ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೀರಾ: ನಿದ್ರಾಹೀನತೆ ಸಮಸ್ಯೆ ನಿವಾರಣೆಗಾಗಿ ಈ ಐದು ಯೋಗ ಭಂಗಿಗಳನ್ನು ಪ್ರಯತ್ನಿಸಿ
Oct 05, 2024 11:17 AM IST
ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುವ ಯೋಗಾಸನದ ಐದು ಭಂಗಿಗಳು ಇಲ್ಲಿವೆ:
- ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಅಥವಾ ಮಲಗಿದ ಕೂಡಲೇ ನಿದ್ದೆ ಬರುವಂತೆ ಮಾಡಲು ಯೋಗವು ದಿವ್ಯೌಷಧವಾಗಿದೆ. ಮಲಗುವ ಮುನ್ನ ಯೋಗವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತವಾಗಬಹುದು. ಯೋಗಾಭ್ಯಾಸ ಮಾಡಿದರೆ ಇದು ನಿದ್ದೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಇಂದು ಬಹುತೇಕ ಮಂದಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗಿದ ಕೂಡಲೇ ನಿದ್ದೆ ಬರದೆ, ಒದ್ದಾಡಿ ಒದ್ದಾಡಿ ಬಹಳ ಸಮಯದ ಬಳಿಕ ನಿದ್ದೆ ಬಂದರೆ, ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಇಂತಹ ಸಮಸ್ಯೆಯನ್ನು ಇಂದು ಬಹುತೇಕ ಮಂದಿ ಹೊಂದಿದ್ದಾರೆ. ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಅಥವಾ ಮಲಗಿದ ಕೂಡಲೇ ನಿದ್ದೆ ಬರುವಂತೆ ಮಾಡಲು ಯೋಗವು ದಿವ್ಯೌಷಧವಾಗಿದೆ. ಮಲಗುವ ಮುನ್ನ ಯೋಗವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತವಾಗಬಹುದು. ಯೋಗಾಭ್ಯಾಸ ಮಾಡಿದರೆ ಇದು ನಿದ್ದೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಧ್ಯಯನವೊಂದರಲ್ಲಿ ಯೋಗವನ್ನು ಅಭ್ಯಾಸ ಮಾಡದಿರುವವರಿಗೆ ಹೋಲಿಸಿದರೆ, ಯೋಗಾಭ್ಯಾಸ ಮಾಡುವವರಿಗೆ ನಿದ್ದೆ ಬೇಗ ಒಲಿದಿದೆ ಎಂದು ತಿಳಿದು ಬಂದಿದೆ. ಯೋಗವನ್ನು ಮಾಡುವುದರಿಂದ ಇದು ಚಿಂತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ವಿಶ್ರಾಂತಿ ಪಡೆಯಲು ಕೂಡ ಸಹಾಯಕವಾಗಿದೆ. ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುವ ಯೋಗಾಸನದ ಐದು ಭಂಗಿಗಳು ಇಲ್ಲಿವೆ:
ಉಸಿರಾಟದ ಅಭ್ಯಾಸ: ಉತ್ತಮ ನಿದ್ದೆ ಪಡೆಯಲು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಬೇಕು. ಧ್ಯಾನದಂತೆ ಕುಳಿತು ದೀರ್ಘವಾಗಿ ಉಸಿರಾಡಬೇಕು. ಆಳವಾಗಿ ಉಸಿರಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಉಸಿರಾಟವು ಒಂದು ತಂತ್ರವಾಗಿದ್ದು, ಧ್ಯಾನದ ಸ್ಥಿತಿಯಲ್ಲಿ ಮಾತ್ರವಲ್ಲ ಮಲಗಿರುವ ಭಂಗಿಯಲ್ಲೂ ಪ್ರಯತ್ನಿಸಬಹುದು. ಎದೆಯ ಮೇಲೆ ಒಂದು ಕೈ ಮತ್ತು ಹೊಟ್ಟೆಯ ಮೇಲೆ ಒಂದು ಕೈಯನ್ನಿಟ್ಟು ಆಳವಾಗಿ ಮೂಗಿನ ಮೂಲಕ ಉಸಿರು ತೆಗೆದುಕೊಳ್ಳಬೇಕು. ರಕ್ತದೊತ್ತಡ ಕಡಿಮೆ ಮಾಡುವಲ್ಲಿ, ಹೃದಯದ ಆರೋಗ್ಯಕ್ಕೂ ಈ ರೀತಿಯ ಉಸಿರಾಟದ ಅಭ್ಯಾಸ ಮಾಡುವುದು ಉತ್ತಮ. ಇದಕ್ಕಾಗಿ ವಜ್ರಾಸನದ ರೀತಿಯಲ್ಲಿ ಕುಳಿತುಕೊಳ್ಳಬೇಕು. ದೇಹವನ್ನು ನೇರವಾಗಿರಿಸಬೇಕು. ನಂತರ ಪಾದಗಳನ್ನು ಹತ್ತಿರಕ್ಕೆ ತರಬೇಕು.
ಬಾಲಾಸನ: ಹೆಸರೇ ಹೇಳುವಂತೆ ಇದು ಮಗುವಿನ ಆಸನ. ಈ ಆಸನವನ್ನು ಮಾಡುವುದರಿಂದ ಒತ್ತಡ ನಿವಾರಿಸಲು ಮತ್ತು ನಿದ್ದೆಯ ಸಮಸ್ಯೆಯನ್ನು ದೂರ ಮಾಡಲು ಸಹಾಯಕವಾಗಿದೆ. ಈ ಭಂಗಿಯಲ್ಲಿರುವಾಗ, ಹಣೆಯನ್ನು ನೆಲದ ಮೇಲೆ ಇರಿಸಬೇಕು. ಕೆಲವು ಸೆಕೆಂಡುಗಳ ಕಾಲ ಹೀಗೆಯೇ ಕುಳಿತುಕೊಳ್ಳಬಹುದು. ನಂತರ ಉಸಿರು ಹೊರಹಾಕುತ್ತಾ ನೇರವಾಗಿ ಕುಳಿತುಕೊಳ್ಳಬೇಕು.
ವಿಪರೀತ ಕರಣಿ ಆಸನ: ನಿದ್ದೆಯ ಸಮಸ್ಯೆಯನ್ನು ದೂರ ಮಾಡುವ ಯೋಗ ಭಂಗಿಗಳಲ್ಲಿ ಒಂದಾಗಿರುವ ಈ ಆಸನವನ್ನು ಮಾಡುವುದರಿಂದ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ. ಉತ್ತಮ ವಿಶ್ರಾಂತಿ ಪಡೆಯಲು ಈ ಆಸನ ತುಂಬಾ ಉಪಯುಕ್ತವಾಗಿದೆ. ಇದೊಂದು ಸರಳ ಯೋಗಾಭ್ಯಾಸವಾಗಿದ್ದು, ನೆಲದ ಮೇಲೆ ಮಲಗಬೇಕು, ನಂತರ ಎರಡೂ ಕಾಲಗಳನ್ನು ಮೇಲಕ್ಕೆತ್ತಬೇಕು. ಈ ಆಸನವನ್ನು ಮೊದಲ ಬಾರಿ ಪ್ರಯತ್ನಿಸುತ್ತಿದ್ದರೆ ಗೋಡೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಗೋಡೆಯ ಮೇಲೆ ಕಾಲುಗಳನ್ನಿಟ್ಟು, ಕಣ್ಣುಗಳನ್ನು ಮುಚ್ಚಿ ಆಳವಾಗಿ ಉಸಿರಾಡಬೇಕು. ನಂತರ ನಿಧಾನವಾಗಿ ಕಾಲುಗಳನ್ನು ಹಿಂದಕ್ಕೆ ತಂದು ವಿಶ್ರಾಂತಿ ಪಡೆದುಕೊಳ್ಳಬೇಕು.
ಮೊಣಕಾಲುಗಳನ್ನು ಹಿಡಿದುಕೊಳ್ಳುವುದು: ನಿದ್ದೆ ಸಮಸ್ಯೆ ಮಾತ್ರವಲ್ಲದೆ ಬೆನ್ನಿನ ಸಮಸ್ಯೆಗಳನ್ನು ಹೊಂದಿದ್ದರೆ, ಮೊಣಕಾಲನ್ನು ಹಿಡಿದುಕೊಳ್ಳುವುದರಿಂದ ಪ್ರಯೋಜನ ಪಡೆಯಬಹುದು. ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ನೋವುಗಳಿಗೆ. ಈ ಭಂಗಿಯನ್ನು ಮಾಡುವುದರಿಂದ ಈ ಸಮಸ್ಯೆಗಳನ್ನು ದೂರವಿಡುತ್ತದೆ. ಇದನ್ನು ಅಭ್ಯಾಸ ಮಾಡುವುದು ತುಂಬಾನೇ ಸುಲಭ. ಮಲಗಿ ಒಂದು ಅಥವಾ ಎರಡೂ ಮೊಣಕಾಲುಗಳನ್ನು ಎದೆಗೆ ತಬ್ಬಿಕೊಳ್ಳಬೇಕು. ಅಥವಾ ಒಂದು ಬಾರಿ ಒಂದು ಮೊಣಕಾಲನ್ನು ಹಿಡಿದುಕೊಂಡರೆ, ನಂತರ ಇನ್ನೊಂದು ಮೊಣಕಾಲನ್ನು ಹಿಡಿದುಕೊಳ್ಳಬೇಕು.
ಶವಾಸನ: ಕೇವಲ ಐದು ನಿಮಿಷಗಳ ಕಾಲ ಶವಾಸನ ಅಭ್ಯಾಸ ಮಾಡುವುದರಿಂದ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರಕುತ್ತದೆ. ದೈಹಿಕ, ಮಾನಸಿಕ ವಿಶ್ರಾಂತಿ ಹಾಗೂ ಆಯಾಸವನ್ನು ಹೋಗಲಾಡಿಸಲು ಶವಾಸನ ಮಾಡುವುದರಿಂದ ಪ್ರಯೋಜನ ಪಡೆಯಬಹುದು. ಮುಖ್ಯವಾಗಿ ಮೆದುಳಿನ ಒತ್ತಡವನ್ನು ನಿವಾರಿಸಲು ಹಾಗೂ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ಇದು ಉತ್ತಮ. ದೇಹವು ತುಂಬಾ ದಣಿದಿದ್ದರೆ 5 ನಿಮಿಷ ಕಾಲ ಈ ಆಸನವನ್ನು ಪ್ರಯತ್ನಿಸಬಹುದು. ಇದನ್ನು ಮಾಡುವುದು ತುಂಬಾನೇ ಸರಳ. ಯೋಗಾಸನದ ಕೊನೆಯಲ್ಲಿ ಈ ಆಸನವನ್ನು ಮಾಡಲೇಬೇಕು. ಚಾಪೆಯ ಮೇಲೆ ಅಂಗಾತ ಮಲಗಿ, ಕಣ್ಣುಗಳನ್ನು ನಿಧಾನವಾಗಿ ಮುಚ್ಚಿಕೊಳ್ಳಿ. ಕಾಲುಗಳು ಸಂಪೂರ್ಣ ಹರಡಿಕೊಂಡಿರಬೇಕು. ಮೊಣಕಾಲುಗಳು, ಕಾಲುಗಳು, ಕೈಗಳು ಇತ್ಯಾದಿ ಅಂಗಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಆಳವಾಗಿ ಉಸಿರಾಡಬೇಕು. ಈ ವೇಳೆ ಗಮನ ಉಸಿರಿನ ಮೇಲೆ ಕೇಂದ್ರೀಕೃತವಾಗಿರಬೇಕು.