ಟೀಮ್ ಇಂಡಿಯಾಕ್ಕೆ ಕಬ್ಬಿಣದ ಕಡಲೆಯಂತಾದ 3ನೇ ಟೆಸ್ಟ್: ವಾಂಖೆಡೆಯಲ್ಲಿ ಭಾರತ vs ನ್ಯೂಜಿಲೆಂಡ್ ದಾಖಲೆ ಹೇಗಿದೆ?
ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 1ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುರುವಾಗಲಿದೆ. ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಹಲವು ಪಂದ್ಯಗಳನ್ನು ಗೆದ್ದಿದ್ದರೂ ಇಲ್ಲಿ ಇವರ ದಾಖಲೆ ಏಕಪಕ್ಷೀಯವಾಗಿಲ್ಲ.
ಕಳೆದ ಅನೇಕ ವರ್ಷಗಳಿಂದ ಯಾವುದೇ ತಂಡ ಭಾರತಕ್ಕೆ ಪ್ರವಾಸ ಬೆಳೆಸಿದರೂ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಈಗ ಮೊದಲಿಗಿಂತ ಬಲಿಷ್ಠವಾಗಿದೆ ಎಂದು ಪರಿಗಣಿಸಲ್ಪಟ್ಟ ಸಮಯದಲ್ಲೇ ನ್ಯೂಜಿಲೆಂಡ್ ಆಘಾತ ನೀಡಿತು. ಮೊದಲು ಬೆಂಗಳೂರಿನಲ್ಲಿ ಮತ್ತು ನಂತರ ಪುಣೆಯಲ್ಲಿ ಕಿವೀಸ್ ಪಡೆ ಟೀಮ್ ಇಂಡಿಯಾಕ್ಕೆ ಟೆಸ್ಟ್ನಲ್ಲಿ ಸೋಲಿನ ರುಚಿ ನೀಡಿತು. ಇದೀಗ ಕೊನೆಯ ಪಂದ್ಯ ಮುಂಬೈನಲ್ಲಿ ನಡೆಯಲಿದ್ದು, ಒಂದೆಡೆ ಕಿವೀಸ್ ತಂಡಕ್ಕೆ ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸುವ ಅವಕಾಶವಿದೆ. ಇನ್ನೊಂದೆಡೆ ಟೀಮ್ ಇಂಡಿಯಾಗೆ ವೈಟ್ ವಾಶ್ ಮುಖಭಂಗ ತಪ್ಪಿಸಿ ಗೌರವ ಉಳಿಸುವ ಸವಾಲು ಎದುರಾಗಿದೆ.
ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಹಲವು ಪಂದ್ಯಗಳನ್ನು ಗೆದ್ದಿದ್ದರೂ ಇಲ್ಲಿ ಇವರ ದಾಖಲೆ ಏಕಪಕ್ಷೀಯವಾಗಿಲ್ಲ. ಅತ್ತ ನ್ಯೂಜಿಲೆಂಡ್‌ಗೆ ಈ ಮೈದಾನವು ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ.
ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 1ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುರುವಾಗಲಿದೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಸರಣಿಯನ್ನು ಉತ್ತಮ ರೀತಿಯಲ್ಲಿ ಅಂತ್ಯಗೊಳಿಸಲು ಟೀಮ್ ಇಂಡಿಯಾಗೆ ಇದು ಕೊನೆಯ ಅವಕಾಶವಾಗಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ನ್ಯೂಜಿಲೆಂಡ್ ತಂಡ ಇನ್ನಷ್ಟು ಆತ್ಮವಿಶ್ವಾಸದಲ್ಲಿದ್ದು, ಈ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.
ವಾಂಖೆಡೆಯಲ್ಲಿ ಟೀಮ್ ಇಂಡಿಯಾ ದಾಖಲೆ ಹೇಗಿದೆ?
ಸುಮಾರು 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ತೀವ್ರ ಟೀಕೆಗೆ ಒಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈನಲ್ಲಿ ಗೆಲ್ಲುವುದು ಅನಿವಾರ್ಯ. ಇಲ್ಲದಿದ್ದರೆ ಭಾರೀ ಮುಜುಗರಕ್ಕೆ ಒಳಗಾಗುತ್ತದೆ. ವಾಂಖೆಡೆಯಲ್ಲೂ ಟೀಮ್ ಇಂಡಿಯಾದ ಗೆಲುವಿನ ಅಂಕಿ-ಅಂಶಗಳು ಹೆಚ್ಚಿವೆ. ಆದಾಗ್ಯೂ, ಇದು ಸಂಪೂರ್ಣವಾಗಿ ಏಕಪಕ್ಷೀಯವಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಸುಮಾರು 50 ವರ್ಷಗಳಲ್ಲಿ ಟೀಮ್ ಇಂಡಿಯಾ ಒಟ್ಟು 26 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ 12 ಪಂದ್ಯಗಳನ್ನು ಗೆದ್ದಿದೆ. ಅಂದರೆ ಅರ್ಧಕ್ಕಿಂತ ಕಡಿಮೆ ಪಂದ್ಯಗಳನ್ನು ಗೆದ್ದಿದೆ. 7 ಬಾರಿ ಸೋತಿದೆ, ಅಂದರೆ ಆಡಿದ ಪಂದ್ಯಗಳಲ್ಲಿ ಶೇಕಡಾ 30 ರಷ್ಟು. ಉಳಿದ 7 ಪಂದ್ಯಗಳು ಡ್ರಾ ಆಗಿವೆ.
ಈ ಮೈದಾನ ನ್ಯೂಜಿಲೆಂಡ್‌ಗೆ ವಿಶೇಷ
ಇಲ್ಲಿ ಕೊನೆಯ ಪಂದ್ಯ 3 ವರ್ಷಗಳ ಹಿಂದೆ 2021ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು. ಆ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದಿತ್ತು. ಆದರೂ, ಈ ಮೈದಾನವು ನ್ಯೂಜಿಲೆಂಡ್‌ಗೆ ವಿಶೇಷವಾಗಿದೆ. ಏಕೆಂದರೆ ಕಿವೀಸ್ ಪಡೆಯ ಟೆಸ್ಟ್ ಇತಿಹಾಸದಲ್ಲಿ ಎರಡು ಅತ್ಯುತ್ತಮ ಕ್ಷಣಗಳು ಇಲ್ಲಿ ಸಂಭವಿಸಿವೆ. 2021ರ ಟೆಸ್ಟ್ ಬಗ್ಗೆ ಮಾತನಾಡುವುದಾದರೆ, ಆ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದರು ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಇದೇ ಮೈದಾನದಲ್ಲಿ 36 ವರ್ಷಗಳ ಹಿಂದೆ 1988ರಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಕೊನೆಯ ಗೆಲುವು ದಾಖಲಿಸಿತ್ತು.
ಈ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 3 ಟೆಸ್ಟ್ ಪಂದ್ಯಗಳು ನಡೆದಿವೆ, ಇದರಲ್ಲಿ 2 ಭಾರತ ಮತ್ತು 1 ನ್ಯೂಜಿಲೆಂಡ್‌ಗೆ. ಈಗ ಟೀಮ್ ಇಂಡಿಯಾ 2021 ರ ಯಶಸ್ಸನ್ನು ಪುನರಾವರ್ತಿಸುತ್ತಾ ಎಂಬುದು ನೋಡಬೇಕಿದೆ.