ಟಿ20 ರ‍್ಯಾಂಕಿಂಗ್: ಹಾರ್ದಿಕ್ ಪಾಂಡ್ಯ ನಂ.1 ಆಲ್‌ರೌಂಡರ್‌; ಭಾರತದ ಟಾಪ್ ಬ್ಯಾಟರ್ ಆಗಿ ಹೊರಹೊಮ್ಮಿದ ತಿಲಕ್ ವರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ರ‍್ಯಾಂಕಿಂಗ್: ಹಾರ್ದಿಕ್ ಪಾಂಡ್ಯ ನಂ.1 ಆಲ್‌ರೌಂಡರ್‌; ಭಾರತದ ಟಾಪ್ ಬ್ಯಾಟರ್ ಆಗಿ ಹೊರಹೊಮ್ಮಿದ ತಿಲಕ್ ವರ್ಮಾ

ಟಿ20 ರ‍್ಯಾಂಕಿಂಗ್: ಹಾರ್ದಿಕ್ ಪಾಂಡ್ಯ ನಂ.1 ಆಲ್‌ರೌಂಡರ್‌; ಭಾರತದ ಟಾಪ್ ಬ್ಯಾಟರ್ ಆಗಿ ಹೊರಹೊಮ್ಮಿದ ತಿಲಕ್ ವರ್ಮಾ

ICC T20I Rankings: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು 3-1 ಅಂತರದ ಸರಣಿ ಗೆದ್ದಿತು. ಅದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ ತಿಲಕ್‌ ವರ್ಮಾ ಭಾರತದ ನಂಬರ್‌ ವನ್‌ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ.

ಹಾರ್ದಿಕ್ ಪಾಂಡ್ಯ ನಂ.1 ಆಲ್‌ರೌಂಡರ್‌; ಭಾರತದ ಟಾಪ್ ಬ್ಯಾಟರ್ ಆಗಿ ಹೊರಹೊಮ್ಮಿದ ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ ನಂ.1 ಆಲ್‌ರೌಂಡರ್‌; ಭಾರತದ ಟಾಪ್ ಬ್ಯಾಟರ್ ಆಗಿ ಹೊರಹೊಮ್ಮಿದ ತಿಲಕ್ ವರ್ಮಾ (AFP)

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅಬ್ಬರಿಸಿದ ಯುವ ಬ್ಯಾಟರ್‌ ತಿಲಕ್‌ ವರ್ಮಾ ಐಸಿಸಿ ಶ್ರೇಯಾಂಕದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದಾರೆ. ಇದೇ ವೇಳೆ ಅನುಭವಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಆಲ್‌ರೌಂಡರ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ಪುರುಷರ ಟಿ20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಟಿ20 ಆಲ್‌ರೌಂಡರ್‌ಗಳ ಪೈಕಿ ಹಾರ್ದಿಕ್ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ. ಇದೇ ವೇಳೆ, ದಕ್ಷಿಣ ಆಫ್ರಿಕಾ ನೆಲದಲ್ಲಿ ಸತತ ಎರಡು ಶತಕ ಸಿಡಿಸಿದ ಯುವ ಸೆನ್ಸೇಷನ್ ತಿಲಕ್ ವರ್ಮಾ ಅಗ್ರ 10 ಬ್ಯಾಟರ್‌ಗಳ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು 3-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡಿದರು. ಹೀಗಾಗಿ ಟಿ20 ಸ್ವರೂಪದ ಅಗ್ರ ಆಲ್‌ರೌಂಡರ್ ಆಗಿ ಮತ್ತೆ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ ಎರಡನೇ ಪಂದ್ಯದಲ್ಲಿ ಅವರು ಅಜೇಯ 39 ರನ್ ಮತ್ತು ಸರಣಿ ನಿರ್ಣಾಯಕ ಸಮಯದಲ್ಲಿ ಮೂರು ಓವರ್‌ಗಳಲ್ಲಿ 1/8 ತಂಡಕ್ಕೆ ಪ್ರಮುಖ ಕೊಡುಗೆ ನೀಡಿದರು. ಈ ವರ್ಷದ ಆರಂಭದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ಎರಡನೇ ಬಾರಿಗೆ ಅಗ್ರ ಆಲ್‌ರೌಂಡರ್ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಸರಣಿಯ ನಂತರ ತಿಲಕ್ ವರ್ಮಾ ಇದೀಗ ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಚರ್ಚೆಯಾಗಿದ್ದಾರೆ. 21ರ ಹರೆಯದ ಆಟಗಾರ ಕೊನೆಯ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕಗಳು ಸೇರಿದಂತೆ 280 ರನ್ ಸಿಡಿಸಿದ್ದರು. ಇದರೊಂದಿಗೆ ಹರಿಣಗಳ ನೆಲದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ಅವರು 69 ಸ್ಥಾನ ಜಿಗಿದು ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದಿದ್ದಾರೆ. ಇದೇ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ ತಿಲಕ್‌, ಭಾರತೀಯರ ಪೈಕಿ ಉನ್ನತ ರೇಟಿಂಗ್ ಪಡೆದ ಬ್ಯಾಟರ್ ಆಗಿದ್ದಾರೆ. ಸೂರ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.

17 ಸ್ಥಾನ ಮುನ್ನಡೆ ಸಾಧಿಸಿದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಕೂಡ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, 17 ಸ್ಥಾನಗಳ ಏರಿಕೆ ಕಂಡು 22ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಆಡದಿದ್ದರೂ ಯಶಸ್ವಿ ಜೈಸ್ವಾಲ್‌ 8ನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಬಲಗೈ ಬ್ಯಾಟ್ಸ್ಮನ್ ಕುಸಾಲ್ ಮೆಂಡಿಸ್ ಮೂರು ಸ್ಥಾನ ಮೇಲೇರಿ 12ನೇ ಸ್ಥಾನ ಮತ್ತು ವೆಸ್ಟ್ ಇಂಡೀಸ್‌ ಪವರ್ ಹಿಟ್ಟರ್ ಶಾಯ್ ಹೋಪ್ 16 ಸ್ಥಾನ ಮೇಲೇರಿ 21ನೇ ಸ್ಥಾನ ಪಡೆದಿದ್ದಾರೆ. ಆಸೀಸ್‌ ದೈತ್ಯ ಟ್ರಾವಿಸ್‌ ಹೆಡ್‌ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ ಸ್ಫೋಟಕ ಆಟಗಾರ ಫಿಲ್‌ ಸಾಲ್ಟ್‌ ಎರಡನೇ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ಶ್ರೇಯಾಂಕ

ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮೂರು ಸ್ಥಾನಗಳ ಏರಿಕೆ ಕಂಡು ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಅವರು, ವೃತ್ತಿಜೀವನದ ಉನ್ನತ ಶ್ರೇಯಾಂಕ ಸಂಪಾದಿಸಿದ್ದಾರೆ. ಇದೇ ವೇಳೆ ರವಿ ಬಿಷ್ಣೋಯ್‌ ಭಾರತೀಯರ ಪೈಕಿ ಉನ್ನತ ಶ್ರೇಯಾಂಕ‌ ಪಡೆದ ಬೌಲರ್‌ ಆಗಿದ್ದು, 8ನೇ ಸ್ಥಾನದಲ್ಲಿದ್ದಾರೆ.‌

Whats_app_banner