ಸಶರೀರ ಬೃಂದಾವನಸ್ಥರಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಯಾವಾಗ? ಇಲ್ಲಿದೆ ವಿವರ-hindu religion when guru raghavendra swamy aradhana mahotsava celebrates this year religious news in kannada rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಶರೀರ ಬೃಂದಾವನಸ್ಥರಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಯಾವಾಗ? ಇಲ್ಲಿದೆ ವಿವರ

ಸಶರೀರ ಬೃಂದಾವನಸ್ಥರಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಯಾವಾಗ? ಇಲ್ಲಿದೆ ವಿವರ

ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಗುರು ರಾಘವೇಂದ್ರರು ಸಶರೀರ ಬೃಂದಾವನಸ್ಥರಾದ ದಿನವನ್ನು ಪ್ರತಿ ವರ್ಷ ರಾಘವೇಂದ್ರಸ್ವಾಮಿಗಳ ಆರಾಧನೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಆಗಸ್ಟ್‌ 20 ರಂದು ಪೂರ್ವಾರಾಧನೆ, ಆ. 21 ರಂದು ಮಧ್ಯಾರಾಧನೆ ಹಾಗೂ 22 ರಂದು ಉತ್ತರ ಆರಾಧನೆ ಆಚರಿಸಲಾಗುತ್ತಿದೆ.

ಜೀವ ಸಮಾಧಿಯಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಈ ಬಾರಿ ಯಾವಾಗ? ಇಲ್ಲಿದೆ ವಿವರ
ಜೀವ ಸಮಾಧಿಯಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಈ ಬಾರಿ ಯಾವಾಗ? ಇಲ್ಲಿದೆ ವಿವರ (PC: @KiranKS, @Harsha_N1112)

ಹಬ್ಬ, ವ್ರತಗಳು ಹೊರತುಪಡಿಸಿ ಪ್ರತಿ ಮಾಸದಲ್ಲೂ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರುತ್ತವೆ. ಹಾಗೇ ಶ್ರಾವಣ ಮಾಸದಲ್ಲಿ ಆಚರಿಸುವ ಆಚರಣೆಗಳಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಕೂಡಾ ಒಂದು. ಕಲಿಯುಗದ ಕಾಮಧೇನು, ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದ ದಿನವನ್ನು ಪ್ರತಿ ವರ್ಷ ಆರಾಧನೆಯನ್ನಾಗಿ ಆಚರಿಸಲಾಗುತ್ತದೆ.

ರಾಯರ ಜನನ, ಪೂರ್ವಾಶ್ರಮ

ರಾಘವೇಂದ್ರ ಸ್ವಾಮಿಗಳು ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ 1595ರಲ್ಲಿ ಜನಿಸಿದರು. ಇವರ ಮೊದಲ ಹೆಸರು ವೆಂಕಟನಾಥ. ತಂದೆ ಹೆಸರು ತಿಮ್ಮಣ್ಣ ಭಟ್ಟರು, ತಾಯಿ ಗೋಪಿಕಾಂಬೆ. ವೆಂಕಟನಾಥ, ಬಾಲ್ಯದಿಂದಲೇ ಬಹಳ ಬುದ್ಧಿವಂತರಾಗಿದ್ದರು. ತಂದೆ ತಿಮ್ಮಣ್ಣಭಟ್ಟರು ಚಿಕ್ಕ ವಯಸ್ಸಿನಲ್ಲೇ ನಿಧನರಾದ್ದರಿಂದ ಅಣ್ಣ ಗುರುರಾಜರು ಸಂಸಾರದ ಜವಾಬ್ದಾರಿ ವಹಿಸಿಕೊಂಡರು. ಕೆಲವು ದಿನಗಳ ನಂತರ ರಾಯರಿಗೆ ಸರಸ್ವತಿ ಎಂಬುವರೊಂದಿಗೆ ಮದುವೆ ಆಯ್ತು. ಮದುವೆ ನಂತರ ಕೂಡಾ ರಾಯರು ವಿದ್ಯಾಭ್ಯಾಸ ಮುಂದುವರೆಸಿದರು. ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲದ್ದರಿಂದ ವೆಂಕಟನಾಥರು ಎಷ್ಟೋ ಬಾರಿ ಉಪವಾಸ ಇದ್ದದ್ದೂ ಉಂಟು. ಒಮ್ಮೆ ಸುಧೀಂದ್ರತೀರ್ಥರ ಕನಸಿನಲ್ಲಿ ತಮ್ಮ ಸಾಮ್ರಾಜ್ಯಕ್ಕೆ ವೆಂಕಟನಾಥರೇ ಸೂಕ್ತ ಎಂದು ರಾಮನು ಕನಸಿನಲ್ಲಿ ಹೇಳಿದ್ದರಿಂದ ಆ ವಿಚಾರವನ್ನು ಅವರು ವೆಂಕಟನಾಥರ ಬಳಿ ಹೇಳುತ್ತಾರೆ.

ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ವೆಂಕಟನಾಥರು ಸನ್ಯಾಸತ್ವ ಸ್ವೀಕರಿಸಿದರು. ನಂತರ ಇವರಿಗೆ ಶ್ರೀರಾಘವೇಂದ್ರ ತೀರ್ಥರು ಎಂದು ನಾಮಕರಣ ಮಾಡಲಾಯ್ತು. ಸನ್ಯಾಸತ್ವ ಸ್ವೀಕರಿಸಿದ ನಂತರ ರಾಯರು ಅದೆಷ್ಟೋ ಪವಾಡಗಳಿಗೆ ಸಾಕ್ಷಿಯಾದರು. ದಕ್ಷಿಣ ಭಾರತ ಪ್ರವಾಸವನ್ನು ಕೈಗೊಂಡು, ದ್ವೈತ ತತ್ತ್ವಶಾಸ್ತ್ರವನ್ನು ಪ್ರಚಾರ ಮಾಡಿದರು. ಜನರು ಇವರನ್ನು ಆರಾಧಿಸಲು ಆರಂಭಿಸಿದರು. ಅನೇಕ ಕೃತಿಗಳು, ಗೀತೆಗಳು, ಗ್ರಂಥಗಳನ್ನು ರಾಯರು ರಚಿಸಿದರು. 1671 ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಗುರು ರಾಘವೇಂದ್ರರು ಸಶರೀರ ಬೃಂದಾವನಸ್ಥರಾದರು. ಅಂದಿನಿಂದ ಈ ದಿನದಂದು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನಾಗಿ ಆಚರಿಸಲಾಗುತ್ತಿದೆ. ಮೂಲ ಬೃಂದಾವನವು ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ದಂಡೆಯಲ್ಲಿರುವ ಮಂತ್ರಾಲಯದಲ್ಲಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬಂದು ರಾಯರ ದರ್ಶನ ಪಡೆಯುತ್ತಾರೆ.

ಈ ಬಾರಿ ಆರಾಧನೆ ಯಾವಾಗ?

ಒಂದು ವಾರಗಳ ಕಾಲ ರಾಘವೇಂದ್ರ ಸ್ವಾಮಿಗಳ ಆರಾಧನೆ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 18 ರಿಂದ 24ವರೆಗೂ ಆರಾಧನೆ ಆಚರಿಸಲಾಗುತ್ತದೆ. ಅದರಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರ ಆರಾಧನೆ ಪ್ರಮುಖವಾದುದು. ಈ ಬಾರಿ ಆಗಸ್ಟ್ 20, ಮಂಗಳವಾರ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಆಗಸ್ಟ್ 21, ಬುಧವಾರ ಮಧ್ಯ ಆರಾಧನೆ ಹಾಗೂ ಆಗಸ್ಟ್ 22, ಗುರುವಾರ ಉತ್ತರ ಆರಾಧನೆ ನೆರವೇರಿಸಲಾಗುತ್ತಿದೆ.

ಭಕ್ತರು ಪ್ರತಿ ಬಾರಿ ರಾಯರ ಆರಾಧನೆಯನ್ನು ಕಣ್ತುಂಬಿಕೊಳ್ಳಲು ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಸ್ವಇಚ್ಛೆಯಿಂದ ರಾಯರ ಸೇವೆ ಮಾಡಿ ಬರುತ್ತಾರೆ. ಅಷ್ಟು ದೂರ ಹೋಗಲು ಸಾಧ್ಯವಿಲ್ಲದವರು ತಮ್ಮ ತಮ್ಮ ಊರುಗಳಲ್ಲಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡುತ್ತಾರೆ. ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಪ್ರತಿ ಬಾರಿಯಂತೆ ಈ ಬಾರಿಯೂ ಮಂತ್ರಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.