ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದರೇನಂತೆ, ಅವರನ್ನು ಬಿಟ್ಟು ಆಡ್ತೀವಿ; ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದರೇನಂತೆ, ಅವರನ್ನು ಬಿಟ್ಟು ಆಡ್ತೀವಿ; ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ

ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದರೇನಂತೆ, ಅವರನ್ನು ಬಿಟ್ಟು ಆಡ್ತೀವಿ; ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ

Hasan Ali on Team India: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ಭಾರತ ತಂಡ ಪ್ರಯಾಣಿಸುವುದಿಲ್ಲ ಎಂಬ ವರದಿಗಳಿಗೆ ಪಾಕಿಸ್ತಾನದ ವೇಗಿ ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದರೇನಂತೆ, ಅವರನ್ನು ಬಿಟ್ಟು ಆಡ್ತೀವಿ; ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ
ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದರೇನಂತೆ, ಅವರನ್ನು ಬಿಟ್ಟು ಆಡ್ತೀವಿ; ಹಸನ್ ಅಲಿ ತೀಕ್ಷ್ಣ ಪ್ರತಿಕ್ರಿಯೆ

2025ರ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಪಾಕಿಸ್ತಾನ ಆತಿಥ್ಯ ವಹಿಸಲು ಸಜ್ಜಾಗಿದೆ. ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್​​ನಲ್ಲಿ ಜರುಗಲಿರುವ ಐಸಿಸಿ ಟೂರ್ನಿ ಒಂದಿಲ್ಲೊಂದು ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪೈಕಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕಿತ್ತಾಟವೇ ಹೆಚ್ಚು. ಪಾಕಿಸ್ತಾನದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಭಾರತೀಯರನ್ನು ಕೆರಳಿಸುತ್ತಿರುವುದರ ಮಧ್ಯೆ ವೇಗದ ಬೌಲರ್​​ ಹಸನ್ ಅಲಿ (Hasan Ali) ಪ್ರತಿಕ್ರಿಯಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಫೆಬ್ರವರಿ 19ರಂದು ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 9ರಂದು ಲಾಹೋರ್​​​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ, ಪಾಕ್​ಗೆ ಪ್ರಯಾಣಿಸಲು ಒಪ್ಪದ ಬಿಸಿಸಿಐ, ತಮ್ಮ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ, ಭಾರತ ಬರದಿದ್ದರೇನಂತೆ, ಅವರಿಲ್ಲದೆಯೇ ಟೂರ್ನಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಭಾರತ ಬರದಿದ್ದರೇನಂತೆ ಎಂದ ಹಸನ್ ಅಲಿ

ಪಾಕಿಸ್ತಾನದ ಸಮಾ ಟಿವಿಯಲ್ಲಿ ಮಾತನಾಡಿದ ಹಸನ್ ಅಲಿ, 'ಏಕದಿನ ವಿಶ್ವಕಪ್ ಟೂರ್ನಿ ಆಡಲು ನಾವು ಭಾರತಕ್ಕೆ ಹೋಗಿಲ್ಲವೇ? ಅದರಂತೆ ಅವರು ಪಾಕಿಸ್ತಾನಕ್ಕೆ ಬರಬೇಕು. ಕ್ರೀಡೆಗಳು ರಾಜಕೀಯದಿಂದ ದೂರವಿರಬೇಕು ಎಂದು ಪ್ರಮುಖ ವ್ಯಕ್ತಿಗಳು ಸಾಕಷ್ಟು ಸಲ ಹೇಳಿದ್ದಾರೆ. ಹಾಗಾಗಿ ಭಾರತ ಸರ್ಕಾರ ಮತ್ತೊಂದು ದೃಷ್ಟಿಕೋನದಿಂದ ಯೋಚಿಸಬೇಕಿದೆ. ಇದು ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಬರಲು ನೆರವಾಗುತ್ತದೆ. ಅನೇಕ ಭಾರತದ ಆಟಗಾರರು ಪಾಕ್​ನಲ್ಲಿ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ (ಪಿಸಿಬಿ) ಅಧ್ಯಕ್ಷರು ಈಗಾಗಲೇ ಹೇಳಿದಂತೆ, ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಟೂರ್ನಿ ಬೇರೊಂದು ದೇಶದ ಆತಿಥ್ಯಕ್ಕೆ ಅವಕಾಶ ಕೊಡುವುದಿಲ್ಲ. ಭಾರತ ತಂಡ ಬರದಿದ್ದರೆ, ಏನು ಮಾಡಲು ಸಾಧ್ಯವಿಲ್ಲ. ಟೀಮ್ ಇಂಡಿಯಾ ಇಲ್ಲದೆಯೇ ಟೂರ್ನಿ ಆಯೋಜಿಸುತ್ತೇವೆ. ಪಾಕಿಸ್ತಾನ ದೇಶಕ್ಕೆ ಭಾರತವು ಬರಲಿಲ್ಲ ಎಂದ ಮಾತ್ರಕ್ಕೆ ಕ್ರಿಕೆಟ್ ಇಲ್ಲಿಗೆ ಕೊನೆಗೊಂಡಿತು ಎಂದು ಅರ್ಥವಲ್ಲ. ಭಾರತ ಹೊರತುಪಡಿಸಿ ಇನ್ನೂ ಅನೇಕ ತಂಡಗಳಿವೆ ಎಂದು ಅವರು ಹೇಳಿದ್ದಾರೆ.

2008ರ ಏಷ್ಯಾಕಪ್ ಟೂರ್ನಿಯ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2012-2013ರ ನಡುವೆ ನಡೆದಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಅಂದಿನಿಂದ ಎರಡೂ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಪಿಸಿಬಿ ಸಾಕಷ್ಟು ಸಲ ಆಸಕ್ತಿ ತೋರಿತ್ತು. ಆದರೆ, ಬಿಸಿಸಿಐ ಅದಕ್ಕೆ ಕ್ಯಾರೆ ಎನ್ನಲ್ಲಿಲ್ಲ.

ಭಾರತ ಗೈರಾದರೆ ಐಸಿಸಿಗೆ ದೊಡ್ಡ ನಷ್ಟ

ಚಾಂಪಿಯನ್ಸ್ ಟ್ರೋಫಿಗೆ ಭಾರತ ಗೈರಾದರೆ, ಅದು ಐಸಿಸಿಯ ಆದಾಯಕ್ಕೆ ದೊಡ್ಡ ಹೊಡೆತವಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಹೈವೋಲ್ಟೇಜ್​ಗೆ ಮಾತ್ರ ಸೀಮಿತವಾಗಿಲ್ಲ, ಭರ್ಜರಿ ಆದಾಯ ತಂದುಕೊಡುವ ಪಂದ್ಯ ಕೂಡ ಹೌದು. ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಕಾರಣ ಭಾರತ ಗೈರಾದರೆ ಟೂರ್ನಿ ವೀಕ್ಷಿಸುವವರ ಸಂಖ್ಯೆ ಪಾತಾಳಕ್ಕೆ ಕುಸಿಯುತ್ತದೆ. ಇದು ಆದಾಯಕ್ಕೂ ಪೆಟ್ಟು ಬೀಳುತ್ತದೆ ಎಂಬುದು ಐಸಿಸಿ ಅಧಿಕಾರಿಗಳ ಅಭಿಪ್ರಾಯ ಎಂದು ವರದಿಯಾಗಿದೆ. ಹಾಗಾಗಿ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯದಂತೆ ನೋಡಿಕೊಳ್ಳಲು ಐಸಿಸಿ ಯೋಜನೆ ರೂಪಿಸುತ್ತಿದೆ.

Whats_app_banner