡಿ ಸೇರಿಸಲಾಗುತ್ತದೆ. ಅದು ರುಚಿಯನ್ನೂ ನೀಡುತ್ತದೆ. ಅದರ ಜತೆಗೆ ಹುರಿದ ಗೋಡಂಬಿ ಅಥವಾ ಕಡಲೆಕಾಯಿಯಿಂದ ಅಲಂಕರಿಸಿದರೆ ರುಚಿ ದುಪ್ಪಟ್ಟಾಗುತ್ತದೆ. ಬೆಚ್ಚಗಿನ ಅನ್ನದ ಜತೆ ಮಸಾಲೆಯ ಹದ ಮಿಶ್ರಣ, ತಾಜಾ ತೆಂಗಿನಕಾಯಿ ತುರಿಯ ಸಿಹಿ,ಕೊಕನಟ್ ರೈಸ್ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪಲ್ಯ, ಸಾಂಬಾರ್ ಅಥವಾ ಉಪ್ಪಿನಕಾಯಿ ಜತೆ ಸವಿಯಲು ಕೊಕನಟ್ ರೈಸ್ ಬೆಸ್ಟ್ ಎನ್ನಬಹುದು.
ಬರಹ: ಐಜಿ ಕಿರಣ್