ಭಾರತ-ಇಂಗ್ಲೆಂಡ್ 4ನೇ ಟೆಸ್ಟ್; ಟೆಸ್ಟ್‌ ಕ್ಯಾಪ್‌ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್-akash deep gets test cap touches mother feet with family in india vs england 4th test at ranchi ind vs eng series jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಇಂಗ್ಲೆಂಡ್ 4ನೇ ಟೆಸ್ಟ್; ಟೆಸ್ಟ್‌ ಕ್ಯಾಪ್‌ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್; ಟೆಸ್ಟ್‌ ಕ್ಯಾಪ್‌ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್

‌Akash Deep: ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಆಕಾಶ್ ದೀಪ್, ತನ್ನ ತಾಯಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಕುಟುಂಬದ ಇತರ ಸದಸ್ಯರು ಹಾಜತರಾಗಿದ್ದರು. ಭಾವನಾತ್ಮಕ ಕ್ಷಣಕ್ಕೆ ರಾಂಚಿ ಕ್ರಿಕೆಟ್‌ ಮೈದಾನ ಸಾಕ್ಷಿಯಾಯ್ತು.

ಟೆಸ್ಟ್‌ ಕ್ಯಾಪ್‌ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್
ಟೆಸ್ಟ್‌ ಕ್ಯಾಪ್‌ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್

ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಮೂಲಕ ಆರ್‌ಸಿಬಿ ವೇಗಿ ಆಕಾಶ್ ದೀಪ್ (Akash Deep) ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಫೆಬ್ರವರಿ 23ರ ಶುಕ್ರವಾರ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದ ಮೂಲಕ, ಟೀಮ್‌ ಇಂಡಿಯಾ ಪರ ಆಡುವ ಕನಸನ್ನು ದೀಪ್‌ ನನಸಾಗಿದ್ದಾರೆ. ಪಂದ್ಯದ ಟಾಸ್‌ ಪ್ರಕ್ರಿಯೆಗೂ ಮುನ್ನ, ಟೀಮ್‌ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು, ಆಕಾಶ್ ದೀಪ್‌ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಇದು ದೀಪ್‌ ಮಾತ್ರವಲ್ಲದೆ ಅವರ ಕುಟುಂಬಕ್ಕೂ ವಿಶೇಷ ಕ್ಷಣವಾಗಿದೆ.

ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಬಲಗೈ ವೇಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಕ್ಯಾಪ್ ಪಡೆದ ನಂತರ‌, ಆಕಾಶ್ ದೀಪ್ ಅವರನ್ನು ನಾಯಕ ರೋಹಿತ್ ಶರ್ಮಾ ಪ್ರೀತಿಯಿಂದ ಅಪ್ಪಿಕೊಂಡರು. ಕ್ಯಾಪ್‌ ಪಡೆಯುತ್ತಿದ್ದಂತೆಯೇ, ಆಕಾಶ್ ದೀಪ್ ನೇರವಾಗಿ ತಮ್ಮ ಮನೆಯವರ ಬಳಿ ಹೋದರು. ಈ ಹಿಂದಿನ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಕೂಡಾ ತಂದೆ ಹಾಗೂ ಪತ್ನಿ ಬಳಿ ಹೋಗಿ ಸಂಭ್ರಮಿಸಿದ್ದರು.

ತಾಯಿ ಪಾದಗಳಿಗೆ ನಮಸ್ಕರಿಸಿದ ದೀಪ್

ನೇರವಾಗಿ ತಮ್ಮ ತಾಯಿಯ ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಬಳಿಕ ತಬ್ಬಿಕೊಂಡು ಖುಷಿ ಹಂಚಿಕೊಂಡರು. ತಾಯಿಯೊಂದಿಗೆ ಇದ್ದ ಕುಟುಂಬದ ಇತರ ಸದಸ್ಯರು ಕೂಡಾ ಆಕಾಶ್‌ಗೆ ವಿಶ್‌ ಮಾಡಿದರು. ಎಲ್ಲರೂ ಸೇರಿ ಫೋಟೋಗಳಿಗೆ ಪೋಸ್ ನೀಡಿದರು. ಈ ಕ್ಷಣ ಆಕಾಶ್‌ ದೀಪ್‌ ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೂ ಭಾವನಾತ್ಮಕವಾಗಿತ್ತು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಅವರು ಸತತ ಮೂರು ವಿಕೆಟ್‌ ಪಡೆದು ಮಿಂಚಿದರು.

ಇಂಗ್ಲೆಂಡ್‌ ವಿರುದ್ಧದ ಪ್ರಸಕ್ತ ಟೆಸ್ಟ್‌ ಸರಣಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ನಾಲ್ಕನೇ ಭಾರತೀಯ ಕ್ರಿಕೆಟಿಗ ಆಕಾಶ್. ಈ ಸರಣಿಯಲ್ಲಿ ರಜತ್ ಪಾಟೀದಾರ್ ಮೊದಲನೆಯವರಾಗಿ ಟೀಮ್‌ ಇಂಡಿಯಾ ಟೆಸ್ಟ್‌ ತಂಡಕ್ಕೆ ಕಾಲಿಟ್ಟರು. ರಾಜ್‌ಕೋಟ್‌ ಟೆಸ್ಟ್‌ ಮೂಲಕ ಸರ್ಫರಾಜ್ ಖಾನ್ ಮತ್ತು ಕೀಪರ್ ಧ್ರುವ್‌ ಜುರೆಲ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಆಕಾಶ್ ದೀಪ್ ಯಾರು?

ಬಿಹಾರದ ದೆಹ್ರಿಯಲ್ಲಿ ಜನಿಸಿದ ಬಲಗೈ ವೇಗಿ, ಆಡಿದ 30 ಪಂದ್ಯಗಳಲ್ಲಿ 103 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ಲ್ಲಿ 23.58ರ ಸರಾಸರಿ ಹೊಂದಿದ್ದಾರೆ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡುವ ಆಕಾಶ ದೀಪ್‌, ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಮೂರು ಪಂದ್ಯಗಳ ಸರಣಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಬಲಗೈ ವೇಗಿ ಮೂರು ಅನಧಿಕೃತ ಟೆಸ್ಟ್‌ಗಳಲ್ಲಿ ಎರಡು ಬಾರಿ ತಲಾ ನಾಲ್ಕು ವಿಕೆಟ್‌ ಸಾಧನೆ ಮಾಡಿದ್ದರು. ಸರಣಿಯಲ್ಲಿ ಒಟ್ಟು 12 ವಿಕೆಟ್‌ ಪಡೆದರು.

ಇದನ್ನೂ ಓದಿ | ವಿರಾಟ್‌ ನಾಯಕತ್ವದಲ್ಲಿ ಸೋಲು-ಗೆಲುವಿನ ಮಿಶ್ರಣ; ರಾಂಚಿಯಲ್ಲಿ ಭಾರತದ ಟೆಸ್ಟ್ ರೆಕಾರ್ಡ್ಸ್‌ ಹೀಗಿವೆ

ನಾಲ್ಕನೇ ಟೆಸ್ಟ್‌ಗೆ ಭಾರತ ತಂಡ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್ ಆಡುವ ಬಳಗ‌

ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್‌ ಕೀಪರ್), ಟಾಮ್ ಹಾರ್ಟ್ಲಿ, ಓಲ್ಲಿ ರಾಬಿನ್ಸನ್, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.

ಇದನ್ನೂ ಓದಿ | ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ರೆಹಾನ್ ಅಹ್ಮದ್; ದಿಢೀರ್‌ ತವರಿಗೆ ಮರಳಿದ ಸ್ಪಿನ್ನರ್

(This copy first appeared in Hindustan Times Kannada website. To read more like this please logon to kannada.hindustantimes.com)