ವಿಶ್ವಕಪ್ ಫೈನಲ್‌ ನಡೆದ ಅಹಮದಾಬಾದ್ ಪಿಚ್‌ ರೇಟಿಂಗ್ ಬಹಿರಂಗ; ವಿವಾದಾತ್ಮಕ ಪಿಚ್ ಕುರಿತು ಐಸಿಸಿ ಹೇಳಿದ್ದಿಷ್ಟು
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಫೈನಲ್‌ ನಡೆದ ಅಹಮದಾಬಾದ್ ಪಿಚ್‌ ರೇಟಿಂಗ್ ಬಹಿರಂಗ; ವಿವಾದಾತ್ಮಕ ಪಿಚ್ ಕುರಿತು ಐಸಿಸಿ ಹೇಳಿದ್ದಿಷ್ಟು

ವಿಶ್ವಕಪ್ ಫೈನಲ್‌ ನಡೆದ ಅಹಮದಾಬಾದ್ ಪಿಚ್‌ ರೇಟಿಂಗ್ ಬಹಿರಂಗ; ವಿವಾದಾತ್ಮಕ ಪಿಚ್ ಕುರಿತು ಐಸಿಸಿ ಹೇಳಿದ್ದಿಷ್ಟು

ODI World Cup 2023: ಭಾರತ ವಿಶ್ವಕಪ್ ಪಂದ್ಯಗಳನ್ನಾಡಿದ 11 ಕ್ರೀಡಾಂಗಣಗಳ ಪೈಕಿ ಐದು ಮೈದಾನದ ಪಿಚ್‌ಗಳಿಗೆ ಸಾಧಾರಣ ರೇಟಿಂಗ್‌ ಸಿಕ್ಕಿದೆ.

ಭಾರತ-ಆಸ್ಟ್ರೇಲಿಯಾ ಫೈನಲ್‌ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣ
ಭಾರತ-ಆಸ್ಟ್ರೇಲಿಯಾ ಫೈನಲ್‌ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣ (REUTERS)

ಐಸಿಸಿ ಏಕದಿನ ವಿಶ್ವಕಪ್‌ 2023ರ (ICC ODI World Cup 2023) ಪಂದ್ಯಾವಳಿಯಲ್ಲಿ ಬಳಸಲಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium, Ahmedabad) ಪಿಚ್‌ನ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಇದೇ ಮೈದಾನದ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡವು ಆತಿಥೇಯ ಭಾರತವನ್ನು ಮಣಿಸಿ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿತು. ಟೂರ್ನಿಯಲ್ಲಿ ಭಾರತದ ಸತತ 10ನೇ ಗೆಲುವಿಗೆ ಅವಕಾಶ ಕೊಡದೆ ಆರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಇದೀಗ ಶುಕ್ರವಾರ ಹೊರಬಿದ್ದ ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಹಮದಾಬಾದ್ ಪಿಚ್‌ಗೆ ರೇಟಿಂಗ್ ಬಹಿರಂಗಪಡಿಸಿದೆ.

ನವೆಂಬರ್ 19ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆಯಿತು. ಈ ಪಂದ್ಯಕ್ಕೆ ಅದಾಗಲೇ ಪಂದ್ಯಾವಳಿಯಲ್ಲಿ ಬಳಸಿದ ಟ್ರ್ಯಾಕ್‌ ಅನ್ನೇ ಮತ್ತೆ ಬಳಸಲಾಯಿತು. ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದ ಪಿಚ್‌ನಲ್ಲೇ ಫೈನಲ್‌ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತವು ಕೇವಲ 240 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು. ಇದಕ್ಕೆ ಪ್ರತಿಯಾಗಿ ಚೇಸ್‌ ಮಾಡಿದ ಆಸೀಸ್‌, ಟ್ರಾವಿಸ್ ಹೆಡ್ ಅವರ ಅಮೋಘ ಶತಕದ ನೆರವಿನಿಂದ ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತು.

ಪಿಚ್‌ ಕುರಿತು ಚರ್ಚೆ

ಫೈನಲ್‌ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ಕುರಿತು ಚರ್ಚೆಗಳು ನಡೆದಿದ್ದವು. ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್ ಅವರು ಅಕ್ಟೋಬರ್ 14ರಂದು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಳಸಿದ್ದ ಪಿಚ್ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಆದರೆ ಈ ಎಲ್ಲಾ ಚರ್ಚೆಯಿಂದ ಭಾರತದ ನಾಯಕ ರೋಹಿತ್ ಶರ್ಮಾ ಮಾತ್ರ ದೂರ ಉಳಿದರು. ಫೈನಲ್‌ ಪಂದ್ಯ ಮುಗಿದು ಆಸೀಸ್‌ ವಿಶ್ವಕಪ್ ಗೆದ್ದ ಬಳಿಕ, ಕಾಂಗರೂಗಳ ಮಾಜಿ ನಾಯಕ ರಿಕಿ ಪಾಂಟಿಂಗ್ ಕೊಂಕು ಮಾತನಾಡಿದ್ದರು. ಫೈನಲ್‌ ಪಂದ್ಯಕ್ಕಾಗಿ ಭಾರತದ ಪಿಚ್ ತಂತ್ರವು ಅವರಿಗೆ ತಿರುಗು ಬಾಣವಾಯ್ತು ಎಂದು ವ್ಯಂಗ್ಯವಾಡಿದ್ದರು.

ಇದನ್ನೂ ಓದಿ | Watch: ದಕ್ಷಿಣ ಆಫ್ರಿಕಾ ತಲುಪಿದ ಟೀಮ್ ಇಂಡಿಯಾಗೆ ಮಳೆಯ ಸ್ವಾಗತ; ಟ್ರಾಲಿಯನ್ನು ಕೊಡೆಯಂತೆ ಬಳಸಿದ ಆಟಗಾರರು

ಸದ್ಯ ಸುದ್ದಿ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಐಸಿಸಿಯು ಅಹಮದಾಬಾದ್ ಪಿಚ್‌ಗೆ “ಸರಾಸರಿ” ಎಂದು ರೇಟಿಂಗ್ ಮಾಡಿದೆ. ಐಸಿಸಿ ಮ್ಯಾಚ್ ರೆಫರಿಯಾಗಿರುವ ಆಂಡಿ ಪೈಕ್ರಾಫ್ಟ್ ಅವರು ನರೇಂದ್ರ ಮೋದಿ ಮೈದಾನದ ಪಿಚ್‌ಗೆ ರೇಟಿಂಗ್ ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ಒಟ್ಟು 11 ಪಂದ್ಯಗಳಲ್ಲಿ ಐದು ಪಂದ್ಯಗಳ ಪಿಚ್‌ಗೆ “ಸರಾಸರಿ” ರೇಟಿಂಗ್‌ ನೀಡಲಾಗಿದೆ. ಅವುಗಳೆಂದರೆ ಕೋಲ್ಕತ್ತಾ, ಲಕ್ನೋ, ಅಹಮದಾಬಾದ್‌ (ಪಾಕಿಸ್ತಾನದ ಮತ್ತು ಆಸೀಸ್‌ ವಿರುದ್ಧ) ಮತ್ತು ಚೆನ್ನೈ ಮೈದಾನಗಳು.

ಇದನ್ನೂ ಓದಿ | ವಿರಾಟ್ ಆಟ ಕಂಡು ಅವರಿಗೆ ಅಸೂಯೆ ಹುಟ್ಟಿದೆ; ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ

ಐಸಿಸಿಯು ಭಾರತ ಆಡಿದ ಒಂದು ಪಂದ್ಯದ ಮೈದಾನಕ್ಕೆ “ಉತ್ತಮ” ಎಂದು ರೇಟ್ ಮಾಡಿದೆ. ಭಾರತದ ಮಾಜಿ ಬೌಲರ್ ಜಾವಗಲ್ ಶ್ರೀನಾಥ್ ಮಾಡಿದ ಮೌಲ್ಯಮಾಪನದ ಪ್ರಕಾರ ಮುಂಬೈನ ವಾಂಖೆಡೆ ಮೈದಾನದ‌ ಪಿಚ್‌ಗೆ “ಉತ್ತಮ” ರೇಟಿಂಗ್‌ ಸಿಕ್ಕಿದೆ. ಇಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಆಡಿತ್ತು. ಅಲ್ಲದೆ ಭಾರತ ಭರ್ಜರಿ ಜಯ ಸಾಧಿಸಿತ್ತು.

Whats_app_banner