ಏಕದಿನ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಡೇವಿಡ್ ವಾರ್ನರ್; ಆದರೆ, ಈ ಟೂರ್ನಿಗೆ ಲಭ್ಯ
David Warner: ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ 2025ರ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುವುದಾಗಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner), ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಬಳಿಕ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದ ವಾರ್ನರ್, ಈಗ ಏಕದಿನ ಸ್ವರೂಪಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಆದರೆ, 2025ರ ಚಾಂಪಿಯನ್ಸ್ ಟ್ರೋಫಿಯ ಆಯ್ಕೆಗೆ ತಾನು ಲಭ್ಯವಿರುವುದಾಗಿ 37 ವರ್ಷದ ಆಟಗಾರ ಹೇಳಿದ್ದಾರೆ.
2023ರಲ್ಲಿ ಭಾರತದಲ್ಲಿ ವಿಶ್ವಕಪ್ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ (ಜನವರಿ 1) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಏಕದಿನ ಕ್ರಿಕೆಟ್‌ನಿಂದಲೂ ಖಂಡಿತವಾಗಿಯೂ ನಿವೃತ್ತಿ ಪಡೆಯುತ್ತೇನೆ. ವಿಶ್ವಕಪ್ ಗೆದ್ದ ನಂತರ ನಿವೃತ್ತಿ ಬಗ್ಗೆ ನಾನು ಹೇಳಿದ್ದೆ. ಈಗ ಅದನ್ನು ಸಾಧಿಸಿ ಆಗಿದೆ. ಭಾರತದಲ್ಲಿ ವಿಶ್ವಕಪ್ ಗೆದ್ದುಕೊಂಡಿದ್ದೇನೆ. ಅದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ,” ಎಂದು ವಾರ್ನರ್ ಹೇಳಿದ್ದಾರೆ.
ಇದನ್ನೂ ಓದಿ | ಡೇವಿಡ್ ವಾರ್ನರ್ ಅದ್ಧೂರಿ ವಿದಾಯಕ್ಕೆ ಸಿದ್ಧತೆ; ಮೂರನೇ ಟೆಸ್ಟ್ಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ
“ನಾನು ಇಂದು ಆ ಸ್ವರೂಪಕ್ಕೆ ವಿದಾಯ ಹೇಳುವ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದು ನನಗೆ ಜಾಗತಿಕವಾಗಿ ಕೆಲವು ಲೀಗ್‌ಗಳಲ್ಲಿ ಆಡಲು ಮತ್ತು ತಂಡವನ್ನು ಸ್ವಲ್ಪಮಟ್ಟಿಗೆ ಮುನ್ನಡೆಸಲು ಅನುವು ಮಾಡಿಕೊಡುತ್ತವೆ. ಮುಂದೆ ಚಾಂಪಿಯನ್ಸ್ ಟ್ರೋಫಿ ಬರಲಿದೆ ಎಂದು ನನಗೆ ತಿಳಿದಿದೆ. ಒಂದು ವೇಳೆ ಎರಡು ವರ್ಷಗಳಲ್ಲಿ ನಾನು ಉತ್ತಮ ಕ್ರಿಕೆಟ್ ಆಡುತ್ತಿದ್ದರೆ, ಮತ್ತು ತಂಡಕ್ಕೆ ನನ್ನ ಅಗತ್ಯವಿದ್ದರೆ, ನಾನು ಆಯ್ಕೆಗೆ ಲಭ್ಯವಾಗಲಿದ್ದೇನೆ,” ಎಂದು ಅವರು ಹೇಳಿಕೊಂಡಿದ್ದಾರೆ.
ಶತಕವೀರ
ಏಕದಿನ ಸ್ವರೂಪದಲ್ಲಿ ಹಲವು ದಾಖಲೆಗಳೊಂದಿಗೆ ಆರಂಭಿಕ ಆಟಗಾರ ನಿನೃತ್ತಿ ಪಡೆಯುತ್ತಿದ್ದಾರೆ. 45.30ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು ಈ ಸ್ವರೂಪದಲ್ಲಿ 6932 ರನ್ ಕಲೆ ಹಾಕಿದ್ದಾರೆ. 22 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಮಾದರಿಯಲ್ಲಿ ವಾರ್ನರ್ ಆಸ್ಟ್ರೇಲಿಯದ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಮತ್ತೊಂದೆಡೆ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ 29 ಶತಕಗಳ ಬಳಿಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರನಾಗಿದ್ದಾರೆ.
ವಾರ್ನರ್ ದಾಖಲೆಗಳು
ಎರಡು ಬಾರಿ ವಿಶ್ವಕಪ್ ಗೆದ್ದ ದಾಖಲೆ ವಾರ್ನರ್ ಅವರದ್ದು. 2015ರಲ್ಲಿ ತವರಿನಲ್ಲಿ ನಡೆದ ಟೂರ್ನಿ ಮತ್ತು 2023ರಲ್ಲಿ ಭಾರತದಲ್ಲಿ ಪ್ರಶಸ್ತಿ ಗೆದ್ದ ಆಸೀಸ್ ತಂಡದ ಸದಸ್ಯರಾಗಿದ್ದರು. ಅವರು 2015ರಲ್ಲಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ 49.28 ಸರಾಸರಿಯಲ್ಲಿ ಒಂದು ಶತಕ ಮತ್ತು 120.20 ಸ್ಟ್ರೈಕ್ ರೇಟ್‌ನೊಂದಿಗೆ 345 ರನ್ ಗಳಿಸಿದ್ದರು. 2023 ರಲ್ಲಿ, ಅವರು 11 ಪಂದ್ಯಗಳಲ್ಲಿ 48.63ರ ಸರಾಸರಿ ಮತ್ತು 108.29 ಸ್ಟ್ರೈಕ್ ರೇಟ್‌ನಲ್ಲಿ 535 ರನ್‌ಗಳೊಂದಿಗೆ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದರು.
ಇದನ್ನೂ ಓದಿ | ಭಾರತದ ಎದುರು ಇಂಗ್ಲೆಂಡ್ 5-0ರಲ್ಲಿ ಟೆಸ್ಟ್ ಸರಣಿ ಸೋಲಬೇಕು; ತಮ್ಮ ದೇಶದ ವಿರುದ್ಧವೇ ಗುಡುಗಿದ ಮಾಜಿ ವೇಗಿ
ಪಂದ್ಯಾವಳಿಯಲ್ಲಿ ತಲಾ ಎರಡು ಶತಕಗಳು ಮತ್ತು ಅರ್ಧಶತಕಗಳನ್ನು ಸಿಡಿಸಿದರು. ಅಹಮದಾಬಾದ್‌ನಲ್ಲಿ ನಡೆದ ಭಾರತ ವಿರುದ್ಧದ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ವಾರ್ನರ್ ಅವರ ಕೊನೆಯ ಏಕದಿನ ಪಂದ್ಯವಾಗಿದೆ.