ಜಾತಕ ಎಂದರೇನು, ಕುಂಡಲಿಯಲ್ಲಿ ಬರುವ ಯಾವ ಮನೆಗಳು ಏನು ಅರ್ಥವನ್ನು ಸೂಚಿಸುತ್ತವೆ? ಇಲ್ಲಿದೆ ವಿವರ
ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡುವ ಯೋಚನೆಯಿದ್ದರೆ ಮೊದಲು ಜ್ಯೋತಿಷಿಗಳ ಬಳಿಗೆ ಹೋಗಿ ಜಾತಕ ತೋರಿಸಲಾಗುತ್ತದೆ. ಅದೇ ರೀತಿ ಜೀವನದಲ್ಲಿ ಒಂದರ ಹಿಂದೆ ಒಂದು ತೊಂದರೆಗಳು ಬಂದಾಗಲೂ ಜಾತಕ ಕೇಳುತ್ತಾರೆ. ಹಾಗಾದರೆ ಜಾತಕ ಎಂದರೇನು? ಅದರ ಮಹತ್ವವೇನು ತಿಳಿಯೋಣ. (ಬರಹ: ಅರ್ಚನಾ ವಿ ಭಟ್)
ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕಕ್ಕೆ ಬಹಳ ಮಹತ್ವ ನೀಡಲಾಗಿದೆ. ಏನೇ ತೊಂದರೆಗಳು ಬರಲಿ ಅಥವಾ ಶುಭ ಕಾರ್ಯವಿರಲಿ ಮೊದಲು ಜಾತಕವನ್ನು ನುರಿತ ಜ್ಯೋತಿಷಿಗಳಿಗೆ ತೋರಿಸಲಾಗುತ್ತದೆ. ಅದರಲ್ಲಿ ತೊಂದರೆಗಳಿಗೆ ಪರಿಹಾರ, ಶುಭ ಕಾರ್ಯಗಳಿಗೆ ಒಳ್ಳೆಯ ಮುಹೂರ್ತ ಸಿಗುತ್ತದೆ ಎಂದು ನಂಬಲಾಗಿದೆ. ಜಾತಕವನ್ನು ವ್ಯಕ್ತಿಯು ಹುಟ್ಟಿದ ದಿನಾಂಕ, ನಿಖರ ಸಮಯ ಮತ್ತು ಜನ್ಮ ಸ್ಥಳದ ಆಧಾರದ ಮೇಲೆ ಬರೆಯಲಾಗುತ್ತದೆ. ಆ ಸಮಯದಲ್ಲಿದ್ದ ಗ್ರಹ ಮತ್ತು ನಕ್ಷತ್ರಗಳ ಸ್ಥಾನದ ಮೇಲೆ ಆ ವ್ಯಕ್ತಿಯ ಭವಿಷ್ಯ ಹೇಳಲಾಗುತ್ತದೆ.
ಜಾತಕವು ವ್ಯಕ್ತಿಯು ಜನಿಸುವ ಸಮಯದಲ್ಲಿ ಗ್ರಹ ಮತ್ತು ನಕ್ಷತ್ರಗಳ ಚಿತ್ರಣವಾಗಿದೆ. ಅದರಲ್ಲಿ ಗ್ರಹಗಳ ಗುಣಲಕ್ಷಣಗಳನ್ನು ಹೇಳಲಾಗುತ್ತದೆ. ಯಾವ ಗ್ರಹ ಶುಭ ದೃಷ್ಟಿಯನ್ನು ಬೀರುತ್ತದೆ. ಮತ್ತು ಯಾವ ಗ್ರಹದಿಂದ ಅಶುಭ ಫಲಗಳು ಸಿಗುತ್ತವೆ ಎಂದು ವಿವರಿಸಲಾಗುತ್ತದೆ. ಹಾಗಾದರೆ ಜಾತಕದ ಮಹತ್ವವೇನು? ಜಾತಕದಲ್ಲಿ ಯಾವ ಯಾವ ಅಂಶಗಳು ಸೇರಿರುತ್ತವೆ ನೋಡೋಣ.
ಜಾತಕ ಎಂದರೇನು?
ಜಾತಕ ಎನ್ನುವುದು ವ್ಯಕ್ತಿಯ ವಿವರವಾದ ಜ್ಯೋತಿಷ್ಯ ನಕ್ಷೆ ಎಂದು ಹೇಳಬಹುದು. ಇದು ಮನುಷ್ಯನಿಗೆ ಆಧ್ಯಾತ್ಮ, ಗ್ರಹ ಮತ್ತು ನಕ್ಷತ್ರಗಳ ಮಾರ್ಗದರ್ಶನ ನೀಡುತ್ತದೆ. ಪ್ರತಿ ಗ್ರಹದ ಸ್ಥಾನ, ಚಲನೆ, ಸಂಯೋಗ, ಗುಣಲಕ್ಷಣ, ದೋಷ ಮುಂತಾದವುಗಳು ಜಾತಕದಲ್ಲಿರುತ್ತದೆ. ಅವು ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳನ್ನು ಸಹ ಹೇಳುತ್ತದೆ. ನಿರ್ದಿಷ್ಟ ಲೆಕ್ಕಾಚಾರವನ್ನು ಆಧರಿಸಿ ಜಾತಕ ಬರೆಯಲಾಗುತ್ತದೆ. 12 ಮನೆಗಳಲ್ಲಿ ವಿವರಿಸಲಾಗುವ ಜಾತಕವು ಆರೋಗ್ಯ, ಸಂಪತ್ತು, ವೃತ್ತಿಜೀವನ, ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ ಜಾತಕದ ಮೊದಲನೇ ಮನೆಯು ವ್ಯಕ್ತಿಯ ಬಾಹ್ಯ ನೋಟ, ಅವನ ವರ್ತನೆಯನ್ನು ಸೂಚಿಸುತ್ತದೆ. ಏಳನೇ ಮನೆಯು ಮದುವೆ, ಸಂಬಂಧಗಳ ಬಗ್ಗೆ ಹೇಳುತ್ತದೆ. ಪ್ರತಿಯೊಂದು ಮನೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
ಜ್ಯೋತಿಷ್ಯ ಶಾಸ್ತ್ರಜ್ಞರು ಜಾತಕವನ್ನು ಒಂದು ನಿರ್ದಿಷ್ಟ ಲೆಕ್ಕಾಚಾರದ ಮೂಲಕ ಭೂತ ಕಾಲದಲ್ಲಿ ನಡೆದ ಮತ್ತು ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿಗಳ ಬಗ್ಗೆ ಹೇಳುತ್ತಾರೆ. ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳ ಸ್ಥಾನವು ವ್ಯಕ್ತಿಗಳ ಮಂಗಳಕರ ಸಮಯ ಮತ್ತು ಎದುರಿಸಬಹುದಾದ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಉದಾಹರಣೆಗೆ ಜಾತಕದಲ್ಲಿ ಗುರು ಗ್ರಹವು ಪ್ರಬಲವಾಗಿದ್ದರೆ ಅದು ಸಮೃದ್ಧಿ ಮತ್ತು ಯಶಸ್ಸನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಶನಿಯ ಸ್ಥಾನವು ಕರ್ಮ ಫಲವನ್ನು ನೀಡುವುದನ್ನು ಸೂಚಿಸುತ್ತದೆ. ಶನಿಯು ತಾಳ್ಮೆಯನ್ನು ಸಹ ಪರೀಕ್ಷಿಸುತ್ತಾನೆ.
ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಗ್ರಹಗಳು
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ನಿಶ್ಚಿತ. ಅವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿರ್ದಿಷ್ಟ ಸಮಯದಲ್ಲಿ ಚಲಿಸುತ್ತವೆ. ಅದು ವ್ಯಕ್ತಿಯ ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳ ರಾಶಿ ಬದಲಾವಣೆಯಿಂದ ಶುಭ ಮತ್ತು ಅಶುಭ ಫಲಗಳು ಉಂಟಾಗುತ್ತವೆ. ಹಾಗಾಗಿ ಜಾತಕ ಎನ್ನುವುದು ಒಂದು ಸಲ ಹೇಳಿ ಮುಗಿಯುವುಂತದ್ದಲ್ಲ. ಗ್ರಹಗಳ ಚಲನೆ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ.
ಜಾತಕವನ್ನು ಬರೆಯಲು ನಿಖರವಾದ ಲೆಕ್ಕಾಚಾರವಿರುತ್ತದೆ. ಅದಕ್ಕೆ ಜ್ಯೋತಿಷ್ಯ ಶಾಸ್ತ್ರದ ಆಳವಾದ ಜ್ಞಾನ ಅಗತ್ಯವಿರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದವರು ಜಾತಕವನ್ನು ಬರೆಯುತ್ತಾರೆ ಮತ್ತು ಜ್ಯೋತಿಷ್ಯ ಹೇಳುತ್ತಾರೆ. ಕುಟುಂಬಸ್ತರು ಮದುವೆ, ವೃತ್ತಿ ಮತ್ತು ಜೀವನದ ಮಹತ್ವದ ನಿರ್ಣಯಗಳ ಸಂದರ್ಭದಲ್ಲಿ ಜ್ಯೋತಿಷಿಗಳನ್ನು ಭೇಟಿ ಮಾಡುತ್ತಾರೆ. ವಿವಾಹ ಜಾತಕವನ್ನು ಹೊಂದಿಸುವಾಗ ಗ್ರಹ ಕೂಟ, ದೋಷಗಳು, ಸಂತಾನ ಮುಂತಾದವುಗಳನ್ನು ಹೊಂದಿಸಿ ನೋಡುತ್ತಾರೆ. ಜಾತಕ ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿಗಳ ಜೊತೆಗೆ ಎಚ್ಚರಿಕೆಯನ್ನು ಸಹ ನೀಡುತ್ತದೆ. ಯಾವ ಸಮಯದಲ್ಲಿ ಏನನ್ನು ಮಾಡಬಾರದು ಎಂದು ಹೇಳುತ್ತದೆ.
ದೇವರು-ಮನುಷ್ಯನ ನಡುವಿನ ಸಂಬಂಧ
ಮೂಲಭೂತವಾಗಿ ಜಾತಕವು ಬ್ರಹ್ಮಾಂಡ ಮತ್ತು ಮನುಷ್ಯ ಜೀವನ ಇವೆರಡಕ್ಕೂ ಪರಸ್ಪರ ಆಳವಾದ ಸಂಬಂಧವನ್ನು ಕಲ್ಪಿಸುತ್ತದೆ. ಅತ್ಯಂತ ಪುರಾತನವಾದ ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಯ ಜೀವನ ಪ್ರಯಾಣವನ್ನು ಸುಖಮಯಗೊಳಿಸುವ ಮಾರ್ಗದರ್ಶಿ ಎಂಬ ನಂಬಿಕೆಯನ್ನು ಪಡೆದುಕೊಂಡಿದೆ. ವ್ಯಕ್ತಿಯ ಪರಿಶ್ರಮಕ್ಕೆ ಜಾತಕವು ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ದೇವರು ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಇದು ಹೇಳುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬರಹ: ಅರ್ಚನಾ ವಿ ಭಟ್