Temple: ಕರ್ನಾಟಕದಲ್ಲಿ ಸ್ವರ್ಣ ಗೌರಿ ದೇಗುಲ ಎಲ್ಲೆಲ್ಲಿದೆ, ಕುದೇರು ಸ್ವರ್ಣ ಗೌರಿ ದೇವಾಲಯದ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರ
Swarna Gowri Temple: ಚಾಮರಾಜನಗರದ ಕುದೇರು ಎಂಬಲ್ಲಿ ಸ್ವರ್ಣ ಗೌರಿಗೆ ದೊಡ್ಡ ದೇಗುಲವಿದೆ. ಇದನ್ನು ಹೊರತುಪಡಿಸಿದರೆ ಹಾಸನದ ಇರುವ ಮಡಳು ಎಂಬ ಗ್ರಾಮದಲ್ಲಿ ಸ್ವರ್ಣ ಗೌರಿಯ ದೇಗುಲವಿದೆ. ಗೌರಿ ಗಣೇಶ ಹಬ್ಬದ ಸಮಯದಲ್ಲಿ ಈ ಎರಡು ದೇಗುಲಗಳ ಬಗ್ಗೆ ತಿಳಿದುಕೊಳ್ಳೋಣ.
ಇದೇ ತಿಂಗಳ 18ನೆಯ ದಿನಾಂಕ ಸೋಮವಾರದಂದು ಸ್ವರ್ಣ ಗೌರಿ ವ್ರತವಿದೆ. ಅದೆ ದಿನ ವರಸಿದ್ಧಿ ವಿನಾಯಕ ವ್ರತ ಸಹ ಇರುತ್ತದೆ. ಸ್ವರ್ಣ ಗೌರಿ ವ್ರತವನ್ನು ತದಿಗೆಯ ದಿನ ಆಚರಿಸಬೇಕು. ಸೋಮವಾರದ ದಿನ ತದಿಗೆಯು ಬೆಳೆಗ್ಗೆ 9. 56 ರವರೆಗೆ ಇರಲಿದೆ. ಆದ್ದರಿಂದ 9.56 ರರ ಒಳಗೆ ಗೌರಿ ಪೂಜೆಯನ್ನು ಮಾಡಬೇಕು. ಸಾಧ್ಯವಾಗದೆ ಹೋದಲ್ಲಿ ಕನಿಷ್ಠಪಕ್ಷ ಪೂಜೆಯನ್ನು ಆರಂಭಿಸಬೇಕು.
ಆನಂತರ ಚೌತಿಯು ಆರಂಭವಾಗುತ್ತದೆ. ಶ್ರೀ ಗಣಪತಿ ಪೂಜೆಯನ್ನು ಮಾಡಬೇಕು. ಗೌರಿ ಗಣೇಶ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಲು ಕೆಲವು ಕಟ್ಟುಪಾಡುಗಳಿವೆ. ಇದರ ಅನ್ವಯ ಗೌರಿ ಗಣೇಶವನ್ನು ಸೆಪ್ಟೆಂಬರ್ 24ರ ಭಾನುವಾರದಂದು ನೀರಿನಲ್ಲಿ ವಿಸರ್ಜಿಸಬೇಕು. ಬಹುತೇಕ ಪ್ರತಿಯೊಂದು ದೇವರುಗಳಿಗೂ ದೇವಾಲಯಗಳು ಇರುತ್ತವೆ. ಆದರೆ ಬ್ರಹ್ಮ, ಲಕ್ಷ್ಮಿ, ಗೌರಿ, ಗಂಗಾಮಾತೆಯಂತಹ ದೇವತೆಗಳಿಗೆ ದೇವಾಲಯ ಅತಿ ವಿರಳವಾಗಿರುತ್ತದೆ.
ಕುದೇರು ಸ್ವರ್ಣಗೌರಿ ದೇಗುಲ
ಸ್ವರ್ಣ ಗೌರಿಗೆ ನಮ್ಮ ಕರ್ನಾಟಕದಲ್ಲಿಯೇ ಒಂದು ದೊಡ್ಡ ದೇವಾಲಯವಿದೆ. ಬೇರೆ ಸ್ಥಳಗಳಲ್ಲಿ ಸಾಮಾನ್ಯವಾಗಿ ಗೌರಿಯ ಪೂಜೆಯನ್ನು ಪ್ರತ್ಯೇಕವಾಗಿ ಮನೆಗಳಲ್ಲಿ ಪೂಜಿಸುತ್ತಾರೆ. ಆದರೆ ಈ ಊರಿನಲ್ಲಿ ಸ್ವರ್ಣ ಗೌರಿಯ ವ್ರತವನ್ನು ಊರಿನ ಎಲ್ಲಾ ಗೃಹಿಣಿಯರು ದೇವಾಲಯದಲ್ಲಿ ಒಂದುಗೂಡಿ ಸತತವಾಗಿ 12 ದಿನಗಳ ಕಾಲ ನಡೆಸುತ್ತಾರೆ. ಆ ವೇಳೆಯಲ್ಲಿನ ಆ ಊರಿನ ಸಿಂಗಾರ ನಿಜಕ್ಕೂ ಸ್ವರ್ಗವನ್ನೇ ಸೃಷ್ಟಿಸುತ್ತದೆ. ಇಡೀ ಊರಿನಲ್ಲಿ ತೋರಣಗಳನ್ನು ಕಟ್ಟಿ ಎಲ್ಲರೂ ಸಂತಸದಿಂದ ಮಾಡುತ್ತಾರೆ.
ಈ ಹಬ್ಬವು ಸರಸ್ವತಿ ನದಿಯ ದಡದ ಮೇಲಿನರಾಜ್ಯಕ್ಕೆ ಸಂಬಂಧಿಸಿದ ಕಥೆಯಾಗಿದೆ.ಚಂದ್ರಪ್ರಭವೆಂಬ ರಾಜನು ಒಳಗಾದಾಗ ಆತನ ಧರ್ಮ ಪತ್ನಿಸಣ್ಣ ಗೌರಿ ವ್ರತವನ್ನು ಆಚರಿಸುತ್ತಾಳೆ. ಇದರ ಫಲವಾಗಿ ಸಕಲ ಸೌಭಾಗ್ಯಗಳು ದೊರೆತು ಕೈಲಾಸದಲ್ಲಿ ಸ್ಥಾನವನ್ನು ಪಡೆಯುತ್ತಾಳೆ. ಈ ಕಥೆಯು ಸ್ಕಂದಪುರಾಣದಲ್ಲಿ ದೊರೆಯುತ್ತದೆ. ಈ ದೇವಾಲಯದಲ್ಲಿ ಪೂಜೆಯನ್ನು ಆಚರಿಸಿ ಗಂಗಾಮಾತೆಗೆ ಮರದ ಬಾಗಿನ ನೀಡುವಪದ್ಧತಿ ಇದೆ. ಈ ಊರಿನಲ್ಲಿ ಬೇರೆಲ್ಲೂ ಗೌರಿ ಗಣಪತಿಯನ್ನು ಪೂಜಿಸುವುದಿಲ್ಲ.
ಇದು ಸುಮಾರು 120 ವರ್ಷಗಳ ಹಿಂದೆ ಕಟ್ಟಿದ ದೇವಸ್ಥಾನ. ಇತ್ತೀಚೆಗೆ ಇದರ ಜೀರ್ಣೋದ್ಧಾರವನ್ನು ಮಾಡಿ, ಪ್ರವಾಸಿಗರು ಆಗಮಿಸಲು ಬೇಕಾದ ಸವಲತ್ತುಗಳನ್ನು ನೀಡಿದ್ದಾರೆ.
ಮನೆಗಳಲ್ಲಿ ಗೌರಿ ಯನ್ನು ಪೂಜಿಸಿ ಗೌರಿಯನ್ನು ನದಿಯಲ್ಲಿ ಅಥವಾ ಜಲದಲ್ಲಿ ವಿಸರ್ಜಿಸುವ ಮೊದಲು ಈ ದೇವಾಲಯದಲ್ಲಿ ಪೂಜೆಯನ್ನು ಮಾಡಿಸಿದರೆ ಎಲ್ಲಾ ರೀತಿಯ ಅನುಕೂಲತೆಗಳು ದೊರೆಯಲಿವೆ. ಇಂತಹ ದೇವಾಲಯವಿರುವುದು ನಮ್ಮ ಕರ್ನಾಟಕದಲ್ಲಿ.ಚಾಮರಾಜನಗರದ ಕುದೇರು ಎಂಬ ಗ್ರಾಮದಲ್ಲಿ.
ಹಾಸನದ ಮಡಳು- ಸ್ವರ್ಣಗೌರಿ ದೇಗುಲ
ಇದನ್ನು ಹೊರತುಪಡಿಸಿದರೆ ಹಾಸನದ ಇರುವ ಮಡಳು ಎಂಬ ಗ್ರಾಮದಲ್ಲಿ ಸ್ವರ್ಣ ಗೌರಿಯ ದೇಗುಲವಿದೆ. ಇಲ್ಲಿ ಪೂಜೆ ಮುಗಿದು ದೇವರನ್ನು ಸೋಬಲಕ್ಕಿ ಇಟ್ಟು ಕಳಿಸುವ ವೇಳೆ ಆ
ವಿಗ್ರಹದ ಕಣ್ಣಿನಲಿ ನೀರು ಬರುತ್ತದೆ ಎಂದು ಹೇಳಲಾಗುತ್ತದೆ. 16 ಎಳೆ ಮತ್ತು ಹನಿದಾರು ಗಂಟಿನ ದಾರವನ್ನು ಧರಿಸುವುದು ಇದರ ವಿಶೇಷ.
- ಲೇಖನ: ಎಚ್. ಸತೀಶ್, ಜ್ಯೋತಿಷಿ