Asia Cup 2023: ಭಾರತದ ನಿರ್ಧಾರಕ್ಕೆ ಬಾಂಗ್ಲಾ, ಲಂಕಾ, ಅಫ್ಘಾನ್ ಜೈಕಾರ; ಪಾಕಿಸ್ತಾನದಿಂದ ಏಷ್ಯಾಕಪ್ ಆತಿಥ್ಯ ಬಹುತೇಕ ದೂರ
Jan 09, 2024 08:19 PM IST
ಪಾಕಿಸ್ತಾನದ ಮಾಜಿ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಮತ್ತು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ
- Pakistan Asia Cup 2023: ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಪಾಕಿಸ್ತಾನದಿಂದ ಏಷ್ಯಾಕಪ್ ಟೂರ್ನಿಯನ್ನು ಸ್ಥಳಾಂತರಿಸುವ ಬಿಸಿಸಿಐನ ಒತ್ತಡವನ್ನು ಬೆಂಬಲಿಸಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ.
ಏಷ್ಯಾಕಪ್ (Asia Cup 2023) ಆಯೋಜನೆ ವಿಚಾರವಾಗಿ ಪಾಕಿಸ್ತಾನವು ಮತ್ತೊಮ್ಮೆ ದಯನೀಯ ಸ್ಥಿತಿಗೆ ಒಳಗಾಗಿದೆ. ಭಾರತದ ಬೆನ್ನಲ್ಲೇ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕೂಡಾ ಪಾಕಿಸ್ತಾನದ ಉದ್ದೇಶಿತ 'ಹೈಬ್ರಿಡ್ ಮಾದರಿ'ಯಿಂದ (Hybrid Model) ಹಿಂದೆ ಸರಿದಿವೆ. ಹೀಗಾಗಿ ಬೇರೆ ಯಾವುದೇ ಆಯ್ಕೆ ಕಾಣದ ಪಾಕಿಸ್ತಾನವು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ನಜಮ್ ಸೇಥಿ ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ಏಷ್ಯಾಕಪ್‌ನ 3ರಿಂದ 4 ಪಂದ್ಯಗಳನ್ನು ತಮ್ಮ ದೇಶದಲ್ಲಿ ನಡೆಸಬೇಕಿತ್ತು. ಇದೇ ವೇಳೆ ಭಾರತ ತಂಡ ಆಡಬೇಕದ ಉಳಿದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಬಹುದು. ತಟಸ್ಥ ಸ್ಥಳವೆಂದರೆ, ಪಾಕಿಸ್ಥಾನದ ಹೊರಗೆ ಬೇರೊಂದು ದೇಶದಲ್ಲಿ ಪಂದ್ಯ ನಡೆಸುವುದಾಗಿದೆ. ಉದಾಹರಣೆಗೆ ಭಾರತ ಮತ್ತು ಪಾಕಿಸ್ತಾನದ ಪಂದ್ಯವು ಶ್ರೀಲಂಕಾ ಅಥವಾ ಅರಬ್ ರಾಷ್ಟ್ರಗಳಲ್ಲಿ ನಡೆಸುವುದಾಗಿದೆ.
ಭದ್ರತಾ ಕಾರಣಗಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಹೀಗಾಗಿ ಪಾಕಿಸ್ತಾನವು ತನ್ನ ಏಷ್ಯಾಕಪ್ ಆತಿಥ್ಯ ಹಕ್ಕನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ತಂತ್ರ ಹಾಗೂ ಯೋಜನೆಗಳನ್ನು ಮಾಡುತ್ತಿದೆ. ಹೀಗಾಗಿ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಪಿಸಿಬಿ ಹುಟ್ಟುಹಾಕಿತು. ಆದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಪಾಕಿಸ್ತಾನದಿಂದ ಟೂರ್ನಿಯನ್ನು ಸ್ಥಳಾಂತರಿಸುವ ಬಿಸಿಸಿಐನ ಒತ್ತಡವನ್ನು ಬೆಂಬಲಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ.
“ಏಷ್ಯಾದ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಮಂಡಳಿಯು ಈ ತಿಂಗಳ ಕೊನೆಯಲ್ಲಿ ಔಪಚಾರಿಕ ಸಭೆ ನಡೆಸಲಿದೆ. ಆದರೆ ಏಷ್ಯಾಕಪ್‌ಗಾಗಿ ತಮ್ಮ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬೆಂಬಲಿಸುತ್ತಿಲ್ಲ ಎಂಬುದು ಪಿಸಿಬಿಗೆ ಈಗಾಗಲೇ ತಿಳಿದಿದೆ,” ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ.
ಹಿನ್ನಡೆಯ ಬಳಿಕ, ಸೇಥಿ ಅವರು ಈಗಾಗಲೇ ತಮ್ಮ ಕ್ರಿಕೆಟ್ ನಿರ್ವಹಣಾ ಸಮಿತಿಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ತವರಿನಲ್ಲಿ ಏಷ್ಯಾಕಪ್‌ನ ಯಾವುದೇ ಪಂದ್ಯಗಳನ್ನು ಆಯೋಜಿಸದಿದ್ದರೆ, ಪಾಕಿಸ್ತಾನದ ಮುಂದಿನ ನಿಲುವಿನ ಬಗ್ಗೆ ಚರ್ಚಿಸಲು ಸಂಬಂಧಿತ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಬೇರೊಂದು ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ, ಪಾಕ್ ಆಟದಲ್ಲಿ ಭಾಗವಹಿಸುವುದಿಲ್ಲ ಎಂದು ಸೇಥಿ ಪದೇ ಪದೇ ಹೇಳುತ್ತಿದ್ದಾರೆ. ಅಂದರೆ ಪಿಸಿಬಿ ಏಷ್ಯಾಕಪ್ ಬಹಿಷ್ಕಾರಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಎಸಿಸಿ ಕೂಡಾ ಪಾಕ್‌ಗೆ ಕೇವಲ ಎರಡು ಆಯ್ಕೆಗಳನ್ನು ಮಾತ್ರ ನೀಡಿದೆ. “ಪಾಕಿಸ್ತಾನಕ್ಕೆ ಕೇವಲ ಎರಡು ಆಯ್ಕೆಗಳಿವೆ. ಒಂದು ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಿಸಿ, ಅಥವಾ ಹಿಂದೆ ಸರಿಯಿರಿ” ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೂಲಗಳು ತಿಳಿಸಿವೆ.
ಏಷ್ಯಾಕಪ್ ಅನ್ನು ಪಾಕಿಸ್ತಾನ ಮತ್ತು ಇತರ ಕೆಲವು ರಾಷ್ಟ್ರಗಳಲ್ಲಿ ಆಯೋಜಿಸುವುದಕ್ಕೆ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಭಾರತ ವಿರೋಧ ವ್ಯಕ್ತಪಡಿಸಿವೆ. ಪ್ರಯಾಣ ಮತ್ತು ಆರ್ಥಿಕವಾಗಿ ಇದು ಕಾರ್ಯಸಾಧ್ಯವಲ್ಲ ಎಂಬುದು ಈ ನಾಲ್ಕು ದೇಶಗಳ ಅಭಿಪ್ರಾಯ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಟೂರ್ನಿಯನ್ನು ಯಾವುದಾದರೂ ಒಂದು ದೇಶದಲ್ಲಿ (ಪ್ರಮುಖ ಆಯ್ಕೆ ಶ್ರೀಲಂಕಾ) ನಡೆಸಬೇಕು ಎಂಬ ನಿಲುವಿಗೆ ವಿವಿಧ ರಾಷ್ಟ್ರಗಳು ಬಂದಿವೆ.
ಏಷ್ಯಾಕಪ್ ರದ್ದು ಸಾಧ್ಯತೆ
ಮತ್ತೊಂದೆಡೆ, ಈ ವರ್ಷ ವಿಶ್ವಕಪ್ ಕೂಡಾ ನಡೆಯುತ್ತಿದೆ. ಹೀಗಾಗಿ ಏಷ್ಯಾಕಪ್ ಅನ್ನು ಸಂಪೂರ್ಣವಾಗಿ ರದ್ದುಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸುಳಿವು ನೀಡಿದೆ. “ಈ ವರ್ಷ ಏಷ್ಯಾಕಪ್ ನಡೆಯದಿರುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ಪಾಕಿಸ್ತಾನ ಮತ್ತು ಭಾರತ ಪಂದ್ಯಗಳಿಲ್ಲದೆ ಪ್ರಸಾರಕರು ಎಸಿಸಿಗೆ ನೀಡುತ್ತಿದ್ದ ಅದೇ ಮೊತ್ತವನ್ನು ನೀಡುವ ಸಾಧ್ಯತೆಯಿಲ್ಲ” ಎಂದು ಮೂಲಗಳು ತಿಳಿಸಿವೆ.