6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ; ಬಿಸಿಸಿಐ ವಿಧಿಸಿದ ಷರತ್ತುಗಳೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ; ಬಿಸಿಸಿಐ ವಿಧಿಸಿದ ಷರತ್ತುಗಳೇನು?

6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ; ಬಿಸಿಸಿಐ ವಿಧಿಸಿದ ಷರತ್ತುಗಳೇನು?

Hardik Pandya: ರಾಷ್ಟ್ರೀಯ ತಂಡದೊಂದಿಗೆ ಬದ್ಧತೆ ಇಲ್ಲದಿರುವಾಗ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡುವುದಾಗಿ ಭರವಸೆ ನೀಡಿದ ನಂತರ ಆಯ್ಕೆಗಾರರು ಮತ್ತು ಬಿಸಿಸಿಐ, ಹಾರ್ದಿಕ್‌ ಪಾಂಡ್ಯ ಅವರಿಗೆ ಗುತ್ತಿಗೆ ನೀಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ
6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ (REUTERS)

ರಣಜಿ ಟ್ರೋಫಿಯ ಪಂದ್ಯಗಳಿಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ಕಾರಣ ಕೇಂದ್ರ ಒಪ್ಪಂದದ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಕೈಬಿಡುವ ನಿರ್ಧಾರಕ್ಕೆ ಸಂಬಂಧಿಸಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದೇ ದೊಡ್ಡ ಚರ್ಚೆ ವಿಷಯವಾಗಿರುವ ನಡುವೆ ಮತ್ತೊಂದು ವಿವಾದ ನಿರ್ಮಾಣವಾಗಿದೆ. ಅದೇ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅವರನ್ನು ಗುತ್ತಿಗೆಯಲ್ಲಿ ಉಳಿಸಿಕೊಂಡಿರುವುದು.

ಕಳೆದ 6 ತಿಂಗಳಿಂದ ಹಾರ್ದಿಕ್ ಕ್ರಿಕೆಟ್​ ಆಡಿಯೇ ಇಲ್ಲ. ಟೆಸ್ಟ್​ ಕ್ರಿಕೆಟ್​ ಆಡದೆ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವಾಗ ದೇಶೀಯ ವೈಟ್​ಬಾಲ್ ಟೂರ್ನಿಗಳಲ್ಲಿ ಭಾಗವಹಿಸಲೇ ಇಲ್ಲ. ಆದರೂ ಗ್ರೇಡ್​-ಎ ಕೆಟಗರಿಯಲ್ಲೇ ಅವರನ್ನು ಇರಿಸಲಾಗಿದೆ. ಇದು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳನ್ನು ಕೆರಳಿಸಿದೆ. ಆದರೆ ಹಾರ್ದಿಕ್ ತನ್ನ ಗುತ್ತಿಗೆಯನ್ನು ಕಾಡಿಬೇಡಿ ಇರಿಸಿಕೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ತಂಡದೊಂದಿಗೆ ಯಾವುದೇ ವೈಟ್‌ಬಾಲ್ ಕ್ರಿಕೆಟ್ ಸರಣಿ ಇಲ್ಲದಿರುವಾಗ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಬರೋಡಾ ಪರ ಆಡುವುದಾಗಿ ಆಲ್‌ರೌಂಡರ್ ಭರವಸೆ ನೀಡಿದ ನಂತರ ಆಯ್ಕೆಗಾರರು ಮತ್ತು ಬಿಸಿಸಿಐ ಹಾರ್ದಿಕ್‌ಗೆ ಗುತ್ತಿಗೆ ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ಸಭೆಯಲ್ಲಿ ಶ್ರೇಯಸ್ ಮತ್ತು ಇಶಾನ್ ಹೊರತುಪಡಿಸಿ, ವಾರ್ಷಿಕ ಗುತ್ತಿಗೆ ಪಟ್ಟಿಯ ಗ್ರೇಡ್ ಎನಲ್ಲಿ ಪಾಂಡ್ಯ ಸ್ಥಾನದ ಬಗ್ಗೆ ಚರ್ಚೆ ನಡೆದಿದೆ. ಅಕ್ಟೋಬರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ತಮ್ಮ ಪಾದಕ್ಕೆ ಗಾಯವಾದಾಗಿನಿಂದ ಕಳೆದ ವಾರದವರೆಗೂ ಆಟದಿಂದ ಹೊರಗುಳಿದಿದ್ದರು. ಇಶಾನ್‌ನಂತೆ, ಪಾಂಡ್ಯ ವಡೋದರಾದಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದ್ದಾರೆ.

ಬಿಸಿಸಿಐ ಅಧಿಕಾರಿ ಹೇಳಿದ್ದೇನು?

ಹಾರ್ದಿಕ್ ಪಾಂಡ್ಯ ಜೊತೆಗೆ ಚರ್ಚೆ ನಡೆಸಿದ್ದೇವೆ. ರಾಷ್ಟ್ರೀಯ ತಂಡದ ಪರ ಆಡುವ ಬದ್ಧತೆ ಇಲ್ಲದ ವೇಳೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಾಗಿ ಭರವಸೆ ನೀಡಿದ್ದಾರೆ. ಬಿಸಿಸಿಐನ ವೈದ್ಯಕೀಯ ತಂಡದ ಮೌಲ್ಯಮಾಪನದ ಪ್ರಕಾರ, ಅವರು ಕೆಂಪು-ಬಾಲ್ ಪಂದ್ಯಾವಳಿಗಳಲ್ಲಿ ಬೌಲಿಂಗ್ ಮಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ರಣಜಿ ಟ್ರೋಫಿ ಆಡುವುದು ಪಾಂಡ್ಯ ಸಮೀಕರಣದಿಂದ ಹೊರಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಭಾರತದ ಯಾವುದೇ ಬದ್ಧತೆಗಳಿಲ್ಲದಿದ್ದರೆ ಅವರು ಇತರ ವೈಟ್-ಬಾಲ್ ಪಂದ್ಯಾವಳಿಗಳನ್ನು ಆಡಬೇಕಾಗುತ್ತದೆ. ಇಲ್ಲದಿದ್ದರೆ, ಅವರು ಒಪ್ಪಂದವನ್ನು ಕಳೆದುಕೊಳ್ಳುತ್ತಾರೆ ಎಂದು ಅಧಿಕಾರಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಈ ವರ್ಷದಲ್ಲಿ ಟೆಸ್ಟ್​​​ ಸರಣಿಗಳೇ ಹೆಚ್ಚಿವೆ. ಟಿ20 ವಿಶ್ವಕಪ್ ಬಳಿಕ ಬಾಂಗ್ಲಾದೇಶ ವಿರುದ್ಧ 3 ಟಿ20 ಪಂದ್ಯಗಳನ್ನು ಭಾರತ ಆಡಲಿದೆ.

ಬಿಸಿಸಿಐಗೆ ಪ್ರಶ್ನಿಸಿದ ಇರ್ಫಾನ್ ಪಠಾಣ್

ಹಾಗಾಗಿ ಯಾವುದೇ ವೈಟ್-ಬಾಲ್ ಬದ್ಧತೆಗಳು ಭಾರತ ತಂಡಕ್ಕಿಲ್ಲ. ಈ ವೇಳೆ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿ ನಡೆಸಲಾಗುವುದು. ಪಾಂಡ್ಯ ಯಾವುದೇ ಫಿಟ್ನೆಸ್ ಸಮಸ್ಯೆಗಳನ್ನು ಹೊಂದಿಲ್ಲದಿದ್ದರೆ, ಈ ಎರಡೂ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲು ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಇಶಾನ್ ಮತ್ತು ಅಯ್ಯರ್​ರನ್ನು ಕೈಬಿಟ್ಟು, ಹಾರ್ದಿಕ್​ಗೆ ಅವಕಾಶ ನೀಡಿರುವುದನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಶ್ನಿಸಿದ್ದಾರೆ.

ಇರ್ಫಾನ್ ಪಠಾಣ್ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಇಶಾನ್ ಮತ್ತು ಅಯ್ಯರ್​ ಪ್ರತಿಭಾವಂತ ಕ್ರಿಕೆಟಿಗರು. ಅವರು ಪುಟಿದೇಳುತ್ತಾರೆ ಮತ್ತು ಬಲವಾಗಿ ಕಂಬ್ಯಾಕ್ ಮಾಡುತ್ತಾರೆ. ಹಾರ್ದಿಕ್​ರಂತಹ ಆಟಗಾರರು ರೆಡ್ ಬಾಲ್ ಕ್ರಿಕೆಟ್ ಆಡಲು ಬಯಸದಿದ್ದರೆ, ಅವರ ಹಾಗೆ ಇತರರು ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿರುವಾಗ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕೇ? ಇದು ಎಲ್ಲರಿಗೂ ಅನ್ವಯಿಸದಿದ್ದರೆ, ಭಾರತೀಯ ಕ್ರಿಕೆಟ್ ಬಯಸಿದ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ.

Whats_app_banner