ಆರ್ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ; ಹೀಗಿತ್ತು ನೋಡಿ ಮಾಹಿ ಉತ್ತರ, ವಿಡಿಯೋ
MS Dhoni: ಅಭಿಮಾನಿಯೊಬ್ಬರು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆರ್ಸಿಬಿ ಸೇರಿ ಟ್ರೋಫಿ ಗೆದ್ದು ಪ್ರಶಸ್ತಿ ಬರ ನೀಗಿಸುವಂತೆ ಮನವಿ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 16 ಆವೃತ್ತಿಗಳನ್ನು (Indian Premier League) ಪೂರ್ಣಗಳಿಸಿ 17ನೇ ಆವೃತ್ತಿಗೆ ಕಾಲಿಡುತ್ತಿದೆ. ಆದರೂ ವಿಶ್ವದ ಜನಪ್ರಿಯ ಕ್ರಿಕೆಟ್ ಫ್ರಾಂಚೈಸಿ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಇನ್ನೂ ಟ್ರೋಫಿ ಎತ್ತಿ ಹಿಡಿದಿಲ್ಲ. 3 ಬಾರಿ ಫೈನಲ್ ಪ್ರವೇಶಿಸಿದರೂ ಟ್ರೋಫಿ ಎಂಬುದು ಮರೀಚಿಕೆಯಾಗಿದೆ.
ಆರ್ಸಿಬಿ ಟ್ರೋಫಿ ಗೆಲ್ಲದಿದ್ದರೂ ವಿಶ್ವದಾದ್ಯಂತ ಮಿಲಿಯನ್ಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿದೆ. ಪ್ರತಿ ಸಲ ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯದೊಂದಿಗೆ ಕಣಕ್ಕಿಳಿದರೂ ನಿರಾಸೆಯೊಂದಿಗೆ ಟೂರ್ನಿ ಮುಗಿಸುತ್ತಿದೆ. ಹರಾಜಿನ ಬಳಿಕ ಮುಂದಿನ ಸಲ ಆರ್ಸಿಬಿ ಕಪ್ ಗೆಲ್ಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
ಆರ್ಸಿಬಿಗೆ ಬರುವಂತೆ ಧೋನಿಗೆ ಆಹ್ವಾನ
ಇದರ ನಡುವೆ ಅಭಿಮಾನಿಯೊಬ್ಬರು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ (MS Dhoni), ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆರ್ಸಿಬಿ ಸೇರಿ ಟ್ರೋಫಿ ಗೆದ್ದು ಪ್ರಶಸ್ತಿ ಬರ ನೀಗಿಸುವಂತೆ ಮನವಿ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾಹಿಗೆ ಈ ಪ್ರಶ್ನೆಗೆ ಎದುರಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ಐಸಿಸಿ ಟ್ರೋಫಿ ಗೆದ್ದಿರುವ ಎಂಎಸ್ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಪರ ದಾಖಲೆಯ ಐದು ಟ್ರೋಫಿಗಳನ್ನು ಗೆದ್ದಿದ್ದಾರೆ. ಆ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗಾಗಿ ಕಪ್ ಗೆಲ್ಲದ ಆರ್ಸಿಬಿಗೆ ಬರುವಂತೆ ಧೋನಿಗೆ ಆಹ್ವಾನ ನೀಡಿದ್ದಾರೆ.
ಅಭಿಮಾನಿ ಪ್ರಶ್ನೆ ಹೀಗಿತ್ತು!
ನಾನು 16 ವರ್ಷಗಳಿಂದ ಆರ್ಸಿಬಿ ಕಟ್ಟಾ ಅಭಿಮಾನಿ. ನೀವು ಸಿಎಸ್ಕೆ 5 ಟ್ರೋಫಿ ಗೆದ್ದಿದ್ದಿರಿ. ನಮ್ಮ ತಂಡಕ್ಕೆ ಬಂದು ಬೆಂಬಲಿಸಿ, ಪ್ರಶಸ್ತಿ ಗೆಲ್ಲಿಸಿಕೊಡಿ ಎಂದು ಧೋನಿಗೆ ಪ್ರಶ್ನೆ ಹಾಕುತ್ತಾರೆ ಯುವಕನೊಬ್ಬ. ಅಭಿಮಾನಿಯ ಮನವಿ ಉತ್ತರಿಸಿದ ಧೋನಿ, ಜಾಣತನ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಧೋನಿ ಕೊಟ್ಟ ಉತ್ತರ ಇಲ್ಲಿದೆ
ಇದಕ್ಕೆ ಉತ್ತರಿಸಿದ ಧೋನಿ, ಅವರದು (ಆರ್ಸಿಬಿ) ತುಂಬಾ ಒಳ್ಳೆಯ ತಂಡ. ಕ್ರಿಕೆಟ್ನಲ್ಲಿ ಬೇಕಿರುವಂತೆ ತಂಡದಲ್ಲಿ ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿಲ್ಲ. ನಾವು ಐಪಿಎಲ್ ಬಗ್ಗೆ ಮಾತಾಡುವುದಾದರೆ, 10 ತಂಡಗಳು ಪೂರ್ಣ ಪ್ರಮಾಣದ ಆಟಗಾರರನ್ನು ಹೊಂದಿದ್ದರೆ, ಆಗ ಎಲ್ಲಾ ತಂಡಗಳೂ ಸಹ ಬಲಿಷ್ಠ ತಂಡಗಳೇ ಎಂದಿದ್ದಾರೆ ಧೋನಿ.
ಆದರೆ ಗಾಯ ಸೇರಿದಂತೆ ಹಲವು ಕಾರಣಗಳಿಂದ ನೀವು ಕೆಲವು ಆಟಗಾರರನ್ನು ಕಳೆದುಕೊಂಡಿದ್ದು ಹಿನ್ನಡೆಯಾಗಿದೆ. ಆದರೆ, ಆರ್ಸಿಬಿ ಕೂಡ ಉತ್ತಮ ತಂಡ. ಐಪಿಎಲ್‌ನಲ್ಲಿ ಎಲ್ಲರಿಗೂ ಉತ್ತಮ ಅವಕಾಶ ಇದೆ. ಸದ್ಯಕ್ಕೆ ನಾನು ನನ್ನ ಸ್ವಂತ ತಂಡದ (ಸಿಎಸ್ಕೆ) ಬಗ್ಗೆ ಚಿಂತಿಸಲು ಹಲವು ವಿಷಯಗಳಿವೆ ಎಂದು ಹೇಳಿದ್ದಾರೆ ಮಾಹಿ.
ಆದರೆ, ಐಪಿಎಲ್ನ ಪ್ರತಿ ತಂಡಕ್ಕೂ ಶುಭ ಹಾರೈಸುತ್ತೇನೆಯೇ ಹೊರತು ಸದ್ಯಕ್ಕೆ ನಾನು ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ. ಇನ್ನೊಂದು ತಂಡವನ್ನು ಬೆಂಬಲಿಸಲು ಅಥವಾ ಸಹಾಯ ಮಾಡಲು ನಾನು ಯತ್ನಿಸಿದರೆ, ನಮ್ಮ ಅಭಿಮಾನಿಗಳು ಏನನ್ನುತ್ತಾರೆ. ನೀವೇ ಹೇಳಿ ಎಂದು ಧೋನಿ ಉತ್ತರಿಸಿ ನಕ್ಕರು.
ಮಾಹಿ ಸಜ್ಜು
2024ರ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಧೋನಿ ಸಜ್ಜಾಗಿದ್ದಾರೆ. ಆದರೆ 2023ರ ಟೂರ್ನಿ ಅವರ ಪಾಲಿಗೆ ಕೊನೆಯದು ಎಂದು ಹಲವರು ಭಾವಿಸಿದ್ದರು. ಈ ವರ್ಷ ಸಿಎಸ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಧೋನಿ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಫಿಟ್ ಆಗಿದ್ದು ಸಿಎಸ್ಕೆಗೆ ಮತ್ತೊಂದು ಪ್ರಶಸ್ತಿ ಗೆಲ್ಲಿಸಿಕೊಡುವ ಇರಾದೆಯಲ್ಲಿದ್ದಾರೆ.