ರಾತ್ರಿ ವೇಳೆ ಕಾಣಿಸುವ ಈ ಲಕ್ಷಣಗಳು ಹೃದಯಾಘಾತದ ಮುನ್ಸೂಚನೆ ಆಗಿರಬಹುದು, ಈ ಸಂಕೇತಗಳನ್ನ ತಪ್ಪಿಯೂ ಕಡೆಗಣಿಸದಿರಿ
ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಹೃದಯಾಘಾತದ್ದೇ ಮಾತು. ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯರಕ್ತನಾಳದ ತೊಂದರೆಗಳ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹೃದಯಾಘಾತದ ಲಕ್ಷಣಗಳ ಬಗ್ಗೆ ನಮಗೆ ಅರಿವಿರಲೇಬೇಕು. ರಾತ್ರಿ ಮಲಗಿದ್ದಾಗ ಕಾಣಿಸುವ ಹೃದಯಾಘಾತದ ಈ ಲಕ್ಷಣಗಳನ್ನು ಕಡೆಗಣಿಸದಿರಿ.
ಪ್ರಪಂಚದಾದ್ಯಂತ ಬಹುತೇಕರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಅಂಕಿ–ಅಂಶಗಳ ಪ್ರಕಾರ ಪ್ರಪಂಚದಲ್ಲಿ ಪ್ರತಿವರ್ಷ 17 ದಶಲಕ್ಷಕ್ಕೂ ಹೆಚ್ಚು ಜನರು ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಹೃದಯಾಘಾತದಂತಹ ಪರಿಸ್ಥಿತಿಗಳು ಸಾಮಾನ್ಯವಾಗಿ ಪುರುಷರು ಹಾಗೂ ಮಹಿಳೆಯರ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತಿದೆ. ಆದರೆ ಶೇ 80 ರಷ್ಟು ಅಕಾಲಿಕ ಮರಣವನ್ನು ತಡೆಗಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿರ್ವಹಣೆ ಮಾಡುವ ಜೊತೆಗೆ ರಾತ್ರಿ ವೇಳೆ ಕಾಣಿಸುವ ಈ ಲಕ್ಷಣಗಳ ಬಗ್ಗೆ ನಾವು ಗಮನ ಹರಿಸಲೇಬೇಕು. ಇದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಇಂತಹ ಲಕ್ಷಣಗಳನ್ನು ಬೇರೆ ಕಾಯಿಲೆಗಳ ಲಕ್ಷಣಗಳು ಎಂದು ನಿರ್ಲಕ್ಷ್ಯ ಮಾಡುವವರೇ ಹೆಚ್ಚು.
ಹೃದಯಾಘಾತ ಆಗುವುದು ಹೇಗೆ?
ಎದೆನೋವು ಕಾಣಿಸಿಕೊಂಡು ಅಥವಾ ಎದೆನೋವಿನ ಸೂಚನೆಯೂ ಇಲ್ಲದೇ ಹೃದಯಾಘಾತವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಹೃದಯಾಘಾತಕ್ಕೂ ಮುನ್ನ ಭುಜದ ಭಾಗದಲ್ಲಿ ವಿಪರೀತ ನೋವು ಕಾಣಿಸಬಹುದು. ಅತಿಯಾಗಿ ಮೈ ಬೆವರುವುದು ಹಾಗೂ ಆಯಾಸವೂ ಆಗಬಹುದು.
ಹೃದಯಾಘಾತವನ್ನು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯುತ್ತಾರೆ. ಹೃದಯ ಸ್ನಾಯುವಿಗೆ ಸಾಕಷ್ಟು ರಕ್ತ ಸಿಗದಿದ್ದಾಗ ಸಂಭವಿಸುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಹೃದಯ ಸ್ನಾಯುಗಳಿಗೆ ಒಯ್ಯುತ್ತದೆ. ಹೃದಯದ ಸ್ನಾಯುವಿಗೆ ಅವಶ್ಯವಿರುವಷ್ಟು ರಕ್ತ ಹರಿಯದೇ ಇದ್ದಾಗ ಹೃದಯಕ್ಕೆ ಹಾನಿಯಾಗುತ್ತದೆ ಅಥವಾ ಸಾವು ಸಂಭವಿಸಬಹುದು.
ರಾತ್ರಿ ವೇಳೆ ಕಂಡುಬರುವ ಹೃದಯಾಘಾತದ ಲಕ್ಷಣಗಳಿವು
ಹೃದಯಾಘಾತದ ಮುನ್ಸೂಚನೆ ನೀಡುವ ಕೆಲವು ಸೈಲೆಂಟ್ ಹಾಗೂ ಬಹುತೇಕರಿಗೆ ತಿಳಿದಿರದ ರೋಗಲಕ್ಷಣಗಳು ಹೀಗಿವೆ.
ನೋವು
ಹೃದಯಾಘಾತವಾಗುವ ಸಂದರ್ಭ ದೇಹದ ಈ ಭಾಗಗಳಲ್ಲಿ ನೋವು ಕಾಣಿಸುವುದು ಸಾಮಾನ್ಯ.
* ಹೊಟ್ಟೆಯ ಮೇಲಿನ ಭಾಗ
* ಭುಜಗಳಲ್ಲಿ
* ಬೆನ್ನುನೋವು
* ಕತ್ತು ಅಥವಾ ಕುತ್ತಿಗೆಯ ಭಾಗದಲ್ಲಿ ನೋವು
* ಹಲ್ಲು ಹಾಗೂ ವಸಡಿಗಳಲ್ಲಿ ಸೆಳೆತ ಅಥವಾ ನೋವು
ಹೃದಯಾಘಾತವಾಗುವ ಸೂಚನೆ ಮಹಿಳೆಯರಿಗೆ ಭಿನ್ನವಾಗಿರುತ್ತದೆ. ಆ ಸಮಯದಲ್ಲಿ ಹೊಟ್ಟೆ ಕೆಳಭಾಗ ಹಾಗೂ ಎದೆಯ ಕಳೆಭಾಗದಲ್ಲಿ ವಿಪರೀತ ನೋವು ಕಾಣಿಸುತ್ತದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವರದಿ ತಿಳಿಸಿದೆ.
ರಾತ್ರಿ ಬೆವರುವುದು
ರಾತ್ರಿ ಹೊತ್ತು ಅತಿಯಾಗಿ ಬೆವರುವುದು ಸಾಮಾನ್ಯ ಲಕ್ಷಣ ಖಂಡಿತ ಅಲ್ಲ. ಅದರಲ್ಲೂ ಹೃದಯದ ಸಮಸ್ಯೆ ಇರುವ ಮಹಿಳೆಯರು ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಋತುಬಂಧದ ಹಂತ ಎಂದು ಕೆಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅದ್ಯಾಗೂ ನಿಮ್ಮ ಬೆಡ್‌ಶೀಟ್ ಒದ್ದೆಯಾಗುವಷ್ಟು ಬೆವರು ಬಂದಿದ್ದರೆ, ಬೆವರುವಿಕೆಯಿಂದ ನಿದ್ದೆ ಮಾಡಲು ಸಾಧ್ಯವಾಗದೇ ಇದ್ದರೆ ಅದು ಹೃದಯಾಘಾತದ ಸೂಚಕವಾಗಿರಬಹುದು. ಇದನ್ನು ಪುರುಷರು ಹಾಗೂ ಮಹಿಳೆಯರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.
ಆಯಾಸ
ಆಯಾಸವು ಸಾಮಾನ್ಯವಾಗಿ ಗುರುತಿಸಲ್ಪಡದ ಹೃದಯಾಘಾತದ ಸೂಚಕವಾಗಿದೆ. ತಜ್ಞರು ಹೇಳುವಂತೆ ಹೃದಯಾಘಾತವು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡದಿಂದ ಬಳಲಿಕೆಯನ್ನು ಉಂಟುಮಾಡಬಹುದು ಮತ್ತು ರಕ್ತದ ಹರಿವಿನ ಪ್ರದೇಶವನ್ನು ನಿರ್ಬಂಧಿಸಿದಾಗ ಪಂಪ್ ಮಾಡಲು ಪ್ರಯತ್ನಿಸಬಹುದು. ಆ ಕಾರಣಕ್ಕೆ ನಿಮಗೆ ಪದೇ ಪದೇ ಕಾರಣವಿಲ್ಲದೇ ಸುಸ್ತು, ಆಯಾಸ ಆಗುತ್ತಿದ್ದರೆ ಈ ಲಕ್ಷಣಗಳನ್ನು ನೀವು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ.
ಉಸಿರಾಟದ ತೊಂದರೆ
ತಜ್ಞರ ಪ್ರಕಾರ ಉಸಿರಾಟ ಹಾಗೂ ಹೃದಯಕ್ಕೆ ಪರಿಣಾಮಕಾರಿಯಾಗಿ ರಕ್ತ ಪಂಪ್ ಮಾಡುವುದು ನಿಕಟ ಸಂಬಂಧವನ್ನು ಹೊಂದಿದೆ. ಹೃದಯವು ರಕ್ತವನ್ನು ಪಂಪ್ ಮಾಡಿದಾಗ, ದೇಹದ ಅಂಗಾಂಶಗಳಿಗೆ ಪರಿಚಲನೆಯಾಗುತ್ತದೆ. ಶ್ವಾಸಕೋಸದಿಂದ ಆಮ್ಲಜನಕರವನ್ನು ಪಡೆಯುತ್ತದೆ. ಈ ಪ್ರಕ್ರಿಯೆ ಸರಿ ಆಗಿಲ್ಲ ಎಂದರೆ ನೀವು ಉಸಿರಾಟದ ತೊಂದರೆ ಅನುಭವಿಸಬಹುದು.
ಅಜೀರ್ಣ
ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳ ಕೆಲವು ಚಿಹ್ನೆಗಳು ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿವೆ. ಇದು ಹೃದಯಾಘಾತ ಲಕ್ಷಣವಾಗಿದ್ದರೂ ಹಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಖಂಡಿತ ಈ ವಿಚಾರದಲ್ಲಿ ಅಸಡ್ಡೆ ಮಾಡಬಾರದು. ವಯಸ್ಸಾದವರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು. ಅಜೀರ್ಣದ ಸಮಸ್ಯೆ ಇರುವವರು ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ಟ್ರಿಕ್‌ನಿಂದಾಗುವ ಎದೆಯುರಿ ಅಥವಾ ಆಹಾರ ಸಂಬಂಧಿತ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ರಾತ್ರಿ ವೇಳೆ ಕಾಣಿಸುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.
ಹೃದಯಾಘಾತವನ್ನು ತಡೆಗಟ್ಟುವ ಮಾರ್ಗಗಳು
ಹೃದಯಾಘಾತದ ಅಪಾಯವನ್ನು ತಡೆಗಟ್ಟುವ ಕೆಲವು ಕ್ರಮಗಳ ಬಗ್ಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಅಪಾಯಗಳನ್ನು ಅರಿಯಿರಿ: ಹೃದ್ರೋಗದ ಅಪಾಯ ಹೆಚ್ಚಿಸುವ ಅಂಶಗಳ ಬಗ್ಗೆ ನಿಮಗೆ ಅರಿವಿರಬೇಕು. ಧೂಮಪಾನ ಮಾಡುವವರು, ಮೂತ್ರಪಿಂಡದ ಕಾಯಿಲೆ ಇರುವವರು, ಹಾಗೂ ಹೃದ್ರೋಗದ ಕೌಟುಂಬಿಕ ಇತಿಹಾಸ ಇರುವವರು ಹೆಚ್ಚು ಗಮನ ಹರಿಸಬೇಕು. ಈ ಅಪಾಯಕಾರಿ ಅಂಶಗಳ ಬಗ್ಗೆ ಸರಿಯಾದ ಜ್ಞಾನ ಹೊಂದಿರುವುದರಿಂದ ನೀವು ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ಆರೋಗ್ಯಕರ ಆಹಾರ ಸೇವನೆ: ತರಕಾರಿಗಳು, ಹಣ್ಣು, ಧಾನ್ಯಗಳು, ದ್ವಿದಳ ಧಾನ್ಯಗಳು, ಬೀಜಗಳು, ಸಸ್ಯ-ಆಧಾರಿತ ಪ್ರೊಟೀನ್‌ಗಳು, ಲೀನ್ ಮೀಟ್ ಮತ್ತು ಮೀನುಗಳು ಈ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಸಂಸ್ಕರಿಸಿದ ಮಾಂಸಗಳು ಮತ್ತು ಸಿಹಿಯಾದ ಪಾನೀಯಗಳನ್ನು ಸೀಮಿತಗೊಳಿಸುವಂತಹ ಸ್ಮಾರ್ಟ್ ಆಯ್ಕೆಗಳನ್ನು ಮಾಡಿ.
ಕ್ರಿಯಾಶೀಲರಾಗಿರಿ
ನಾವು ಕ್ರಿಯಾಶೀಲರಾಗಿರುವುದು ಬಹಳ ಮುಖ್ಯ. ಅಧ್ಯಯನಗಳ ಪ್ರಕಾರ, ವಯಸ್ಕರು ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮದಿಂದ ತೀವ್ರತೆಯ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು.
ಧೂಮಪಾನ ತ್ಯಜಿಸಿ
ಧೂಮಪಾನ ಮಾಡಬೇಡಿ ಅಥವಾ ತಂಬಾಕು ಉತ್ಪನ್ನಗಳನ್ನು ಬಳಸಬೇಡಿ. ತಂಬಾಕು ಅಥವಾ ಧೂಮಪಾನದಿಂದ ನಿಮಗಷ್ಟೇ ಅಲ್ಲ ನಿಮ್ಮ ಸುತ್ತಲಿನವರಿಗೂ ತೊಂದರೆ ಆಗುತ್ತದೆ. ಧೂಮಪಾನದ ಹೊಗೆ ಸೇವನೆಯು ಕೂದ ಅಪಾಯಕಾರಿ.
(ಗಮನಿಸಿ: ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ ಅವರಿಂದ ಅಭಿಪ್ರಾಯ ಪಡೆಯುವುದನ್ನು ಮರೆಯದಿರಿ.)