ಅದೃಷ್ಟ ಒಲಿದು, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕು ಅಂದ್ರೆ ದಸರಾ ಹಬ್ಬದಂದು ತಪ್ಪದೇ ಈ 5 ಕೆಲಸ ಮಾಡಿ
ಹಿಂದೂ ಧರ್ಮದಲ್ಲಿ ದಸರಾ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ಹಬ್ಬವು ಅನ್ಯಾಯದ ವಿರುದ್ಧ ನ್ಯಾಯದ ಗೆಲುವನ್ನು ಸೂಚಿಸುತ್ತದೆ. ಈ ವಿಶೇಷ ದಿನದಂದು ನಾವು ಮಾಡುವ ಈ 5 ಕೆಲಸಗಳು ನಮಗೆ ಅದೃಷ್ಟ ತರುತ್ತವೆ.
ಭಾರತದದಾದ್ಯಂತ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ವಿಜಯದಶಮಿ ಅಥವಾ ದಸರಾವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವನ್ನು ಸೂಚಿಸುತ್ತದೆ.
ಪುರಾಣಗಳ ಪ್ರಕಾರ, ರಾಮನು ಸುದೀರ್ಘ ಯುದ್ಧದ ನಂತರ ರಾಕ್ಷಸ ರಾವಣನನ್ನು ಸೋಲಿಸುತ್ತಾನೆ. ದಸರಾವನ್ನು ರಾವಣನ ಸಂಹಾರದ ದಿನ ಎಂದು ಹೇಳಲಾಗುತ್ತದೆ. ರಾಮನು ರಾವಣನನ್ನು ಸೋಲಿಸಿದ ದಿನದ ಹಿನ್ನೆಲೆಯಲ್ಲಿ ವಿಜಯದಶಮಿ ಆಚರಿಸಲಾಗುತ್ತದೆ ಎಂದು ಒಂದು ಪೌರಾಣಿಕ ಕಥೆ ಹೇಳಿದರೆ, ಇನ್ನೊಂದು ಕಥೆಯ ಪ್ರಕಾರ ದುರ್ಗಾದೇವಿಯು ಒಂಬತ್ತು ದಿನಗಳ ಘೋರ ಯುದ್ಧದ ನಂತರ ರಾಕ್ಷಸ ಮಹಿಷಾಸುರನನ್ನು ಸೋಲಿಸಿದಳು. ಇದನ್ನು ಗುರುತಿಸಲು, ಭಾರತದ ಅನೇಕ ಭಾಗಗಳಲ್ಲಿ ದಸರಾವನ್ನು ಆಚರಿಸಲಾಗುತ್ತದೆ.
ಹಿಂದೂಗಳಲ್ಲಿ ಅತ್ಯಂತ ಮಹತ್ವದ ಹಬ್ಬ ಎನ್ನಿಸಿಕೊಂಡಿರುವ ವಿಜಯದಶಮಿಯ ದಿನ ಈ ಕೆಲವು ಕೆಲಸಗಳನ್ನು ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಅದೃಷ್ಟ ನಿಮ್ಮ ಪಾಲಿಗೆ ಒಲಿಯಬೇಕು ಅಂದ್ರೆ ವಿಜಯದಶಮಿಯ ದಿನ ನೀವು ಈ ಕೆಲಸಗಳನ್ನು ಮಾಡಬೇಕು.
ಮನೆ, ಅಂಗಡಿಗಳನ್ನು ಸ್ವಚ್ಛ ಮಾಡುವುದು
ದಸರಾ ಹಬ್ಬದಂದು ತಪ್ಪದೇ ಮನೆ ಸ್ವಚ್ಛ ಮಾಡಬೇಕು. ನೀವು ಅಂಗಡಿ ಮುಂಗಟ್ಟುಗಳನ್ನು ಹೊಂದಿದ್ದರೆ ಅದನ್ನೂ ಸ್ವಚ್ಛ ಮಾಡಬೇಕು. ಮನೆ, ಕೆಲಸದ ಸ್ಥಳ, ವ್ಯಾಪಾರ ಸ್ಥಳಗಳನ್ನು ಸ್ವಚ್ಛ ಮಾಡಿ, ಗೋಮೂತ್ರ ಸಿಂಪಡಿಸಬೇಕು. ನಂತರ ದೇವರಿಗೆ ಪೂಜೆ ಮಾಡಬೇಕು.
ಚಿನ್ನ, ವಾಹನ ಖರೀದಿ
ದಸರಾ ದಿನದಂದು ಚಿನ್ನಾಭರಣ, ವಾಹನ, ಫ್ಲಾಟ್, ಮನೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವುದು ತುಂಬಾ ಒಳ್ಳೆಯದು. ಚಿನ್ನವು ಲಕ್ಷ್ಮೀದೇವಿಗೆ ಸಂಬಂಧಿಸಿದೆ. ಹಾಗಾಗಿ ಅಂತಹ ವಸ್ತುಗಳನ್ನು ಖರೀದಿಸುವುದರಿಂದ ಅದೃಷ್ಟ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ದಸರೆಯಂದು ವ್ಯಾಪಾರ ಆರಂಭಿಸುವುದು ಕೂಡ ತುಂಬಾ ಶುಭಕರ.
ಮನೆ ಬಾಗಿಲ ಸಿಂಗಾರ
ದಸರಾ ಹಬ್ಬದಂದು ಮನೆಯು ಮುಂಭಾಲಿಗೆ ತಿಲಕ ಹಚ್ಚಿ, ಆರತಿ ಮಾಡುವುದು ಕೂಡ ಒಳ್ಳೆಯ ಅಭ್ಯಾಸ. ಜೊತೆಗೆ ಮನೆ ಬಾಗಿಲನ್ನು ಚೆಂಡು ಹೂವಿನಿಂದ ಅಲಂಕಾರ ಮಾಡಬೇಕು.
ಸಾಕು ಪ್ರಾಣಿಗಳಿಗೆ ಆಹಾರ ನೀಡುವುದು
ದಸರಾ ದಿನದಂದು ಹಸುಗಳಂತಹ ಸಾಕುಪ್ರಾಣಿಗಳಿಗೆ ವಿಶೇಷ ಆಹಾರವನ್ನು ನೀಡಿ. ದಸರಾದಂದು ಹಸಿದ ಪ್ರಾಣಿಗಳಿಗೆ ಆಹಾರ ನೀಡುವುದು ಅನ್ನ ನೀಡಿದಷ್ಟೇ ಶ್ರೇಯಸ್ಕರ. ಸಾಕುಪ್ರಾಣಿಗಳಿಗೆ ಮಾತ್ರವಲ್ಲದೆ ಬೀದಿ ಪ್ರಾಣಿಗಳಿಗೂ ಆಹಾರವನ್ನು ದಾನ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಮನೆ ದೇವರ ಪೂಜೆ
ದಸರಾ ಹಬ್ಬದಂದು ಊರ ದೇವರು ಹಾಗೂ ಮನೆ ದೇವರಿಗೆ ವಿಶೇಷ ಪೂಜೆ ಮಾಡಬೇಕು. ಇದರಿಂದ ದೇವರು ಅದೃಷ್ಟ ನೀಡುತ್ತಾರೆ ಎಂದು ಹೇಳಲಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ನಂಬಿಕೆಗಳನ್ನು ಆಧರಿಸಿದ ಬರಹವಾಗಿದೆ. ಅಂತರ್ಜಾಲದಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ. ಇದನ್ನು ಅನುಸರಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು)