ರೋಹಿತ್, ಪಂತ್, ಸೂರ್ಯ, ರಾಹುಲ್ 2025ರ ಐಪಿಎಲ್ಗೂ ಮುನ್ನ ಹಾರ್ದಿಕ್ನಂತೆ ಟ್ರೇಡ್ ಆಗುವುದು ಅಸಾಧ್ಯವೇಕೆ? Explained
IPL 2025: 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನ ಕಳೆದ ಬಾರಿ ಹಾರ್ದಿಕ್ ಪಾಂಡ್ಯ ಅವರಂತೆ ಆಟಗಾರರ ಟ್ರೇಡ್ ಒಪ್ಪಂದ ಈ ಬಾರಿ ಅಸಾಧ್ಯವಾಗಿದೆ. ಏಕೆ? ಇಲ್ಲಿದೆ ವಿವರ.
ಭಾರತ ಕ್ರಿಕೆಟ್ ತಂಡವು ಹೊಸ ಮುಖ್ಯಕೋಚ್ ಗೌತಮ್ ಗಂಭೀರ್ (Gautam Gambhir) ಅವರ ನೇತೃತ್ವದಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಆದರೆ, ಕ್ರಿಕೆಟ್ ಪ್ರೇಮಿಗಳ ಕಣ್ಣು ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೇಲೆ ಬಿದ್ದಿದೆ. 2025ರ ಐಪಿಎಲ್ ಆರಂಭಕ್ಕೆ ಬಹು ದೂರವಿದ್ದರೂ ಇತ್ತೀಚೆಗೆ ಹಬ್ಬಿರುವ ಸ್ಟಾರ್ ಆಟಗಾರರ ಟ್ರೇಡಿಂಗ್ ವದಂತಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾರತದ ಏಕದಿನ ಹಾಗೂ ಟೆಸ್ಟ್ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಟಿ20ಐ ನಾಯಕ ಸೂರ್ಯಕುಮಾರ್ (Suryakumar) ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿ ತೊರೆಯಲು ಸಿದ್ಧರಾಗಿದ್ದಾರೆ ಎಂದು ದೈನಿಕ್ ಜಾಗರಣ್ ಇತ್ತೀಚೆಗೆ ವರದಿ ಮಾಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ (KL Rahul) ಅವರು ಕ್ರಮವಾಗಿ ಸಿಎಸ್ಕೆ - ಆರ್ಸಿಬಿ ಸೇರುತ್ತಾರೆ ಎಂದೂ ಉಲ್ಲೇಖಿಸಿದೆ.
ಇದು ಕೇವಲ ವದಂತಿಯಾದರೂ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಪ್ರಮುಖ ಆಟಗಾರರು ಟ್ರೇಡಿಂಗ್ ಮೂಲಕ ಮತ್ತೊಂದು ಫ್ರಾಂಚೈಸಿ ಸೇರುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಅತ್ತ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ಆಟಗಾರ ಯಾವ ತಂಡವನ್ನು ಸೇರುತ್ತಾರೆ ಎಂದು ತಿಳಿಯಲು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರಂತೆ ಟ್ರೇಡ್ ಆಗುವುದು ಅಸಾಧ್ಯವಾಗಿದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.
ಹಾರ್ದಿಕ್ ರೀತಿ ಟ್ರೇಡ್ ಒಪ್ಪಂದ ಅಸಾಧ್ಯ ಏಕೆ?
ಐಪಿಎಲ್ 2024ಕ್ಕೆ ಮುಂಚಿತವಾಗಿ ಗುಜರಾತ್ ಟೈಟಾನ್ಸ್ (GT) ಫ್ರಾಂಚೈಸಿಯಿಂದ ಹಾರ್ದಿಕ್ ಪಾಂಡ್ಯ ಟ್ರೇಡ್ ಮೂಲk ಮುಂಬೈ ಇಂಡಿಯನ್ಸ್ ಸೇರಿದ್ದರು. ಅವರಷ್ಟೆ ಅಲ್ಲದೆ, ಕ್ಯಾಮರೂನ್ ಗ್ರೀನ್, ದೇವದತ್ ಪಡಿಕ್ಕಲ್ ಸಹ ಟ್ರೇಡ್ ಆಗಿದ್ದರು. ಅದರಂತೆಯೇ ರೋಹಿತ್ ಶರ್ಮಾ, ಸೂರ್ಯಕುಮಾರ್, ಕೆಎಲ್ ರಾಹುಲ್, ರಿಷಭ್ ಪಂತ್ ಅವರೂ 2025ರ ಐಪಿಎಲ್ಗೂ ಮುನ್ನ ಬೇರೊಂದು ತಂಡಕ್ಕೆ ಟ್ರೇಡ್ ಆಗುತ್ತಾರೆ ಎಂದು ಸುದ್ದಿಯಾಗಿದೆ.
ಆದರೆ ಇದು ಈ ಋತುವಿನಲ್ಲಿ ಅಸಾಧ್ಯವಾಗಿದೆ. ಏಕೆಂದರೆ 2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಒಂದು ಫ್ರಾಂಚೈಸಿ 3 ಅಥವಾ ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶ ಇರಲಿದೆ. ಉಳಿದ ಆಟಗಾರರನ್ನು ಬಿಡುಗಡೆ ಮಾಡಲೇಬೇಕಾಗುತ್ತದೆ. ಇಲ್ಲಿ ಯಾವುದೇ ಟ್ರೇಡ್ಗೆ ಅವಕಾಶ ಇರುವುದಿಲ್ಲ. ಫ್ರಾಂಚೈಸಿ ಬೆರಳೆಣಿಕೆ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇರುವ ಕಾರಣ ಉಳಿದ ಆಟಗಾರರು ಮೆಗಾ ಹರಾಜಿಗೆ ಪ್ರವೇಶಿಸಬೇಕಾಗುತ್ತದೆ.
ಹರಾಜಿಗೆ ಬರುವ ಆಟಗಾರರ ಮೇಲೆ ಫ್ರಾಂಚೈಸಿಗಳು ಎಷ್ಟು ಬಿಡ್ ಬೇಕಾದರೂ ಮಾಡಬಹುದು. ಹರಾಜಿನಲ್ಲಿ ಯಾವ ಫ್ರಾಂಚೈಸಿ ಹೆಚ್ಚು ಬಿಡ್ ಮಾಡುತ್ತದೋ ಆ ತಂಡವನ್ನು ಸೇರಲಿದ್ದಾರೆ. ಇದೀಗ ಬಿಡುಗಡೆ ಮಾಡಿದ ತಂಡವೇ ಮತ್ತೊಮ್ಮೆ ಅವರನ್ನು ಖರೀದಿಸಬಹುದು. ಒಂದು ವೇಳೆ ಖರೀದಿಯಾಗದೆಯೇ ಉಳಿಯಬಹುದು. ಫ್ರಾಂಚೈಸಿಯಲ್ಲಿ ಉಳಿದ ಸ್ಲಾಟ್ಗಳಿಗೆ ತಕ್ಕಂತೆ ಆಟಗಾರರ ಖರೀದಿಯೂ ಆಗಬಹುದು.
ಹಾಗಾಗಿ ಈ ಬಾರಿ ಆಟಗಾರರ ಟ್ರೇಡ್ಗೆ ಅವಕಾಶ ಇರುವುದಿಲ್ಲ. ತಮ್ಮ ಆಯ್ಕೆಯ ತಂಡಕ್ಕೆ ಟ್ರೇಡ್ ಆಗಲು ಯಾವುದೇ ಆಟಗಾರನು 2026ರ ಋತುವಿನವರೆಗೆ ಕಾಯಬೇಕಾಗುತ್ತದೆ. ಐಪಿಎಲ್ ಇತಿಹಾಸದಲ್ಲಿ ಮೆಗಾ ಹರಾಜು ಋತುವಿನಲ್ಲಿ (2011, 2014, 2018, 2022) ಯಾವುದೇ ವ್ಯಾಪಾರ ಒಪ್ಪಂದ ನಡೆದಿಲ್ಲ. ಆದರೆ, ಬಿಸಿಸಿಐ ಕೆಲ ನೂತನ ನಿಯಮ ಪರಿಚಯಿಸಲು ಮುಂದಾಗಿದ್ದು, ಟ್ರೇಡ್ಗೆ ಅವಕಾಶ ಕೊಟ್ಟರೂ ಅಚ್ಚರಿ ಇಲ್ಲ.