ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಭಾರತ ತಂಡಕ್ಕೆ ಆಕಾಶ್ ದೀಪ್ ಪದಾರ್ಪಣೆ
India vs England 4th Test: ಭಾರತ ಮತ್ತು ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುತ್ತಿದೆ. ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಬುಮ್ರಾ ಬದಲಿಗೆ ಆರ್‌ಸಿಬಿ ವೇಗಿ ಆಕಾಶ್ ದೀಪ್ ಪದಾರ್ಪಣೆ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ (India vs England 4th Test) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ನಡೆದ ಮೂರು ಪಂದ್ಯಗಳಲ್ಲಿ, ಮೊದಲ ಟೆಸ್ಟ್‌ನಲ್ಲಿ ಮಾತ್ರ ಗೆದ್ದಿರುವ ಇಂಗ್ಲೆಂಡ್, ಇದೀಗ ನಾಲ್ಕನೇ ಟೆಸ್ಟ್‌ನಲ್ಲಿ ಜಯದ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ಪಂದ್ಯ ನಡೆಯುತ್ತಿದೆ.
ಇತ್ತ, ಸತತ ಮೂರನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಭಾರತವಿದೆ. ಪ್ರಮುಖ ಪಂದ್ಯಕ್ಕೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅತ್ತ ಫಿಟ್ ಆಗದ ಕೆಎಲ್ ರಾಹುಲ್ ಕೂಡಾ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಹೀಗಾಗಿ ಬುಮ್ರಾ ಬದಲಿಗೆ ಆಕಾಶ್ ದೀಪ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಆರ್‌ಸಿಬಿ ವೇಗಿ ಪದಾರ್ಪಣೆ
ಅನುಭವಿ ವೇಗಿ ಬುಮ್ರಾ ತಂಡದಿಂದ ಬಿಡುಗಡೆಯಾದ ಕಾರಣ, ಮತ್ತೊಬ್ಬ ವೇಗಿ ತಂಡಕ್ಕೆ ಅಗತ್ಯ ಇತ್ತು. ತಂಡಕ್ಕೆ ಮುಕೇಶ್ ಕುಮಾರ್ ಅವರನ್ನು ಮತ್ತೆ ಕರೆಸಿಕೊಂಡರೂ, ಆರ್‌ಸಿಬಿ ವೇಗಿ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ. ಅದರಂತೆಯೇ ಅವರಿಗೆ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ನೀಡಿದ್ದಾರೆ. ಅತ್ತ ಮುಕೇಶ್ ಕುಮಾರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ಆದರೆ ಹೆಚ್ಚು ರನ್ ಹೊಡೆಸಿಕೊಂಡಿದ್ದರು. ಹೀಗಾಗಿ ಈ ಬಾರಿ ಹೊಸ ಬೌಲರ್‌ಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ | ಗೆಲ್ಲಲೇಬೇಕಾದ ಒತ್ತಡದಲ್ಲಿ ಇಂಗ್ಲೆಂಡ್; 4ನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ XI ಪ್ರಕಟಿಸಿದ ಆಂಗ್ಲರು, ಎರಡು ಬದಲಾವಣೆ
ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುಂಚಿತವಾಗಿ ಇಂಗ್ಲೆಂಡ್ ತಂಡ ಆಡುವ ಬಳಗ ಪ್ರಕಟಿಸಿತ್ತು. ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಇಂಗ್ಲೆಂಡ್ 4ನೇ ಟೆಸ್ಟ್‌ಗೆ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ. ಮಾರ್ಕ್ ವುಡ್ ಮತ್ತು ರೆಹಾನ್ ಅಹ್ಮದ್ ಅವರನ್ನು ಕೈಬಿಟ್ಟಿರುವ ಆಂಗ್ಲರು, ವೇಗಿ ಒಲ್ಲಿ ರಾಬಿನ್ಸನ್ ಮತ್ತು ಶೋಯೆಬ್ ಬಶೀರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಮೊದಲ ಮೂರು ಪಂದ್ಯಗಳಿಂದ ತಂಡದ ಬೆಂಚ್ ಕಾಯುತ್ತಿದ್ದ ವೇಗಿ ಒಲ್ಲಿ ರಾಬಿನ್ಸನ್ ಕೊನೆಗೂ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಕಾರಣ ರಾಬಿನ್ಸನ್ ಅವರು ಅವಕಾಶ ಪಡೆದಿರಲಿಲ್ಲ. ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಸರಣಿ ಉಳಿಸಿಕೊಳ್ಳಲು ತಂತ್ರ ರೂಪಿಸಿರುವ ಇಂಗ್ಲೆಂಡ್, ರಾಂಚಿ ಟೆಸ್ಟ್‌ಗೆ ಅವಕಾಶ ನೀಡಿದೆ.
ಇದನ್ನೂ ಓದಿ | ವಿರಾಟ್ ನಾಯಕತ್ವದಲ್ಲಿ ಸೋಲು-ಗೆಲುವಿನ ಮಿಶ್ರಣ; ರಾಂಚಿಯಲ್ಲಿ ಭಾರತದ ಟೆಸ್ಟ್ ರೆಕಾರ್ಡ್ಸ್ ಹೀಗಿವೆ
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸಿತ್ತು. ಆ ಬಳಿಕ ವಿಶಾಖಪಟ್ಟಣ ಹಾಗೂ ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತು.
ಭಾರತ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಓಲ್ಲಿ ರಾಬಿನ್ಸನ್, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.
ಇದನ್ನೂ ಓದಿ | Explainer: ಡೆಲ್ಲಿ ಕ್ಯಾಪಿಟಲ್ಸ್ ತವರು ವಿಶಾಖಪಟ್ಟಣ; ಪಂತ್ ಪಡೆ ದೆಹಲಿಯಲ್ಲಿ ಐಪಿಎಲ್ ಪಂದ್ಯ ಆಡುತ್ತಿಲ್ಲವೇಕೆ?
(This copy first appeared in Hindustan Times Kannada website. To read more like this please logon to kannada.hindustantimes.com)