IPL 2024: ಹೊಡಿಬಡಿ ಆಟ ಐಪಿಎಲ್ 2024ರ ಪ್ರೋಮೋ ಬಿಡುಗಡೆ; ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹೈಲೈಟ್ಸ್
IPL 2024: ಐಪಿಎಲ್ ಪ್ರೋಮೋ ಬಿಡುಗಡೆಯಾಗಿದ್ದು, ಹೊಡಿಬಡಿ ಆಟಕ್ಕೆ ಹೆಸರಾಗಿರುವ ಪಂತ್, ಕೆಎಲ್ ರಾಹುಲ್, ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಅವರನ್ನ ಹೈಲೈಟ್ಸ್ ಮಾಡಲಾಗಿದೆ.
ಬೆಂಗಳೂರು: ಇಂಡಿಯಾ ಪ್ರೀಮಿಯರ್ ಲೀಗ್-ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಚಟುಕು ಕ್ರಿಕೆಟ್ ಸಮರ ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದರ ನಡುವೆಯೇ ಮಾಧ್ಯಮ ಪ್ರಸಾರದ ಅಧಿಕೃತ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ 2024ರ ಮೊದಲ ಪ್ರೋಮೋವನ್ನು ಬಿಡುಗಡೆಯಾಗಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಹೈಲೈಟ್ಸ್ ಮಾಡಲಾಗಿದ್ದು, ಹಿಂದೆಂದೂ ಈ ಸ್ಟಾರ್ ಆಟಗಾರರು ಈ ರೀತಿ ಕಾಣಿಸಿಕೊಂಡಿಲ್ಲ. ಗಾಯದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಈ ನಾಲ್ಕು ಆಟಗಾರರು ಸದ್ಯ ಟೀಂ ಇಂಡಿಯಾದಲ್ಲಿ ಆಡುತ್ತಿಲ್ಲ. ರಿಷಭ್ ಪಂತ್ ಪಂಜಾಬಿ ಲುಕ್‌ನಲ್ಲಿ ಕಾಣಿಸಿಕೊಂಡರೆ, ಶ್ರೇಯಸ್ ಅಯ್ಯರ್ ಫ್ಯಾಮಿಲಿ ಮ್ಯಾನ್, ಕೆಎಲ್ ರಾಹುಲ್ ವಿದ್ಯಾರ್ಥಿಯಾಗಿ ಹಾಸ್ಟೆಲ್‌ನಲ್ಲಿ, ಉದ್ಯಮಿ ಪಾತ್ರದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚು ಹರಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಪ್ರೋಮೋ ವಿಡಿಯೊವನ್ನು ಹಂಚಿಕೊಂಡಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರು ವಿಡಿಯೋದಲ್ಲಿ ಕಾಣಿಸಿಕೊಂಡಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
2024ರ ಐಪಿಎಲ್‌ನ ಉದ್ಘಾಟನಾ ಪಂದ್ಯ ಮಾರ್ಚ್ 22ರ ಶುಕ್ರವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. 6ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ಕಣಕ್ಕಿಳಿದರೆ, ಚೊಚ್ಚಲ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳಬೇಕೆಂಬ ಉತ್ಸಾಹದೊಂದಿಗೆ ಆರ್‌ಸಿಬಿ ಬ್ಯಾಟ್ ಬೀಸಲಿದೆ.
ಉದ್ಘಾಟನಾ ಪಂದ್ಯದ ಮುರು ದಿನವೇ ಅಂದರೆ ಮಾರ್ಚ್ 23ರ ಶನಿವಾರ ಎರಡು ಪಂದ್ಯಗಳು ನಡೆಯಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಮತ್ತೊಂದೆಡೆ ಟೂರ್ನಿ ಆರಂಭಕ್ಕೂ ಮುನ್ನವೇ ಐಪಿಎಲ್ ತಂಡಗಳಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ವಾಪಸ್ ಆಗಿದ್ದು, ಎಂಐ ತಂಡವನ್ನು ಮುನ್ನಡೆಸಲಿದ್ದಾರೆ. ಪಾಂಡ್ಯ ಗುಜರಾತ್ ಜೈಂಟ್ಸ್‌ಗೆ ಗುಡ್ ಬೈ ಹೇಳಿದ ಹಿನ್ನೆಲೆಯಲ್ಲಿ ಆ ತಂಡಕ್ಕೆ ಶುಭಮನ್ ಗಿಲ್ ನಾಯಕನನ್ನಾಗಿ ಮಾಡಲಾಗಿದೆ.