ನ್ಯೂಜಿಲೆಂಡ್ ವಿರುದ್ಧ ಕೇವಲ 46 ರನ್‌ಗಳಿಗೆ ಆಲೌಟ್; ಹಲವು ಕಳಪೆ ದಾಖಲೆ ಬರೆದ ಭಾರತ, ತವರಿನಲ್ಲಿ ಕನಿಷ್ಠ ಮೊತ್ತ
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲೆಂಡ್ ವಿರುದ್ಧ ಕೇವಲ 46 ರನ್‌ಗಳಿಗೆ ಆಲೌಟ್; ಹಲವು ಕಳಪೆ ದಾಖಲೆ ಬರೆದ ಭಾರತ, ತವರಿನಲ್ಲಿ ಕನಿಷ್ಠ ಮೊತ್ತ

ನ್ಯೂಜಿಲೆಂಡ್ ವಿರುದ್ಧ ಕೇವಲ 46 ರನ್‌ಗಳಿಗೆ ಆಲೌಟ್; ಹಲವು ಕಳಪೆ ದಾಖಲೆ ಬರೆದ ಭಾರತ, ತವರಿನಲ್ಲಿ ಕನಿಷ್ಠ ಮೊತ್ತ

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಲವು ಅನಗತ್ಯ ದಾಖಲೆಗಳಿಗೆ ಕಾರಣವಾಯ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ಅತ್ಯಂತ ಕನಿಷ್ಠ ಮೊತ್ತ ಒಟ್ಟುಗೂಡಿಸಿತು. ಅಲ್ಲದೆ ತವರು ನೆಲದಲ್ಲಿ ಆಡಿದ ಟೆಸ್ಟ್‌‌ನಲ್ಲಿ ಇದುವರೆಗಿನ ಕಡಿಮೆ ಮೊತ್ತ ದಾಖಲಿಸಿತು.

ನ್ಯೂಜಿಲೆಂಡ್ ವಿರುದ್ಧ ಕೇವಲ 46 ರನ್‌ಗಳಿಗೆ ಆಲೌಟ್; ಹಲವು ಕಳಪೆ ದಾಖಲೆ ಬರೆದ ಭಾರತ
ನ್ಯೂಜಿಲೆಂಡ್ ವಿರುದ್ಧ ಕೇವಲ 46 ರನ್‌ಗಳಿಗೆ ಆಲೌಟ್; ಹಲವು ಕಳಪೆ ದಾಖಲೆ ಬರೆದ ಭಾರತ (PTI)

ಬೆಂಗಳೂರು ಮಳೆ ಉದ್ಯಾನ ನಗರಿಯ ಜನತೆಯನ್ನು ಮಾತ್ರ ಸಂಕಷ್ಟಕ್ಕೆ ದೂಡಿಲ್ಲ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಆಡುತ್ತಿರುವ ಭಾರತ ತಂಡವನ್ನೂ ಬಿಡದೆ ಕಾಡಿದೆ. ಭಾರಿ ಮಳೆಯಿಂದಾಗಿ ಪಿಚ್‌ ಸ್ಥಿತಿ ಬದಲಾಗುವ ಸುಳಿವಿದ್ದರೂ, ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಅದರ ಬೆನ್ನಲ್ಲೇ ಮೇಲಿಂದ ಮೇಲೆ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಅಭಿಮಾನಿಗಳ ಟೀಕಿಗಳಿಗೆ ಗುರಿಯಾದರು. ಟೀಮ್‌ ಇಂಡಿಯಾ ಈ ಪಂದ್ಯದಲ್ಲಿ ಹಲವು ಕಳಪೆ ದಾಖಲೆಗಳಿಗೆ ಕಾರಣವಾಯ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಬೇಡದ ದಾಖಲೆ ಬರೆಯಿತು.

ಟೆಸ್ಟ್‌ ಕ್ರಿಕೆಟ್ ಇನ್ನಿಂಗ್ಸ್‌ ಒಂದರಲ್ಲಿ ಭಾರತದ ಮೂರನೇ ಅತ್ಯಂತ ಕನಿಷ್ಟ ಮೊತ್ತ ಇದಾಗಿದೆ. ಇದೇ ವೇಳೆ ತವರಿನಲ್ಲಿ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ ಇದು ಅತ್ಯಂತ ಕನಿಷ್ಠ ಮೊತ್ತವಾಗಿದೆ. 2020ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ ಗಳಿಸಿದ್ದು ಭಾರತದ ಈವರೆಗಿನ ಕನಿಷ್ಠ ಮೊತ್ತವಾಗಿದೆ. ಇದೇ ವೇಳೆ ಈ ಪಂದ್ಯದಲ್ಲಿ ಭಾರತದ ಐವರು ಬ್ಯಾಟರ್‌ಳು ಡಕೌಟ್‌ ಆಗಿ ನಿರಾಶೆ ಮೂಡಿಸಿದರು.

ಪಂದ್ಯದ ಮೊದಲ ದಿನದಾಟವು ಮಳೆಯಿಂದ ಸಂಪೂರ್ಣ ರದ್ದಾಗಿತ್ತು. ಆದರೆ, ಎರಡನೇ ದಿನದಾಟದಲ್ಲಿ ಟಾಸ್‌ ಗೆದ್ದ ನಾಯಕ ರೋಹಿತ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಬೆಂಗಳೂರು ಪಿಚ್‌ನಲ್ಲಿ ರನ್‌ ಮಳೆ ಹರಿಸುವ ಲೆಕ್ಕಾಚಾರ ಹಾಕಿಕೊಂಡ ನಾಯಕನ ತಂತ್ರಗಳೆಲ್ಲಾ ವಿಫಲವಾಯ್ತು.

ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್, ಆರಂಭದಲ್ಲೇ ನ್ಯೂಜಿಲೆಂಡ್ ಬೌಲರ್‌ಗಳಿಂದ ತೊಂದರೆಗೀಡಾದರು. ಸ್ವಿಂಗ್ ಬಾಲ್‌ ಎದುರಿಸಲು ಒದ್ದಾಡಿದ ರೋಹಿತ್, 2 ರನ್‌ ಗಳಿಸಿದ್ದಾಗ ಟಿಮ್ ಸೌಥಿ ಬಲೆಗೆ ಬಿದ್ದರು. ವಿರಾಟ್ ಕೊಹ್ಲಿ 9 ಎಸೆತ ಎದುರಿಸಿ ಡಕೌಟ್‌ ಆದರು. ಶುಭ್ಮನ್ ಗಿಲ್ ಬದಲಿಗೆ ತಂಡಕ್ಕೆ ಆಯ್ಕೆಯಾದ ಸರ್ಫರಾಜ್ ಖಾನ್ ಕೂಡ ಖಾತೆ ತೆರೆಯದೆ ಮರಳಿದರು.

ಡಕೌಟ್‌ ಮೇಲೆ ಡಕೌಟ್

ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಯಶಸ್ವಿ ಜೈಸ್ವಾಲ್‌, 63 ಎಸೆತಗಳನ್ನು ಎದುರಿಸಿ 13 ರನ್ ಗಳಿಸಿದ್ದಾಗ ವಿಲ್ ಒ ರೂರ್ಕ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಲ್ಲೇ ಕೆಎಲ್‌ ರಾಹುಲ್‌, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್‌ ಅಶ್ವಿನ್‌ ಕೂಡಾ ಒಬ್ಬರ ನಂತರ ಮತ್ತೊಬ್ಬರಂತೆ ಶೂನ್ಯಕ್ಕೆ ಔಟಾದರು. ಕ್ರೀಸ್‌ಕಚ್ಚಿ ಆಡುವ ಸಂಕಲ್ಪ ಮಾಡಿದ್ದ ರಿಷಬ್‌ ಪಂತ್‌, 20 ರನ್‌ ಗಳಿಸುವಷ್ಟರಲ್ಲಿ ತಾಳ್ಮೆ ಕಳೆದುಕೊಂಡರು.‌

ಜಸ್ಪ್ರೀತ್‌ ಬುಮ್ರಾ 1, ಕುಲ್ದೀಪ್‌ ಯಾದವ್‌ 2 ರನ್‌ ಗಳಿಸಿದರು. ಮೊಹಮ್ಮದ್‌ ಸಿರಾಜ್‌ 4 ರನ್‌ ಗಳಿಸಿ ಅಜೇಯರಾಗಿ ಉಳಿದರು. ಕಿವೀಸ್‌ ಪರ ಮ್ಯಾಟ್‌ ಹೆನ್ರಿ ಕೇವಲ 15 ರನ್‌ ನೀಡಿ 5 ವಿಕೆಟ್‌ ಕಬಳಿಸಿ ಮಿಂಚಿದರು.

ಟೆಸ್ಟ್‌ನಲ್ಲಿ ಭಾರತ ತಂಡದ ಅತ್ಯಂತ ಕಡಿಮೆ ಮೊತ್ತ

  • 36 - ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020
  • 42 - ಇಂಗ್ಲೆಂಡ್‌ ವಿರುದ್ಧ, ಲಾರ್ಡ್ಸ್, 1974
  • 46 - ನ್ಯೂಜಿಲೆಂಡ್‌ ವಿರುದ್ಧ , ಬೆಂಗಳೂರು, 2024
  • 58 - ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 1947
  • 58 - ಇಂಗ್ಲೆಂಡ್‌ ವಿರುದ್ಧ, ಮ್ಯಾಂಚೆಸ್ಟರ್, 1952

ಇದನ್ನೂ ಓದಿ | Explainer: ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ? ಹೀಗಿದೆ ಲೆಕ್ಕಾಚಾರ

Whats_app_banner