logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯ ಜೋಪಾನ ಬಾಡದಿರಲಿ ಬದುಕು; ವಿಶ್ವ ಹೃದಯ ದಿನದ ಇತಿಹಾಸ, ಮಹತ್ವ, 2024ರ ಥೀಮ್ ಕುರಿತ ಮಾಹಿತಿ ಇಲ್ಲಿದೆ

ಹೃದಯ ಜೋಪಾನ ಬಾಡದಿರಲಿ ಬದುಕು; ವಿಶ್ವ ಹೃದಯ ದಿನದ ಇತಿಹಾಸ, ಮಹತ್ವ, 2024ರ ಥೀಮ್ ಕುರಿತ ಮಾಹಿತಿ ಇಲ್ಲಿದೆ

Reshma HT Kannada

Sep 27, 2024 10:39 AM IST

google News

ವಿಶ್ವ ಹೃದಯ ದಿನ

    • ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದು. ಹೃದಯದ ಆರೋಗ್ಯ ಹದಗೆಟ್ಟರೆ ಸುಧಾರಿಸುವುದು ಖಂಡಿತ ಸುಲಭದ ಮಾತಲ್ಲ. ಹೃದಯ ಕಾಳಜಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ದಿನ ಯಾವಾಗ, ಹಾರ್ಟ್ ಡೇ ಆಚರಣೆಯ ಮಹತ್ವವೇನು ತಿಳಿಯಿರಿ.
ವಿಶ್ವ ಹೃದಯ ದಿನ
ವಿಶ್ವ ಹೃದಯ ದಿನ

ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಸಣ್ಣ ಮಕ್ಕಳು, ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸೂಚನೆಯೇ ಕೊಡದೆ ಸಾವು ಸಂಭವಿಸುತ್ತಿದೆ. ಈ ಕಾರಣಕ್ಕೆ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ ಜಗತ್ತಿನಾದ್ಯಂತ ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಜ್ಞಾನವು ಕಡಿಮೆ ಇದೆ. ಈ ನಿಟ್ಟಿಯಲ್ಲಿ ಜನರಿಗೆ ಹೃದಯದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿವರ್ಷ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.

ಹೃದ್ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಾಗಿರುವುದರಿಂದ, ವಿಶ್ವ ಹೃದಯ ದಿನವು ಪ್ರಪಂಚದಾದ್ಯಂತದ ಪ್ರತಿಯೊಬ್ಬರಿಗೂ ಅವರ ಹೃದಯವನ್ನು ಕಾಳಜಿ ವಹಿಸಲು ನೆನಪಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಡಜೀವನಶೈಲಿಯು ಹೃದ್ರೋಗದ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೃದಯದ ಕಾಳಜಿ ಮಾಡುವುದು ಅಗತ್ಯವಾಗಿದೆ. ಹಾಗಾದರೆ ವಿಶ್ವ ಹೃದಯ ದಿನ ಯಾವಾಗ, ಈ ದಿನವನ್ನು ಆಚರಿಸುವ ಉದ್ದೇಶವೇನು, ಹಾರ್ಟ್ ಡೇ ಮಹತ್ವದ ಬಗ್ಗೆ ನೀವೂ ತಿಳಿದುಕೊಳ್ಳಿ.

ವಿಶ್ವ ಹೃದಯ ದಿನ ಯಾವಾಗ?

ಹೃದಯರಕ್ತನಾಳದ ಕಾಯಿಲೆಗಳು, ಅವುಗಳ ತಡೆಗಟ್ಟುವಿಕೆ ಮತ್ತು ಇದರಿಂದಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ. ಈ ವರ್ಷ ಭಾನುವಾರ ವಿಶ್ವ ಹೃದಯ ದಿನಾಚರಣೆ ಇದೆ.

ವಿಶ್ವ ಹೃದಯ ದಿನದ ಇತಿಹಾಸ

1999ರಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ (WHF) ವಿಶ್ವ ಆರೋಗ್ಯ ಸಂಸ್ಥೆ (WHO) ಸಹಯೋಗದೊಂದಿಗೆ ಮೊದಲ ಬಾರಿಗೆ ವಿಶ್ವ ಹೃದಯ ದಿನ ಆಚರಣೆಯನ್ನು ಜಾರಿಗೆ ತಂದಿತು. 1997-2011ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್ ಅಧ್ಯಕ್ಷರಾಗಿದ್ದ ಆಂಟೋನಿ ಬೇಯೆಸ್ ಡಿ ಲೂನಾ ಅವರು ಈ ದಿನದ ಆಚರಣೆಯ ಪ್ರಸ್ತಾಪ ಮಾಡಿದ್ದರು. ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಬೇಕೆಂದು ನಿರ್ಧಾರ ಮಾಡಲಾಗಿತ್ತು. 2000ನೇ ಇಸವಿಯ ಸೆಪ್ಟೆಂಬರ್ 24 ರಂದು ಮೊದಲ ಬಾರಿ ವಿಶ್ವ ಹೃದಯ ದಿನವನ್ನು ಆಚರಿಸಲಾಗಿತ್ತು.

ವಿಶ್ವ ಹೃದಯ ದಿನದ ಮಹತ್ವ

ವರ್ಲ್ಡ್ ಹಾರ್ಟ್ ಫೆಡರೇಶನ್ ಪ್ರಕಾರ ಪ್ರತಿ ವರ್ಷ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಅಂದರೆ ಹೃದಯಾಘಾತ, ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪ್ರಪಂಚದಾದ್ಯಂತ ಸುಮಾರು 18.6 ಮಿಲಿಯನ್ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ಕಾರಣಕ್ಕೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಈ ದಿನ ತಿಳಿಸುತ್ತದೆ. ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಹಾಗೂ ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಕನಿಷ್ಠ ಶೇ 80ರಷ್ಟು ಅಕಾಲಿಕ ಮರಣಗಳನ್ನು ತಪ್ಪಿಸಬಹುದು ಎಂದು ಜನರಿಗೆ ತಿಳಿಸುವ ಗುರಿಯನ್ನು ಈ ದಿನವು ಹೊಂದಿದೆ.

ವಿಶ್ವ ಹೃದಯ ದಿನ 2024ರ ಥೀಮ್

2024ರ ವರ್ಲ್ಡ್ ಹಾರ್ಟ್ ಡೇ ಥೀಮ್ ‘ನಿಮ್ಮ ಹೃದಯಕ್ಕೆ ನೀವು ಜವಾಬ್ದಾರರು‘ ಎಂಬರ್ಥದಲ್ಲಿದೆ. ಅಂದರೆ ವ್ಯಕ್ತಿಗಳಿಗೆ ಅವರ ಹೃದಯದ ಕಾಳಜಿ ಮಾಡಲು ಸ್ಫೂರ್ತಿ ನೀಡುವುದು. ಅವರ ಹೃದಯವನ್ನು ಅವರೇ ಕಾಪಾಡಿಕೊಂಡು ಅವರ ಪ್ರಾಣವನ್ನು ಅವರು ಹೇಗೆ ಉಳಿಸಿಕೊಳ್ಳಬಹುದು, ಹೃದ್ರೋಗ ತಡೆದು, ಹೃದಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗಳು ವೈಯಕ್ತಿಕವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಅರ್ಥ ಮಾಡಿಸುವುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ