ಯುವಜನರಲ್ಲಿ ಹೆಚ್ಚುತ್ತಿದೆ ಹೃದ್ರೋಗ, ಹೃದಯಾಘಾತ; ಹೃದಯದ ಆರೋಗ್ಯ ಸುಧಾರಿಸಲು ತಪ್ಪದೇ ಅನುಸರಿಸಬೇಕಾದ ಅಭ್ಯಾಸಗಳಿವು
ಇತ್ತೀಚಿನ ಉದ್ಯೋಗ, ಓದು ಇಂತಹ ಒತ್ತಡದ ಜೀವನಶೈಲಿಯು ಯುವಜನರನ್ನು ಜಡಜೀವನಶೈಲಿ ರೂಢಿಸಿಕೊಳ್ಳುವಂತೆ ಮಾಡಿದೆ. ಇದರಿಂದ ಹೃದ್ರೋಗ, ಹೃದಯಾಘಾತದ ಪ್ರಮಾಣವೂ ಹೆಚ್ಚಾಗಿದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆಘಾತಕಾರಿ ಸಂಗತಿ. ಸಣ್ಣ ವಯಸ್ಸಿನಿಂದಲೇ ಹೃದಯ ಜೋಪಾನ ಮಾಡಲು ಈ ಕ್ರಮಗಳನ್ನು ನೀವು ತಪ್ಪದೇ ಪಾಲಿಸಿ.
ಇತ್ತೀಚಿನ ದಿನಗಳಲ್ಲಿ ಎಲ್ಲಿ ಕೇಳಿದರೂ ಹೃದಯಾಘಾತದ ಮಾತು ಕೇಳಿ ಬರುತ್ತಿದೆ. ಶಾಲೆಗೆ ಹೋಗುವ 10, 12 ವರ್ಷದ ಮಕ್ಕಳು ಕೂಡ ಹೃದಯಾಘಾತದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿ. ಇನ್ನು ಜಿಮ್, ವರ್ಕೌಟ್ ಎಂದು ದೇಹವನ್ನು ಫಿಟ್ ಆಗಿ ಇರಿಸಿಕೊಂಡವರೂ ಕೂಡ ಹೃದಯದ ಸಮಸ್ಯೆ ಒಳಗಾಗುತ್ತಿದ್ದಾರೆ.
ಇದಕ್ಕೆಲ್ಲಾ ಕಾರಣ ವರ್ಕೋಹಾಲಿಕ್ ಮನೋಭಾವ ಹಾಗೂ ಜಡಜೀವನಶೈಲಿ ಎನ್ನುತ್ತಿದ್ದಾರೆ ತಜ್ಞರು. ದೀರ್ಘಕಾಲ ಕುಳಿತೇ ಇರುವುದು ಹೃದಯ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಇದರೊಂದಿಗೆ ಹೆಚ್ಚು ಕಾಲ ಪರದೆಗೆ ಅಂಟಿಕೊಂಡಿರುವುದು ಕೂಡ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗಲು ಕಾರಣವಾಗಿದೆ. ಈ ಜಡಜೀವನಶೈಲಿ ಎನ್ನುವುದು ನಾವು ಊಹಿಸದ ರೀತಿಯಲ್ಲಿ ನಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಇದು ಹೃದಯಕ್ಕೆ ಬಹಳ ಅಪಾಯಕಾರಿಯಾಗಿದೆ.
ಈ ಹೊತ್ತಿನಲ್ಲಿ ಯುವ ವೃತ್ತಿಪರರು ಹಾಗೂ ಮಕ್ಕಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ಹೃದಯದ ರಕ್ತನಾಳಕ್ಕೆ ಆರೋಗ್ಯ ಸುಧಾರಿಸುವ ಕ್ರಮಗಳನ್ನು ತುರ್ತಾಗಿ ಪಾಲಿಸಬೇಕಾಗಿದೆ.
ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಅನುಸರಿಸಬೇಕಾದ 6 ಕ್ರಮಗಳು
ದಿನವಿಡಿ ಸಕ್ರಿಯರಾಗಿರಿ: ನಿಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಯನ್ನು ಸೇರಿಸುವುದು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ನೀವು ಡೆಸ್ಕ್ ವರ್ಕ್ ಮಾಡುವವರಾದರೆ ಕೆಲಸದ ಮಧ್ಯೆ ಒಂದು ಗಂಟೆ ವಿರಾಮ ತೆಗೆದುಕೊಂಡು ಒಂದಿಷ್ಟು ಲಘು ವ್ಯಾಯಾಮ, ವಾಕಿಂಗ್ ಮಾಡಿ. ಪ್ರತಿ ಒಂದು ಗಂಟೆಗೆ ಒಮ್ಮೆ ಚಿಕ್ಕ ಬ್ರೇಕ್ ತೆಗೆದುಕೊಂಡ ನಡೆದಾಡಿ. ಎಲಿವೇಟರ್, ಎಸ್ಕಲೇಟರ್ ಬದಲು ಮೆಟ್ಟಿಲುಗಳನ್ನ ಬಳಸಿ. ನೀವು ಗಾಡಿಯಲ್ಲಿ ಓಡಾಡುವರಾದರೆ ದೂರದಲ್ಲಿ ನಿಮ್ಮ ಗಾಡಿ ಪಾರ್ಕಿಂಗ್ ಮಾಡಿ ನಿಮ್ಮ ಕಚೇರಿ ಹಾಗೂ ಸ್ಕೂಲ್, ಕಾಲೇಜಿನಿಂದ ಅಲ್ಲಿಯವರೆಗೆ ನಡೆದುಕೊಂಡು ಹೋಗಿ. ವೇಗದ ನಡಿಗೆ, ಸೈಕ್ಲಿಂಗ್ ಅಥವಾ ಡಾನ್ಸ್ ಹೀಗೆ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ ಏರೋಬಿಕ್ ಚಟುವಟಿಕೆಯ ಗುರಿಯನ್ನು ಹೊಂದಿರಿ. ಇಂತಹ ಸಣ್ಣ ಪುಟ್ಟ ಚಟುವಟಿಕೆಯೂ ಕೂಡ ಹೃದಯದ ಆರೋಗ್ಯದ ಮೇಲೆ ಸಾಕಷ್ಟು ಧನಾತ್ಮಕ ಪರಿಣಾಮ ಬೀರಬಹುದು.
ಆರೋಗ್ಯಕರ ಆಹಾರ ಸೇವನೆ: ಬಿಡುವಿಲ್ಲದ ವೇಳಾಪಟ್ಟಿಗಳು ಅನಾರೋಗ್ಯಕರ ಆಹಾರ ಪದ್ಧತಿಗಳಿಗೆ ನಾವು ಅಂಟಿಕೊಳ್ಳುವಂತೆ ಆಗಬಹುದು. ಅಂದರೆ ಗಡಿಬಿಡಿಯಲ್ಲಿ ಊಟ ಮಾಡುವುದು ಅಥವಾ ಊಟ ಬಿಡುವುದು. ಆದರೆ ನಾವು ಪ್ರತಿದಿನ ಆರೋಗ್ಯದ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ತಿನ್ನುವಾಗ ನಿಧಾನವಾಗಿ ತಿನ್ನುವುದು ಅವಶ್ಯ. ನಿಮ್ಮ ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ತರಕಾರಿ–ಹಣ್ಣುಗಳು, ಲೀನ್ ಪ್ರೊಟೀನ್ ಇರುವಂತೆ ನೋಡಿಕೊಳ್ಳಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆಯಂಶ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳ ಸೇವನೆಯನ್ನು ಮಿತಿಗೊಳಿಸಿ. ದಿನದಲ್ಲಿ ಸಾಕಷ್ಟ ನೀರು ಕುಡಿಯುವುದು ಕೂಡ ಬಹಳ ಮುಖ್ಯವಾಗುತ್ತದೆ. ನಿಮ್ಮ ಜೊತೆ ಸದಾ ನೀರಿನ ಬಾಟಲಿ ಇರುವಂತೆ ನೋಡಿಕೊಳ್ಳಿ.
ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ: ಇಂದಿನ ಕಾಲದಲ್ಲಿ ಕಿಂಡರ್‌ಗಾರ್ಡನ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಒತ್ತಡದಿಂದ ಬಳಲುವವರ ಸಂಖ್ಯೆ ದೊಡ್ಡದು. ಅಧಿಕ ಒತ್ತಡದ ಮಟ್ಟಗಳು ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ನಿಮ್ಮ ದಿನಚರಿಯಲ್ಲಿ ಒತ್ತಡ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಳ್ಳಿ. ಸಾವಧಾನತೆ, ಧ್ಯಾನ ಅಥವಾ ಯೋಗದಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ದೀರ್ಘ ಉಸಿರಾಟ ಹಾಗೂ ಒಂದೈದು ನಿಮಿಷ ಹೊರಗಡೆ ವಾಕ್ ಮಾಡುವುದು ಕೂಡ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ.
ನಿದ್ದೆಗೆ ಆದ್ಯತೆ ನೀಡಿ: ಹೃದಯದ ಆರೋಗ್ಯ ಸುಧಾರಿಸಲು ಗುಣಮಟ್ಟದ ನಿದ್ದೆ ಬಹಳ ಮುಖ್ಯ, ಪ್ರತಿದಿನ ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಿ. ದಿನಾಲು ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯದಲ್ಲಿ ಎದ್ದೇಳುವ ಅಭ್ಯಾಸ ಮಾಡಿ. ಸ್ಥಿರವಾದ ನಿದ್ದೆಯ ವೇಳಾಪಟ್ಟಿಯು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. ಸ್ಕ್ರೀನ್ ಟೈಮ್ ಆದಷ್ಟು ಮಿತಿಗೊಳಿಸಿ. ಮಲಗುವ 1 ಗಂಟೆಗೂ ಮುನ್ನ ಮೊಬೈಲ್ ಬದಿಗಿರಿಸಿ. ಮಲಗುವಾಗ ಹಿತವಾದ ಸಂಗೀತ ಕೇಳಿ. ವಿಶ್ರಾಂತಿ ತಂತ್ರಗಳನ್ನು ಅನುಸರಿಸಿ, ಶಾಂತವಾಗಿ ನಿದ್ರಿಸಿ.
ಧೂಮಪಾನ ತಪ್ಪಿಸಿ, ಮಧ್ಯಪಾನ ಸೇವನೆಗೆ ಮಿತಿ ಇರಲಿ: ಅತಿಯಾದ ಮದ್ಯಪಾನ ಮತ್ತು ಧೂಮಪಾನವು ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನೀವು ಧೂಮಪಾನ ಮಾಡುತ್ತಿದ್ದರೆ, ಹೃದಯರಕ್ತನಾಳದ ಸಮಸ್ಯೆಗಳಿಗೆ ಧೂಮಪಾನವು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿರುವುದರಿಂದ ಅದನ್ನು ತೊರೆಯಲು ಪ್ರಯತ್ನಿಸಿ.
ನಿಯಮಿತ ಆರೋಗ್ಯ ತಪಾಸಣೆ: ಹೃದಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಆಗಾಗ ಹೃದಯ ಪರೀಕ್ಷೆ ಮಾಡಿಸಿ. ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಇತರ ಸಂಬಂಧಿತ ಆರೋಗ್ಯ ಮಾಪನಗಳನ್ನು ನಿಯಮಿತವಾಗಿ ಪರೀಕ್ಷಿಸಿ. ಸಂಭಾವ್ಯ ಸಮಸ್ಯೆಗಳ ಆರಂಭಿಕ ಪತ್ತೆ ಹೆಚ್ಚು ಪರಿಣಾಮಕಾರಿ ನಿರ್ವಹಣೆ ಮತ್ತು ತಡೆಗಟ್ಟುವ ತಂತ್ರಗಳಿಗೆ ಕಾರಣವಾಗಬಹುದು.
ಬಿಡುವಿಲ್ಲದ ಕೆಲಸದ ಜೀವನದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೇವಲ ಸಾಧ್ಯವಲ್ಲ ಆದರೆ ಅತ್ಯಗತ್ಯ. ದೈಹಿಕ ಚಟುವಟಿಕೆಯನ್ನು ಸಂಯೋಜಿಸುವ ಮೂಲಕ, ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡುವುದು, ಒತ್ತಡವನ್ನು ನಿರ್ವಹಿಸುವುದು, ನಿದ್ರೆಗೆ ಆದ್ಯತೆ ನೀಡುವುದು, ಮದ್ಯಪಾನವನ್ನು ಸೀಮಿತಗೊಳಿಸುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳನ್ನು ನಿಗದಿಪಡಿಸುವುದರಿಂದ, ಯುವಕರು ತಮ್ಮ ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಸಣ್ಣ, ಸ್ಥಿರವಾದ ಬದಲಾವಣೆಗಳು ನಿಮ್ಮ ಹೃದಯ ಮತ್ತು ಒಟ್ಟಾರೆ ಯೋಗಕ್ಷೇಮ ಎರಡಕ್ಕೂ ಶಾಶ್ವತ ಪ್ರಯೋಜನಗಳಿಗೆ ಕಾರಣವಾಗಬಹುದು.
ವಿಭಾಗ