ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ; ಆಂಗ್ಲರನ್ನು ಮಣಿಸಿ 2014ರ ನಂತರ ಟಿ20 ವಿಶ್ವಕಪ್ ಫೈನಲ್​ಗೇರಿದ ಭಾರತ

ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ; ಆಂಗ್ಲರನ್ನು ಮಣಿಸಿ 2014ರ ನಂತರ ಟಿ20 ವಿಶ್ವಕಪ್ ಫೈನಲ್​ಗೇರಿದ ಭಾರತ

India vs England: ಟಿ20 ವಿಶ್ವಕಪ್ 2024ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 68 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತು.

ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ; ಹಾಲಿ ಚಾಂಪಿಯನ್ ಮಣಿಸಿ 3ನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್​ಗೇರಿದ ಭಾರತ
ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ; ಹಾಲಿ ಚಾಂಪಿಯನ್ ಮಣಿಸಿ 3ನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್​ಗೇರಿದ ಭಾರತ

ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್​ಗಳ ಭರ್ಜರಿ ಗೆಲುವು ದಾಖಲಿಸಿ ಟಿ20 ವಿಶ್ವಕಪ್​​ 2024ರ ಫೈನಲ್​ಗೆ ಲಗ್ಗೆ ಇಟ್ಟಿತು. 2007 ಮತ್ತು 2014ರ ವಿಶ್ವಕಪ್ ನಂತರ ಭಾರತ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ, ಇಂಗ್ಲೆಂಡ್ ವಿರುದ್ಧ ಜಯಿಸಿ 2022ರ ಟಿ20 ವಿಶ್ವಕಪ್​​ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿತು. ಭಾರತ ತಂಡ ಅಜೇಯವಾಗಿ ಅಂತಿಮ ಹಂತ ತಲುಪಿದೆ. ರೋಹಿತ್ ನಾಯಕತ್ವದಲ್ಲಿ ಎರಡು ಟಿ20 ವಿಶ್ವಕಪ್​​ಗಳಲ್ಲಿ ಭಾರತ ಫೈನಲ್ ಪ್ರವೇಶಿಸಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಸತತ 2ನೇ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು. ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಮಿಂಚಿನ ಬೌಲಿಂಗ್ ನಡೆಸಿ ಆಂಗ್ಲರನ್ನು ಟೂರ್ನಿಯಿಂದ ಹೊರ ಹಾಕಿದರು. 2007ರಲ್ಲಿ ಚಾಂಪಿಯನ್ ಮತ್ತು 2014ರಲ್ಲಿ ರನ್ನರ್​ಅಪ್ ಆಗಿದ್ದ ಮೆನ್ ಇನ್ ಬ್ಲ್ಯೂ​, ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 2013ರ ನಂತರ ಐಸಿಸಿ ಟ್ರೋಫಿ ಬರ ನೀಗಿಸಲು ಒಂದೇ ಹೆಜ್ಜೆ ಬಾಕಿ ಇದೆ. ಜೂನ್ 29ರಂದು ನಡೆಯುವ ಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಬೇಕಿದೆ.

2023ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೋತು ತವರಿನಲ್ಲಿ ಪ್ರತಿಷ್ಠಿತ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ವಿಫಲವಾಗಿದ್ದ ಟೀಮ್ ಇಂಡಿಯಾ, ಕೆರಿಬಿಯನ್ನರ ನಾಡಿನಲ್ಲಿ ಚುಟುಕು ವಿಶ್ವಕಪ್​ಗೆ ಮುತ್ತಿಕ್ಕಲು ಸಜ್ಜಾಗಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ ತಂಡವು ಐಸಿಸಿ ವಿಶ್ವಕಪ್​​ಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಐಸಿಸಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮೊದಲ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಕೂಡ ಅಜೇಯವಾಗಿ ಫೈನಲ್​ಗೇರಿದೆ.

ಟ್ರೆಂಡಿಂಗ್​ ಸುದ್ದಿ

ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ತನ್ನ ಪಾಲಿನ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ರೋಹಿತ್​ ಶರ್ಮಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಸ್ಪಿನ್ ದಾಳಿಗೆ ತತ್ತರಿಸಿತು. 16.4 ಓವರ್​ಗಳಲ್ಲಿ 103 ರನ್​ಗಳಿಸಿ ಆಲೌಟ್ ಆಯಿತು. ಕುಲ್ದೀಪ್ ಮತ್ತು ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ

172 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್, ಭಾರಿ ಆಘಾತಕ್ಕೆ ಸಿಲುಕಿತು. 50 ರನ್ ಗಳಿಸುವುದಕ್ಕೂ ಮೊದಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಜೋಸ್ ಬಟ್ಲರ್ (23), ಮೊಯಿನ್ ಅಲಿ (8), ಜಾನಿ ಬೈರ್​ಸ್ಟೋ (0) ಅವರನ್ನು ಅಕ್ಷರ್​ ಪಟೇಲ್​ ಹೊರದಬ್ಬಿದರೆ, ಫಿಲ್ ಸಾಲ್ಟ್​ಗೆ ಜಸ್ಪ್ರೀತ್ ಬುಮ್ರಾ ಗೇಟ್ ಪಾಸ್ ಕೊಟ್ಟರು. ಸ್ಯಾಮ್ ಕರನ್ (2), ಕುಲ್ದೀಪ್ ಯಾದವ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ತಂಡಕ್ಕೆ ಆಸರೆಯಾಗುತ್ತಿದ್ದ ಹ್ಯಾರಿ ಬ್ರೂಕ್​ ಅವರನ್ನು ಮತ್ತೆ ಕುಲ್ದೀಪ್ ಹೊರ ಹಾಕಿದರು. 68ಕ್ಕೆ 6 ವಿಕೆಟ್ ಕಳೆದುಕೊಂಡಿತು.

ಕ್ರಿಸ್ ಜೋರ್ಡಾನ್​ ಸಹ ಕುಲ್ದೀಪ್​ ಯಾದವ್​ಗೆ ಬಲಿಯಾದರು. ಅದಾಗಲೇ ಇಂಗ್ಲೆಂಡ್​ ಗೆಲುವು ಅಸಾಧ್ಯವಾಗಿತ್ತು. ಸೋಲಿನ ಸುಳಿಗೆ ಸಿಲುಕಿತ್ತು. ಇದರ ನಡುವೆ ತಂಡಕ್ಕೆ ಆಸರೆಯಾಗುತ್ತಿದ್ದ ಲಿಯಾಮ್ ಲಿವಿಂಗ್​ಸ್ಟೋನ್ 11 ರನ್ ಗಳಿಸಿ ರನೌಟ್ ಆದರು. ಅದು ಕೂಡ ಅಕ್ಷರ್ ಪಟೇಲ್​ ಓವರ್​ನಲ್ಲೇ. ನಂತರ ಆದಿಲ್ ರಶೀದ್ ಸಹ ರನೌಟ್ ಆದರು. ಕೊನೆಯಲ್ಲಿ ಜೋಫ್ರಾ ಆರ್ಚರ್ (21)​ ಬಿರುಸಿನ ಬ್ಯಾಟಿಂಗ್​ ನಡೆಸಿದರು. ಆದರೆ ಬುಮ್ರಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ರೋಹಿತ್​-ಸೂರ್ಯ ಭರ್ಜರಿ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ಉತ್ತಮ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ (9) ಮತ್ತೊಮ್ಮೆ ನಿರಾಸೆ ಮೂಡಿಸಿದರು. ರಿಷಭ್ ಪಂತ್​ (4) ಕೂಡ ಕೈಹಿಡಿಯಲಿಲ್ಲ. ಆ ಬಳಿಕ ರೋಹಿತ್​ ಶರ್ಮಾ ಮತ್ತು ಸೂರ್ಯಕುಮಾರ್ ತಂಡಕ್ಕೆ ಆಸರೆಯಾದರು. ಈ ಜೋಡಿ 3ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿತು. ಅಲ್ಲದೆ, ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದರ ನಡುವೆ ರೋಹಿತ್​ ಹಾಲಿ ವಿಶ್ವಕಪ್​ನಲ್ಲಿ 3ನೇ ಹಾಫ್ ಸೆಂಚುರಿಯನ್ನು ಪೂರೈಸಿದರು.

ಆದರೆ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಹಿಟ್​ಮ್ಯಾನ್ ಹೊರ ನಡೆದರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 57 ರನ್ ಬಾರಿಸಿದರು. ನಂತರ ಅರ್ಧಶತಕದ ಅಂಚಿನಲ್ಲಿದ್ದ ಸೂರ್ಯಕುಮಾರ್ ಕೂಡ ಡಗೌಟ್ ಸೇರಿದರು. 36 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 47 ರನ್ ಗಳಿಸಿದರು. ನಂತರ ಹಾರ್ದಿಕ್ 23 ರನ್​​ಗಳ ಕಾಣಿಕೆ ನೀಡಿದರೆ, ಅಕ್ಷರ್ ಪಟೇಲ್ 10 ರನ್ ಚಚ್ಚಿದರು. ಜಡೇಜಾ ಅಜೇಯ 19 ರನ್ ಸಿಡಿಸಿದರು. ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ