ವಿಜಯದಶಮಿಯಂದು ಶಮಿಪೂಜೆ ಮಾಡುವ ಉದ್ದೇಶವಿದು, ಶಮಿ ವೃಕ್ಷಕ್ಕೆ ಮಹತ್ವ ನೀಡುವ ಹಿಂದಿವೆ ಹಲವು ಪೌರಾಣಿಕ ಕಥೆಗಳು
ನವರಾತ್ರಿಯ ಒಂಬತ್ತು ದಿನಗಳು ಕಳೆದು, ಹತ್ತನೇ ದಿನವನ್ನ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಈ ದಿನ ರಾಮನು ಅಯೋಧ್ಯೆಗೆ ಮರಳಿದ ದಿನ ಎಂಬುದು ಒಂದು ಪೌರಾಣಿಕ ಅಂಶವಾದರೆ, ದುರ್ಗಾಮಾತೆಯು ಮಹಿಷವಧೆ ಮಾಡಿದ ದಿನ ಎನ್ನುವುದು ಇನ್ನೊಂದು ಅಂಶ. ಈ ದಿನದಂದು ಶನಿಪೂಜೆ ಬಹಳ ಮಹತ್ವವಿದೆ. ಇದರ ಹಿಂದಿನ ಪೌರಾಣಿಕ ಕಥೆಯನ್ನು ನೀವೂ ತಿಳಿಯಿರಿ. (ಬರಹ: ಎಚ್. ಸತೀಶ್, ಜ್ಯೋತಿಷಿ).
ನವರಾತ್ರಿ ಹಬ್ಬದಲ್ಲಿ ವಿಜಯದಶಮಿಗೆ ವಿಶೇಷ ಮಹತ್ವವಿದೆ. ನವರಾತ್ರಿ ಮುಗಿದು 10ನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಳೆ ಅಂದರೆ ಅಕ್ಟೋಬರ್ 12ರಂದು ವಿಜಯದಶಮಿ ಆಚರಣೆ ಇದೆ. ಇದು ನವರಾತ್ರಿಯ ಅಂತಿಮ ದಿನವನ್ನು ಸೂಚಿಸುತ್ತದೆ. ನ್ಯಾಯ, ನೀತಿ, ಧರ್ಮವನ್ನು ಪುನಃಸ್ಥಾಪಿಸಲು ಮತ್ತು ರಕ್ಷಿಸುವ ಸಲುವಾಗಿ ಹೋರಾಡಿದ ಹಲವು ಕಥೆಗಳು ವಿಜಯದಶಮಿಯನ್ನು ಪ್ರತಿನಿಧಿಸುತ್ತವೆ.
ಪ್ರಮುಖವಾಗಿ ಮಹಿಷಾಸುರನ ವಿರುದ್ಧ ದುರ್ಗಾದೇವಿಯ ವಿಜಯವನ್ನು ಸೂಚಿಸುತ್ತದೆ. ಇದೇ ಮಾದರಿಯಲ್ಲಿ ಕೆಲವೆಡೆ ಮರ್ಯಾದಾ ಪುರುಷೋತ್ತಮದ ಶೀರಾಮನು ರಾವಣನ ಮೇಲೆ ಜಯ ಗಳಿಸಿದ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಈ ದಿನದಂದು ಪಂಚಭೂತಗಳನ್ನು ಗೌರವಿಸಲೆಂದು ಅನೇಕ ಧಾರ್ಮಿಕ ಕಾರ್ಯಗಳನ್ನು ಆಚರಿಸುತ್ತೇವೆ. ಅದರಲ್ಲಿ ಶಮಿ ವೃಕ್ಷಕ್ಕೆ ಪೂಜೆ ಮಾಡುವುದು ಕೂಡ ಒಂದು. ಹಾಗಾದರೆ ವಿಜಯದಶಮಿಯಂದು ಶಮಿಪೂಜೆ ಮಾಡುವುದೇಕೆ, ಇದರ ಹಿಂದಿನ ಪೌರಾಣಿಕ ಕಾರಣವೇನು ನೋಡಿ.
ವಿಜಯದಶಮಿಯಂದು ಶಮಿಪೂಜೆ ಮಾಡುವ ಮಹತ್ವ
ವಿಜಯದಶಮಿಯ ದಿನದಂದು ಶಮಿಪೂಜೆಗೆ ವಿಶೇಷವಾದ ಪ್ರಾಶಸ್ತ್ಯವನ್ನು ನೀಡುತ್ತೇವೆ. ಸಾಮಾನ್ಯಭಾಷೆಯಲ್ಲಿ ಇದನ್ನು ಬನ್ನಿಮರ ಎಂದು ಕರೆಯುತ್ತೇವೆ. ಇದಕ್ಕೆ ಸಂಬಂಧಿಸಿದ ಶ್ಲೋಕವೊಂದಿದೆ.
ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ| ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ| ತತ್ರ ನಿರ್ವಿಘ್ನಕತ್ರಿತ್ವಂ ಭವ ಶ್ರೀರಾಮಪೂಜಿತಾ||
ಇದನ್ನು ಪಠಿಸಿ ಶಮೀ ಪತ್ರೆಯನ್ನು ಆತ್ಮೀಯರಿಗೆ ನೀಡುವ ಪರಿಪಾಠವಿದೆ. ಇದರಿಂದ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ದೊರೆಯುವುದೆಂಬ ನಂಬಿಕೆ ಇದೆ. ಅಲ್ಲದೆ ವಿರೋಧಿಗಳ ಉಪಠಳವು ಕಡಿಮೆಯಾಗುತ್ತದೆ.
ಶಮಿಪೂಜೆಯ ಹಿಂದಿನ ಪೌರಾಣಿಕ ಕಥೆಗಳು
ಜಾರ್ವ ಎಂಬ ತಪಸ್ವಿಯೊಬ್ಬರು ಇರುತ್ತಾರೆ. ಸತ್ಯಸಂಧರಾದ ಇವರ ಪತ್ನಿಯ ಹೆಸರು ಸಮೇಧ. ದೈವಾನುಗ್ರಹದಿಂದ ಇವರಿಗೆ ಶಮೀಕಾ ಎಂಬ ಮಗಳು ಜನಿಸುತ್ತಾಳೆ. ಈಕೆಯ ಪತಿ ಕೌಶಿಕ ಮಹರ್ಷಿಯ ಶಿಷ್ಯ ಮಂದಾರ. ದಂಪತಿಗಳು ಒಮ್ಮೆ ವಾಯುವಿಹಾರಕ್ಕೆ ತೆರಳಿರುತ್ತಾರೆ. ಅಕಸ್ಮಿಕವಾಗಿ ಅರಣ್ಯವನ್ನು ಪ್ರವೇಶಿಸಿದಾಗ ಸೊಂಡಿಲನ್ನು ಹೊಂದಿದ್ದ ಮುನಿವರೈನ್ಯರನ್ನು ಕಾಣುತ್ತಾರೆ. ಆತನೆ ಭೃಶುಂಡಿ. ಆ ಮುನಿಯ ಆಕಾರವನ್ನು ಕಂಡ ದಂಪತಿಗಳು ನಗುವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಗೇಲಿ ಮಾಡುವಂತೆ ಜೋರಾಗಿ ನಗುತ್ತಾರೆ. ಇದನ್ನು ಕಂಡ ಭೃಶುಂಡಿಯು ಕೋಪಗೊಂಡು ಆ ದಂಪತಿಗಳಿಗೆ ಯಾವುದೇ ಉಪಯೋಗವಿಲ್ಲದ ಮರಗಳಾಗುವಂತೆ ಶಾಪನೀಡುತ್ತಾನೆ. ಆದರೂ ಅವರು ಅಪಹಾಸ್ಯವನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ. ಕೊನೆಗೆ ತಮ್ಮ ತಪ್ಪನ್ನು ಮನ್ನಿಸುವಂತೆ ಬೇಡುತ್ತಾರೆ. ಆದರೆ ಕೊಟ್ಟ ಶಾಪವನ್ನುಮರಳಿ ಪಡೆಯದ ಭೃಶುಂಡಿಯು ಗಣಪತಿಯ ಅನುಗ್ರಹದಿಂದ ನಿಮ್ಮ ಶಾಪವಿಮೋಚನೆ ಆಗುತ್ತದೆ ಎಂದು ಹೇಳುತ್ತಾನೆ. ಈ ವಿಚಾರಗಳು ಶಮಿಕಳ ತಂದೆ ತಾಯಿಗೆ ತಿಳಿಯುತ್ತದೆ. ಆದರೆ ಧೈರ್ಯಗೆಡದ ಅವರು ದೂರ್ವಾಸ ಮುನಿಯನ್ನು ಭೇಟಿ ಮಾಡಿ ತಮ್ಮ ಮಗಳು ಅಳಿಯನಿಗೆ ಉಂಟಾದ ತೊಂದರೆಯನ್ನು ತಿಳಿಸುತ್ತಾರೆ. ಅವರ ಶಾಪವಿಮೋಚನೆಗಾಗಿ ನೀವೇ ದಾರೀದೀಪವಾಗಬೇಕೆಂದು ಹೇಳುತ್ತಾರೆ. ದೂರ್ವಾಸರಿಂದ ಉಪದೇಶ ಪಡೆದ ಶ್ರೀಗಣಪತಿಯ ಸ್ತೋತ್ರವನ್ನು ಮರಗಳ ಬಳಿ ಕುಳಿತು ಶ್ರದ್ಧಾಭಕ್ತಿಗಳಿಂದ ಜಪಿಸುತ್ತಾರೆ. ಆಗ ಪ್ರತ್ಯಕ್ಷವಾದ ಗಣಪತಿಯು ಶಾಪ ವಿಮೋಚನೆ ಮಾಡುತ್ತಾನೆ. ಆಗ ಮರವಾಗಿದ್ದ ದಂಪತಿಗಳು ಮರಳಿ ಮಾನವ ಜನ್ಮ ಪಡೆಯುತ್ತಾರೆ.
ಪುರಾತನ ದಿನಗಳಲ್ಲಿ ಋಷಿ ಮುನಿಗಳು ಶಮೀವೃಕ್ಷದ ಕಾಂಡಗಳನ್ನು ಪರಸ್ಪರ ಉಜ್ಜುವ ಮುಖಾಂತರ ತಮ್ಮ ಹೋಮ ಹವನಾದಿಗಳಿಗೆ ಅಗ್ನಿಯನ್ನು ಸೃಷ್ಟಿಸುತ್ತಿದ್ದರು. ಆದ್ದರಿಂದ ಈ ಮರದಲ್ಲಿ ಕಲಿಯುಗದ ಪ್ರತ್ಯಕ್ಷ ದೈವ ಅಗ್ನಿಯು ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಆದ್ದರಿಂದ ವಿಜಯದಶಮಿಯಂದು ಶಮೀ ವೃಕ್ಷವನ್ನು ಪೂಜಿಸುವ ಮೂಲಕ ಶುಭಫಲಗಳನ್ನು ಪಡೆಯಬಹುದು. ಹಿಂದೊಮ್ಮೆ ಕುಬೇರನು ರಘು ಎಂಬ ಹೆಸರಿನ ಮಹಾರಾಜನಿಗಾಗಿ ಶಮೀ ವೃಕ್ಷದ ಪ್ರತಿಯೊಂದು ಎಲೆಯೂ ಸುವರ್ಣ ನಾಣ್ಯವನ್ನಾಗಿ ಮಾಡುತ್ತಾನೆ.
ಆದ್ದರಿಂದ ಇಂದಿಗೂ ಈ ಮರದ ಪೂಜೆಯನ್ನು ಮಾಡಿ, ಶಮೀ ಪತ್ರೆಯನ್ನು ಮನೆಗೆ ತಂದರೆ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ವಿದ್ಯಾರ್ಥಿಗಳು ತಮ್ಮ ಬಳಿ ಶಮೀ ಪತ್ರೆ ಅಥವಾ ಎಲೆಯನ್ನು ಇರಿಸಿದಲ್ಲಿ ವಿದ್ಯಾಭ್ಯಾಸದಲ್ಲಿನ ಅಡ್ಡಿ ಆತಂಕದಿಂದ ದೂರವಾಗಬಹುದು. ಇದರಿಂದ ಕುಟುಂಬದಲ್ಲಿ ಉತ್ತಮ ಅನ್ಯೋನ್ಯತೆ ಉಂಟಾಗುತ್ತದೆ. ದಾಂಪತ್ಯದಲ್ಲಿನ ತೊಂದರೆಗಳು ದೂರವಾಗುವುದೆಂಬುದು ನಿತ್ಯಸತ್ಯ.